
ಬೆಂಗಳೂರು(ಏ.07) ಮದ್ಯ (Liquor) ಪೂರೈಕೆಗೆ ಆನ್‌ಲೈನ್ ಮೂಲಕವೇ ಬೇಡಿಕೆ ಸಲ್ಲಿಸಬೇಕು (ವೆಬ್ ಇಂಡೆಂಟ್) ಎಂಬ ಹೊಸ ವ್ಯವಸ್ಥೆಯಲ್ಲಿ ಉಂಟಾದ ತಾಂತ್ರಿಕ ತೊಂದರೆಯಿಂದಾಗಿ ರಾಜ್ಯಾದ್ಯಂತ (Karnataka) ಮದ್ಯ ಮಾರಾಟ ಮಳಿಗೆಗಳಿಗೆ ಸರಿಯಾಗಿ ಮದ್ಯ ಪೂರೈಕೆಯಾಗಿಲ್ಲ. ಈ ಸಮಸ್ಯೆ ಗುರುವಾರದವರೆಗೂ ಮುಂದುವರೆಯುವ ಸಾಧ್ಯತೆಯಿರುವುದರಿಂದ ಮದ್ಯ ಮಾರಾಟ ಮಳಿಗೆಗಳು ವ್ಯಾಪಾರ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದ ಮದ್ಯದಂಗಡಿಗಳಿಗೆ ಕರ್ನಾಟಕ ರಾಜ್ಯ ಪಾನಿಯ ನಿಗಮ (KSBCL) ದ ಮೂಲಕವೇ ಮದ್ಯ ಸರಬರಾಜಾಗುತ್ತಿದ್ದು, ಈ ಮೊದಲು ಮದ್ಯದಂಗಡಿಗಳು ಅಗತ್ಯ ಸ್ಟಾಕ್ ಅನ್ನು ನಿತ್ಯ ಅಥವಾ ಎರಡ್ಮೂರು ದಿನಕ್ಕೊಮ್ಮೆ ಬ್ಯಾಂಕ್‌ನಲ್ಲಿ ಹಣ ಪಾವತಿಸಿ ಡಿಪೋಗಳಿಂದ ಪಡೆಯುತ್ತಿದ್ದವು. ಆದರೆ ಇದರಿಂದ ಬಾರ್‌ಗಳ ಮಾಲೀಕರಿಗೆ ತೊಂದರೆ ಉಂಟಾಗುತ್ತದೆ ಎಂದು ಹೊಸ ವ್ಯವಸ್ಥೆ ಜಾರಿಗೆ ತಂದಿದ್ದರಿಂದ ಅವಾಂತರ ಸೃಷ್ಟಿಯಾಗಿದೆ.
ಏ.1 ರಿಂದ ವೆಬ್ ಇಂಡೆಂಟ್ ಮೂಲಕವೇ ಮದ್ಯ ಖರೀದಿ ಮಾಡಬೇಕು ಎಂದು ಕೆಎಸ್‌ಬಿಸಿಎಲ್ ಕಡ್ಡಾಯ ಮಾಡಿದ್ದು ರಾತ್ರಿ 9 ರಿಂದ ಬೆಳಿಗ್ಗೆ 9 ಗಂಟೆಯೊಳಗೆ ನೂತನ ಪೋರ್ಟಲ್ ಮೂಲಕ ಆರ್ಡರ್ ನೀಡಬೇಕಿದೆ. ಆದರೆ ರಾಜ್ಯದ ಹಲವೆಡೆ ಸರ್ವರ್ ಸರಿಯಾಗಿ ಕೆಲಸ ಮಾಡದೇ ಇರುವುದರಿಂದ ಮಾಲೀಕರು ಮದ್ಯಕ್ಕೆ ಆರ್ಡರ್ ನೀಡಲು ಆಗುತ್ತಿಲ್ಲ.
ಯುಗಾದಿ ಹಬ್ಬ, ಹೊಸ ತೊಡಕು ಹಿನ್ನೆಲೆಯಲ್ಲಿ ಹೆಚ್ಚು ಮದ್ಯ ಸ್ಟಾಕ್ ಮಾಡಿಟ್ಟುಕೊಂಡಿದ್ದೆವು. ಬಳಿಕ ಎರಡ್ಮೂರು ದಿನದಿಂದ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಮದ್ಯಕ್ಕೆ ಆರ್ಡರ್ ಮಾಡಲು ಆಗುತ್ತಿಲ್ಲ. ಸ್ಟಾಕ್ ಇಲ್ಲದೆ ಗ್ರಾಹಕರು ವಾಪಸ್ ಹೋಗುತ್ತಿದ್ದಾರೆ. ಕೆಲ ಬೇಡಿಕೆಯ ಬ್ರಾಂಡ್‌ಗಳು ಇಲ್ಲದಿದ್ದರೆ ಬಾಗಿಲು ಹಾಕಬೇಕಾಗುತ್ತದೆ ಎಂದು ಬಾರ್ ಮಾಲೀಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಸ್ಯೆ ಪರಿಹಾರಕ್ಕೆ ಯತ್ನ: ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಜ್ಯ ಪಾನಿಯ ನಿಗಮದ ಅಧಿಕಾರಿಯೊಬ್ಬರು, ರಾಜ್ಯದಲ್ಲಿ 71 ಡಿಪೋಗಳಿದ್ದು ಇದರಲ್ಲಿ ಬೆಂಗಳೂರಿನಲ್ಲೇ 23 ಡಿಪೋಗಳಿವೆ. ಮದ್ಯದ ಆರ್ಡರ್ ನೀಡಲು ಬಾರ್‌ನವರು ಡಿಪೋಗೆ ಆಗಮಿಸಬೇಕಿತ್ತು. ಇದರಿಂದ ಆಗುತ್ತಿದ್ದ ತೊಂದರೆ ತಪ್ಪಿಸಲು ಏ.1 ರಿಂದ ವೆಬ್ ಇಂಡೆಟ್ ಪದ್ಧತಿ ಜಾರಿಗೆ ತರಲಾಗಿದೆ. ಹೊಸ ವ್ಯವಸ್ಥೆ ಆಗಿರುವುದರಿಂದ ತಾಂತ್ರಿಕ ತೊಂದರೆಯಿಂದ ವಿಳಂಬವಾಗಿತ್ತು. ಸಮಸ್ಯೆ ಪರಿಹರಿಸಲಾಗುತ್ತಿದೆ ಎಂದು ಹೇಳಿದರು.
Price Hike: ಯುದ್ಧ-ಪೆಟ್ರೋಲ್ ಎಫೆಕ್ಟ್..... ಬಿಸಿಯಾದ ಬಿಯರ್.. ಯಪ್ಪಾ ಇಷ್ಟೆಲ್ಲ ಏರಿಕೆ
ಸಿಎಲ್ 1 ರಿಂದ 12 ರವರೆಗಿನ ಸನ್ನದುದಾರರಿಗೂ ನಿಗಮದಿಂದಲೇ ಮದ್ಯ ಪೂರೈಸುತ್ತಿದ್ದು ಮಂಗಳವಾರ 4500 ಇನ್‌ವಾಯ್‌್ಸಗಳನ್ನು ಕ್ಲಿಯರ್ ಮಾಡಲಾಗಿದೆ. ಬುಧವಾರ 3500 ಇನ್‌ವಾಯ್‌್ಸ ಬಂದಿದ್ದು ಇವರಿಗೂ ಮದ್ಯ ಸರಬರಾಜು ಮಾಡಲಾಗಿದೆ ಎಂದು ವಿವರಿಸಿದರು.
ಮದ್ಯ ಆರ್ಡರ್ ಮಾಡಲು ವೆಬ್ ಇಂಡೆಂಟ್ ಮಾಡಿದ್ದು ಆನ್‌ಲೈನ್‌ನಲ್ಲಿ ಆರ್ಡರ್ ನೀಡಬೇಕು. ಮೊದಲೇ ಹಣ ಪಾವತಿಸಿರಬೇಕು.ರಾತ್ರಿ 9 ರಿಂದ ಬೆಳಿಗ್ಗೆ 9 ಗಂಟೆಯವರೆಗೂ ಆರ್ಡರ್ ಮಾಡಬಹುದಾಗಿದೆ. ಆದರೆ ಸಾಫ್‌್ಟವೇರ್ ತೊಂದರೆಯಿಂದ 3 ದಿನದಿಂದ ಆರ್ಡರ್ ನೀಡಲು ಆಗುತ್ತಿಲ್ಲ. ಹಬ್ಬದ ಹಿನ್ನೆಲೆಯಲ್ಲಿ ಸ್ಟಾಕ್ ಖಾಲಿಯಾಗಿದ್ದು ಮಾಲಿಕರು ನಷ್ಟಅನುಭವಿಸುವಂತಾಗಿದೆ ಎಂದು ಬೆಂಗಳೂರು ಲಿಕ್ಕರ್ ಅಸೋಸಿಯೇಷನ್ ಅಧ್ಯಕ್ಷ- ಲೋಕೇಶ್ ತಿಳಿಸಿದ್ದಾರೆ.
ಅವ್ಯವಸ್ಥೆ ಖಂಡಿಸಿ ಮದ್ಯದಂಗಡಿ ಮಾಲೀಕರ ಪ್ರತಿಭಟನೆ: ಬೆಂಗಳೂರು: ಹೊಸ ಸಾಫ್‌್ಟವೇರ್ ತಾಂತ್ರಿಕ ತೊಂದರೆಯಿಂದಾಗಿ ಮದ್ಯ ಆರ್ಡರ್ ಮಾಡಲು ಆಗುತ್ತಿಲ್ಲ. ಆದ್ದರಿಂದ ವ್ಯವಸ್ಥೆ ಸರಿಯಾಗುವವರೆಗೂ ಹಳೆಯ ಪದ್ಧತಿಯನ್ನೇ ಮುಂದುವರೆಸಬೇಕು ಎಂದು ಆಗ್ರಹಿಸಿ ಮದ್ಯದಂಗಡಿ ಮಾಲೀಕರು ಬುಧವಾರ ರಾಜ್ಯ ಪಾನಿಯ ನಿಗಮದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ರಾಜ್ಯಾದ್ಯಂತ 11 ಸಾವಿರಕ್ಕೂ ಅಧಿಕ ಬಾರ್‌ಗಳಿದ್ದು ಕಳೆದ ಕೆಲ ದಿನಗಳಿಂದ ಸರಿಯಾಗಿ ಮದ್ಯ ಸರಬರಾಜು ಆಗದೇ ಇರುವುದರಿಂದ ಸುಮಾರು 700 ಕೋಟಿ ರು.ಗೂ ಅಧಿಕ ನಷ್ಟಉಂಟಾಗಿದೆ. ಆದ್ದರಿಂದ ಸರ್ಕಾರ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ