ಸಿದ್ದು, ಡಿಕೆಶಿ ವಿರುದ್ಧ ಸೋಲಾರ್‌ ತನಿಖೆ?

By Kannadaprabha NewsFirst Published Oct 7, 2022, 3:44 AM IST
Highlights

ಸಿದ್ದು ಸಿಎಂ, ಡಿಕೆಶಿ ಸಚಿವರಾಗಿದ್ದಾಗ ನಡೆದಿತ್ತೆನ್ನಲಾದ ಹಗರಣ, ನಿವೃತ್ತ ಜಡ್ಜ್‌ ತನಿಖೆ: ಸರ್ಕಾರದಿಂದ ಶೀಘ್ರ ಆದೇಶ ಸಂಭವ

ಬೆಂಗಳೂರು(ಅ.07):  ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಸೋಲಾರ್‌ ಟೆಂಡರ್‌ ಹಂಚಿಕೆ ಹಗರಣ ಹಾಗೂ ವಿದ್ಯುತ್‌ ಖರೀದಿ ದರ ನಿಗದಿ ಅಕ್ರಮದ ಬಗ್ಗೆ ತನಿಖೆಗೆ ಸರ್ಕಾರ ಶೀಘ್ರದಲ್ಲಿಯೇ ಆದೇಶ ಹೊರಡಿಸುವ ಸಂಭವವಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಇಂಧನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಟೆಂಡರ್‌ಗಳಲ್ಲಿ ಹಲವು ಅಕ್ರಮಗಳು ನಡೆದಿವೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಬಿಜೆಪಿ ಹೈಕಮಾಂಡ್‌ ತನಿಖೆಗೆ ಸೂಚನೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಬಗ್ಗೆ ಪಕ್ಷದ ವಲಯದಲ್ಲೇ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಸರ್ಕಾರ ಅನಿವಾರ್ಯವಾಗಿ ತನಿಖೆ ನಡೆಸಲು ಮುಂದಾಗಿದ್ದು, ನಿವೃತ್ತ ಹೈಕೋರ್ಚ್‌ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಏನಿದು ಅಕ್ರಮ?:

ಸೋಲಾರ್‌ ವಿದ್ಯುತ್‌ ಉತ್ಪಾದನೆ ಘಟಕ ಸ್ಥಾಪಿಸಿ ಸರ್ಕಾರಕ್ಕೆ ವಿದ್ಯುತ್‌ ಮಾರಾಟ ಮಾಡಲು ಕರೆದಿದ್ದ ಟೆಂಡರ್‌ನಲ್ಲಿ ಲೋಪಗಳು ಉಂಟಾಗಿದ್ದವು ಎಂಬ ಆರೋಪವಿದೆ. ಆನ್‌ಲೈನ್‌ ಮೂಲಕ ನಡೆದ ಟೆಂಡರ್‌ ಹಂಚಿಕೆ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮ ನಡೆದಿದ್ದು, ಇ-ಪ್ರೊಕ್ಯೂರ್‌ಮೆಂಟ್‌ ಮೂಲಕ ಟೆಂಡರ್‌ ಆಹ್ವಾನಿಸಿದ 8 ನಿಮಿಷದಲ್ಲಿ ಟೆಂಡರ್‌ ಪ್ರಕ್ರಿಯೆ ಮುಗಿಸಲಾಗಿತ್ತು. ಎಂಟೇ ನಿಮಿಷದಲ್ಲಿ ತಮಗೆ ಬೇಕಾದವರಿಗೆ ಟೆಂಡರ್‌ಗಳನ್ನು ನೀಡಲಾಗಿದ್ದು, ಬಹುತೇಕರು ಕಾಂಗ್ರೆಸ್‌ ಕಚೇರಿಗಳಲ್ಲೇ ಕುಳಿತು ಆನ್‌ಲೈನ್‌ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು ಎಂಬ ಗಂಭೀರ ಆರೋಪವನ್ನು ಬಿಜೆಪಿ ನಾಯಕರು ಮಾಡಿದ್ದಾರೆ.

Karnataka Politics: ಕಾಂಗ್ರೆಸ್‌ನ ಮಟಾಶ್‌ ಲೆಗ್‌ ಬಗ್ಗೆ ಹುಷಾರು: ಸಿ.ಟಿ.ರವಿ

ಅಲ್ಲದೆ, 8 ನಿಮಿಷದಲ್ಲಿ 295 ಮಂದಿಗೆ ಟೆಂಡರ್‌ ಅಂತಿಮಗೊಳಿಸಲಾಗಿತ್ತು. ಭೂಮಿ ಹೊಂದಿರುವ ರೈತರು ತಮ್ಮ ಹೊಲದಲ್ಲಿ ಸೋಲಾರ್‌ ಪ್ಯಾನೆಲ್‌ ಅಳವಡಿಸಿ ಸರ್ಕಾರಕ್ಕೆ ವಿದ್ಯುತ್‌ ನೀಡಬೇಕು ಎಂಬುದು ಯೋಜನೆಯ ಉದ್ದೇಶ. ಆದರೆ, ಇಷ್ಟುಕಡಿಮೆ ಅವಧಿಯಲ್ಲಿ ರೈತರು ವೇಗವಾಗಿ ಅರ್ಜಿ ಸಲ್ಲಿಸಿ ಟೆಂಡರ್‌ ಪಡೆದಿರಲು ಸಾಧ್ಯವೇ ಎಂಬ ಅನುಮಾನ ವ್ಯಕ್ತವಾಗಿತ್ತು. ಟೆಂಡರ್‌ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ ಶಾಸಕಿ ಲಕ್ಷ್ಮೇ ಹೆಬ್ಬಾಳ್ಕರ್‌ ಸಂಬಂಧಿಕರಾಗಿರುವ ಮೂರು ಮಂದಿಗೆ ಟೆಂಡರ್‌ ದೊರೆತಿದೆ ಎಂಬ ಬಗ್ಗೆಯೂ ಚರ್ಚೆಗಳಾಗಿದ್ದವು. ಇನ್ನು ಹೈದರಾಬಾದ್‌ ಮೂಲದ ಕೆಲ ಕಂಪನಿಗಳು ಅರ್ಜಿ ಸಲ್ಲಿಸುವ ಮೊದಲೇ ಭೂಮಿಯನ್ನೂ ಖರೀದಿ ಮಾಡಿದ್ದು, ಅನುಮಾನಗಳಿಗೆ ಕಾರಣವಾಗಿತ್ತು. ಈ ಎಲ್ಲಾ ಕಾರಣಗಳನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ತನಿಖೆಗೂ ಆಗ್ರಹಿಸಿದ್ದರು.

ವಿದ್ಯುತ್‌ ಖರೀದಿ ಒಪ್ಪಂದದಲ್ಲೂ ಅಕ್ರಮ:

ಡಿ.ಕೆ.ಶಿವಕುಮಾರ್‌ ಮೇಲೆ ನಡೆದಿದ್ದ ಐ.ಟಿ.ದಾಳಿ ವೇಳೆ ಈ ಬಗ್ಗೆ ಆಧಾರಗಳು ದೊರೆತಿದೆ. ಸೋಲಾರ್‌ ವಿದ್ಯುತ್‌ ಟೆಂಡರ್‌ನಲ್ಲಿ ಅಕ್ರಮ ನಡೆದಿರುವ ಬಗ್ಗೆ ದಾಖಲೆಗಳು ಲಭ್ಯವಾಗಿವೆ. ಜತೆಗೆ ಶಿವಕುಮಾರ್‌ ಇಂಧನ ಸಚಿವರಾಗಿದ್ದಾಗ ನಡೆದ ವಿದ್ಯುತ್‌ ಖರೀದಿ ಒಪ್ಪಂದ (ಪವರ್‌ ಪರ್ಚೇಸ್‌ ಅಗ್ರಿಮೆಂಟ್‌) ದರ ನಿಗದಿಯಲ್ಲೂ ಅಕ್ರಮ ಆಗಿದೆ.

ಶರಾವತಿಯಲ್ಲಿ 5,000 ಕೋ.ರು. ವೆಚ್ಚದ ಸೋಲಾರ್‌ ಸ್ಟೋರೆಜ್‌: ಸಿಎಂ ಬೊಮ್ಮಾಯಿ

ಮಾರುಕಟ್ಟೆದರಕ್ಕಿಂತ ದುಪ್ಪಟ್ಟು ದರದಲ್ಲಿ ವಿದ್ಯುತ್‌ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದರು. ಅಲ್ಲದೆ, ಕಂಪನಿಗಳಿಂದ ಸುಮಾರು 25 ವರ್ಷಗಳಷ್ಟುದೀರ್ಘಾವಧಿಗೆ ಪ್ರತಿ ಯುನಿಟ್‌ಗೆ 8.5 ರು.ಗಳಿಂದ 11 ರು.ಗಳವರೆಗೆ ಹಣ ತೆತ್ತು ವಿದ್ಯುತ್‌ ಖರೀದಿಸುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಇದರಿಂದ ಇಂಧನ ಇಲಾಖೆಗೆ ತೀವ್ರ ನಷ್ಟಉಂಟಾಗಿದ್ದು, ಪ್ರಕರಣದಲ್ಲಿ ಕಿಕ್‌ಬ್ಯಾಕ್‌ ಪಡೆದಿದ್ದಾರೆ ಎಂದೂ ಬಿಜೆಪಿಯವರು ಆರೋಪಿಸಿದ್ದಾರೆ.

ಏನಿದು ಹಗರಣ?:

- ರೈತರು ತಮ್ಮ ಜಮೀನಿನಲ್ಲಿ ಸೌರ ಘಟಕ ಸ್ಥಾಪಿಸಿ ವಿದ್ಯುತ್‌ ಮಾರುವ ಸ್ಕೀಂ
- ಆನ್‌ಲೈನ್‌ ಟೆಂಡರ್‌ ಕರೆದಾಗ ಎಂಟೇ ನಿಮಿಷದಲ್ಲಿ ಪ್ರಕ್ರಿಯೆ ಪೂರ್ಣ
- ಬೇಕಾದವರಿಗೆ ಟೆಂಡರ್‌ ನೀಡಲಾಗಿದೆ ಎಂದು ಆರೋಪಿಸಿದ್ದ ಬಿಜೆಪಿ
- ಈ ಬಗ್ಗೆ ತನಿಖೆ ನಡೆಸಲು ಸೂಚನೆ ನೀಡಿದ್ದ ಬಿಜೆಪಿ ಹೈಕಮಾಂಡ್‌
 

click me!