
ಮಂಗಳೂರು (ಜೂ.13): ಗಿಗ್ ಹಾಗೂ ಎಲ್ಲ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ವಿಶೇಷ ಯೋಜನೆ ರೂಪುಗೊಳಿಸುತ್ತಿದೆ. ಈ ಕುರಿತು ಎಲ್ಲ ರಾಜ್ಯಗಳ ಮುಖ್ಯಮಂತ್ರಿ, ಕಾರ್ಮಿಕ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆಯುತ್ತಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸದ್ಯ ದೇಶದಲ್ಲಿ 54 ಲಕ್ಷ ಗಿಗ್ ಕೆಲಸಗಾರರಿದ್ದಾರೆ, ಇದು ಮುಂದಿನ 10 ವರ್ಷದಲ್ಲಿ 25 ಕೋಟಿಗೇರುವ ಸಾಧ್ಯತೆಗಳಿವೆ. ಗಿಗ್ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡುವ ಉದ್ದೇಶವಿದೆ, ಅದಕ್ಕಾಗಿ ವಿಶೇಷ ಯೋಜನೆ ರೂಪಿಸುತ್ತಿದ್ದೇವೆ ಎಂದರು.
ಕೇಂದ್ರದ ಯೋಜನೆ ಕುರಿತಂತೆ ಕೆಲವು ರಾಜ್ಯಗಳು ಅನುಮಾನಗಳನ್ನು ವ್ಯಕ್ತಪಡಿಸಿದ್ದು, ಅದನ್ನು ಪರಿಹರಿಸಲಾಗುವುದು. ಒಟ್ಟು 29 ಕಾರ್ಮಿಕ ಕಾನೂನುಗಳನ್ನು ನಾಲ್ಕು ಸರಳೀಕೃತ ಕಾರ್ಮಿಕ ಕೋಡ್ ಆಗಿ ವಿಲೀನ ಮಾಡುವ ಯೋಜನೆ ಸರಕಾರಕ್ಕೆ ಇದೆ. 50 ಕೋಟಿ ಅಸಂಘಟಿತ ಕಾರ್ಮಿಕರ ಪ್ರಯೋಜನಕ್ಕಾಗಿ, ಸಾಮಾಜಿಕ ಭದ್ರತೆ, ಇಎಸ್‌ಐ ಇತ್ಯಾದಿ ಒದಗಿಸುವುದಕ್ಕಾಗಿ ಯೋಜನೆ ರೂಪಿಸಲಾಗುತ್ತಿದೆ ಎಂದು ಶೋಭಾ ತಿಳಿಸಿದರು. ಪ್ರಸ್ತುತ ದೇಶದಲ್ಲಿ ದುಡಿಯುತ್ತಿರುವ ಸುಮಾರು 80 ಕೋಟಿ ಜನರಲ್ಲಿ 10 ಕೋಟಿ ಜನರಿಗೆ ಮಾತ್ರ ಪಿಎಫ್, ಇಎಸ್‌ಐ ಮತ್ತಿತರ ಸಾಮಾಜಿಕ ಭದ್ರತೆಯ ಯೋಜನೆಯ ಪ್ರಯೋಜನ ದೊರೆಯುತ್ತಿದೆ. ಉಳಿದ 70 ಕೋಟಿ ಕಾರ್ಮಿಕರು ಈ ಸೌಲಭ್ಯ ವಂಚಿತರಾಗಿದ್ದಾರೆ ಎಂದರು.
ಭರವಸೆ ಪೂರೈಸಿದ ಪ್ರಧಾನಿ: ನರೇಂದ್ರ ಮೋದಿ ಅವರು 2014 ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ದೇಶದಲ್ಲಿ ಪ್ರವಾಸ ನಡೆಸುವ ಸಂದರ್ಭ ಗಡಿಗಳ ರಕ್ಷಣೆ, ಭ್ರಷ್ಟಾಚಾರ ರಹಿತ ಸರ್ಕಾರ, ಪ್ರಧಾನಿ ಸ್ಥಾನದ ಘನತೆಯ ರಕ್ಷಣೆ ಹಾಗೂ ದೇಶದ ಅಭಿವೃದ್ಧಿಗೆ ವೇಗ ಎನ್ನುವ ಪ್ರಧಾನ ನಾಲ್ಕು ಪ್ರಧಾನ ನಾಲ್ಕು ಭರವಸೆಗಳನ್ನು ಜನತೆಗೆ ನೀಡಿದ್ದರು. ಈ ಭರವಸೆ ಇಂದು ಈಡೇರಿದೆ. ಆಂತರಿಕ, ಬಾಹ್ಯ ಸುರಕ್ಷೆ ಎರಡೂ ಸಾಧ್ಯವಾಗಿದೆ. ದೇಶದ ಸೇನೆಯು ಶೇ.95 ರಷ್ಟುಸ್ವಾವಲಂಬನೆ, ಆತ್ಮ ನಿರ್ಭರತೆ ಸಾಧಿಸಿದೆ. ಯುದ್ಧ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವಷ್ಟು ನಾವು ಬೆಳೆದಿದ್ದೇವೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಉಮಾನಾಥ ಕೋಟ್ಯಾನ್, ಡಾ. ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಮುಖಂಡರಾದ ಉದಯ ಕುಮಾರ್ ಶೆಟ್ಟಿ, ಯತೀಶ್‌ಆರ್ವಾರ್, ಹರೀಶ್ ಕಂಜಿಪಿಲಿ, ಪ್ರೇಮಾನಂದ ಶೆಟ್ಟಿ, ನಂದನ್ ಮಲ್ಯ, ಸಂಜಯ ಪ್ರಭು, ವಸಂತ ಪೂಜಾರಿ, ರೂಪಾ ಡಿ.ಬಂಗೇರ ಇದ್ದರು.
ಆರ್‌ಸಿಬಿ ದುರಂತ ಮರೆಮಾಚಲು ಜಾತಿ ಮರು ಗಣತಿ: ಬೆಂಗಳೂರಲ್ಲಿ ಆರ್‌ಸಿಬಿ ವಿಜಯೋತ್ಸವ ಸಂದರ್ಭ 11 ಮಂದಿ ಸಾವು ಸಂಭವಿಸಿದ ದುರಂತವನ್ನು ಮರೆಮಾಚಲು ರಾಜ್ಯ ಸರ್ಕಾರ ಹೈಕಮಾಂಡ್ ಜತೆ ಸೇರಿ ಜಾತಿ ಮರುಗಣತಿಯ ನಾಟಕ ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕೆಸಿದರು. ಲಿಂಗಾಯಿತರು, ಬ್ರಾಹ್ಮಣರು ಸಹಿತ ಎಲ್ಲ ಜಾತಿಗಳನ್ನು ಒಡೆಯುವ ಕೆಲಸವನ್ನು ಈ ಜಾತಿಗಣತಿಯ ಮೂಲಕ ಸಿದ್ದರಾಮಯ್ಯ ಅವರ ಸರ್ಕಾರ ಮಾಡುತ್ತಿದೆ. ಇದರ ಅಂತಿಮ ಉದ್ದೇಶ ಅಲ್ಪಸಂಖ್ಯಾತರ ಸಂಖ್ಯೆ ಅಧಿಕ ತೋರಿಸಿ ಅವರಿಗೆ ಅಧಿಕ ಪ್ರಮಾಣದ ಮೀಸಲಾತಿ ಒದಗಿಸುವುದು ಆಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ