10,000 ರು. ಕೊಟ್ಟರೆ ಯೋಧರೇ ಬಾಂಗ್ಲನ್ನರನ್ನು ಒಳ ಬಿಡ್ತಾರೆ!

By Kannadaprabha NewsFirst Published Jan 22, 2020, 10:24 AM IST
Highlights

ಬೆಂಗಳೂರಿನಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಬಾಂಗ್ಲಾ ವಲಸಿಗರು ನೆಲೆಸಿದ್ದು, ಇವರಿಗೆಲ್ಲಾ ಒಳನುಸುಳಲು ಯೋಧರೆ ಅವಕಾಶ ನೀಡುತ್ತಾರಂತೆ. ದುಡ್ಡು ಕೊಟ್ಟರೆ ಸಾಕು ಇರು ಸಲೀಸಾಗಿ ಬರಬಹುದು. 

ಬೆಂಗಳೂರು [ಜ.22]:  ಬೇಲಿಯೇ ಎದ್ದು ಹೊಲ ಮೇಯ್ದರೆ...! ಈ ಮಾತು ನಮ್ಮ ದೇಶ ಕಾಯುವ ಕೆಲ ಭ್ರಷ್ಟಯೋಧರಿಗೂ ಅನ್ವಯಿಸುತ್ತದೆ. ದೇಶದೊಳಗೆ ಬಾಂಗ್ಲಾದೇಶದ ಪ್ರಜೆಗಳ ಅಕ್ರಮ ಪ್ರವೇಶಕ್ಕೆ ಕೆಲ ಯೋಧರೇ ಸಾಥ್‌ ನೀಡಿದ್ದಾರೆ ಎಂಬ ಗಂಭೀರ ಸ್ವರೂಪದ ಆರೋಪಗಳು ಕೇಳಿಬಂದಿವೆ.

ಬಾಂಗ್ಲಾದೇಶಕ್ಕೆ ಹೊಂದಿಕೊಂಡಂತಿರುವ ಈಶಾನ್ಯ ಭಾರತದ ಗಡಿಯಲ್ಲಿ ರಕ್ಷಣೆಗೆ ನಿಂತಿರುವ ಕೆಲ ಭ್ರಷ್ಟಯೋಧರು ಆಮಿಷಕ್ಕೆ ಬಲಿಯಾಗಿ ರಾಷ್ಟ್ರ ದ್ರೋಹಿಗಳಾಗಿದ್ದಾರೆ. ಬಾಂಗ್ಲಾ ಪ್ರಜೆಗಳ ಸಾಗಾಣಿಕೆ ಜಾಲವು ಇಂತಹ ಸೈನಿಕರಿಗೆ ಹಣದಾಸೆ ತೋರಿಸಿ ಅಕ್ರಮವಾಗಿ ಪ್ರಜೆಗಳನ್ನು ಗಡಿದಾಟಿಸುತ್ತಿದೆ. ಹೀಗೆ ಒಬ್ಬ ಪ್ರಜೆಗೆ 10 ಸಾವಿರ ರು. ನೀಡಿದರೆ ಗಡಿ ದಾಟುವುದು ಸುಲಭ ಎಂಬ ಮಾತುಗಳು ಕೇಳಿ ಬಂದಿವೆ.  

ರಾಜ್ಯದಲ್ಲಿ ಅಕ್ರಮ ಬಾಂಗ್ಲನ್ನರ ಲೆಕ್ಕವೇ ಇಲ್ಲ!...

ದೇಶದೊಳಗೆ ನುಸುಳಿದ ಬಳಿಕ ಬಾಂಗ್ಲಾ ವಲಸಿಗರು ರೈಲುಗಳಲ್ಲಿ ರಾಜ್ಯದಿಂದ ರಾಜ್ಯಕ್ಕೆ ಪ್ರಯಾಣಿಸುತ್ತಾರೆ. ಹಾಗೆಯೇ ಶ್ರಮದಾಯಕ ಕೆಲಸಗಳಿಗೆ ಅವರನ್ನು ಕರೆತರುವ ಜಾಲವು ರೈಲುಗಳನ್ನೇ ವಲಸಿಗರ ಸಾಗಾಣಿಕೆಗೆ ಬಳಸುತ್ತಿದೆ. ಪೊಲೀಸರು ಹಾಗೂ ಭದ್ರತಾ ಪಡೆಗಳ ಕಣ್ಣಿನಿಂದ ಪಾರಾಗುವ ಸಲುವಾಗಿಯೇ ವಲಸಿಗರು ರೈಲುಗಳ ಮೇಲೆ ಅವಲಂಬಿತರಾಗಿದ್ದಾರೆ. ರೈಲು ನಿಲ್ದಾಣದ ಸುತ್ತಮುತ್ತಲ ಪ್ರದೇಶಗಳು ಸಾಮಾನ್ಯವಾಗಿ ಜನ ವಸತಿ ಪ್ರದೇಶಗಳಿಂದ ದೂರವಾಗಿರುತ್ತವೆ ಎಂಬ ಕಾರಣಕ್ಕೆ ವಲಸಿಗರು ವಾಸ್ತವ್ಯಕ್ಕೆ ಈ ತಾಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳುತ್ತಾರೆ.

2019ರ ಅಕ್ಟೋಬರ್‌ 26ರಂದು ಬೆಂಗಳೂರಿನ ರಾಮಮೂರ್ತಿನಗರ ಹಾಗೂ ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಮೇಲೆ ಸಿಸಿಬಿ ದಾಳಿ ನಡೆಸಿತ್ತು. ಆಗ ಬಾಂಗ್ಲಾ ಪ್ರಜೆಗಳ ಸಾಗಾಣಿಕೆ ಜಾಲದ ಜಮಾಲ್‌ ಮತ್ತು ಮೆಹಬೂಬ್‌ ಸಿಕ್ಕಿಬಿದ್ದಿದ್ದರು. ಈ ಇಬ್ಬರ ವಿಚಾರಣೆಯಲ್ಲಿ ತಾವು ಪಶ್ಚಿಮ ಬಂಗಾಳದಿಂದ ರೈಲುಗಳಲ್ಲೇ ಬಾಂಗ್ಲಾ ಪ್ರಜೆಗಳನ್ನು ಕರೆತಂದಿರುವುದಾಗಿ ಹೇಳಿಕೆ ನೀಡಿದ್ದರು. ಅಲ್ಲದೆ ಸೈನಿಕರಿಗೆ ಹಣ ಸಂದಾಯದ ಬಗ್ಗೆ ಬಾಯ್ಬಿಟ್ಟಿದ್ದರು. ಇದೇ ರೀತಿಯ ಹಲವು ಪ್ರಕರಣಗಳಲ್ಲಿ ಸಿಕ್ಕಿಬಿದ್ದ ಬಾಂಗ್ಲಾ ಪ್ರಜೆಗಳನ್ನು ಪ್ರಶ್ನಿಸಿದಾಗ ದೇಶಕ್ಕೆ ನುಗ್ಗಲು ಸೈನಿಕರ ಸಹಕಾರ ಕಂಡುಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಬೇಸರದಿಂದ ಹೇಳುತ್ತಾರೆ.

ಅಕ್ರಮ ಬಾಂಗ್ಲನ್ನರಿಗೂ ಪಡಿತರ: ರಾಜಕಾರಣಿಗಳಿಗೆ ಮತಬ್ಯಾಂಕ್‌, ದಲ್ಲಾಳಿಗಳಿಗೆ ಹಣದ ಮೂಲ..

ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದ ಗಡಿ ದಾಟಿದ ಬಳಿಕ ಅಕ್ರಮ ಬಾಂಗ್ಲಾ ವಲಸಿಗರು ಕೆಲ ದಿನ ಆ ರಾಜ್ಯಗಳ ನಿರ್ಜನ ಪ್ರದೇಶದಲ್ಲಿ ಆಶ್ರಯ ಪಡೆಯುತ್ತಾರೆ. ಆನಂತರ ಕೊಲ್ಕತ್ತಾ ಸೇರಿದಂತೆ ಗಡಿ ಹತ್ತಿರದ ನಗರಗಳಿಗೆ ಬರುವ ವಲಸಿಗರು, ಅಲ್ಲಿಂದ ಬೇರೆ ಬೇರೆ ರಾಜ್ಯಗಳ ರೈಲುಗಳನ್ನು ಹತ್ತಿಕೊಳ್ಳುತ್ತಾರೆ. ಅಕ್ರಮ ಬಾಂಗ್ಲಾ ವಲಸಿಗರ ಸಾಗಾಣಿಕೆ ದಂಧೆಕೋರರು ರೈಲ್ವೆ ಭದ್ರತಾ ಪಡೆಗಳು ಹಾಗೂ ಸ್ಥಳೀಯ ಪೊಲೀಸರಿಗೆ ಅನುಮಾನ ಬಾರದ ರೀತಿಯಲ್ಲಿ ವಲಸಿಗರನ್ನು ಸಾಗಿಸುತ್ತಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ಇತರೆಡೆಗಳಿಗೂ ವಲಸಿಗರು ರೈಲುಗಳಲ್ಲಿ ಬಂದಿಳಿಯುತ್ತಾರೆ. ಆನಂತರ ರೈಲ್ವೆ ನಿಲ್ದಾಣದ ಅದರಲ್ಲೂ ನಗರದ ಕೇಂದ್ರ ಭಾಗದಿಂದ ಬಹುದೂರದ ರೈಲ್ವೆ ನಿಲ್ದಾಣಗಳ ಸಮೀಪದಲ್ಲೇ ಅವರು ಬೀಡು ಬಿಡುತ್ತಾರೆ. ಹೀಗಾಗಿ ಬೆಂಗಳೂರಿನಲ್ಲಿ ಕಾಡುಬೀಸನಹಳ್ಳಿ, ಕೆ.ಆರ್‌.ಪುರ, ರಾಮಮೂರ್ತಿನಗರ, ವೈಟ್‌ಫೀಲ್ಡ್‌, ಮಾರತ್ತಹಳ್ಳಿ, ಬೆಳ್ಳಂದೂರು, ಎಚ್‌ಎಎಲ್‌, ಎಲೆಕ್ಟ್ರಾನಿಕ್‌ ಸಿಟಿ ಹಾಗೂ ಚಿಕ್ಕಬಾಣಾವರದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಬಾಹುಳ್ಯವಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

click me!