
ಕಾರವಾರ (ಫೆ.20): ಕಾಳಿ ನದಿಯಲ್ಲಿ ಅಳಿವಿನಂಚಿನಲ್ಲಿರುವ ಅಪರೂಪದ ಸಮುದ್ರ ಜೀವಿಯೊಂದು ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ಸಮಯಪ್ರಜ್ಞೆಯಿಂದಾಗಿ ಅದಕ್ಕೆ ಮರುಜೀವ ಸಿಕ್ಕಿದೆ.
ಕಾರವಾರದ ಕಾಳಿ ನದಿಯ ಪಾತ್ರದಲ್ಲಿ ಅಳಿವಿನಂಚಿನಲ್ಲಿರುವ 'ಗ್ರೀನ್ ಸೀ ಟರ್ಟಲ್' (Green Sea Turtle) ಪ್ರಭೇಧಕ್ಕೆ ಸೇರಿದ ಬೃಹತ್ ಗಾತ್ರದ ಆಮೆಯೊಂದು ಕಂಡುಬಂದಿದೆ. ನದಿಯಲ್ಲಿ ನಿತ್ರಾಣ ಸ್ಥಿತಿಯಲ್ಲಿದ್ದ ಈ ಆಮೆಯನ್ನು ಗಮನಿಸಿದ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ, ಅದನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ.
ರಕ್ಷಣೆ ಮಾಡಲಾದ ಈ ಆಮೆ ಸಾಮಾನ್ಯ ಗಾತ್ರದ್ದಲ್ಲ. ಇದು ಸುಮಾರು 100 ಕೆಜಿಗೂ ಅಧಿಕ ತೂಕ ಹೊಂದಿದ್ದು, ಅಂದಾಜು 60 ವರ್ಷ ವಯಸ್ಸಾಗಿರಬಹುದು ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ. ಇಷ್ಟು ದೊಡ್ಡ ಗಾತ್ರದ ಮತ್ತು ಹಳೆಯ ಪ್ರಾಯದ ಆಮೆ ನದಿಯ ಭಾಗದಲ್ಲಿ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.
ತೀವ್ರ ನಿತ್ರಾಣ: ಸ್ಥಳದಲ್ಲೇ ಚಿಕಿತ್ಸೆ
ರಕ್ಷಣೆಯಾದ ಸಮಯದಲ್ಲಿ ಆಮೆಯು ತೀವ್ರವಾಗಿ ನಿತ್ರಾಣಗೊಂಡಿರುವುದು ಕಂಡುಬಂದಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅಧಿಕಾರಿಗಳು, ತಕ್ಷಣವೇ ಪಶುವೈದ್ಯರನ್ನು ಸ್ಥಳಕ್ಕೆ ಕರೆಸಿ ಅಗತ್ಯ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಯನ್ನು ಕೊಡಿಸಿದ್ದಾರೆ. ಸದ್ಯ ಆಮೆಯ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಲಾಗಿದೆ.
ಶೀಘ್ರದಲ್ಲೇ ಸಮುದ್ರಕ್ಕೆ ವಾಪಸ್
ಸದ್ಯ ಈ ಅಪರೂಪದ ಆಮೆಯು ಅರಣ್ಯ ಇಲಾಖೆಯಿಂದ ರಕ್ಷಣೆಯಲ್ಲಿದೆ. ಆಮೆಯು ಸಂಪೂರ್ಣವಾಗಿ ಚೇತರಿಸಿಕೊಂಡು, ಆರೋಗ್ಯವಂತವಾಗಿದೆ ಎಂದು ಖಚಿತವಾದ ನಂತರ ಅದನ್ನು ಸುರಕ್ಷಿತವಾಗಿ ಸಮುದ್ರದ ಆಳಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ