ಪ್ರತ್ಯೇಕ ಕೃಷಿ ಕ್ಯಾಬಿನೆಟ್‌ಗೆ ಯೋಜನಾ ಆಯೋಗ ಶಿಫಾರಸು, ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲೇನಿದೆ?

Kannadaprabha News, Ravi Janekal |   | Kannada Prabha
Published : Feb 20, 2026, 07:19 AM IST
Special Agriculture Cabinet Proposed for Karnataka Planning Board Report

ಸಾರಾಂಶ

ರಾಜ್ಯದಲ್ಲಿ ರೈತರಿಗೆ ಸಂಬಂಧಿಸಿದ ವಿಷಯಗಳ ಚರ್ಚಿಸಲು ಕೃಷಿ ಮತ್ತು ಅದಕ್ಕೆ ಪೂರಕವಾದ ಇಲಾಖೆಗಳ ಸಚಿವರ ಪ್ರತ್ಯೇಕ ಸಂಪುಟ ರಚನೆಯಾಗಬೇಕು. ಈ ಸಂಪುಟವು ನಿಯಮಿತವಾಗಿ ‘ಕೃಷಿ ಸಂಪುಟ ಸಭೆ’ ನಡೆಸಬೇಕು ಎಂಬುದು ಸೇರಿದಂತೆ ರಾಜ್ಯ ನೀತಿ ಮತ್ತು ಯೋಜನಾ ಆಯೋಗವು ಸರ್ಕಾರಕ್ಕೆ ಹಲವು ಶಿಫಾರಸು ಮಾಡಿದೆ.

 ಬೆಂಗಳೂರು (ಫೆ.20) ರಾಜ್ಯದಲ್ಲಿ ರೈತರಿಗೆ ಸಂಬಂಧಿಸಿದ ವಿಷಯಗಳ ಚರ್ಚಿಸಲು ಕೃಷಿ ಮತ್ತು ಅದಕ್ಕೆ ಪೂರಕವಾದ ಇಲಾಖೆಗಳ ಸಚಿವರ ಪ್ರತ್ಯೇಕ ಸಂಪುಟ ರಚನೆಯಾಗಬೇಕು. ಈ ಸಂಪುಟವು ನಿಯಮಿತವಾಗಿ ‘ಕೃಷಿ ಸಂಪುಟ ಸಭೆ’ ನಡೆಸಬೇಕು ಎಂಬುದು ಸೇರಿದಂತೆ ರಾಜ್ಯ ನೀತಿ ಮತ್ತು ಯೋಜನಾ ಆಯೋಗವು ಸರ್ಕಾರಕ್ಕೆ ಹಲವು ಶಿಫಾರಸು ಮಾಡಿದೆ.

ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಗುರುವಾರ ಆಯೋಗದ ಉಪಾಧ್ಯಕ್ಷ ಬಿ.ಆರ್‌.ಪಾಟೀಲ ನೇತೃತ್ವದಲ್ಲಿ ಅಧಿಕಾರೇತರ ಸದಸ್ಯರು ಮತ್ತಿತರ ಪದಾಧಿಕಾರಿಗಳು, ಉದ್ದೇಶಿತ ಆಯೋಗದ ಅಧ್ಯಕ್ಷರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆಯೋಗವು ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಕೃಷಿ ಸಂಬಂಧಿತ ವಲಯ ಸೇರಿದಂತೆ ಐದು ವಲಯದ ಉಪಸಮಿತಿಗಳು ಸಿದ್ಧಪಡಿಸಿದ ವರದಿ ನೀಡಿತು.

ಕೃಷಿ ಮತ್ತು ಕೃಷಿ ಸಂಬಂಧಿತ ವಲಯದಲ್ಲಿ ಪ್ರಮುಖವಾಗಿ, ಈ ಹಿಂದೆ ಬಿಜೆಪಿ ಅವಧಿಯಲ್ಲಿ ಕೃಷಿಗಾಗಿಯೇ ಪ್ರತ್ಯೇಕ ಬಜೆಟ್‌ ಮಂಡಿಸಲಾಗುತ್ತಿತ್ತು. ಈಗ ಅದರ ಮುಂದುವರಿದ ಭಾಗವಾಗಿ ರೈತರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲಿಕ್ಕಾಗಿಯೇ ಕೃಷಿ ಮತ್ತು ಅದಕ್ಕೆ ಪೂರಕವಾದ ತೋಟಗಾರಿಕೆ, ಸಹಕಾರಿ, ಕೃಷಿ ಮಾರುಕಟ್ಟೆ ಸೇರಿ ಇತರೆ ಇಲಾಖೆಗಳ ಸಚಿವರ ಪ್ರತ್ಯೇಕ ಸಂಪುಟ ರಚನೆಯಾಗಬೇಕು. ಅದು ನಿಯಮಿತವಾಗಿ ‘ಕೃಷಿ ಸಂಪುಟ ಸಭೆ’ ನಡೆಸಬೇಕು ಎಂದು ಶಿಫಾರಸು ಮಾಡಿದೆ.

ಅದೇ ರೀತಿ, ರಾಜ್ಯ ಕೃಷಿ ಬೆಲೆ ಆಯೋಗದಂತೆಯೇ ಮುಂಬರುವ ದಿನಗಳಲ್ಲಿ ಕೃಷಿ ಆದಾಯ ಆಯೋಗ ಕೂಡ ಅಸ್ತಿತ್ವಕ್ಕೆ ತರಬೇಕು. ಅದು ರಾಜ್ಯದ ರೈತರ ಆದಾಯದ ಸ್ಥಿತಿಗತಿ, ಬದುಕು-ಬವಣೆ ಬಗ್ಗೆ ಅಧ್ಯಯನ ಮಾಡಬೇಕು. ಅದಕ್ಕೆ ಅನುಗುಣವಾಗಿ ಬರುವ ದಿನಗಳಲ್ಲಿ ಕೃಷಿಯಿಂದ ಆದಾಯ ಸಾಲದಿದ್ದರೆ, ಕೃಷಿಗೆ ಪೂರಕವಾದ ವಲಯಗಳಿಂದ ಆದಾಯ ಒದಗಿಸುವುದು ಹಾಗೂ ಉತ್ಪನ್ನಗಳನ್ನು ಸ್ವಾಮಿನಾಥನ್‌ ಬೆಲೆಯಲ್ಲಿ ಖರೀದಿಗೆ ನೀಲನಕ್ಷೆ ಸಿದ್ಧಪಡಿಸಬೇಕು ಎಂದು ತಿಳಿಸಿದೆ.

ಆರ್‌ಟಿಇ ಕಾಯ್ದೆ ಪರಿಣಾಮಕಾರಿ ಜಾರಿಗೊಳಿಸಿ:

ಶಿಕ್ಷಣ ಮತ್ತು ಕೌಶಲ್ಯ ವಲಯದ ಉಪಸಮಿತಿಯು ರಾಜ್ಯದಲ್ಲಿ ಸಮಾನತೆ ಗುಣಮಟ್ಟ ಮತ್ತು ಉತ್ತಮ ಆಡಳಿತಕ್ಕಾಗಿ ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಬೇಕು. ಶಿಕ್ಷಣ ಹಕ್ಕ ಕಾಯ್ದೆಯನ್ನು (ಆರ್‌ಟಿಇ) ಪರಿಣಾಮಕಾರಿ ಅನುಷ್ಠಾನಕ್ಕೆ ಸಮಗ್ರ ಕ್ರಿಯಾ ಯೋಜನೆ ರೂಪಿಸಿಬೇಕು. ಅತಿಥಿ ಶಿಕ್ಷಕರ ನೇಮಕಾತಿ ಕೊನೆಗೊಳಿಸಿ ಆದ್ಯತೆ ಮೇಲೆ ಮಂಜೂರಾಗಿರುವ ಶಿಕ್ಷಕ ಹುದ್ದೆಗಳ ಭರ್ತಿ ಮಾಡಬೇಕು. ಪ್ರೌಢ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ವಿದ್ಯಾರ್ಥಿನಿಯರಿಗೆ ಈ ಹಿಂದೆ ಇದ್ದ ಉಚಿತ ಬೈಸಿಕಲ್‌ ಯೋಜನೆ ಪುನರ್‌ ಜಾರಿಗೊಳಿಸಬೇಕು. ಉನ್ನತ ಶಿಕ್ಷಣ ನೇಮಕಾತಿ, ಸಂಶೋಧನೆ, ಕೌಶಲ್ಯ ಮತ್ತು ಉದ್ಯಮ ಸಂಪರ್ಕ ಮರುರೂಪಿಸಬೇಕು ಎಂದು ತಿಳಿಸಿದೆ.

ಇನ್ನು, ಆರೋಗ್ಯ ವಲಯಕ್ಕೆ ಸಂಬಂಧಿಸಿ, ಬಡತನ ನಿವಾರಣೆ ಮಾಡುವಲ್ಲಿ ಆರೋಗ್ಯದ ಪಾತ್ರ ನಿರ್ಣಾಯಕವಾಗಿದೆ. ಹಾಗಾಗಿ ಆರೋಗ್ಯ ಸೇವೆಯನ್ನು ಅಭಿವೃದ್ಧಿಯ ಒಂದು ಚಾಲಕ ಶಕ್ತಿ ಎಂದು ಗುರುತಿಸಿ ಆರೋಗ್ಯ ಸೇವೆ ಕಾರ್ಯಕ್ರಮಗಳ ಅನುಷ್ಠಾನವನ್ನು ಸಮರ್ಥವಾಗಿ ಪರಿಣಾಮಕಾರಿ ಮತ್ತು ಜನಮುಖಿಯಾಗಿ ನೀಡಲು 2026-27ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಆಡಳಿತಾಂಗಕ್ಕೆ ಸಂದೇಶ ನೀಡಬೇಕು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಲಯದ ಉಪ ಸಮಿತಿಯು, ಮಹಿಳಾ ಕಾರ್ಮಿಕರಿಗಾಗಿ ನಗರ ಮತ್ತು ಉಪನಗರಗಳಲ್ಲಿ ಹಾಸ್ಟೆಲ್‌ಗಳನ್ನು ಸ್ಥಾಪಿಸಬೇಕು. ಕರ್ನಾಟಕದಲ್ಲಿ ಮಹಿಳೆಯರ ಸ್ಥಿತಿ ಪರಿಷ್ಕೃತ ವರದಿ ಆಧರಿಸಿ ರಾಜ್ಯ ಲಿಂಗ ನೀತಿ ರೂಪಿಸಬೇಕು. ಪ್ರತಿ ತಾಲೂಕಿನಲ್ಲಿ ಸಾಂತ್ವನ ಹಾಗೂ ಸ್ವಧಾರ್‌ ಕೇಂದ್ರಗಳನ್ನು ಸ್ಥಾಪಿಸಬೇಕು. ರಾಜ್ಯ ಮಹಿಳಾ ಆಯೋಗದ ಕಾರ್ಯನಿರ್ವಹಣೆಯನ್ನು ಪರಿಣಾಮಗೊಳಿಸಲು ಕ್ರಮ ವಹಿಸಬೇಕೆಂದು ತಿಳಿಸಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂತೂ ರಾಜಧಾನಿಯ ಕಸದ ಸಮಸ್ಯೆ ಪರಿಹಾರ! ಡಂಪಿಂಗ್ ಯಾರ್ಡ್‌ ಕ್ಷೇತ್ರಗಳಿಗೆ ₹350 ಕೋಟಿ ಬಿಡುಗಡೆಗೆ ಜಿಬಿಎ ಒಪ್ಪಿಗೆ
ರಾಜ್ಯದಲ್ಲಿ ಏಪ್ರಿಲಿಂದ ಎಸ್‌ಐಆರ್ ಆರಂಭ? ಮತಪಟ್ಟಿ ವಿಶೇಷ ಪರಿಷ್ಕರಣೆಗೆ ಆಯೋಗ ಸಜ್ಜು