ಬೆಂಗಳೂರು (ಜೂ.13): ಕೃಷಿ ಮತ್ತು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ವ್ಯಾಪಾರ ಕ್ಷೇತ್ರಗಳು ನಿರುದ್ಯೋಗ ಸಮಸ್ಯೆ ನಿವಾರಣೆಗೆ ಆಸರೆಯಾಗಿವೆ. ಯುವಜನರು ಕೃಷಿಯತ್ತ ಮುಖ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು. ನಗರದ ಪುರಭವನದಲ್ಲಿ ಕೆಪೆಕ್ ಹಾಗೂ ಖೇತಿವಾಲ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಕೃಷಿ ಜಾಗೃತಿ ಕಾರ್ಯಗಾರ, ಖೇತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕೃಷಿ ಮತ್ತು ಕೃಷಿ ಉತ್ಪನ್ನಗಳ ಮಾರುಕಟ್ಟೆ ವಹಿವಾಟು ವ್ಯವಸ್ಥೆಯಲ್ಲಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಸಾಂಪ್ರದಾಯಿಕ ಕೃಷಿಯೊಂದಿಗೆ ತಂತ್ರಜ್ಞಾನ, ವೈಜ್ಞಾನಿಕ ಪದ್ಧತಿಗಳ ಅಳವಡಿಕೆ ಸಮಯ, ಶ್ರಮದ ಉಳಿತಾಯದ ಜೊತೆ ಆದಾಯ ಹೆಚ್ಚಿಸುತ್ತಿದೆ ಎಂದು ಹೇಳಿದರು. ಕೆಪೆಕ್‌ನಲ್ಲಿ ಪಿಎಂಎಫ್‌ಎಂಇ ಯೋಜನೆಯಡಿ ಕಿರು ಆಹಾರ ಸಂಸ್ಕರಣ ಉದ್ಯಮ ಸ್ಥಾಪಿಸಲು ಅವಕಾಶವಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಒಟ್ಟು ಕೂಡ 15 ಲಕ್ಷ ರು. ಸಬ್ಸಿಡಿ ಕೂಡ ದೊರೆಯಲಿದೆ. ಅದಕ್ಕಾಗಿ 206 ಕೋಟಿ ರು. ಮೀಸಲಿಡಲಾಗಿದೆ. ಈ ಅವಕಾಶವನ್ನು ರೈತರ ಮಕ್ಕಳು ಸದ್ಬಳಿಕೆ ಮಾಡಿಕೊಳ್ಳಬೇಕು ಎಂದರು.
ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಕಾಶ್ ಮಾತನಾಡಿ, ಈಗಾಗಲೇ ಯೋಜನೆ ಸೌಲಭ್ಯ ಪಡೆದುಕೊಂಡು ಉದ್ದಿಮೆದಾರರಾಗಿರುವವರು ಕೆಪೆಕ್ ವತಿಯಿಂದ ತಮ್ಮ ಉತ್ಪನ್ನಗಳ ಮಾರುಕಟ್ಟೆಗೆ ವಿನೂತನ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಜಲಾನಯನ ಇಲಾಖೆ ನಿರ್ದೇಶಕ ಬಂಥನಾಳ, ನರ್ಬಾಡ್ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್, ಎಸ್‌ಬಿಐ ವ್ಯವಸ್ಥಾಪಕ ನಿರ್ದೇಶಕ ವಿ.ಎನ್. ಶರ್ಮಾ ಮತ್ತು ಎಸ್.ಎಲ್.ಬಿ.ಸಿ ಸಂಯೋಜಕರಾದ ಭಾಸ್ಕರ್ ಭಟ್ಟಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಪಿಎಂಎಫ್‌ಎಂಇ ಯೋಜನೆಯಡಿ ಸಾಲ ಪಡೆದುಕೊಂಡು ಅತ್ಯುತ್ತಮ ಸಾಧನೆ ಮಾಡಿ ಉದ್ಯಮ ಬೆಳೆಸಿದ 9 ಮಂದಿ ಉದ್ದಿಮೆದಾರರಿಗೆ ಖೇತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹೆಚ್ಚು ಸಾಲ ಕೊಡಿಸಿದ 9 ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳನ್ನು ಪುರಸ್ಕರಿಸಲಾಯಿತು. ಉದ್ದಿಮೆದಾರರಿಗೆ ಸಾಲ ನೀಡಿದ 3 ಬ್ಯಾಂಕ್‌ಗಳು ಮತ್ತು ಉತ್ತಮ ಸಾಧನೆಗೈದ ಬೆಳಗಾವಿ, ಬೆಂಗಳೂರು ನಗರ ಮತ್ತು ಹಾವೇರಿ ಜಿಲ್ಲೆಗಳ ಜಂಟಿ ಕೃಷಿ ನಿರ್ದೇಶಕರನ್ನು ಸನ್ಮಾನಿಸಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ