
ಹಾವೇರಿ (ಆ.10): ಕೆಲವರು ಹಿಂದುತ್ವಕ್ಕೆ ಕಂಟಕ ತರಬೇಕು, ಧಾರ್ಮಿಕ ಸಂಸ್ಥೆಗಳ ಮೇಲೆ, ಹಿಂದುತ್ವದ ಸಂಘ ಸಂಸ್ಥೆಗಳಿಗೆ, ದೇಗುಲಗಳಿಗೆ ಕೆಟ್ಟದ್ದು ಮಾಡಬೇಕೆಂದು ಪಿತೂರಿ ನಡೆಸುತ್ತಿದ್ದಾರೆ. ಹಿಂದುಗಳ ಪುಣ್ಯಕ್ಷೇತ್ರಗಳ ಬಗ್ಗೆ ಅಪನಂಬಿಕೆ ಮೂಡಿಸುವ ಹುನ್ನಾರ ನಡೆದಿದೆ. ಈ ಬಗ್ಗೆ ಹಿಂದೂಗಳು ಜಾಗೃತಿ ವಹಿಸಬೇಕು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿ, ಧರ್ಮಸ್ಥಳ ಪ್ರಕರಣ ಬಗ್ಗೆ ಹೆಚ್ಚು ಮಾಹಿತಿ ಇಲ್ಲ, ಆದರೆ, ಹಿಂದುತ್ವ ಜಗತ್ತಿನಲ್ಲಿ ಪ್ರಬಲವಾಗಿ ಬೆಳೆಯುತ್ತಿದೆ.
ಇಡೀ ಜಗತ್ತೇ ಹಿಂದುತ್ವ ಆಗಬಹುದು ಎಂಬ ಭಯ ಕೆಲವರಿಗೆ ಕಾಡುತ್ತಿದೆ. ಹೀಗಾಗಿ ಹಿಂದೂಗಳ ಪುಣ್ಯಕ್ಷೇತ್ರಗಳ ಬಗ್ಗೆ ಷಡ್ಯಂತ್ರ ನಡೆಯುತ್ತಿದೆ ಎಂದರು. ಭಾರತದ ಯಾವೊಬ್ಬ ಹಿಂದೂ ಗುರು ಮತಾಂತರ, ಧರ್ಮಾಂತರ ಮಾಡಲ್ಲ. ಧರ್ಮದ ತತ್ವ, ಸಿದ್ಧಾಂತಗಳನ್ನು ಬಿತ್ತುತ್ತಿದ್ದೇವೆ. ಧರ್ಮಸ್ಥಳ, ಶಬರಿಮಲೆ ಇನ್ನೂ ಅನೇಕ ಕಡೆ ಅಧ್ಯಾತ್ಮ ಗುರುಗಳು ಕೈಗೊಂಡ ಒಳ್ಳೆಯ ಕಾರ್ಯಗಳನ್ನು ಬಿಟ್ಟು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಅಪಖ್ಯಾತಿ ತರುವುದು, ನಕಾರಾತ್ಮಕವಾಗಿ ಬಿಂಬಿಸುವ ಕೆಲಸ ನಡೆದಿದೆ. ನಾವೆಲ್ಲ ಹಿಂದೂಗಳು ಡಾ। ವೀರೇಂದ್ರ ಹೆಗ್ಗಡೆ ಅವರ ಜತೆ ಇರಬೇಕು ಎಂದು ಹೇಳಿದರು.
ಪಕ್ಕದ ಮನೆಗೆ ಯಾರೋ ಬೆಂಕಿ ಹಚ್ಚಿದ್ದಾರೆ ಎಂದರೆ ಅದನ್ನು ಕಾಯಿಸಿಕೊಳ್ಳಲು ಹೋಗಬೇಡಿ. ನಾಳೆ ಗಾಳಿ ಬಿಟ್ಟಾಗ ನಿಮ್ಮ ಮನೆಗೂ ಬೆಂಕಿ ಆವರಿಸಬಹುದು. ಇವತ್ತು ಅವರಿಗೆ ಆಗಿದೆ, ನಾಳೆ ನಮಗೂ ಆಗಬಹುದು. ನಾವೆಲ್ಲರೂ ಒಂದಾಗಬೇಕಿದೆ. ಇವತ್ತು ಹೆಗ್ಗಡೆ ಅವರಿಗೆ ಬಂದಿರಬಹುದು, ನಾಳೆ ನಮಗೂ ಆಗಬಹುದು. ನಮಗೂ ಹೆಗ್ಗಡೆ ಅವರಿಗೂ ಏನು ಸಂಬಂಧ ಎಂದು ಕುಳಿತರೆ ನಾಳೆ ನಮಗೂ ಬರಬಹುದು. ತಪ್ಪಾಗಿದ್ದರೆ ಕಾನೂನಿದೆ, ಕೋರ್ಟ್ ಇದೆ, ನಮಗೆ ನ್ಯಾಯಾಲಯ ದೊಡ್ಡದು. ಅದನ್ನು ತೀರ್ಮಾನ ಮಾಡಲು ನಾವ್ಯಾರು ಎಂದು ಪ್ರಶ್ನಿಸಿದರು.
ಜೈನರು ಯಾವತ್ತೂ ನಾವು ಹಿಂದೂಗಳಲ್ಲ ಎಂದು ಹೇಳಿಲ್ಲ. ಅವರು ಯಾವತ್ತಾದರೂ ಹಿಂದೂ ಪರಂಪರೆ ಟೀಕೆ ಮಾಡಿದ್ದಾರಾ? ಹಾಲಿನಲ್ಲಿ ಕಲ್ಲುಸಕ್ಕರೆ ಬೆರೆಯುವಂತೆ ಜೈನರು ನಮ್ಮ ಜತೆ ಇದ್ದಾರೆ. ಜೈನರು ನಮ್ಮ ಭಾಗವಾಗಿದ್ದಾರೆ. ಡಾ। ವೀರೇಂದ್ರ ಹೆಗ್ಗಡೆ ಅವರು ಗ್ರಾಮೀಣಾಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಅವರ ಒಳ್ಳೆಯ ಕೆಲಸಗಳು ಏಕೆ ಕಾಣುತ್ತಿಲ್ಲ? ಅವರ ಒಳ್ಳೆಯ ಕೆಲಸ ನಾವು ಪ್ರೋತ್ಸಾಹ ಮಾಡಬೇಕು ಎಂದು ತಿಳಿಸಿದರು.
ನೂರಕ್ಕೆ ನೂರು ಧರ್ಮಸ್ಥಳದ ವಿರುದ್ಧ ಮೂಲಭೂತವಾದ ನಡೆದಿದೆ. ಅಲ್ ಜಜಿರಾ ಚಾನಲ್‌ನಲ್ಲೂ ಸುದ್ದಿ ಬರುತ್ತದೆ ಎಂದರೆ ನೀವು ಯೋಚನೆ ಮಾಡಿ. ಇದಕ್ಕೆ ಯಾರು ಫಂಡ್ ಮಾಡುತ್ತಿರಬಹುದು? ಬ್ರಿಟಿಷರು 200 ವರ್ಷ ಆಳಲು ಕಾರಣ ಏನು? ನಮ್ಮವರೇ ಕೆಲವರು ಅವರ ಜತೆ ಕೈ ಜೋಡಿಸಿದ್ದರು. ಚೆನ್ನಮ್ಮ ಎರಡನೇ ಬಾರಿ ಸೋತಳು, ಅದಕ್ಕೆ ಕಾರಣ ಮದ್ದು ಗುಂಡು ಹಾಕುವುದರಲ್ಲಿ ಸಗಣಿ ತುಂಬಿದ್ದರು ಎಂದ ಸ್ವಾಮೀಜಿ, ಅಖಂಡ ಸನಾತನ ತತ್ವಗಳ ವಿರುದ್ಧ ಮೂಲಭೂತವಾದ ಬೆಂಬಲಿಸುವ ಯೂ-ಟ್ಯೂಬರ್ಸ್‌ಗಳನ್ನು ನಿರ್ಲಕ್ಷ್ಯ ಮಾಡಬೇಕು ಎಂದು ಕರೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ