ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಮೋದ್‌ ಮುತಾಲಿಕ್‌ ಪ್ರವೇಶಕ್ಕೆ ಪೊಲೀಸರಿಂದ ತಡೆ

By Govindaraj S  |  First Published Jul 30, 2022, 4:00 AM IST

ದುಷ್ಕರ್ಮಿಗಳಿಂದ ಹತ್ಯೆಗೀಡಾಗಿರುವ ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಮನೆಗೆ ಭೇಟಿ ನೀಡಲು ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಿಸಲು ಯತ್ನಿಸಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಬಳಿಕ ವಾಪಸ್‌ ಕಳುಹಿಸಿದ್ದಾರೆ. 


ಮಂಗಳೂರು (ಜು.30): ದುಷ್ಕರ್ಮಿಗಳಿಂದ ಹತ್ಯೆಗೀಡಾಗಿರುವ ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಮನೆಗೆ ಭೇಟಿ ನೀಡಲು ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಿಸಲು ಯತ್ನಿಸಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಬಳಿಕ ವಾಪಸ್‌ ಕಳುಹಿಸಿದ್ದಾರೆ. ಜಿಲ್ಲೆಗೆ ಮುತಾಲಿಕ್‌ ಪ್ರವೇಶ ನಿಷೇಧಿಸಿ ಈ ಹಿಂದೆಯೇ ಆದೇಶ ಹೊರಡಿಸಲಾಗಿತ್ತು. ಆದರೆ ಶುಕ್ರವಾರ ಬೆಳಗ್ಗೆ ಉಡುಪಿಗೆ ಆಗಮಿಸಿರುವ ಮಾಹಿತಿ ಪಡೆದ ಪೊಲೀಸರು ಅವರನ್ನು ದಕ್ಷಿಣ ಕನ್ನಡ ಹೆಜಮಾಡಿ ಗಡಿಯಲ್ಲಿ ವಶಕ್ಕೆ ಪಡೆದು, ಬಳಿಕ ವಾಪಸ್‌ ಕಳುಹಿಸಿದರು. 

ಬಿಜೆಪಿಗೆ ಪರ್ಯಾಯ ಹಿಂದು ಪಕ್ಷ ಕಟ್ಟಬೇಕಾಗುತ್ತದೆ: ರಾಜ್ಯದಲ್ಲಿ ಬಿಜೆಪಿ ತನ್ನ ಹಿಂದೂ ವಿರೋಧಿ ನೀತಿಯಿಂದಾಗಿ ಪರ್ಯಾಯ ಹಿಂದೂ ಪಕ್ಷವೊಂದನ್ನು ಹುಟ್ಟು ಹಾಕುವ ಅನಿವಾರ್ಯತೆಯನ್ನು ಸೃಷ್ಟಿಸಿದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಬಿಜೆಪಿಗೆ ತೀವ್ರ ಎಚ್ಚರಿಕೆಯನ್ನು ನೀಡಿದ್ದಾರೆ. ಬೆಳ್ಳಾರೆಯಲ್ಲಿ ಕೊಲೆಯಾದ ಪ್ರವೀಣ್‌ ನೆಟ್ಟಾರ್‌ ಮನೆಯವರಿಗೆ ಸಾಂತ್ವನ ಹೇಳಲು ಹೋಗುತ್ತಿದ್ದ ಮುತಾಲಿಕ್‌ ಅವರನ್ನು, ಪೊಲೀಸರು ಉಡುಪಿ- ದ.ಕ. ಜಿಲ್ಲೆಯ ಗಡಿ ಹೆಜಮಾಡಿಯಲ್ಲಿ ತಡೆದು ಹಿಂದಕ್ಕೆ ಕಳುಹಿಸಿದ ಹಿನ್ನೆಲೆಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

Tap to resize

Latest Videos

ಪಿಎಫ್‌ಐ, ಎಸ್‌ಡಿಪಿಐ ನಿಷೇಧಕ್ಕಾಗಿ ರಾಜ್ಯವ್ಯಾಪಿ ಹೋರಾಟ: ಪ್ರಮೋದ್‌ ಮುತಾಲಿಕ್‌

ಬಿಜೆಪಿ ತನ್ನ ಹಿಂದೂ ವಿರೋಧಿ ಪ್ರವೃತ್ತಿಯನ್ನು ನಿಲ್ಲಿಸದಿದ್ದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಹಿಂದುಗಳ ಪಕ್ಷವನ್ನು ಕಟ್ಟಿಸ್ವತಂತ್ರವಾಗಿ ಚುನಾವಣೆಗೆ ನಿಂತು ಬಿಜೆಪಿಯನ್ನು ಧಿಕ್ಕರಿಸಬೇಕಾಗುತ್ತದೆ ಎಂದವರು ಹೇಳಿದರು. ಹಿಂದೆ ಕಾಂಗ್ರೆಸ್‌ ಸರ್ಕಾರ ಇರುವಾಗ ನನ್ನನ್ನು ಅನೇಕ ಜಿಲ್ಲೆಗಳನ್ನು ಪ್ರವೇಶಿಸದಂತೆ ತಡೆಯಲಾಗುತ್ತಿತ್ತು, ಕಾಂಗ್ರೆಸ್‌ ಹಿಂದೂ ವಿರೋಧಿ, ಮುಸ್ಲೀಮರನ್ನು ಓಲೈಸುವ ಪಕ್ಷ. ಆದರೆ ಹಿಂದುತ್ವದ ಆಧಾರದಲ್ಲಿ, ಹಿಂದುಗಳ ಮತ ಪಡೆದು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಕೂಡ ಹಿಂದೂ ನಾಯಕನನ್ನು ತಡೆಯುತ್ತಿರುವುದು ನೀಚ ಮತ್ತು ನಿರ್ಲಜ್ಜತನದ ಕೆಲಸ ಎಂದವರು ಕಿಡಿಕಾರಿದರು. 

ಸಾವಿರಾರು ಮಂದಿ ಕಾರ್ಯಕರ್ತರು ಬಿಜೆಪಿಗೆ ರಾಜಿನಾಮೆ ನೀಡಿದ್ದಾರೆ ಎಂದು ಬಿಜೆಪಿ ತಾನು ಕೂಡ ಹಿಂದೂ ವಿರೋಧಿ ಎಂದು ಸಾಬೀತು ಮಾಡಿದೆ ಎಂದವರು ಹೇಳಿದರು. ನಾನು ಪ್ರವೀಣ್‌ ನೆಟ್ಟಾರ್‌ ಮನೆಯವರಿಗೆ ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳುವುದಕ್ಕೆ, ಹಿಂದೂ ಕಾರ್ಯಕರ್ತರಿಗೆ ಧೈರ್ಯ ತುಂಬುವುದಕ್ಕೆ ಹೋಗುತಿದ್ದೆ. ಆರೆಸ್ಸೆಸ್‌ ನಾಯಕ ಪ್ರಬಾಕರ ಭಟ್‌, ಭಜರಂಗ ದಳ, ಹಿಂದೂ ಸಂಘಟನೆಗಳ ಇತರ ನಾಯಕರು ಕೂಡ ಆ ಮನೆಗೆ ಭೇಟಿ ನೀಡಿದ್ದಾರೆ. ಆದರೆ ನನ್ನನ್ನು ಮಾತ್ರ ತಡೆದಿದ್ದಾರೆ, ಇಂತಹ ಸರ್ಕಾರಕ್ಕೆ ನನ್ನ ಧಿಕ್ಕಾರವಿದೆ ಎಂದರು. 

ಹೆದ್ದಾರಿಯಲ್ಲಿ ಕುಳಿತ ಮುತಾಲಿಕ್‌: ಇದಕ್ಕೆ ಮೊದಲು ಶುಕ್ರವಾರ ಬೆಳಗ್ಗೆ ಉಡುಪಿಯಿಂದ ಹೆಜಮಾಡಿ ಟೋಲ್‌ ಮೂಲಕ ದ.ಕ. ಜಿಲ್ಲೆ ಪ್ರವೇಶಿಸಿಲು ಹೋದ ಮುತಾಲಿಕ್‌ ಅವರನ್ನು ದ.ಕ. ಜಿಲ್ಲೆಯ ಪೊಲೀಸರು ತಡೆದರು. ಆಗ ಮುತಾಲಿಕ್‌ ಮಾನವೀಯ ನೆಲೆಯಲ್ಲಿ ತನಗೆ ಬೆಳ್ಳಾರೆಗೆ ಹೋಗುವುದಕ್ಕೆ ಅವಕಾಶ ನೀಡಿ, ಬೇಕಿದ್ದರೆ ಪೊಲೀಸರ ಜೀಪಿನಲ್ಲಿಯೇ ಕರೆದುಕೊಂಡು ಹೋಗಿ ಹಿಂದಕ್ಕೆ ತಂದುಬಿಡಿ ಎಂದರು.

ಅದಕ್ಕೆ ಪೊಲೀಸರು ಮುತಾಲಿಕ್‌ ಅವರ ದ.ಕ. ಜಿಲ್ಲೆ ಪ್ರವೇಶ ನಿರ್ಬಂಧಿಸಿರುವ ಡಿಸಿ ಆದೇಶವನ್ನು ತೋರಿಸಿದರು. ಇದನ್ನು ವಿರೋಧಿಸಿ ಮುತಾಲಿಕ್‌ ಹೆದ್ದಾರಿಯಲ್ಲಿ ಕುಳಿತು, ರಾಜ್ಯ ಬಿಜೆಪಿ ಸರ್ಕಾರ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್, ಸಚಿವ ಸುನಿಲ್‌ ಕುಮಾರ್‌ ವಿರುದ್ಧ ಧಿಕ್ಕಾರ ಕೂಗಿದರು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ವಿಭಾಗ ಅಧ್ಯಕ್ಷ ಮೋಹನ್‌ ಭಟ್‌, ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು, ನಾಯಕರಾದ ಆನಂದ ಶೆಟ್ಟಿ, ಶರತ್‌ ಮಣಿಪಾಲ, ಪ್ರದೀಪ್‌ ಮೂಡುಶೆಡ್ಡೆ, ಪ್ರಶಾಂತ್‌ ಭಟ್‌ ಪೆರಂಪಳ್ಳಿ ಮುಂತಾದವರು ಉಪಸ್ಥಿತರಿದ್ದರು.

ಹಿಂದೂಗಳ ಹತ್ಯೆ ನಡೆದ್ರೂ ಬಿಜೆಪಿ ಸರ್ಕಾರಗಳು ಕತ್ತೆ ಕಾಯುತ್ತಿವೆಯಾ?: ಮುತಾಲಿಕ್‌

ಕ್ರಿಯೆಗೆ ಪ್ರತಿಕ್ರಿಯೆ ಆಗಬಾರದು: ಬಿಜೆಪಿ ಸರ್ಕಾರ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುತಿದ್ದರೆ ಪ್ರವೀಣ್‌ ಕೊಲೆಯಾಗುತ್ತಿರಲಿಲ್ಲ ಎಂದು ಮುತಾಲಿಕ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸುರತ್ಕಲ್‌ನಲ್ಲಿ ಮುಸ್ಲಿಂ ಯುವಕನ ಕೊಲೆಯ ಬಗ್ಗೆ ಪ್ರತಿಕ್ರಿಯಿಸಿದ ಮುತಾಲಿಕ್‌, ಕ್ರಿಯೆಗೆ ಪ್ರತಿಕ್ರಿಯೆ ಆಗಬಾರದು. ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಮುಖಂಡರು ಒಟ್ಟಿಗೆ ಸೇರಿ ಈ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಸಲಹೆ ಮಾಡಿದರು.

click me!