ಮೀನು ಮಾರುಕಟ್ಟೆ ಎದುರು ಮೀನು ಹಾಗೂ ಕೋಳಿ ತ್ಯಾಜ್ಯ ಸುರಿದಿದ್ದ ದುಷ್ಕರ್ಮಿಗಳು
ರೊಚ್ಚಿಗೆದ್ದ ಮೀನುಗಾರ ಮಹಿಳೆಯರಿಂದ ಪುರಸಭೆಯ ಮುಂಭಾಗ ಮೀನು ಸುರಿದು ಪ್ರತಿಭಟನೆ
ಮೀನು ಮಾರುಕಟ್ಟೆ ಸ್ಥಳಾಂತರ ಮಾಡುವ ಕುರಿತಾಗಿ ಎದ್ದಿರುವ ವಿವಾದ
ಭಟ್ಕಳ (ಏ.6): ಇಲ್ಲಿನ ಹಳೇ ಬಸ್ ಸ್ಟ್ಯಾಂಡ್ (Old Bus Stand) ಬಳಿ ಇರುವ ಮೀನು ಮಾರುಕಟ್ಟೆಯನ್ನು (Fish Market) ಸಂತೇ ಮಾರ್ಕೆಟ್ ಬಳಿಯ ಹೊಸ ಮೀನು ಮಾರುಕಟ್ಟೆಗೆ (New Fish Market) ಸ್ಥಳಾಂತರ ಸಂಬಂಧ ಉಂಟಾಗಿರುವ ವಿವಾದದಲ್ಲಿ ಮೀನುಗಾರ ಮಹಿಳೆಯರು (Fisherwomen) ಬುಧವಾರ ಪುರಸಭೆ (TMC) ಕಚೇರಿಯ ಎದುರು ವಿನೂತನವಾಗಿ ಪ್ರತಿಭಟನೆ ನಡೆಸಿದರು. ಪುರಸಭೆಯ ಎದುರು ಮೀನು ಸುರಿದು, ಕಟ್ಟಡದ ಎದುರಿಗೆ ಮೀನು ತೂರಾಟ ನಡೆಸಿ ಪ್ರತಿಭಟಿಸಿದರು.
ಎಂದಿನಂತೆ ಬುಧವಾರವೂ ವ್ಯಾಪಾರಕ್ಕಾಗಿ ಮಾರುಕಟ್ಟೆಗೆ ಆಗಮಿಸಿದ್ದ ಮಹಿಳೆಯರಿಗೆ ಆಘಾತ ಕಂಡಿತ್ತು. ಮೀನು ಮಾರುಕಟ್ಟೆ ಮುಂಭಾಗ ಮೀನು (Fish)ಹಾಗೂ ಕೋಳಿ ತ್ಯಾಜ್ಯವನ್ನು (Chicken Waste) ದುಷ್ಕರ್ಮಿಗಳು ತಂದು ಹಾಕಿದ್ದರು. ರೊಚ್ಚಿಗೆದ್ದ ಮೀನುಗಾರರಿಂದ ಭಟ್ಕಳದ ಹಳೇ ಬಸ್ ಸ್ಟ್ಯಾಂಡ್ ಮೀನು ಮಾರುಕಟ್ಟೆಯ ಮುಂಭಾಗ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದರು. ಭಟ್ಕಳ ನಗರ ಭಾಗದ ಹಳೇ ಬಸ್ ಸ್ಟ್ಯಾಂಡ್ ನಲ್ಲಿ ಹಿಂದಿನಿಂದಲೂ ಮೀನುಗಾರರು ಮೀನು ಮಾರಾಟ ಮಾಡುತ್ತಾ ಬಂದಿದ್ದಾರೆ. ಆದರೆ, ಭಟ್ಕಳ ಪುರಸಭೆ ಕಳೆದ ಕೆಲ ವರ್ಷದ ಹಿಂದೆ ಸಂತೇ ಮಾರುಕಟ್ಟೆಯ ಸಮೀಪ ಹೊಸ ಮೀನು ಮಾರುಕಟ್ಟೆ ನಿರ್ಮಿಸಿ ಅಲ್ಲಿಗೆ ಮೀನುಗಾರರನ್ನು ಸ್ಥಳಾಂತರಿಸುವಂತೆ ಸೂಚಿಸಿತ್ತು. ಆದರೆ, ಮೀನುಗಾರ ಮಹಿಳೆಯರು ನಮಗೆ ಹೊಸ ಕಟ್ಟಡ ಬೇಡ, ಈಗ ಇರುವ ಹಳೇ ಮೀನು ಮಾರುಕಟ್ಟೆಯನ್ನೇ ಅಭಿವೃದ್ಧಿ ಮಾಡಿ ವ್ಯಾಪಾರಕ್ಕೆ ಅವಕಾಶ ನೀಡಿ ಎಂದು ಒತ್ತಾಯ ಮಾಡಿದ್ದರು.
ಈ ನಡುವೆ ಹಳೇ ಮಾರುಕಟ್ಟೆ ಗುತ್ತಿಗೆ ಯಾರೂ ಪಡೆಯದ ಕಾರಣ ಅಲ್ಲೂ ಅವ್ಯವಸ್ಥೆ ತಾಂಡವವಾಡಿತ್ತು. ಈ ಕಾರಣದಿಂದ ಮಾರುಕಟ್ಟೆಯನ್ನು ಖಾಲಿ ಮಾಡಿಸಲು ಪುರಸಭೆ ಹುನ್ನಾರ ನಡೆಸಿದ್ದಾಗಿ ಆರೋಪ ಕೇಳಿಬಂದಿದೆ. ಪುರಸಭೆಯವರೇ ಕೋಳಿ ತ್ಯಾಜ್ಯ ಹಾಗೂ ಮೀನಿನ ತ್ಯಾಜ್ಯವನ್ನು ಸುರಿದಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಪುರಸಭೆಯ ಕಚೇರಿ ಎದುರೇ ಪ್ರತಿಭಟನೆ ಮಾಡಲಾಗಿದೆ.
ಮೀನುಗಾರ ಮಹಿಳೆಯರು ಹಳೇ ಮಾರುಕಟ್ಟೆ ಬಳಸಬಾರದೆಂದು ಕಳೆದ 1 ವಾರದಿಂದ ಪುರಸಭೆಯವರು ಸ್ವಚ್ಚತೆಯ ಕೆಲಸವನ್ನೂ ಮಾಡಿರಲಿಲ್ಲ. ಆದರೆ, ಇದಕ್ಕೆ ತಲೆಕೆಡಿಸಿಕೊಳ್ಳದ ಮೀನು ಮಾರುವ ಮಹಿಳೆಯರು ಸ್ವತಃ ತಾವೇ ಹಣಕೊಟ್ಟು ಮಾರುಕಟ್ಟೆಯನ್ನು ಸ್ವಚ್ಚ ಮಾಡುತ್ತಾ ಬಂದಿದ್ದರು. ಇಂದು ಮಾರುಕಟ್ಟೆಯಲ್ಲಿ ಯಾರೋ ಮೀನಿನ ಹಾಗೂ ಕೋಳಿ ತ್ಯಾಜ್ಯವನ್ನು ತಂದು ಹಾಕಿ ಮಲಿನ ಗೊಳಿಸಿದ್ದಲ್ಲದೆ, ವ್ಯಾಪಾರ ಮಾಡಲು ಸಾಧ್ಯವಾಗದೇ ಇರುವಂಥ ಪರಿಸ್ಥಿತಿ ನಿರ್ಮಾಣ ಮಾಡಿದ್ದರು.
ಪಕೋಡ ಮಾಡುವ ಮೂಲಕ ವಿಭಿನ್ನ ಪ್ರತಿಭಟನೆ: ಮೊಗೇರರಿಂದ ಮುಂದುವರಿದ ಧರಣಿ ಸತ್ಯಾಗ್ರಹ
ಕ್ಲೀನ್ ಮಾಡ್ತೀರೋ ಇಲ್ವೋ.. ಒಂದೇ ಮಾತ್ ಹೇಳಿ!: ಪರಿಣಾಮವಾಗಿ ರೊಚ್ಚಿಗೆದ್ದ ಮಹಿಳೆಯರು ಪುರಸಭೆ ಕಾರ್ಯಾಲಯದ ಎದುರು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದಾರೆ. ಪುರಸಭೆಯ ಅಧಿಕಾರಿಗಳಿಗೆ ಮೀನು ಮಾರುಕಟ್ಟೆ ಸ್ವಚ್ಛ ಮಾಡುವಂತೆ ಖಡಕ್ ಎಚ್ಚರಿಕೆಯನ್ನೂ ನೀಡಿದ್ದರು. "ನಿಮ್ಮ ಕೈಯಲ್ಲಿ ಕ್ಲೀನ್ ಮಾಡೋಕೇ ಆಗುತ್ತೋ ಇಲ್ವೋ.. ಒಂದೇ ಮಾತ್ ಹೇಳಿ" ಎಂದು ಮೀನುಗಾರ ಮಹಿಳೆಯರು ಪುರಸಭೆಯ ಅಧಿಕಾರಿಗಳನ್ನು ಪ್ರಶ್ನಿಸಿದರು. ಆದರೆ, ಇದಾವುದಕ್ಕೂ ಬಗ್ಗದೇ ಇದ್ದಾಗ ಪುರಸಭೆಯ ಕಟ್ಟಡಕ್ಕೆ ಮೀನುಗಳನ್ನು ತೂರಿದ್ದಲ್ಲದೆ, ಕಟ್ಟಡದ ಮುಂಭಾಗವೇ ಮೀನನ್ನು ಸುರಿದ ಬಳಿಕ ಪುರಸಭೆ ಎಚ್ಚೆತ್ತುಕೊಂಡಿತು. ಮಹಿಳೆಯರ ಪ್ರತಿಭಟನೆಗೆ ಬಗ್ಗಿ ಮಾಲಿನ್ಯಗೊಂಡ ಮಾರುಕಟ್ಟೆಯನ್ನು ಪುರಸಭೆ ಸ್ವಚ್ಛೆ ಮಾಡಿಕೊಟ್ಟಿದೆ.
Bhatkal: ಮೊಗೇರ ಸಮುದಾಯಕ್ಕೆ ಪರಿಶಿಷ್ಟ ಜಾತಿ ಸೌಲಭ್ಯ ನೀಡುವಂತೆ ಪಟ್ಟು
ಈ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಪುರಸಭೆ ಅಧ್ಯಕ್ಷ ಪರ್ವೇಜ್ ಕಾಶಿಂಜೀ, "ಹಳೆ ಮಾರುಕಟ್ಟೆಯನ್ನು ಹೊಸ ಮಾರುಕಟ್ಟೆಗೆ ಸ್ಥಳಾಂತರ ಮಾಡುವಂತೆ ಆದೇಶ ನೀಡಿರುವುದು ಸರ್ಕಾರ. ಪುರಸಭೆಯ ಸಾಮಾನ್ಯ ಸಭೆಯಲ್ಲಿ ಏ. 1 ರಿಂದ ಮೀನು ಮಾರುಕಟ್ಟೆಯನ್ನು ಸ್ಥಳಾಂತರ ಮಾಡುವ ನಿರ್ಧಾರ ಮಾಡಲಾಗಿತ್ತು. ಹಾಗಾಗಿ ಹಳೆ ಬಸ್ ಸ್ಟ್ಯಾಂಡ್ ಸಮೀಪವಿರುವ ಮಾರುಕಟ್ಟೆಯನ್ನು ಸ್ಥಗಿತ ಮಾಡಲಾಗಿದೆ. ಅಲ್ಲಿ ವ್ಯಾಪಾರ ನಡೆಸುವಂತಿಲ್ಲ. ಇದು ಕಾನೂನಿಗೆ ವಿರುದ್ಧ. ಈ ಪ್ರತಿಭಟನೆಗಳೆಲ್ಲವೂ ರಾಜಕೀಯ ಪ್ರೇರಿತವಾಗಿದೆ. ಹಳೆ ಮೀನು ಮಾರುಕಟ್ಟೆಯನ್ನು ಹೊಸ ಮೀನು ಮಾರುಕಟ್ಟೆಗೆ ಸ್ಥಳಾಂತರ ಮಾಡಿಯೇ ಸಿದ್ಧ' ಎಂದು ಹೇಳಿದ್ದಾರೆ.