ಪುನೀತ್ ಶಕ್ತಿಧಾಮ ಸಂಸ್ಥೆಗೆ 2.5 ಕೋಟಿ, ವಿಷ್ಣು ಸ್ಮಾರಕಕ್ಕೆ 5 ಕೋಟಿ ರು., 8001 ಕೋಟಿ ರು. ಪೂರಕ ಅಂದಾಜು ಉಭಯ ಸದನಗಳಲ್ಲಿ ಮಂಡನೆ.
ವಿಧಾನಮಂಡಲ(ಡಿ.27): ವಿಧಾನಸಭಾ ಚುನಾವಣಾ ವೆಚ್ಚ ಭರಿಸಲು 300 ಕೋಟಿ ರು., ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ 5 ಕೋಟಿ ರು., ಹಕ್ಕು ಪತ್ರ ಒದಗಿಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಯಾದಗಿರಿ ಜಿಲ್ಲೆ ಕಾರ್ಯಕ್ರಮಕ್ಕೆ 7 ಕೋಟಿ ರು. ಸೇರಿದಂತೆ 8001.12 ಕೋಟಿ ರು. ಮೊತ್ತದ ಎರಡನೇ ಕಂತಿನ ಪೂರಕ ಅಂದಾಜುಗಳನ್ನು ಉಭಯ ಸದನಗಳಲ್ಲಿ ಸರ್ಕಾರ ಮಂಡನೆ ಮಾಡಿದೆ.
ಸೋಮವಾರ ಮುಖ್ಯಮಂತ್ರಿಗಳ ಪರವಾಗಿ ವಿಧಾನಸಭೆಯಲ್ಲಿ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತು ವಿಧಾನಪರಿಷತ್ತಿನಲ್ಲಿ ಸಭಾನಾಯಕರೂ ಆಗಿರುವ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪೂರಕ ಅಂದಾಜು ಮಂಡಿಸಿದರು.
NEWS HOUR | ಅಧಿವೇಶನದಲ್ಲಿ ಸದ್ದು ಮಾಡಿದ ಮೀಸಲಾತಿ & ಸುರತ್ಕಲ್ ಮರ್ಡರ್!
ಪುನೀತ್ ರಾಜ್‌ಕುಮಾರ್ ಅವರ ಶಕ್ತಿಧಾಮ ಸಂಸ್ಥೆಗೆ 2.5 ಕೋಟಿ ರು., ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ 4.99 ಕೋಟಿ ರು. ಹೆಚ್ಚುವರಿಯಾಗಿ ಒದಗಿಸಲಾಗಿದೆ. ರಾಜ್ಯಪಾಲರು, ಮುಖ್ಯಮಂತ್ರಿಯವರು, ಸಚಿವರು ಹಾಗೂ ಇತರೆ ಗಣ್ಯರ ಪ್ರಯಾಣಕ್ಕೆ ಬಾಡಿಗೆ ಆಧಾರದ ಮೇಲೆ ಹೆಲಿಕಾಪ್ಟರ್ ಬಿಲ್ ಪಾವತಿಸಲು 6 ಕೋಟಿ ರು. ಒದಗಿಸಲಾಗಿದೆ. ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ 55.42 ಕೋಟಿ ರು. ಒದಗಿಸಿದ್ದು, ಇದರಲ್ಲಿ ಗಂಟು ರೋಗದಿಂದ ಮೃತಪಟ್ಟರಾಸುಗಳ ಮಾಲೀಕರಿಗೆ ಪರಿಹಾರ ನೀಡಲು 30 ಕೋಟಿ ರು. ಹಾಗೂ ಸ್ಥಳೀಯ ಗೋ ತಳಿಗಳನ್ನು ಸಂರಕ್ಷಿಸಲು ಮತ್ತು ಅವುಗಳ ಸಂತತಿ ಹೆಚ್ಚಿಸಲು ಕೆಎಂಎಫ್ ಮೂಲಕ ಗೋ ತಳಿಗಳನ್ನು ರೈತರಿಗೆ ಹಂಚಿಕೆ ಮಾಡಲು 7 ಕೋಟಿ ರು. ಹಂಚಿಕೆ ಮಾಡಲಾಗಿದೆ.
ಅತಿವೃಷ್ಟಿಯಿಂದ ಆದ ಬೆಳೆ ಹಾನಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಪರಿಹಾರ ನೀಡಲು 758.19 ಕೋಟಿ ರು. ಅನುದಾನ, ಜಲಧಾರೆ ಯೋಜನೆ ನಿರ್ವಹಣಾ ವೆಚ್ಚ ಮತ್ತು ವಿದ್ಯುತ್ ವೆಚ್ಚಗಳಿಗಾಗಿ 200 ಕೋಟಿ ರು., ಬಂಧನದಲ್ಲಿದ್ದ ಕೈದಿಗಳ ಸಾವಿಗೆ ಪರಿಹಾರ ನೀಡಲು 50 ಲಕ್ಷ ರು., ಮುಖ್ಯಮಂತ್ರಿಗಳ ಕ್ಷೇತ್ರವಾದ ಶಿಗ್ಗಾಂವ್ ತಾಲೂಕಿನಲ್ಲಿ ಹೈಮಾಸ್ಟ್ ವಿದ್ಯುತ್ ದೀಪ ಅಳಡಿಕೆಗೆ 2 ಕೋಟಿ ರು., ಶಿಗ್ಗಾಂವ್ ತಾಲ್ಲೂಕು ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ 2 ಕೋಟಿ ರು. ಅನುದಾನ ಒದಗಿಸಲಾಗಿದೆ. ಇನ್ನು ಕರ್ನಾಟಕ ಕಂದಾಯ ಇಲಾಖೆಯ ಸಾಧನೆಗಳ ಹೆಸರಿನ ಕಾಫಿ ಟೇಬಲ್ ಪುಸ್ತಕಕ್ಕೆ ಹೆಚ್ಚುವರಿಯಾಗಿ 30 ಲಕ್ಷ ರು., ಬಿಬಿಎಂಪಿಯಲ್ಲಿನ ಸಿಬ್ಬಂದಿ ಮತ್ತು ಅಧಿಕಾರಿಗಳ ವೇತನಕ್ಕಾಗಿ 200 ಕೋಟಿ ರು., ಇತ್ತೀಚೆಗೆ ಮೃತರಾದ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅವರು ಪಡೆದಿದ್ದ ಚಿಕಿತ್ಸೆಗೆ 46 ಲಕ್ಷ ರು. ಹೆಚ್ಚುವರಿಯಾಗಿ ಪಾವತಿಸಲು ಹಣ ನೀಡಲು ಪೂರಕ ಅಂದಾಜುಗಳಲ್ಲಿ ಉಲ್ಲೇಖಿಸಲಾಗಿದೆ.