ಪಿಎಸ್‌ಐ ಪರೀಕ್ಷೆ ಅಕ್ರಮ- ಶೀಘ್ರ ಸರ್ಕಾರಕ್ಕೆ ಮಧ್ಯಂತರ ವರದಿ?

By Girish Goudar  |  First Published Apr 26, 2022, 10:08 AM IST

*  ಸಿಐಡಿ ಡಿಜಿಪಿ ಪಿಎಸ್‌ ಸಂಧು ನೇತೃತ್ವದಲ್ಲಿ ಉನ್ನತಾಧಿಕಾರಿಗಳ ಮಹತ್ವದ ಸಭೆ
*  ಅಧಿಕಾರಿಗಳಿಗೆ ಡಿಐಜಿ ಸಂಧು ಖಡಕ್‌ ಸೂಚನೆ
*  ಇನ್ನಷ್ಟು ಎಫ್‌ಐಆರ್‌ ದಾಖಲಾಗುವ ಸಾಧ್ಯತೆ 
 


ಶೇಷಮೂರ್ತಿ ಅವಧಾನಿ

ಕಲಬುರಗಿ(ಏ.26):  ಕಳೆದ 21 ದಿನಗಳಿಂದ ಪೊಲೀಸ್‌ ಇಲಾಖೆಯ 545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಾಗಿರುವ ಅಕ್ರಮಗಳನ್ನು(PSI Recruitment Scam) ಪತ್ತೆ ಹಚ್ಚಲು ಕಳೆದ 21 ದಿನಗಳಿಂದ ಒಂದೇ ಸವನೆ ತನಿಖೆ ಮಾಡುತ್ತ ಸಾಕಷ್ಟು ಪ್ರಗತಿ ಸಾಧಿಸಿರುವ ಸಿಐಡಿ(CID) ತಂಡ ಇದೀಗ ಹಗರಣದ ಸ್ವರೂಪ, ಆಳ-ವಿಸ್ತಾರಗಳೆಲ್ಲದರ ಸಮಗ್ರ ನೋಟವಿರುವ ಮಧ್ಯಂತರ ವರದಿ(Interim Report) ಸಿದ್ಧಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿಯೇ ಸೋಮವಾರ ಸಿಐಡಿ ಡಿಐಜಿ ಪಿಎಸ್‌ ಸಂಧು, ಐಜಿಪಿ, ಡಿಸಿಪಿ, ಎಸ್ಪಿ ಸೇರಿದಂತೆ ಸಿಐಡಿಯ ಹಿರಿಯ ಅಧಿಕಾರಿಗಳೆಲ್ಲ ಹಗರಣ ಸ್ಫೋಟಗೊಂಡು ಸುದ್ದಿಯಲ್ಲಿರುವ ಕಲಬುರಗಿಗೆ(Kalaburagi) ಭೇಟಿ ನೀಡಿ ತನಿಖಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ ಇಲ್ಲಿಯ ವರೆಗಿನ ತನಿಖೆಯಲ್ಲಾದ ಪ್ರಗತಿಯ ಇಂಚಿಂಚೂ ಮಾಹಿತಿ ಪಡೆದುಕೊಂಡಿದ್ದಾರೆಂದು ಗೊತ್ತಾಗಿದೆ.

Tap to resize

Latest Videos

ಇತ್ತೀ​ಚೆಗೆ ಕಲಬುರಗಿಗೆ ಭೇಟಿ ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಪತ್ರಕರ್ತರೊಂದಿಗೆ ಮಾತನಾಡಿ, ಸಿಐಡಿಗೆ ತನಿಖೆಗೆ ಸ್ವಾತಂತ್ರ್ಯ ನೀಡಿದ್ದೇವೆ, ಅವರಿಂದ ಮಧ್ಯಂತರ ವರದಿ ಕೇಳಿದ್ದೇವೆ, ಆ ವರದಿ ಬಂದ ನಂತರವಷ್ಟೇ 545 ಪಿಎಸ್‌ಐ ಹುದ್ದೆ ನೇಮಕಾತಿಯ ಮರು ಪರೀಕ್ಷೆ ಮಾಡಬೇಕೋ? ಬಿಡಬೇಕೋ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆಂದು ಹೇಳಿದ್ದರು. ಸಿಎಂ ಅವರಿಂದ ಈ ಹೇಳಿಕೆ ಹೊರಬಿದ್ದ 3 ದಿನಗಳಲ್ಲೇ ಸಿಐಡಿ ಉನ್ನತಾಧಿಕಾರಿಗಳು ಕಲಬುರಗಿಗೆ ಬಂದಿರೋದು ನೋಡಿದರೆ ಶೀಘ್ರ ಮಧ್ಯಂತರ ವರದಿ ಸಲ್ಲಿಕೆಯಾಗುವ ಸಾಧ್ಯತೆಗಳನ್ನು ತಳ್ಳಿ ಹಾಕಲಾಗದು.

ಫೆಬ್ರವರಿಯಲ್ಲಿ ನಡೆಯಬೇಕಿದ್ದ 402 ಪಿಎಸ್‌ಐ ನೇಮಕದಲ್ಲೂ ಅಕ್ರಮ?

ತನಿಖೆಯಲ್ಲಿ ಸಾಕಷ್ಟು ಪ್ರಗತಿ:

ಕಳೆದ ಏ.4 ರಂದೇ ಸದರಿ ಹಗರಣದ ತನಿಖೆ ಸರ್ಕಾರ(Government of Karnataka) ಸಿಐಡಿಗೆ ಒಪ್ಪಿಸಿತ್ತು, ಅಲ್ಲಿಂದ ಇಲ್ಲಿಯವರೆಗೂ ಬ್ಲೂಟೂತ್‌ ರೂಪದಲ್ಲಿ ಅಕ್ರಮ ಮಾಡಿರುವ ಅಫಜಲ್ಪುರದ ಸಹೋದರರಾದ ಮಹಾಂತೇಶ ಹಾಗೂ ರುದ್ರಗೌಡ, ವಾಮ ಮಾರ್ಗದಿಂದ ಸರಿ ಉತ್ತರ ಪಡೆದು ರಾರ‍ಯಂಕ್‌ ಬಂದಿರುವ, ಹೆಚ್ಚಿನ ಅಂಕ ಗಳಿಸಿ ಆಯ್ಕೆಯಾಗಿರುವ 5 ಅಭ್ಯರ್ಥಿಗಳು ಸೇರಿದಂತೆ 15 ಜನರನ್ನು ಬಂಧಿಸಿರುವ ಸಿಐಡಿ ಸಾಕಷ್ಟುಸಾಕ್ಷಿ- ಪುರಾವೆಗಳನ್ನು ಕಲೆಹಾಕಿದೆ.

ಹಗರಣ ನಡೆದಿರುವ ಕಲಬುರಗಿ ಜ್ಞಾನಜ್ಯೋತಿ ಶಾಲೆಯ ಒಡತಿ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ(Divya Hagaragi) ಸೇರಿದಂತೆ ಅವಳ ಶಾಲೆಯ ಮುಖ್ಯಗುರು ಸೇರಿದಂತೆ ತಲೆ ಮರೆಸಿಕೊಂಡಿರುವ ಐವರನ್ನು ತನ್ನ ಖೆಡ್ಡಾಕ್ಕೆ ಕೆಡವಲು ಜಾಲ ಬೀಸಿದೆ. ಇಡೀ ಹಗರಣದಲ್ಲಿ ನಡೆದಿರಬಹುದಾದ ಅಂದಾಜು ಹಣಕಾಸಿನ ವಹಿವಾನ್ನೂ ಕೂಡಿ ಕಳೆದು ಲೆಕ್ಕಹಾಕುವ ಕೆಲಸ ಸಿಐಡಿ ಹಂತದಲ್ಲಿ ಭರದಿಂದ ಸಾಗಿದೆ. ಹೀಗೆ ನಡೆಯುವ ಲೆಕ್ಕಕ್ಕೆಲ್ಲ ಪಕ್ಕಾ ಸಾಕ್ಷಿ- ಪುರಾವೆಗಳನ್ನು ಕಲೆ ಹಾಕುವ ಕಸರತ್ತೂ ಒಳಗೊಳಗೆ ಭರದಿಂದ ಸಾಗಿದೆ.

545 ಪಿಎಸ್‌ಐ ಹುದ್ದೆಗಳಿಗಾಗಿ ರಾಜ್ಯಾದ್ಯಂತ(Karnataka) ಪರೀಕ್ಷೆ ನಡೆದಿದ್ದು 75 ಸಾವಿರದಷ್ಟು ಅಭ್ಯರ್ಥಿಗಲು ಪರೀಕ್ಷೆ ಬರೆದಿದ್ದಾರೆ. ಹಗರಣದ ಮುಖ್ಯ ಕೇಂದ್ರವಾಗಿ ಕಲಬುರಗಿಯ ಜ್ಞಾನಜ್ಯೋತಿ ಶಾಲೆ ಪೀರಕ್ಷಾ ಕೇಂದ್ರ ಹೊರಹೊಮ್ಮಿದ್ದರಿಂದ ಸಿಐಡಿ ತನ್ನ ಲಕ್ಷವನ್ನೆಲ್ಲ ಇಲ್ಲೇ ಕೇಂದ್ರೀಕರಿಸಿ ತನಿಖೆ ಮುಂದುವರಿಸಿದೆ. ಇದರ ಜೊತೆಗೇ ಸಿಐಡಿ ರಿಸಿರುವ ಹಲವು ತಂಡಗಳು ರಾಜ್ಯದ ಇತರೆ ಭಾಗಗಳಲ್ಲಿನ ಪರೀಕ್ಷಾ ಕೇಂದ್ರಗಳಲ್ಲಿಯೂ ಅಕ್ರಮಗಳು ನಡೆದಿವೆಯೆ ಎಂಬ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದು ಪರಿಶೀಲನೆ ಸಾಗಿದೆ.

ಕಲಬುರಗಿ ಅಕ್ರಮವೂ ಸೇರಿದಂತೆ ರಾಜ್ಯದಲ್ಲಿ ಯಾವ ಕೇಂದ್ರದಲ್ಲಿ ಏನೇನಾಗಿದೆ ಎಂಬುದರ ಸ್ಥೂಲ ಚಿತ್ರಣವಿರುವ ಪ್ರಾಥಮಿಕ ಹಂತದ ಮಾಹಿತಿಗಳಿರುವ ಮಧ್ಯಂತರ ವರದಿ ಸಿದ್ಧಪಡಿಸುವ ತಾಲೀಮಿಗೆ ಸಿಐಡಿ ಉನ್ನತಾಧಿಕಾರಿಗಳೇ ಉಸ್ತುವಾರಿ ಹೊತ್ತಿದ್ದಾರೆ.

ಅದಾಗಲೇ ಬೆಂಗಳೂರಿನ ಸಿಐಡಿ ಮುಖ್ಯಾಲಯ ಕಾರ್ಲಟನ್‌ ಭವನಕ್ಕೇ ನಿತ್ಯ 50 ರಂತೆ ಪರೀಕ್ಷೆ ಬರೆದ ಎಲ್ಲಾ 545 ಅಭ್ಯರ್ಥಿಗಳಿಗೆ ಬುಲಾವ್‌ ನೀಡಿ ಅವರ ಹಾಲ್‌ಟಿಕೆಟ್‌, ಓಂಎಂಆರ್‌ ಕಾರ್ಬನ್‌ ಪ್ರತಿಗಳ ಪರಿಶೀಲನೆಯೂ ನಡೆಸಲಾಗಿದೆ, ಈ ಪರೀಶೀಲನೆಗೆ ಅನೇಕರು ಗೈರು ಹಾಜರಾಗಿದ್ದಾರೆ, ಇವೆಲ್ಲ ಸಂಗತಿಗಳು ಮಧ್ಯಂತರ ವರದಿಗೆ ಪೂರಕ ಮಾಹಿತಿಗಳಾಗಲಿವೆ ಎಂದು ಸಿಐಡಿ ಮೂಲಗಳಿಂದ ತಿಳಿದು ಬಂದಿದೆ.

ತನಿಖಾಧಿಕಾರಿಗಳಿಗೆ ಡಿಐಜಿ ಸಂಧು ಖಡಕ್‌ ಸೂಚನೆ

ಕಲಬುರಗಿಯಲ್ಲಿ ಸೋಮವಾರ ನಡೆದ ಉನ್ನತಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿರುವ ಸಿಐಡಿ ಡಿಐಜಿ ಪಿಎಸ್‌ ಸಂಧು ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದವರು, ಅವರು ತಲೆ ಮರೆಸಿಕೊಳ್ಳಲು, ಅಡಗಲು ಸಹಕರಿಸಿದವರು ಎಲ್ಲರನ್ನು ಹುಡುಕಿ ಬೆಂಡೆತ್ತುವಂತೆ ಖಡಕ್‌ ಸೂಚನೆ ನೀಡಿದ್ದಾರೆಂದು ಗೊತ್ತಾಗಿದೆ.

ಪಿಎಸ್ಸೈ ಪರೀ​ಕ್ಷೆ​: ಬ್ಲೂಟೂತ್‌ ಅಕ್ರ​ಮದ ತನಿಖೆ ಆಗ್ರಹ

ಹಗರಣದಲ್ಲಿ ತಲೆ ಮರೆಸಿಕೊಂಡವರಿಗೆ ಆಸರೆ ನೀಡಿದವರ ಮೇಲೂ ಕಣ್ಣಿಡಿ, ಜೊತೆಗೆ ಅವರೊಂದಿಗೆ ನಿಕಟ ಸಂಪರ್ಕದಲ್ಲಿರುವವರನ್ನು ಬೆಂಡೆತ್ತಿ ಎಂದು ಸಂಧು ಸೂಚನೆ ನೀಡಿದ್ದರಿಂದ ಬರುವ ದಿನಗಳಲ್ಲಿ ಸಿಐಡಿಯಿಂದ ಸದರಿ ಹಗರಣದಲ್ಲಿ ಇನ್ನಷ್ಟುಬಂಧನಗಳು, ಇನ್ನಷ್ಟು ಎಫ್‌ಐಆರ್‌ಗಳು ದಾಖಲಾಗುವ ಸಾಧ್ಯತೆಗಳು ಸ್ಪಷ್ಟವಾಗಿವೆ.

ಸಿಐಡಿ ತನಿಖೆ ಚುರುಕಾಗುತ್ತಿದ್ದಂತೆಯೇ ತಲೆ ಮರೆಸಿಕೊಂಡಿರುವ ಹಗರಣದ ಕೇಂದ್ರಬಿಂದು ಜ್ಞಾನಜ್ಯೋತಿ ಶಾಲೆಯ ಒಡತಿ ದಿವ್ಯಾ ಹಾಗರಗಿ ಮತ್ತವರ ತಂಡ ಇಂದಿಗೂ ಎಲ್ಲಿದೆ ಎಂಬುದೆ ಪತ್ತೆಯಾಗಿಲ್ಲ. ಇದೀಗ ಡಿಐಜಿ ಸಂಧು ಖಡಕ್‌ ಸೂಚನೆಯ ನಂತರ ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿಗಳನ್ನೆಲ್ಲ ಬೆನ್ನಟ್ಟುವ ಮೂಲಕ ಸಿಐಡಿ ಬರುವ ಎರಡುಸ ಮೂರು ದಿನಗಳಲ್ಲಿ ತನಿಖೆಯ ವೇಗ ಹೆಚ್ಚಿಸುವ ಸಾಧ್ಯತೆಗಳಿವೆ. ಸಿಐಡಿ ಐಜಿಪಿ, ಎಸ್ಪಿ ರಾಘವೇಂದ್ರ ಹೆಗಡೆ, ಡಿಸಿಪಿ, ಡಿವೈಎಸ್ಪಿಗಳಾದ ಶಂಕರಗೌಡ ಪಾಟೀಲ್‌, ಪ್ರಕಾಶ ರಾಠೋಡ, ವಿರೇಂದ್ರ ನಾಯಕ್‌ ಹಾಗೂ ಇಲಾಖೆಯ ಉನ್ನತಾಧಿಕಾರಿಗಳು ಕಲಬುರಗಿಯಲ್ಲಿ ಸಭೆಯಲ್ಲಿ ಭಾಗವಹಿಸಿದ್ದರು.
 

click me!