ದುಡ್ಡಿಲ್ಲ, ಫುಡ್ಡಿಲ್ಲ... ಕಾಪಾಡಿ: ಸೂಡಾನ್ ಕನ್ನಡಿಗರ ಮೊರೆ

By Kannadaprabha News  |  First Published Apr 22, 2023, 5:22 AM IST

‘ನಮಗೇ ತಿನ್ನುವುದಕ್ಕೆ ಏನೂ ಇಲ್ಲ, ನಿಮಗೆ ಹೇಗೆ ಸಹಾಯ ಮಾಡಲು ಸಾಧ್ಯ? ನೀವು ಇರುವ ಸ್ಥಳದಲ್ಲಿಯೇ ಬಾಗಿಲು ಮುಚ್ಚಿಕೊಂಡು ಇರಿ....’ ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಸಂಘರ್ಷಕ್ಕೆ ತುತ್ತಾಗಿರುವ ಸೂಡಾನ್‌ನಲ್ಲಿ ಸಿಲುಕಿರುವ ಕನ್ನಡಿಗರು ತೀವ್ರ ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದಾಗ ಅಲ್ಲಿನ ಭಯಭೀತ ಅಧಿಕಾರಿಗಳು ಹೇಳುತ್ತಿರುವ ಮಾತಿದು.


ಬೆಂಗಳೂರು (ಏ.22): ‘ನಮಗೇ ತಿನ್ನುವುದಕ್ಕೆ ಏನೂ ಇಲ್ಲ, ನಿಮಗೆ ಹೇಗೆ ಸಹಾಯ ಮಾಡಲು ಸಾಧ್ಯ? ನೀವು ಇರುವ ಸ್ಥಳದಲ್ಲಿಯೇ ಬಾಗಿಲು ಮುಚ್ಚಿಕೊಂಡು ಇರಿ....’ ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಸಂಘರ್ಷಕ್ಕೆ ತುತ್ತಾಗಿರುವ ಸೂಡಾನ್‌ನಲ್ಲಿ ಸಿಲುಕಿರುವ ಕನ್ನಡಿಗರು ತೀವ್ರ ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದಾಗ ಅಲ್ಲಿನ ಭಯಭೀತ ಅಧಿಕಾರಿಗಳು ಹೇಳುತ್ತಿರುವ ಮಾತಿದು. ದೂರದ ಸೂಡಾನ್‌ನಿಂದ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಸಂತ್ರಸ್ತ ಮೂಲತಃ ಶಿವಮೊಗ್ಗ ಸಮೀಪದ ಹಕ್ಕಿಪಿಕ್ಕಿ ಕ್ಯಾಂಪ್‌ನ ಸದಾಶಿವಪುರದ ವಿಶ್ವನಾಥ ಗಿರಿರಾಜ್‌ ಅವರು ಸೂಡಾನ್‌ನ ದಯನೀಯ ಪರಿಸ್ಥಿತಿಯನ್ನು ವಿವರಿಸಿದ್ದು ಹೀಗೆ.

ಇಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಶೋಚನೀಯವಾಗುತ್ತಿದೆ. ತಾಯ್ನಾಡಿಗೆ ಸುರಕ್ಷಿತವಾಗಿ ಕರೆ ತರುವ ಯಾವುದೇ ಭರವಸೆ ಸಿಗದೆ ನರಳಾಡುತ್ತಿದ್ದೇವೆ. ಕೂಡಿಟ್ಟಕಾಸು ಕರಗುತ್ತಿದ್ದು, ಅನ್ನ, ನೀರಿಗೆ ಭಾರತೀಯರು ಪರದಾಡುತ್ತಿದ್ದಾರೆ. ಕಳೆದೊಂದು ವಾರದಿಂದ ಸೂಡಾನ್‌ನಲ್ಲಿ ಸೇನಾ ಅಂತರಿಕ ಯುದ್ಧ ನಡೆಯುತ್ತಿದ್ದು, ರಾಜಧಾನಿ ಖಾರ್ಟೂಮ್‌ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಗುಂಡಿನ ಚಕಮಕಿ ಮತ್ತು ಸ್ಫೋಟಗಳು ಮುಂದುವರೆದಿವೆ ಎಂದು ಗಿರಿರಾಜ್‌ ಹೇಳುತ್ತಾರೆ.

Tap to resize

Latest Videos

ಸಿದ್ದರಾಮಯ್ಯ ಹಿಂದು ವಿರೋಧಿ, ಮುಸ್ಲಿಂ ನಾಯಕ: ಶೋಭಾ ಕರಂದ್ಲಾಜೆ

ಇನ್ನು ರಾಜ್ಯದಿಂದ ಸೂಡಾನ್‌ಗೆ ಗಿಡಮೂಲಿಕೆ ಔಷಧಿ ಮಾರಾಟ ಸೇರಿದಂತೆ ವಿವಿಧ ಕೆಲಸಕ್ಕಾಗಿ ತೆರಳಿದವರು ಸೂಡಾನ್‌ನ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಸಹಾಯ ಮಾಡುವಂತೆ ಬೇಡುತ್ತಿದ್ದಾರೆ. ಆದರೆ, ರಾಯಭಾರ ಕಚೇರಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ‘ನೀವು ಇರುವ ಸ್ಥಳದಲ್ಲಿಯೇ ಇರಿ. ಮನೆಯಿಂದ ಹೊರಗೆ ಹೋಗಬೇಡಿ. ನಮಗೇ ತಿನ್ನುವುದಕ್ಕೆ ಏನೂ ದೊರೆಯದ ಸ್ಥಿತಿ ಇದೆ. ಪರಿಸ್ಥಿತಿ ಸುಧಾರಿಸುವವರೆಗೆ ಕಾಯಬೇಕು’ ಎನ್ನುವ ಉತ್ತರವನ್ನು ಕಳೆದೊಂದು ವಾರದಿಂದ ನೀಡುತ್ತಿದ್ದಾರೆಂದು ಅವರು ವಿವರಿಸುತ್ತಾರೆ.

ದರೋಡೆಕೋರರ ಕಾಟ: ಗುಂಡಿನ ಕಾಳಗ ನಡೆಯುತ್ತಿರುವ ರಾಜಧಾನಿ ಖಾರ್ಟೂಮ್‌ ನಗರ ಬಿಟ್ಟು ಪ್ರಾಣ ಉಳಿಸಿಕೊಳ್ಳಲು ಮೀನಬರಿ ನಗರಕ್ಕೆ ಸುಮಾರು 200ಕ್ಕೂ ಅಧಿಕ ಕನ್ನಡಿಗರು ಆಗಮಿಸಿ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ನೆಲೆಸಿದ್ದಾರೆ. ಇದೀಗ ಮೀನಬರಿ ನಗರದಲ್ಲಿ ಜೀವ ಭಯದಲ್ಲಿ ಬದುಕುತ್ತಿರುವ ಕನ್ನಡಿಗರಿಗೆ ಈಗ ದರೋಡೆಕೋರರ ಕಾಟ ಶುರುವಾಗಿದೆ. ಗನ್‌, ಚಾಕು ತೋರಿಸಿ ಹೆದರಿಸಿ-ಬೆದರಿಸಿ ಹಣ, ಮೊಬೈಲ್‌ ಜತೆಗೆ, ತಿನ್ನಲು ಇಟ್ಟುಕೊಂಡ ಬ್ರೆಡ್‌ ಸೇರಿದಂತೆ ಆಹಾರ ಪದಾರ್ಥಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಸಂಕಷ್ಟಹಂಚಿಕೊಂಡಿದ್ದಾರೆ.

ಕೂಸು ಬಿಟ್ಟು ಹೋಗಿ ಸಿಲುಕಿದ ರಾಜೇಶ್ವರಿ: ಒಂದು ವಾರದ ಹಿಂದೆಯಷ್ಟೇ ಒಂದು ವರ್ಷ 7 ತಿಂಗಳ ಮಗುವನ್ನು ಬಿಟ್ಟು ಶಿಕಾರಿಪುರದ ಸಮೀಪದ ಸಿದಿಗಿನಹಾಲು ನಿವಾಸಿ ರಾಜೇಶ್ವರಿ ಎಂಬುವರು ಗಂಡನೊಂದಿಗೆ ಸೂಡಾನ್‌ಗೆ ಪ್ರಯಾಣ ಬೆಳೆಸಿದ್ದರು. ಸೂಡಾನ್‌ಗೆ ಕಾಲಿಟ್ಟದಿನದಿಂದಲೇ ಸೇನಾ ಪಡೆಗಳ ನಡುವೆ ಸಂಘರ್ಷ ಆರಂಭವಾಗಿದೆ. ಹಸುಗೂಸನ್ನು ಬಿಟ್ಟು ಆಯುರ್ವೇದ, ಗಿಡಮೂಲಿಕೆ ಮಾರಾಟಕ್ಕೆ ಗಂಡನೊಂದಿಗೆ ಬಂದಿದ್ದೇನೆ. ಆದರೆ, ಇಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಅಕ್ಕ-ಪಕ್ಕದಲ್ಲಿಯೇ ಸ್ಫೋಟಗಳು ಸಂಭವಿಸುತ್ತಿವೆ. ನಮ್ಮನ್ನು ರಕ್ಷಿಸಲು ಯಾರೂ ಬರುತ್ತಿಲ್ಲ ಎಂದು ರಾಜೇಶ್ವರಿ ಬೇಸರ ವ್ಯಕ್ತಪಡಿಸಿದ್ದಾರೆ.

ಶೌಚಾಲಯದ ನೀರು ಕುಡಿಯುತ್ತಿದ್ದೇವೆ: ಸಂಘರ್ಷದಿಂದ ನೀರು, ದಿನಸಿ, ಬ್ರೆಡ್‌ ಸೇರಿದಂತೆ ಆಹಾರ ಪದಾರ್ಥಗಳ ಬೆಲೆ ಗಗನಕ್ಕೆ ಏರಿದೆ. ಐದು ಲೀಟರ್‌ ಕುಡಿಯುವ ನೀರಿನ ಬೆಲೆ 7 ಸಾವಿರ ರು. ಆಗಿದೆ. ಹೀಗಾಗಿ, ಶೌಚಾಲಯದಲ್ಲಿ ಬರುವ ನೀರನ್ನು ಕುಡಿದು ಬದುಕುತ್ತಿದ್ದೇವೆ. ಅದೇ ನೀರನ್ನು ಅಡುಗೆ ಮಾಡಲು ಬಳಸುತ್ತಿದ್ದೇವೆ. ಇನ್ನು 500 ಎಂಬಿ ಇಂಟರ್‌ ನೆಟ್‌ ಡಾಟಾ ಬೆಲೆ 2 ಸಾವಿರ ರು. ಆಗಿದೆ. ಎಲ್ಲ ಬಳಿ ಹಣ ಖಾಲಿ ಆಗಿದೆ ಎಂದು ರಾಜೇಶ್ವರಿ ಹೇಳಿದ್ದಾರೆ.

78 ಮಂದಿ ರಾಜ್ಯದ ಸಂಪರ್ಕಕ್ಕೆ: ಸೂಡಾನ್‌ನಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ವಾಪಸ್‌ ಕರೆ ತರಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಪ್ರಯತ್ನ ಮಾಡುತ್ತಿವೆ. ಈವರೆಗೆ 78 ಮಂದಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ. ಸೂಡಾನ್‌ನಲ್ಲಿ ಸಿಲುಕಿದ ಹಲವರೊಂದಿಗೆ ಖುದ್ದು ಮಾತನಾಡಿ ಧೈರ್ಯ ಹೇಳುವ ಕೆಲಸ ಮಾಡಿದ್ದೇನೆ.

ಕಾಂಗ್ರೆಸ್‌ ಧಿಕ್ಕರಿಸಿ ಕಮಲಕ್ಕೆ ಮತ ನೀಡಿ: ರಾಜೀವ್‌ ಚಂದ್ರಶೇಖರ್‌

ರಾಯಭಾರ ಕಚೇರಿ ನೆರವಿಗೆ ಬರುತ್ತಿಲ್ಲ: ಗಿಡಮೂಲಿಕೆ ಔಷಧಿ ಮಾರಾಟಕ್ಕೆಂದು ಇಲ್ಲಿಗೆ ಬಂದಿದ್ದೇವೆ. ಈಗ ಸೇನಾಪಡೆಯ ಆಂತರಿಕ ದಂಗೆಯಿಂದಾಗಿ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ. ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಿದರೆ ‘ನಮಗೇ ತಿನ್ನುವುದಕ್ಕೆ ಏನೂ ಇಲ್ಲ. ನಿಮಗೇನು ಕೊಡಲಿ? ಇರುವ ಸ್ಥಳದಲ್ಲೇ ಬಾಗಿಲು ಮುಚ್ಚಿಕೊಂಡಿರಿ. ಪರಿಸ್ಥಿತಿ ಸುಧಾರಿಸುವವರೆಗೆ ಕಾಯಬೇಕು’ ಎನ್ನುತ್ತಾರೆ.

click me!