ಇನ್ನೂ 4-5 ದಿನ ಕರ್ನಾಟಕದಲ್ಲಿ ಭಾರಿ ಮಳೆ..!

By Kannadaprabha NewsFirst Published Oct 7, 2022, 2:30 AM IST
Highlights

ಹವಾಮಾನ ಇಲಾಖೆ ಮುನ್ನೆಚ್ಚರಿಕೆ, ಕರಾವಳಿ, ಮಲೆನಾಡು, ಉತ್ತರ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್‌

ಬೆಂಗಳೂರು(ಅ.07):  ಆಂಧ್ರ ಪ್ರದೇಶದ ದಕ್ಷಿಣ ಕರಾವಳಿ ಮತ್ತು ದಕ್ಷಿಣ ಮಧ್ಯ ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಪರಿಣಾಮ ಮುಂದಿನ ನಾಲ್ಕೈದು ದಿನ ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ. 

ಇಂದು(ಶುಕ್ರವಾರ) ಬೆಳಗ್ಗೆ 8.30ರವರೆಗೆ ರಾಜ್ಯದ ಕರಾವಳಿ ಮತ್ತು ಉತ್ತರ ಭಾಗದ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ಬಳ್ಳಾರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ‘ಯೆಲ್ಲೋ ಅಲರ್ಟ್‌’ ಘೋಷಿಸಲಾಗಿದೆ.

ಕೊಪ್ಪಳ: ಭಾರೀ ಮಳೆ, ಹಳ್ಳದಲ್ಲಿ ಕೊಚ್ಚಿ ಹೋದ ನಾಲ್ವರು ಮಹಿಳೆಯರು..!

ಶುಕ್ರವಾರ ಬೆಳಗ್ಗೆ 8.30ರಿಂದ ಶನಿವಾರ ಬೆಳಗ್ಗೆ 8.30ರವರೆಗೆ ರಾಯಚೂರು, ಬಾಗಲಕೋಟೆ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗೆ ‘ಯೆಲ್ಲೋ’ ಅಲರ್ಟ್‌ ನೀಡಲಾಗಿದೆ. ಬಳಿಕ ಭಾನುವಾರ ಬೆಳಗ್ಗೆ 8.30ರವರೆಗೆ ಯಾದಗಿರಿ, ಕಲಬುರಗಿ, ಬೀದರ್‌ ಮತ್ತು ರಾಯಚೂರು ಜಿಲ್ಲೆ ಹಾಗೂ ಭಾನುವಾರ ಬೆಳಗ್ಗೆ 8.30ರಿಂದ ಸೋಮವಾರ ಬೆಳಗ್ಗೆ 8.30ರ ವರೆಗೆ ಬೀದರ್‌, ಯಾದಗಿರಿ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗೆ ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ.
ಉಳಿದಂತೆ ಈ ಅವಧಿಯಲ್ಲಿ ಉಳಿದ ಜಿಲ್ಲೆಗಳಲ್ಲಿಯೂ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಗುರುವಾರ ಬೆಳಗ್ಗೆ 8.30ಕ್ಕೆ ಪೂರ್ಣಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಕರಾವಳಿ ಮತ್ತು ಉತ್ತರ ಒಳನಾಡಿನ ಹಲವೆಡೆ ಉತ್ತಮ ಮಳೆಯಾಗಿದೆ. ದಕ್ಷಿಣ ಒಳನಾಡಿನ ಕೆಲವೆಡೆ ಮಳೆ ಸುರಿದಿದೆ. ದಕ್ಷಿಣ ಕನ್ನಡದ ಮಾಣಿ, ಸುಬ್ರಹ್ಮಣ್ಯ, ಬಳ್ಳಾರಿಯ ಕೊಟ್ಟೂರಿನಲ್ಲಿ ತಲಾ 8 ಸೆಂ.ಮೀ. ಮಳೆಯಾಗಿದೆ. ಬೆಳಗಾವಿಯ ರಾಮದುರ್ಗ 6, ಉಡುಪಿಯ ಸಿದ್ದಾಪುರ, ಉತ್ತರ ಕನ್ನಡದ ಶಿರಾಲಿ, ಚಾಮರಾಜನಗರದಲ್ಲಿ ತಲಾ 5 ಸೆಂ.ಮೀ. ಮಳೆಯಾಗಿದೆ.
 

click me!