ಸೌಜನ್ಯ ಪ್ರಕರಣ ಮರು ತನಿಖೆ ಆದೇಶಕ್ಕೆ ಧರ್ಮಸ್ಥಳ ಕ್ಷೇತ್ರ ಸ್ವಾಗತ ; ಪಾರ್ಶ್ವನಾಥ ಜೈನ್ ಮಹತ್ವದ ಹೇಳಿಕೆ!

Kannadaprabha News   | Kannada Prabha
Published : Sep 22, 2026, 07:29 AM IST
dharmasthala Sowjanya case

ಸಾರಾಂಶ

ಧರ್ಮಸ್ಥಳದ ಸೌಜನ್ಯ ಕೇಸ್ ಮರುತನಿಖೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದ್ದು, ಎಸ್‌ಐಟಿ ರಚಿಸಿ ಮೂರು ತಿಂಗಳೊಳಗೆ ವರದಿ ಸಲ್ಲಿಸಲು ಸೂಚಿಸಿದೆ. ಈ ನಿರ್ಧಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಮುಕ್ತಮನಸ್ಸಿನಿಂದ ಸ್ವಾಗತಿಸಲಾಗಿದೆ. ಈ ಮೂಲಕ ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರೆಯಲಿ ಎಂದು ಆಶಿಸಲಾಗಿದೆ.

ಬೆಳ್ತಂಗಡಿ (ಸೆ.22): ಸರ್ವೋಚ್ಚ ನ್ಯಾಯಾಲಯವು ಸೌಜನ್ಯ ಪ್ರಕರಣ ಮರು ತನಿಖೆಗೆ ಒಪ್ಪಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಈ ನಿರ್ಧಾರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಮುಕ್ತಮನಸ್ಸಿನಿಂದ ಸ್ವಾಗತಿಸುತ್ತೇವೆ ಎಂದು ಕ್ಷೇತ್ರದ ದೇವಾಲಯ ಕಚೇರಿ ವ್ಯವಸ್ಥಾಪಕ ಪಾರ್ಶ್ವನಾಥ ಜೈನ್ ತಿಳಿಸಿದ್ದಾರೆ.

ಸೌಜನ್ಯಳಿಗೆ ನ್ಯಾಯ ದೊರೆಯಬೇಕು ಎಂಬುದು ಶ್ರೀ ಕ್ಷೇತ್ರದ ಆಶಯ

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಹಲವು ವರ್ಷಗಳಿಂದ ಶ್ರೀ ಕ್ಷೇತ್ರದ ಮೇಲೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥಿತವಾಗಿ ಹಾಗೂ ನಿರಂತರವಾಗಿ ಅಪಪ್ರಚಾರ ನಡೆಸಿ, ಕಳಂಕ ತರುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸೌಜನ್ಯಳಿಗೆ ನ್ಯಾಯ ದೊರೆಯಬೇಕು ಎಂಬುದು ಶ್ರೀ ಕ್ಷೇತ್ರದ ದೃಢವಾದ ಆಶಯವಾಗಿದೆ. ಈಗ ಆದೇಶಿಸಲಾಗಿರುವ ಮರು ತನಿಖೆ ಸಂಪೂರ್ಣ ನಿಷ್ಪಕ್ಷಪಾತವಾಗಿ ಹಾಗೂ ಪಾರದರ್ಶಕವಾಗಿ ನಡೆಯಲಿ ಮತ್ತು ಈ ಮೂಲಕ ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರೆಯಲಿ ಎಂದು ನಾವು ಆಶಿಸುತ್ತೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೌಜನ್ಯ ಪ್ರಕರಣ ರೀಒಪನ್ ಮಾಡಿದ ಸುಪ್ರೀಂ

ಧರ್ಮಸ್ಥಳದ ಸೌಜನ್ಯ ಅತ್ಯಾ೧ಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದ್ದು, ವಿಶೇಷ ತನಿಖಾ ತಂಡ ರಚಿಸಿ ಮೂರು ತಿಂಗಳೊಳಗೆ ತನಿಖಾ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ. ಪ್ರಕರಣ ನಡೆದು 14 ವರ್ಷಗಳ ಬಳಿಕ ಮರು ತನಿಖೆಗೆ ನ್ಯಾಯಾಲಯ ಆದೇಶ ನೀಡಿರುವುದು ಒಂದು ಮಹತ್ವದ ಬೆಳವಣಿಗೆಯಾಗಿದೆ.

2012ರ ಅ. 9ರಂದು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸಮೀಪ ಸೌಜನ್ಯ ಅತ್ಯಾ೧ಚಾರ ಹಾಗೂ ಕೊಲೆಗೀಡಾಗಿದ್ದರು. ಪ್ರಕರಣದ ತನಿಖೆ ಆರಂಭದಲ್ಲಿ ಸ್ಥಳೀಯ ಪೊಲೀಸರು ನಡೆಸಿದ್ದು, ಬಳಿಕ ಸಿಐಡಿ ಹಾಗೂ ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ತನಿಖೆಯ ಬಳಿಕ ಸಂತೋಷ್ ರಾವ್ ಎಂಬವರನ್ನು ಆರೋಪಿಯನ್ನಾಗಿ ಮಾಡಲಾಗಿತ್ತು. ಆದರೆ, 2023ರ ಜೂನ್ 16ರಂದು ಸಿಬಿಐ ವಿಶೇಷ ನ್ಯಾಯಾಲಯವು ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿತ್ತು.

ಖುಲಾಸೆ ಬಳಿಕ ಪ್ರಕರಣದ ನೈಜ ಆರೋಪಿಗಳನ್ನು ಪತ್ತೆಹಚ್ಚಲು ಮರುತನಿಖೆ ನಡೆಸಬೇಕೆಂಬ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿತ್ತು. ಸೌಜನ್ಯ ಕುಟುಂಬವೂ ಮರುತನಿಖೆಗೆ ಆಗ್ರಹಿಸಿತ್ತು. 2024ರಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ಮರುತನಿಖೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆದಿತ್ತು.

2026ರಲ್ಲಿ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಮರುತನಿಖೆ ನಡೆಸುವ ವಿಧಾನ ಮತ್ತು ಯಾವ ತನಿಖಾ ಸಂಸ್ಥೆಯ ಮೂಲಕ ತನಿಖೆ ನಡೆಸಬೇಕು ಎಂಬ ವಿಚಾರದಲ್ಲಿ ವಾದ-ಪ್ರತಿವಾದಗಳು ನಡೆದಿದ್ದವು. ರಾಜ್ಯ ಸರ್ಕಾರವೂ ಅಗತ್ಯವಿದ್ದಲ್ಲಿ ಎಸ್‌ಐಟಿ ರಚಿಸಲು ಸಿದ್ಧವಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿತ್ತು.

ಇದೀಗ ಸುಪ್ರೀಂ ಕೋರ್ಟ್ ಎಸ್‌ಐಟಿ ಮೂಲಕ ಮರುತನಿಖೆಗೆ ಅವಕಾಶ ನೀಡಿದ್ದು, ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿರುವುದು ಪ್ರಕರಣದಲ್ಲಿ ಮಹತ್ವದ ತಿರುವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಕಸ್ತೂರಿ ರಂಗನ್ ವರದಿ; ಕೇರಳ ಮಾದರಿಯಲ್ಲಿ ಪಶ್ಚಿಮ ಘಟ್ಟಗಳ ಸರ್ವೆಗೆ ಪಕ್ಷಾತೀತ ಆಗ್ರಹ
ರಾಜ್ಯಕ್ಕೆ ಬರಗಾಲ ಬಂದಿದ್ರೂ ಹೇಮಾವತಿಯಿಂದ ತಮಿಳನಾಡಿಗೆ ನೀರು! ನಿಮ್ಮ ಜಿಲ್ಲೆಯ ಜಲಾಶಯದ ಇಂದಿನ ನೀರಿನ ಮಟ್ಟ ಎಷ್ಟಿದೆ?