ಮೆಟ್ರೋ ಮಾದರಿಯಲ್ಲಿ ಬಿಎಂಟಿಸಿ ಬಸ್‌ ಪ್ರಯಾಣಕ್ಕೆ ಸ್ಮಾರ್ಟ್ ಟಿಕೆಟ್‌.!

By Sathish Kumar KH  |  First Published Nov 13, 2022, 3:52 PM IST

ಸಾರ್ವಜನಿಕರು ಬಸ್‌ನಲ್ಲಿ ಪ್ರಯಾಣಿಸಲು ಸ್ಮಾರ್ಟ್ ಟಿಕೆಟ್‌ ವಿತರಣೆ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾದ ಬಿಎಂಟಿಸಿ. ಜನರು ಮೊಬೈಲ್‌ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್‌ ಖರೀದಿಸಿ ಬಸ್‌ ಹತ್ತುವಾಗ ಮತ್ತು ಇಳಿಯುವಾಗ ಸ್ಕ್ಯಾನ್‌ ಮಾಡಬಹುದು.


ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ನ.13); ನವೆಂಬರ್ 1 ರಿಂದ ಮೆಟ್ರೋದಲ್ಲಿ ಮೊಬೈಲ್ ಟಿಕೆಟ್ ಜಾರಿಯಾಗಿದ್ದು, ಸುಲಭವಾಗಿ ಜನರು ಅದನ್ನು ಬಳಕೆ ಮಾಡುತ್ತಿದ್ಧಾರೆ. ಇದೀಗ ಅದೇ ಹಾದಿಯಲ್ಲಿ ಸಾಗುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯಲ್ಲೂ ಹೊಸ ತಂತ್ರಾಂಶ ಬಳಸಿ ಮೊಬೈಲ್ ಟಿಕೆಟ್ ಜಾರಿಗೊಳಿಸಲು ಯೋಜನೆ ರೂಪಿಸಲಾಗ್ತಿದೆ. ಈಗ ಬಿಎಂಟಿಸಿ ವತಿಯಿಂದಲೂ ಬಸ್‌ ಟಿಕೆಟ್‌ನ್ನು ಮೊಬೈಲ್‌ ಮೂಲಕ ಆನ್‌ಲೈನ್‌ನಲ್ಲಿ ಹಣ ಪಾವತಿಸಿ ಖರೀದಿಸಲು ಅವಕಾಶ ಮಾಡಿಕೊಡುತ್ತಿದೆ.

ರಾಜಧಾನಿಯಲ್ಲಿ ಪ್ರತಿ ದಿನ 35 ಲಕ್ಷ  ಮಂದಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಬಸ್‌ ಸಂಚಾರದ ಆರಂಭದಿಂದಲೂ ಪ್ರಯಾಣಿಕರಿಗೆ ಟಿಕೆಟ್‌ (Ticket) ನೀಡುವ ಪದ್ಧತಿ ಮುಂದುವರೆಸಿಕೊಂಡು ಬಂದಿದೆ. ಇತ್ತೀಚೆಗೆ ಟಿಕೆಟ್‌ ನೀಡುವ ಪದ್ದತಿಯುಲ್ಲಿ ಬದಲಾವಣೆ ಮಾಡಿಕೊಂಡು ಯಂತ್ರದ (Machine) ಮೂಲಕ ಟಿಕೆಟ್‌ ವಿತರಣೆಗೆ ಮುಂದಾಗಿದೆ. ಈ ಮೂಲಕ ಟಿಕೆಟ್‌ಗಳ ಹಸ್ತಾಂತರ (Transfer) ಮತ್ತು ನಿರ್ವಾಹಕ (Conductor)ರಿಂದ ಸಂಸ್ಥೆಗೆ ಆಗುತ್ತಿದ್ದ ನಷ್ಟ ತಪ್ಪಿಸಲು ಕ್ರಮವಹಿಸಿತ್ತು. ಆದರೆ, ಈಗ ತಂತ್ರಜ್ಞಾನ (Technology) ಬಳಕೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಹೆಚ್ಚಾಗಿದೆ. ಇದಕ್ಕೆ ತಕ್ಕಂತೆ ನಮ್ಮ ಮೆಟ್ರೋ (Metro) ಸಂಸ್ಥೆಯಿಂದ ಪ್ರಯಾಣಿಕರಿಗೆ ಆಗಿಂದಾಗ್ಗೆ ತಂತ್ರಜ್ಞಾನ ಆಧಾರಿತ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದೆ. ಈಗ ಬಿಎಂಟಿಸಿ ಕೂಡ ತಮ್ಮ ಬಸ್‌ಗಳಲ್ಲಿ ಸಂಚಾರ ಮಾಡುವ ಪ್ರಯಾಣಿಕರಿಗೆ ಮೊಬೈಲ್ ನಲ್ಲಿಯೇ ಟಿಕೆಟ್ ಖರೀದಿಸುವ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ. ಇದು ಯಾವಾಗಲೂ ಬಿಡುವಿಲ್ಲದ ಜೀವನಶೈಲಿಯನ್ನು ಕಾರ್ಯ ನಿರ್ವಹಿಸುವ ಜನರಿಗೆ ಹಾಗೂ ಆನ್‌ಲೈನ್‌ (Online) ಮೂಲಕ ವ್ಯವಹಾರ ಮಾಡುವ ಜನರಿಗೆ ಪೂರಕವಾಗಲಿದೆ.

Tap to resize

Latest Videos

ಬಿಎಂಟಿಸಿಗೆ ವರದಾನವಾಯ್ತಾ ಎಲೆಕ್ಟ್ರಿಕ್ ಬಸ್, 2030 ರೊಳಗೆ ಬೆಂಗಳೂರಾಗುತ್ತಾ ಎಲೆಕ್ಟ್ರಿಕ್ ಮಯ!

ಸ್ಮಾರ್ಟ್ ಟಿಕೆಟ್‌ ಜಾರಿ:
ನಗರದಲ್ಲಿ ಮೆಟ್ರೋ ಹಾಗೂ ಟ್ಯಾಕ್ಸಿ ಸೇವೆಗಳು ಆರಂಭವಾದ ನಂತರ ಬಿಎಂಟಿಸಿ ಬಸ್‌ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿತ್ತು. ಸಾರ್ವಜನಿಕರನ್ನು ಸೆಳೆಯುವ ನಿಟ್ಟಿನಲ್ಲಿ ಹವಾನಿಯಂತ್ರಿತ ಬಸ್‌ಗಳು (Air Condition Bus), ನಾನ್‌ಸ್ಟಾಪ್‌ ಬಸ್‌ಗಳು ಹಾಗೂ ವಿಮಾನ ನಿಲ್ದಾಣಕ್ಕೆ ಹೋಗಲು ಫ್ಲೈಬಸ್‌ (Fly bus) ಸೇರಿ ವಿವಿಧ ಉನ್ನತ ಸೌಲಭ್ಯಗಳನ್ನು ನೀಡುತ್ತಿದೆ. ಆದರೂ, ಪ್ರತ್ಯೇಕ ಅಪ್ಲಿಕೇಷನ್‌ ಮೂಲಕ ಪ್ರಯಾಣಿಕರನ್ನು ಸೆಳೆಯುವ ನಿಟ್ಟಿನಲ್ಲಿ ಹಿನ್ನಡೆ ಉಂಟಾಗಿದೆ. ಈಗ ಪ್ರಯಾಣಿಕರನ್ನ ತನ್ನತ್ತ ಸೆಳೆಯಲು ಯೋಜನೆ ರೂಪಿಸಿರುವ ಬಿಎಂಟಿಸಿ, ಮೆಟ್ರೋ ಪ್ರಯಾಣಕ್ಕೆ ಜಾರಿಗೊಳಿಸಿರುವ ಕ್ಯೂ ಆರ್‍‌ ಕೋಡ್‌ (QR Code) ಆಧಾರಿತ ಟಿಕೆಟ್‌ಗಳ ಮಾದರಿಯಲ್ಲಿ ಸ್ಮಾರ್ಟ ಟಿಕೆಟ್‌ (Smart Ticket) ಜಾರಿಗೊಳಿಸಲು ಲೆಕ್ಕಾಚಾರ ಆರಂಭಿಸಿದೆ. ಆದರೆ, ಸಾಧಕ- ಬಾಧಕಗಳ ಚರ್ಚೆ ನಡೆಯುತ್ತಿದ್ದು, ಶೀಘ್ರವೇ ಸ್ಮಾರ್ಟ್ ಟಿಕೆಟ್‌ ಜಾರಿಗೊಳ್ಳುವ ಸಾಧ್ಯತೆಯಿದೆ.

ಚಾಲಕರ ಕೊರತೆಗೆ ತಗ್ಗಿಸುವ ಲೆಕ್ಕಾಚಾರ:
ಪ್ರಸ್ತುತ ಬಿಎಂಟಿಸಿ ಬಸ್‌ಗಳನ್ನು ನಡೆಸಲು ಚಾಲಕರ ಸಮಸ್ಯೆ ಎದುರಾಗಿದೆ. ಹೊಸದಾಗಿ ನೇಮಕಾತಿಯನ್ನು ಮಾಡಲಾಗಿಲ್ಲ. ಆದ್ದರಿಂದ ಈ ಹಿಂದೆ ನೇಮಕಾತಿ (Recruitment) ಮಾಡಿಕೊಳ್ಳಲಾದ ಚಾಲಕ-ಕಂ- ನಿರ್ವಾಹಕರಲ್ಲಿ ಕೆಲವರು ಈಗಲೂ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರನ್ನು ಚಾಲಕರನ್ನಾಗಿ ಬಳಸಿಕೊಳ್ಳುವ ಬಗ್ಗೆ ನಿಗಮದಲ್ಲಿ ಚರ್ಚೆ (Discussion) ನಡೆದಿದೆ. ಆದರೆ, ಟಿಕೆಟ್‌ ವಿತರಣೆಗೆ ಬೇರೊಬ್ಬರನ್ನು ವ್ಯವಸ್ಥೆ ಮಾಡಬೇಕಾಗುತ್ತದೆ. ಈ ಎರಡೂ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಸ್ಮಾರ್ಟ್ ಟಿಕೆಟ್ ವ್ಯವಸ್ಥೆ ಜಾರಿಗೆ ತರುವ ಪ್ರಯತ್ನಕ್ಕೆ ಕೈ ಹಾಕಲಾಗಿದೆ. ಈಗಾಗಲೇ ಬಿಎಂಟಿಸಿಯಲ್ಲಿ ಚತುರ ಸಾರಿಗೆ (Chathura Sarige) ವ್ಯವಸ್ಥೆಯಲ್ಲಿ ಬಸ್ ಎಲ್ಲಿದೆ? ನಾವಿರುವ ಪ್ರದೇಶಕ್ಕೆ ಯಾವ ಸಮಯಕ್ಕೆ ಬಸ್‌ ಬರುತ್ತದೆ? ನೀವು ಹೋಗುವ ಮಾರ್ಗದಲ್ಲಿ ಎಷ್ಟು ಟ್ರಾಫಿಕ್ ಇದೆ? ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. 

Bengaluru Metro Mobile Ticket: ರಾಜ್ಯೋತ್ಸವಕ್ಕೆ ಗಿಫ್ಟ್: ನ.1ರಿಂದ ಮೊಬೈಲ್‌ನಲ್ಲೇ 'ನಮ್ಮ ಮೆಟ್ರೋ' ಟಿಕೆಟ್‌

ಸ್ಮಾರ್ಟ್ ಟಿಕೆಟ್‌ ಬಳಕೆ ಹೇಗೆ?
ಈಗ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿರುವ ಬಿಎಂಟಿಸಿ ಜನರಿಗೆ ಅಂಗೈಯಲ್ಲಿರುವ ಮೊಬೈಲ್‌ ಮೂಲಕವೇ ಸ್ಮಾರ್ಟ್ ನೀಡುವುದಕ್ಕೆ ಕೈ ಹಾಕುತ್ತಿದೆ. ಈ ಟಿಕೆಟ್‌ಗಳನ್ನು ಬಿಎಂಟಿಸಿ ಅಭಿವೃದ್ಧಿಪಡಿಸುವ ಅಪ್ಲಿಕೇಷನ್‌ನಲ್ಲಿ (Application) ಹಣ ಪಾವತಿಸಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ನಂತರ ಈ ಟಿಕೆಟ್‌ಗಳನ್ನು ಬಸ್‌ ಹತ್ತುವಾಗ ಮತ್ತು ಇಳಿಯುವಾಗ ಸ್ಕ್ಯಾನ್‌ (Scan)ಮಾಡಬೇಕು. ಬಸ್‌ ಹತ್ತುವ ಮತ್ತು ಇಳಿಯುವ ಪ್ರಯಾಣಿಕರ ಬಗ್ಗೆ ಬಸ್‌ನ ಚಾಲಕರು ಸದಾ ನಿಗಾವಹಿಸಲಿದ್ದಾರೆ. 

click me!