'ನನ್ನ ಜೀವ ಹೋದ್ರೂ ಮುಡಾ ಹಗರಣ ತಾರ್ಕಿಕ ಅಂತ್ಯಕ್ಕೆ ತರುತ್ತೇನೆ'; ಸರ್ಕಾರದ ವಿರುದ್ಧ ತೊಡೆ ತಟ್ಟಿದ ಸ್ನೇಹಮಯಿ ಕೃಷ್ಣ!

Published : Dec 17, 2024, 08:14 PM ISTUpdated : Dec 17, 2024, 08:15 PM IST
'ನನ್ನ ಜೀವ ಹೋದ್ರೂ ಮುಡಾ ಹಗರಣ ತಾರ್ಕಿಕ ಅಂತ್ಯಕ್ಕೆ ತರುತ್ತೇನೆ'; ಸರ್ಕಾರದ ವಿರುದ್ಧ ತೊಡೆ ತಟ್ಟಿದ ಸ್ನೇಹಮಯಿ ಕೃಷ್ಣ!

ಸಾರಾಂಶ

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ದೂರು ದಾಖಲಾಗಿದ್ದು, ಈ ದೂರು ದುರುದ್ದೇಶಪೂರಿತ ಮತ್ತು ಮೈಸೂರಿನ ಪೊಲೀಸ್ ಅಧಿಕಾರಿಗಳ ಕುಮ್ಮಕ್ಕಿನಿಂದ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ. ಮುಡಾ ಹಗರಣ ಮತ್ತು ಚಾಮುಂಡಿ ಬೆಟ್ಟದಲ್ಲಿ ಸೀರೆ ಕಳ್ಳತನದ ವಿರುದ್ಧದ ಹೋರಾಟವನ್ನು ಹತ್ತಿಕ್ಕಲು ಈ ರೀತಿ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮೈಸೂರು (ಡಿ.17): ಕರ್ತವ್ಯಕ್ಕೆ ಅಡ್ಡಿಪಡಿಸಿದ್ದೇನೆ ಎಂದು ನನ್ನ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ. ದುರುದ್ದೇಶದಿಂದ ನನ್ನನ್ನು ಬಂಧಿಸಲು ಈ ರೀತಿ ಸುಳ್ಳು ದೂರು ದಾಖಲು ಮಾಡಿದ್ದಾರೆ. ಈ ಎಲ್ಲದರ ಹಿಂದೆ ಮೈಸೂರಿನ ಪೊಲೀಸ್ ಅಧಿಕಾರಿಗಳು ಇದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದರು.

ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಸಂಬಂಧ ಕೆಆರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ ಅವರು, ಮುಡಾ ಹಗರಣ, ಚಾಮುಂಡಿ ಬೆಟ್ಟದಲ್ಲಿ ಸೀರೆ ಕಳ್ಳತನ ವಿಚಾರದಲ್ಲಿ ನನ್ನ ಹೋರಾಟ ಹತ್ತಿಕ್ಕಲು ಹೀಗೆ ಸುಳ್ಳು ದೂರು ದಾಖಲಿಸಿ ಬಂಧಿಸಲು ಪ್ಲಾನ್ ಮಾಡಿದ್ದಾರೆ. ಮೈಸೂರು ಜಿಲ್ಲೆ ಸಿದ್ದರಾಮಯ್ಯನವರ ತವರು ಜಿಲ್ಲೆ. ಅಲ್ಲಿರುವಂಥ ಪೊಲೀಸ್ ಅಧಿಕಾರಿಗಳು ಅವರ ಕೃಪಕಟಾಕ್ಷದಿಂದ ಕೆಲಸ ಮಾಡುತ್ತಿದ್ದಾರೆ.  ಮೈಸೂರು ಪೊಲೀಸ್ ಆಯುಕ್ತರ ಕಚೇರಿಗೆ ಸಿಸಿಟಿವಿ ಹಾಕಿದ್ದಾರೆ. ಆದರೆ ಡಿಸಿಪಿ ಮುತ್ತುರಾಜ್ ಅವರ ಕೊಠಡಿಗೆ ಹಾಕಿಲ್ಲ. ಯಾಕೆಂದರೆ ಮೈಸೂರಿನಲ್ಲಿ ನಡೆಯುವ ಎಲ್ಲ ಅಪರಾಧ ಚಟುವಟಿಕೆಗಳಿಗೆ ಡಿಸಿಪಿ ಮುತ್ತುರಾಜ್ ಪಿತಾಮಹರಾಗಿದ್ದಾರೆ. ಅದಕ್ಕಾಗಿ ಅವರ ಕೊಠಡಿಗೆ ಸಿಸಿಟಿವಿ ಹಾಕಿಲ್ಲ. ನನ್ನ ಜೀವ ಹೋದ್ರೂ ಈ ಪ್ರಕರಣವನ್ನು ತಾರ್ಕಿಕ ಹಂತಕ್ಕೆ ತರುತ್ತೇನೆ ಎಂದು ಸ್ನೇಹಮಯಿ ಕೃಷ್ಣ ಸವಾಲು ಹಾಕಿದರು.

 

ಸ್ನೇಹಮಯಿ ಕೃಷ್ಣ ನಾಪತ್ತೆ: ಸಿಎಂ ವಿರುದ್ಧ ದೂರು ನೀಡಿದ್ದಕ್ಕೆ ಸೇಡು ತೀರಿಸಿಕೊಂಡಿತಾ ಸರ್ಕಾರ?

ಭ್ರಷ್ಟಾಚಾರದ ವಿರುದ್ಧದ ನನ್ನ ಹೋರಾಟಗಳನ್ನು ಹತ್ತಿಕ್ಕಲು ಹಲವು ಪ್ರಕರಣಗಳನ್ನು ದಾಖಲು ಮಾಡಿದ್ದರು. ಮುಡಾ ಹಗರಣ ಹೋರಾಟಕ್ಕೆ ಮುಂದಾದಾಗ ಮೈಸೂರು ಡಿಸಿಪಿ ಮುತ್ತುರಾಜ್ ಹೋರಾಟದಿಂದ ಹಿಂದೆ ಸರಿಯುವಂತೆ ಪ್ಲಾನ್ ಮಾಡಿದ್ದರು. ಆಕ್ಟೋಬರ್ 7 ನೇ ತಾರೀಕು ಈ ಸಂಬಂಧ ಡಿಜಿಪಿಗೆ ದೂರು ಕೊಟ್ಟಿದ್ದೆ. ಆದರೆ ಅದರ ವಿಚಾರವಾಗಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದೀಗ ಚಾಮುಂಡಿ ಬೆಟ್ಟದಲ್ಲಿ ಸೀರೆಗಳನ್ನು ಕದ್ದು ಮಾರಾಟ ಮಾಡುತ್ತಿರುವದರ ಬಗ್ಗೆ ನಾನು ವಿಡಿಯೋ ಸಾಕ್ಶ್ಯಸಮೇತ ದೂರು ನೀಡಿದ್ದೆ. ಪ್ರಕರಣ ದಾಖಲಿಸಿಕೊಳ್ಳಬೇಕಿದ್ದ ಪೊಲೀಸರು, ಎಸಿಪಿ ಗಜೇಂದ್ರ ಸೂಚನೆ ಮೇರೆಗೆ ಪ್ರಾಥಮಿಕ ತನಿಖೆಗಾಗಿ ನನ್ನನ್ನು ಬೆಟ್ಟಕ್ಕೆ ಕರೆದುಕೊಂಡು ಹೋಗಿದ್ದರು. ನಾನಾಗಿಯೇ ಬೆಟ್ಟಕ್ಕೆ ಹೋಗಿರಲಿಲ್ಲ. ಪೊಲೀಸರ ವಾಹನದಲ್ಲೇ ನಾನು ಚಾಮುಂಡಿ ಬೆಟ್ಟಕ್ಕೆ ಹೋಗಿದ್ದೆ. ಈ ವೇಳೆ ಕಾರ್ಯದರ್ಶಿ ರೂಪ ಹಲವಾರು ಗೊಂದಲದ ಹೇಳಿಕೆಗಳನ್ನು ನೀಡಿದ್ದರು. ಸಬ್ ಇನ್ಸ್‌ಪೆಕ್ಟರ್ ಈ ವಿಚಾರವಾಗಿ ಎಫ್‌ಐಆರ್ ಮಾಡಬೇಕು ಅಂತಾ ಹೇಳಿದ್ರು. ಬಳಿಕ ದೂರು ದಾಖಲಿಸದ ಎಸಿಪಿ ಗಜೇಂದ್ರ ನನ್ನ ಫೋನ್‌ ಕಾಲ್‌ಗೂ ಸ್ಪಂದಿಸಿರಲಿಲ್ಲ. ಅದಾದ ನಂತರ ಎಫ್‌ಐಆರ್ ದಾಖಲಿಸಲು ಸಾಧ್ಯವಿಲ್ಲ ಎಂದು ಹೇಳಿ ಸ್ವೀಕೃತಿಯನ್ನು ಕೂಡ ಕೊಟ್ಟಿರಲಿಲ್ಲ. ಇದು ನಡೆದಂತ ಸತ್ಯವಾದ ಘಟನೆ. ಆದರೆ ಇದೆಲ್ಲವನ್ನು ಮುಚ್ಚಿಟ್ಟು ಅಕ್ರಮ ಬಯಲಿಗೆಳೆದ ನನ್ನ ವಿರುದ್ದವೇ ದೂರು ದಾಖಲಿಸಲಾಗಿದೆ ಎಂದರು.

ತಾಯಿ ಚಾಮುಂಡೇಶ್ವರಿ ಹರಕೆ ಸೀರೆ ಕಾಳಸಂತೆಯಲ್ಲಿ ಅರ್ಧಬೆಲೆ ಮಾರಾಟ; ಅಧಿಕಾರಿಗಳ ವಿರುದ್ಧ ಸ್ನೇಹಮಯಿ ಕೃಷ್ಣ ದೂರು

ಡಿಸಿಪಿ ಮುತ್ತುರಾಜ್ ಕುಮ್ಮಕ್ಕು:

13ನೇ ತಾರೀಕು ಅದೇ ಅಧಿಕಾರಿ ರೂಪ ಅವರು ಮಾಧ್ಯಮ ಜೊತೆ ಮಾತನಾಡಿದ್ದಾರೆ, ಮರುದಿನ ಡಿಸಿಪಿ ಮುತ್ತುರಾಜ್ ಕುಮ್ಮಕ್ಕಿನಿಂದ ದೂರು ಕೊಟ್ಟಿದ್ದಾರೆ. ಇದು ಸುಳ್ಳು ದೂರು ಅಂತಾ ಗೊತ್ತಿದ್ರೂ ನನ್ನನ್ನ ಯಾವುದಾದ್ರೂ ಪ್ರಕರಣದಲ್ಲಿ ಬಂಧಿಸಬೇಕು ಎಂಬ ದುರುದ್ದೇಶದಿಂದಲೇ ಎಫ್‌ಐಆರ್ ದಾಖಲಿಸಲಾಗಿದೆ. ಇದಕ್ಕೆ ಕಾರಣವೂ ಇದೆ. ಏನೆಂದರೆ ಇದೇ 19ನೇ ತಾರೀಕು ಉಚ್ಚ ನ್ಯಾಯಾಲಯದಲ್ಲಿ ಸಿಬಿಐ ಅರ್ಜಿ ವಿಚಾರಣೆ ನಡೆಯಲಿದೆ. ಅದಕ್ಕೆ ಖುದ್ದಾಗಿ ಹಾಜರಾಗಬೇಕು ಅಂತಾ ಹೇಳಿ ಮಾನ್ಯ ನ್ಯಾಯಾಲಯ ನೋಟಿಸ್ ಜಾರಿ ಮಾಡುತ್ತದೆ. ನೋಟಿಸ್ ಜಾರಿ ಮಾಡದಂತೆ ತಡೆಯುವ ಉದ್ದೇಶದಿಂದ ನನ್ನ ಮೇಲೆ ಸುಳ್ಳು ದೂರು ದಾಖಲಿಸಿ ಅರೆಸ್ಟ್ ಮಾಡುವ ಮಾಹಿತಿ ಬಂದಿದೆ. ಹೀಗಾಗಿ ನಾನು ನಮ್ಮ ವಕೀಲರ ಜೊತೆ ಚರ್ಚೆ ಮಾಡಿ ಅರ್ಜಿಯನ್ನು ಸಲ್ಲಿಸಿದ್ದೆ. ಇವತ್ತು ನ್ಯಾಯಾಲಯ ನಮ್ಮ ಪರ ತೀರ್ಪು ಕೊಟ್ಟಿದೆ. ಅಷ್ಟೇ ಅಲ್ಲ, ಚಾಮುಂಡೇಶ್ವರಿ ತಾಯಿಗೆ ಅರ್ಪಿಸಿದ್ದ ಸೀರೆಗಳನ್ನು ಕಾಳಸಂತೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿದ ಪ್ರಕರಣದಲ್ಲಿ ತನಿಖೆ ನಡೆಸುವಂತೆ ಆದೇಶ ಕೊಟ್ಟಿದೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯಗೆ ಈಗಾಗಲೇ ಭಯ ಶುರುವಾಗಿದೆ. ಲೋಕಾಯುಕ್ತವೇ ತನಿಖೆ ಮಾಡಲಿ, ಸಿಬಿಐ ತನಿಖೆ ಬೇಡ ಎಂದು ಹೇಳುವಂತೆ, ಸಿಬಿಐ ಅರ್ಜಿ ವಾಪಸ್ ಪಡೆಯುವಂತೆ ನನ್ನ ಮೇಲೆ ಒತ್ತಡ ಹಾಕಿದ್ದರು. ಈ ಬಗ್ಗೆ ನಾನು ದೂರನ್ನು ಕೂಡ ಕೊಟ್ಟಿದ್ದೇನೆ. ಯಾರು ನನಗೆ ಒತ್ತಡವನ್ನು ಹಾಕಿದ್ರು ಅನ್ನೋದನ್ನ ಮುಂದೆ ಹೇಳುತ್ತೇನೆ. ಡಿಸಿಪಿ ಮುತ್ತುರಾಜ್ ವಿರುದ್ಧ ಇಂದು ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಟ್ಟಿದ್ದೇನೆ. ಮೈಸೂರಿನಿಂದ ವರ್ಗಾವಣೆ ಮಾಡುವಂತೆ ಡಿಜಿಗೆ ಸಹ ದೂರು ನೀಡಿದ್ದೇನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌