ಕೃಷ್ಣಪಥ: ರಾಜಕೀಯಕ್ಕೆ ಬಂದಾಗ 100 ಎಕರೆ ಇತ್ತು, ಈಗ 1 ಎಕರೆ ಕೂಡ ಇಲ್ಲ: ಪ್ರೇಮಾ ಕೃಷ್ಣ

By Kannadaprabha News  |  First Published Dec 11, 2024, 5:50 AM IST

ಎಸ್.ಎಂ.ಕೃಷ್ಣ ಅವರ ಜೀವನದ ಕೆಲವು ಕುತೂಹಲಕಾರಿ ಘಟನೆಗಳನ್ನು ಅವರ ಪತ್ನಿ ಪ್ರೇಮಾ ಕೃಷ್ಣ ಅವರು 'ಕೃಷ್ಣಪಥ' ಅಭಿನಂದನಾ ಗ್ರಂಥದಲ್ಲಿ ದಾಖಲಿಸಿದ್ದಾರೆ. ನೂರು ಎಕರೆ ಜಮೀನು ಮಾರಾಟ, ಬಾಡಿಗೆ ಮನೆಯಲ್ಲಿ ವಾಸ, ತಿರುಪತಿ ಹರಕೆ, ಮದುವೆಗೆ ಮುನ್ನ ಸಂದರ್ಶನ ಮುಂತಾದ ವಿಷಯಗಳನ್ನು ಒಳಗೊಂಡಿದೆ.


ನಾನು ಮದುವೆಯಾಗಿ ಬಂದಾಗ ಎಸ್.ಎಂ.ಕೃಷ್ಣ ಅವರಿಗೆ ನೂರು ಎಕರೆ ಜಮೀನು ಇತ್ತೆಂದು ಹೇಳಲಾಗಿತ್ತು. ಈಗ ಕೃಷ್ಣರವರ ಹೆಸರಿನಲ್ಲಿ ಒಂದು ಎಕರೆ ಜಮೀನೂ ಇಲ್ಲ. ಹೀಗೆಂದು ಕೃಷ್ಣಪಥ ಎಂಬ ಅಭಿನಂದನಾ ಗ್ರಂಥದಲ್ಲಿ ದಾಖಲಿಸಿರುವವರು ಎಸ್.ಎಂ.ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ. ಚುನಾವಣೆಗಳು ಮತ್ತು ಇತರೆ ಕಾರಣಗಳಿಂದಾಗಿ ಅದನ್ನೆಲ್ಲಾ ಮಾರಾಟ ಮಾಡಿದೆವು ಎಂದು ಹೇಳಿಕೊಂಡಿದ್ದಾರೆ.

ವಾಸಕ್ಕೆ ಮನೆ ಇಲ್ಲದೆ ಬಾಡಿಗೆ ಮನೆ, ಬಳಿಕ ಕ್ಲಬ್‌ನಲ್ಲಿ ವಾಸಿಸಿದ್ದರು!

Tap to resize

Latest Videos

ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ಟ್ರಸ್ಟ್ ಬೋರ್ಡ್ ವತಿಯಿಂದ ಸದಾಶಿವನಗರದಲ್ಲಿ ನಿವೇಶನವೊಂದು ಮಂಜೂರಾಗಿತ್ತು. ಬ್ಯಾಂಕ್‌ನಲ್ಲಿ ಸಾಲ ಪಡೆದು ಮನೆ ಕಟ್ಟಿಸಿದೆವು. ಬ್ಯಾಂಕ್ ಸಾಲ ತೀರಿಸಲು ಬೇರೆಯವರಿಗೆ ಮನೆಯನ್ನು ಬಾಡಿಗೆಗೆ ಕೊಟ್ಟು ರೆಂಟ್ ಕಂಟ್ರೋಲ್ ವತಿಯಿಂದ ಐಎಎಸ್ ಅಧಿಕಾರಿ ಸತೀಶ್ ಚಂದ್ರ ಮನೆಯಲ್ಲಿ ಬಾಡಿಗೆಗೆ ಇದ್ದೆವು. ಅವರು ದೆಹಲಿಯಿಂದ ಬಂದ ನಂತರ ಅವರಿಗೆ ಮನೆ ಬಿಟ್ಟುಕೊಟ್ಟು ಎಲ್ಲಿಯೂ ಮನೆ ಸಿಗದೆ ಒಂದು ವರ್ಷ ಬೆಂಗಳೂರು ಕ್ಲಬ್‌ನಲ್ಲಿ ಎರಡು ಮಕ್ಕಳ ಜೊತೆ ವಾಸವಾಗಿದ್ದೆವು. ಅನಂತರ ಸ್ವಂತ ಮನೆ ಸೇರಿಕೊಂಡೆವು. ಚಾಮರಾಜಪೇಟೆಯಲ್ಲಿ ಒಂದು ವಾಣಿಜ್ಯ ಕಟ್ಟಡವಿದೆ. ಅದನ್ನು ಸಿದ್ದಾರ್ಥ ಕಾಫೀ ಡೇಗೆ ತೆಗೆದುಕೊಂಡಿದ್ದರು. ಈಗ ಕೃಷ್ಣ ಅವರ ಹೆಸರಿನಲ್ಲಿ ಒಂದು ಎಕರೆ ಜಮೀನೂ ಇಲ್ಲ ಎಂದು ಪ್ರೇಮಾ ಅವರು ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ತಿರುಪತಿ ಹುಂಡಿಗೆ ವಾಚ್‌ ಹಾಕಿ ಬಂದ ಮೇಲೆ ಕೇಂದ್ರ ಮಂತ್ರಿ!

1983 ರಲ್ಲಿ ಎಸ್.ಎಂ.ಕೃಷ್ಣ ಅವರು ತಿರುಪತಿ ದೇವಸ್ಥಾನಕ್ಕೆ ತೆರಳಿದ್ದರು. ಮಂಗಳಾರತಿ ತೆಗೆದುಕೊಳ್ಳಬೇಕಾದರೆ ಅವರ ವಾಚು ಕಳಚಿಕೊಂಡಿತು. ಇದನ್ನು ಗಮನಿಸಿದ ದೇವಾಲಯದ ಅರ್ಚಕರು ಕೃಷ್ಣರ ಸ್ನೇಹಿತರಾಗಿದ್ದ ಸಿಂಗಾರಿಗೌಡರಿಗೆ ಕಳಚಿದ ವಾಚನ್ನು ಹುಂಡಿಗೆ ಹಾಕಿಸಿ ಎಂದು ಹೇಳಿದರು. ಅದರಂತೆ ಮತ್ತೆ ತಿರುಪತಿಗೆ ಹೋದಾಗ ಆ ವಾಚನ್ನು ಹುಂಡಿಗೆ ಹಾಕಿ ಪತ್ನಿ ಪ್ರೇಮಾ ಅವರೊಂದಿಗೆ ಬೆಂಗಳೂರಿಗೆ ವಾಪಸ್ ಬಂದು ಸಂಜೆ ವಿಮಾನದಲ್ಲಿ ಹೈದರಾಬಾದ್‌ಗೆ ತೆರಳಿ ಟೆನಿಸ್ ಕ್ಲಬ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದರು. ಅಂದೇ ರಾತ್ರಿ ದೆಹಲಿಗೆ ಬರುವಂತೆ ತುರ್ತು ಕರೆ ಬಂತು. ದೆಹಲಿಗೆ ಹೋದಾಗ ಪ್ರಧಾನಿ ಇಂದಿರಾಗಾಂಧಿ ಅವರು ಕೃಷ್ಣರವರನ್ನು ಮಿನಿಸ್ಟರ್ ಮಾಡುವ ಸುದ್ದಿ ಸಿಕ್ಕಿತು. ಪ್ರಮಾಣವಚನ ಸ್ವೀಕಾರ ಮಾಡಿ ಕೇಂದ್ರ ಸಚಿವರೂ ಆದರು. ಇದು ಅವರ ಜೀವನದಲ್ಲಾದ ವಿಶೇಷ ಬೆಳವಣಿಗೆ. ತಿರುಪತಿ ದೇವರ ಸನ್ನಿಧಿಯಲ್ಲಿ ಮಾತ್ರ ಇಂತಹ ಪವಾಡ ನಡೆಯಲು ಸಾಧ್ಯ ಎಂದು ನಂಬಿದ್ದ ಕೃಷ್ಣ ಅವರಿಗೆ ದೇವರಲ್ಲಿ ಅಪಾರ ನಂಬಿಕೆ ಇತ್ತು. ಅದನ್ನು ಬಹಿರಂಗವಾಗಿ ಎಲ್ಲೂ ತೋರ್ಪಡಿಸಿಕೊಳ್ಳುತ್ತಿರಲಿಲ್ಲ.

ಮದುವೆಗೂ ಮುನ್ನ ಭಾವಿ ಪತ್ನಿಯನ್ನು ಸಂದರ್ಶನ ಮಾಡಿದ್ದರು!

ಎಸ್.ಎಂ.ಕೃಷ್ಣ ಅವರ ಪತ್ನಿ ಪ್ರೇಮಾ ಶಿವಮೊಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕೂಡುಮಲ್ಲಿಗೆ ಗ್ರಾಮದವರು. ಅವರನ್ನು ಮದುವೆಯಾಗಲು ಒಪ್ಪಿಕೊಂಡ ರೀತಿ ಕೂಡ ತುಂಬಾ ಸ್ವಾರಸ್ಯಕರವಾಗಿದೆ. ಪ್ರೇಮಾರವರನ್ನು ನೋಡಲು ಹೋದಾಗ ತಾವು ಬರಿ ನೋಡಲು ಬಂದಿಲ್ಲ ಅವರ ಜೊತೆ ಮಾತನಾಡಬೇಕೆಂದು ಮೊದಲೇ ಹೆಣ್ಣಿನ ಕುಟುಂಬಕ್ಕೆ ತಿಳಿಸಿ ಬಂದಿದ್ದರು. ಅವರ ಅನುಮತಿ ಪಡೆದ ನಂತರ ಪ್ರೇಮಾ ಅವರನ್ನು ತಾವು ಏನು ಓದಿದ್ದೀರಿ, ಯಾವ ಪುಸ್ತಕ ಓದಿದ್ದೀರಿ, ನಾನು ಎಂಎಲ್‌ಎ ಅಂತಾ ಗೊತ್ತಾ? ಅದರಲ್ಲೂ ವಿರೋಧಪಕ್ಷದ ಎಂಎಲ್‌ಎ ಎಂಬುದು ಗೊತ್ತಾ ಎಂದು ಪ್ರಶ್ನೆ ಮಾಡಿದ್ದರು. ಪ್ರೇಮಾ ಅವರೂ ಕೂಡ ಅಷ್ಟೇ ಬೋಲ್ಡ್ ಆಗಿ ತಮ್ಮ ವಿಚಾರವನ್ನು ಪೇಪರ್‌ನಲ್ಲಿ ಓದಿದ್ದಾಗಿಯೂ ತಮ್ಮ ಭಾಷಣಗಳಿಂದ ತಮ್ಮ ಬಗ್ಗೆ ಅಭಿಮಾನ ಹೊಂದಿರುವುದಾಗಿಯೂ ತಿಳಿಸಿದರು. ಆಗ ಕೃಷ್ಣ ಅವರು ತಾವು ವಿರೋಧಪಕ್ಷದಲ್ಲಿರುವುದಾಗಿಯೂ ಹೋರಾಟವೇ ತಮ್ಮ ಮುಖ್ಯ ಗುರಿಯಾಗಿರಬಹುದು. ಜೀವನದಲ್ಲಿ ಸುಖ ಎನ್ನುವುದು ಯಾವ ಪ್ರಮಾಣದಲ್ಲಿ ನೀವು ಬಯಸುವಿರೋ ಅದು ಸಿಗದೇ ಹೋಗಬಹುದು. ನಾನು ಸದಾ ಹೋರಾಟದ ಗುಂಗಿನಲ್ಲೇ ಇರುತ್ತೇನೆ. ನಮ್ಮ ಸಂಸಾರದ ವಿಚಾರಗಳು ಅಪ್ರಸ್ತುತ ಆಗಬಹುದು. ಕೆಲವು ಬಾರಿ ಜೈಲಿಗೂ ಹೋಗಬಹುದು. ಇದನ್ನೆಲ್ಲಾ ಯೋಚನೆ ಮಾಡಿ ನನ್ನ ಜೊತೆ ಬಾಳ್ವೆ ನಡೆಸಬೇಕಾಗುತ್ತದೆ. ಅದಕ್ಕಾಗಿ ಮಾನಸಿಕರಾಗಿ ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದ್ದರಂತೆ. ಅದಾಗಲೇ ಕೃಷ್ಣ ಅವರಿಗೆ ಮನಸೋತಿದ್ದ ಪ್ರೇಮಾ ಅವರು ಎಲ್ಲಾ ಪ್ರಶ್ನೆಗಳಿಗೂ ಸಮರ್ಥವಾಗಿ ಉತ್ತರ ನೀಡಿದ್ದರು. ಮುಂದೆ ಪ್ರೇಮಾ ಕೃಷ್ಣ ಅವರು ಕೃಷ್ಣರವರ ರಾಜಕೀಯ ಜೀವನದಲ್ಲಿ ಬೆಂಗಾವಲಾಗಿ ನಿಂತು ಅವರನ್ನು ಮುನ್ನಡೆಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.

click me!