ಇಂದು ಉತ್ತರಾಧಿಕಾರ ದೀಕ್ಷೆ: ಸಿದ್ಧಗಂಗೆ ವಿರಕ್ತಮಠಕ್ಕೆ ಹೊಸ ನಿರಂಜನ ಜಂಗಮ

By Kannadaprabha News  |  First Published Apr 23, 2023, 5:54 AM IST

ಸಿದ್ಧಗಂಗೆಯಲ್ಲಿ ಒಂದು ಸಂಪ್ರದಾಯವಿದೆ. ಅದೇನೆಂದರೆ, ಹಿರಿಯ ಗುರುಗಳು ತಮ್ಮ ಕೊರಳಿನ ರುದ್ರಾಕ್ಷಿ ಮಾಲೆಯನ್ನು ಶಿಷ್ಯರ ಕೊರಳಿಗೆ ಹಾಕಿ ಅನುಗ್ರಹ ಪೂರ್ವಕವಾಗಿ ಆಶೀರ್ವದಿಸುವುದು. ಅದರಂತೆ ಶಿವಕುಮಾರ ಶ್ರೀಗಳು ಮನೋಜ್ ಕುಮಾರ್‌ ಅವರನ್ನು ಆಶೀರ್ವದಿಸಿದ್ದಾರೆ.


ಸಿದ್ಧಲಿಂಗಸ್ವಾಮಿ ಎಸ್‌.ಪಿ., ತುಮಕೂರು

ನಾಡಿನ ಧಾರ್ಮಿಕ, ಶೈಕ್ಷಣಿಕ ಇತಿಹಾಸದಲ್ಲಿ ವೀರಶೈವ ಲಿಂಗಾಯತ ಮಠಗಳು ಪ್ರಮುಖವಾದ ಸ್ಥಾನವನ್ನು ಪಡೆದಿವೆ. ಬಸವಾದಿ ಶರಣರ ತತ್ವಗಳ ಆಧಾರದ ಮೇಲೆ, ನಿರಾಭಾರಿ ನಿರಂಜನ ಜಂಗಮ ಪರಂಪರೆಯಲ್ಲಿ ಮುನ್ನಡೆಯುತ್ತಿರುವ ಮಠಗಳಲ್ಲಿ ತುಮಕೂರಿನ ಸಿದ್ಧಗಂಗಾ ಮಠ ಅಗ್ರಗಣ್ಯವಾದುದು. ಇದು ಶರಣರ ಕಾಯಕ-ದಾಸೋಹ ತತ್ವಗಳ ಪ್ರಯೋಗ ಶಾಲೆಯಂತಿದೆ. ಮಠದ ಸೇವಾ ಕ್ಷೇತ್ರಗಳು ಬಹುಮುಖವಾಗಿದ್ದು, ನಾಡಿನ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಅಭಿವೃದ್ಧಿಗೆ ಮಹತ್ತರವಾದ ಕೊಡುಗೆ ನೀಡಿವೆ. ಪರಮಪೂಜ್ಯ ಶಿವಕುಮಾರ ಮಹಾಶಿವಯೋಗಿಗಳ ಉತ್ತರಾಧಿಕಾರಿಗಳಾಗಿ ಪ್ರಸ್ತುತ ಸಿದ್ಧಗಂಗಾ ಮಠಾಧ್ಯಕ್ಷರಾಗಿರುವ ಸಿದ್ದಲಿಂಗ ಮಹಾಸ್ವಾಮಿಗಳವರು ತಮ್ಮ ಉತ್ತರಾಧಿಕಾರಿಗಳಾಗಿ ಆಯ್ಕೆಯಾಗಿರುವ ಮನೋಜ ಕುಮಾರ್‌ ಅವರಿಗೆ ಈ ದಿನ ಭಾನುವಾರ, ಬಸವ ಜಯಂತಿಯ ಶುಭದಿನದಂದು ನಿರಂಜನ ಜಂಗಮ ದೀಕ್ಷೆಯನ್ನು (ವಿರಕ್ತಾಶ್ರಮ) ನೀಡುತ್ತಿದ್ದಾರೆ.

Tap to resize

Latest Videos

ಉತ್ತರಾಧಿಕಾರಿಯ ಹಿನ್ನೆಲೆ: ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸುವ ಮೂಲಕ ನಾಡಿನ ಸರ್ವ ಜನಾಂಗದವರ ಅಭಿಮಾನದ, ಶ್ರದ್ಧೆಯ ಕೇಂದ್ರವಾದ ಸಿದ್ಧಗಂಗಾಮಠಕ್ಕೆ ಉತ್ತರಾಧಿಕಾರಿಗಳಾಗಿ ನಿರಂಜನ ಜಂಗಮ ದೀಕ್ಷೆ (ವಿರಕ್ತಾಶ್ರಮ) ಸ್ವೀಕರಿಸುತ್ತಿರುವ ಮನೋಜ ಕುಮಾರ್‌ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆಲಮಂಗಲ ತಾಲೂಕು, ಮೈಲನಹಳ್ಳಿ ಗ್ರಾಮದ ಶರಣ ದಂಪತಿಗಳಾದ ಷಡಕ್ಷರಯ್ಯ ಎಂ.ಬಿ. ಮತ್ತು ವಿರೂಪಾಕ್ಷಮ್ಮ ಇವರ ಇಬ್ಬರು ಮಕ್ಕಳಲ್ಲಿ ಏಕೈಕ ಸುಪುತ್ರರು. ಮೊದಲನೆಯವರು ಇವರ ಅಕ್ಕ ತೇಜಾವತಿ. ಇವರದು ಕೃಷಿಕ ಕುಟುಂಬ. ಇವರ ಜನನ 02.06.1987ರಂದು ಆಯಿತು. ಹುಟ್ಟೂರಾದ ಮೈಲನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 7ನೇ ತರಗತಿವರೆಗಿನ ಶಿಕ್ಷಣ. 2000ನೇ ಇಸವಿಯಲ್ಲಿ 8ನೇ ತರಗತಿಗೆ ಸಿದ್ಧಗಂಗಾಮಠಕ್ಕೆ ಸಾಮಾನ್ಯ ವಿದ್ಯಾರ್ಥಿಯಾಗಿ ದಾಖಲಾಗುತ್ತಾರೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬಿ.ಎಡ್‌ ಪದವೀಧರರು. ಸಂಸ್ಕೃತಾಧ್ಯಯನ ಮಾಡಿದ್ದಾರೆ.

ಇಂದು ಅಕ್ಷಯ ತೃತೀಯಾ: ಈ ದಿನ ಏನು ಕೊಟ್ಟರೂ ಅಕ್ಷಯವಾಗುವ ದಿನ!

ಶಿವಕುಮಾರ ಶ್ರೀಗಳದೇ ಆಯ್ಕೆ: ಪಠ್ಯ ಮತ್ತು ಪಠ್ಯೇತರ ವಿಷಯಗಳಲ್ಲಿ ಅತ್ಯಂತ ಚುರುಕುಮತಿಯಾದ ಈ ವಿದ್ಯಾರ್ಥಿಯ ಚಲನ ವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಶಿವಕುಮಾರ ಮಹಾಶಿವಯೋಗಿಗಳ ಪರುಷ ದೃಷ್ಟಿಗೆ ಇವರಲ್ಲಿದ್ದ ಸುಪ್ತ ಆಧ್ಯಾತ್ಮಿಕ ಚೇತನ ಗೋಚರಿಸುತ್ತದೆ. ಅವರ ವಿಶೇಷ ಕೃಪಾಕಟಾಕ್ಷಕ್ಕೆ ಒಳಗಾಗುತ್ತಾರೆ. 2003ರಲ್ಲಿ ಪೂಜ್ಯರು ಇವರನ್ನು ಈಗಿನ ಅಧ್ಯಕ್ಷರಾದ ಸಿದ್ಧಲಿಂಗ ಮಹಾಸ್ವಾಮಿಗಳವರ ಉತ್ತರಾಧಿಕಾರಿಯನ್ನಾಗಿ ಮಾಡಿಕೊಳ್ಳುವಂತೆ ಸೂಚನೆ ನೀಡಿರುತ್ತಾರೆ. ಸಿದ್ಧಗಂಗೆಯ ಗುರುಪರಂಪರೆಯಲ್ಲಿ ಗುರು-ಶಿಷ್ಯರ ನಡುವೆ ಒಂದು ಸಂಪ್ರದಾಯ ಪ್ರಾರಂಭದಿಂದಲೂ ನಡೆದುಬಂದಿದೆ. ಅದೇನೆಂದರೆ, ಹಿರಿಯ ಗುರುಗಳು ತಮ್ಮ ಕೊರಳಿನಲ್ಲಿರುವ ರುದ್ರಾಕ್ಷಿ ಮಾಲೆಯನ್ನು ಶಿಷ್ಯರ ಕೊರಳಿಗೆ ಹಾಕಿ ಅನುಗ್ರಹ ಪೂರ್ವಕವಾಗಿ ಆಶೀರ್ವದಿಸುವುದು. ಅದರಂತೆ ಇವರನ್ನೂ ಆಶೀರ್ವದಿಸಿದ್ದಾರೆ. ಅಂದಿನಿಂದಲೂ ಕೂಡ ಮನೋಜ ಕುಮಾರ್‌ ಅವರು ನಿತ್ಯಲಿಂಗಪೂಜಾವ್ರತಿಗಳಾಗಿ, ಆಚಾರ ವಿಚಾರಗಳನ್ನು ಅನುಸರಿಸಿಕೊಂಡು, ಆಹಾರ ವಿಹಾರಗಳಲ್ಲಿ ನೇಮವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ.

ಇಂದು ಬಸವ ಜಯಂತಿ: ಆರ್ಥಿಕ ಕ್ರಾಂತಿಗೂ ನಾಂದಿ ಹಾಡಿದ್ದ ಬಸವಣ್ಣ

ಸಿದ್ಧಗಂಗಾ ಕಾಲೇಜಿನಲ್ಲಿ ಉಪನ್ಯಾಸಕ: ಮನೋಜ ಕುಮಾರ್‌ ಅವರು ಮಠದ ಬಸವೇಶ್ವರ ನಾಟಕದಲ್ಲಿ ಪಾತ್ರ ನಿರ್ವಹಣೆ, ಮಠದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಮಠಕ್ಕೆ ಬರುವ ಅತಿಥಿಗಳಿಗೆ ಸತ್ಕಾರ ಮುಂತಾದ ಸೇವೆಯಲ್ಲಿ ತೊಡಗಿಸಿಕೊಂಡು, ಭಕ್ತವೃಂದದ ಪ್ರೀತಿಗೆ ಪಾತ್ರರಾಗಿದ್ದಾರೆ. ಮಠದ ಸನಿವಾಸ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ, ಸಿದ್ಧಗಂಗಾ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವಿದ್ಯಾರ್ಥಿಗಳ ಮೆಚ್ಚಿನ ಗುರುಗಳಾಗಿದ್ದಾರೆ. ಶಿವಕುಮಾರ ಮಹಾಶಿವಯೋಗಿಗಳ ಸಂಕಲ್ಪದಂತೆ, ಈಗಿನ ಅಧ್ಯಕ್ಷರಾದ ಸಿದ್ಧಲಿಂಗ ಮಹಾಸ್ವಾಮಿಗಳವರು ಮನೋಜ ಕುಮಾರ್‌ ಅವರನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ಆಯ್ಕೆ ಮಾಡಿಕೊಂಡು ನಿರಂಜನ ದೀಕ್ಷೆ ನೀಡುತ್ತಿರುವುದು ಭಕ್ತ ಸಮುದಾಯದಲ್ಲಿ ಹರ್ಷವನ್ನುಂಟುಮಾಡಿದೆ. ಅಂತಿಮವಾಗಿ, ಬಸವಾದಿ ಶರಣರ ಚಿಂತನೆಗಳಿಂದ ಪ್ರಭಾವಿತವಾಗಿರುವ, ಗುರುಪರಂಪರೆಯ ದಿವ್ಯಾನುಗ್ರಹಕ್ಕೆ ಹಾಗೂ ಮಠದ ಭಕ್ತವೃಂದದ ಪ್ರೀತಿಗೆ ಪಾತ್ರರಾಗಿರುವ ಇವರು ಸಿದ್ದಲಿಂಗ ಮಹಾಸ್ವಾಮಿಗಳವರ ಕರಕಮಲ ಸಂಜಾತರಾಗಿ, ಮಠಕ್ಕೆ ಹಾಗೂ ಸಮಾಜಕ್ಕೆ ಇವರಿಂದ ಉತ್ತಮ ಸೇವೆ ಮತ್ತು ಮಾರ್ಗದರ್ಶನ ಲಭಿಸಲಿ ಎಂಬುದು ಎಲ್ಲಾ ಸದ್ಭಕ್ತರ ಆಶಯವಾಗಿದೆ.

click me!