ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ವರ್ಣರಂಜಿತ ರಾಜಕೀಯ ಜೀವನದ ವಿಶ್ಲೇಷಣೆ. ಅವರ ಶೈಕ್ಷಣಿಕ ಹಿನ್ನೆಲೆ, ರಾಜಕೀಯ ನಿರ್ಧಾರಗಳು, ಸಾಧನೆಗಳು ಮತ್ತು ವ್ಯಕ್ತಿತ್ವದ ಬಗ್ಗೆ ಒಳನೋಟ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರದ್ದು ಹಲವು ರೀತಿಗಳಲ್ಲಿ ಸಾಮಾನ್ಯ ರಾಜಕಾರಣಿಗಳಿಗಿಂತ ಭಿನ್ನವಾದ ವರ್ಣರಂಜಿತ ಬದುಕು. ಬಹುಶಃ ನಾನು ಮರಳಲ್ಲಿ ಅಕ್ಷರಾಭ್ಯಾಸ ಮಾಡುತ್ತಾ ಮಕ್ಕಳ ವೀರ ಕುಣಿತ ಕಲಿಯುತ್ತಿದ್ದ ಕಾಲದಲ್ಲಿ ಅವರು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದರು. ಆ ಕಾಲದಲ್ಲಿ ನಮ್ಮಂಥವರು ವಿದೇಶದಲ್ಲಿ ಬಿಡಿ, ಊರಿನ ಶಾಲೆಗೆ ಹೋಗುವ ಕನಸನ್ನೂ ಕಾಣಲು ಸಾಧ್ಯ ಇರಲಿಲ್ಲ. ಅದೇ ರೀತಿ ಶೈಕ್ಷಣಿಕ ಅರ್ಹತೆಯ ಅವಶ್ಯಕತೆಯೇ ಇರದ ರಾಜಕೀಯ ಕ್ಷೇತ್ರಕ್ಕೆ ವಿದೇಶದಲ್ಲಿ ಶಿಕ್ಷಣ ಪಡೆದವರು ಪ್ರವೇಶಿಸುವುದೂ ಅಪರೂಪವಾಗಿತ್ತು. ಕೃಷ್ಣ ಅವರ ಬದುಕಿನ ವೈಶಿಷ್ಟ್ಯವೆಂದರೆ ವಿದೇಶದಲ್ಲಿ ಶಿಕ್ಷಣ ಪಡೆದರೂ ಹುಟ್ಟೂರಿಗೆ ಮರಳಿ, ಮಣ್ಣಿನ ಮಗನಾಗಿದ್ದು.
62 ವರ್ಷಗಳ ಹಿಂದೆಯೇ ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಸ್.ಎಂ.ಕೃಷ್ಣ ಅವರಿಗೆ ರಾಜಕೀಯ ಪ್ರವೇಶ ಅನಿವಾರ್ಯವಾಗಿರಲಿಲ್ಲ. ಅವರು ಆಗಲೇ ಅಮೆರಿಕದ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮುಗಿಸಿ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಪುಲ್ ಬ್ರೈಟ್ ಸ್ಕಾಲರ್‌ಶಿಪ್ ಪಡೆದು ಅಂತರರಾಷ್ಟ್ರೀಯ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಮನಸ್ಸು ಮಾಡಿದ್ದರೆ ವಿದೇಶದ ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇರಿ ನೆಮ್ಮದಿಯ ಬದುಕು ಬದುಕಬಹುದಿತ್ತು. ಆದರೆ, ಭಾರತಕ್ಕೆ ಮರಳಿ ಕೆಲ ಕಾಲ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದ ಕೃಷ್ಣ ಅವರು ಅಂತಿಮವಾಗಿ ರಾಜಕೀಯ ಕ್ಷೇತ್ರವನ್ನು ತಮ್ಮ ಬದುಕಿನ ದಾರಿಯನ್ನಾಗಿ ಆರಿಸಿಕೊಂಡರು. ಇದರಿಂದಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ನಷ್ಟ ಉಂಟಾದರೂ ಕರ್ನಾಟಕ ರಾಜ್ಯಕ್ಕೆ ಲಾಭವಾಯಿತು. ಬಹುಶಃ ಇದು ಕೃಷ್ಣ ಅವರ ಬದುಕಿನ ಬಹುಮುಖ್ಯ ನಿರ್ಧಾರ.
ಬೆಂಗ್ಳೂರನ್ನು ಸಿಂಗಾಪುರ್ ಮಾಡುವ ಕನಸು ಕಂಡಿದ್ದ ಎಸ್.ಎಂ. ಕೃಷ್ಣ: ಸಿದ್ದರಾಮಯ್ಯ
ಇಷ್ಟೇ ಮುಖ್ಯವಾದ ಇನ್ನೊಂದು ನಿರ್ಧಾರ ಅವರು ಸಮಾಜವಾದಿ ಚಿಂತನೆ ಕಡೆ ಆಕರ್ಷಿತರಾಗಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ ಸೇರಿದ್ದು. 1962ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮದ್ದೂರು ಕ್ಷೇತ್ರದಿಂದ ಗೆದ್ದಿದ್ದ ಕೃಷ್ಣ, ನಂತರ ಪ್ರಜಾಸೋಷಿಯಲಿಷ್ಟ್ ಪಾರ್ಟಿ ಸೇರಿದ್ದರು. ಕೃಷ್ಣ ಅವರು ಕಾಂಗ್ರೆಸ್ ಪಕ್ಷ ಸೇರಿದ್ದು 1971ರಲ್ಲಿ. ಕಾಂಗ್ರೆಸ್ ಪಕ್ಷ ರಾಜಕೀಯವಾಗಿ ಲಭ್ಯಇರುವ ಎಲ್ಲ ಸ್ಥಾನಮಾನಗಳನ್ನು ಅವರಿಗೆ ನೀಡಿತ್ತು. ಕಾಂಗ್ರೆಸ್ ಪಕ್ಷದಿಂದಲೇ ಅವರು ವಿಧಾನಸಭೆ, ವಿಧಾನಪರಿಷತ್, ಲೋಕಸಭೆ, ಮತ್ತು ರಾಜ್ಯಸಭೆಗೆ ಆಯ್ಕೆಯಾಗಿದ್ದರು. ರಾಜ್ಯ ಮತ್ತು ಕೇಂದ್ರ ಸಚಿವರಾಗಿದ್ದರು, ಉಪಮುಖ್ಯಮಂತ್ರಿಯಾಗಿದ್ದರು. ವಿಧಾನಸಭಾಧ್ಯಕ್ಷರ ಸ್ಥಾನವನ್ನೂ ಅಲಂಕರಿಸಿದ್ದರು. ಕೊನೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದು ಮಾತ್ರವಲ್ಲ, ನಂತರ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ರಾಜ್ಯಪಾಲ ಹುದ್ದೆಯ ನಂತರ ಮರಳಿ ಸಕ್ರಿಯ ರಾಜಕಾರಣ ಪ್ರವೇಶಿಸಿ ಕೇಂದ್ರ ಸಚಿವರಾಗಿದ್ದರು. ಇಂತಹದ್ದೊಂದು ಅಪರೂಪದ ಅವಕಾಶಗಳನ್ನು ಪಡೆದಿರುವ ಮತ್ತೊಬ್ಬ ರಾಜಕೀಯ ನಾಯಕ ಕಾಂಗ್ರೆಸ್ ನಲ್ಲಿ ಮಾತ್ರವಲ್ಲ, ಭಾರತದ ಯಾವ ಪಕ್ಷದಲ್ಲಿಯೂ ಇರಲಾರರು.
ರಾಜಕೀಯ ಸ್ಥಾನಮಾನಗಳನ್ನು ಅಧಿಕಾರ ಎಂದು ಬಗೆಯದೆ, ಸೇವೆಗೆ ಅವಕಾಶ ಎಂದು ಸ್ವೀಕರಿಸಿ ಜವಾಬ್ದಾರಿಯನ್ನು ಅವರು ನಿರ್ವಹಿಸಿದ್ದರು, ದಕ್ಷ ಆಡಳಿತಗಾರನೆಂಬ ಖ್ಯಾತಿಯನ್ನು ಪಡೆದಿದ್ದರು. ತನ್ನ ಶಿಕ್ಷಣ ಮತ್ತು ಅನುಭವದ ಬಲದಿಂದ ಪಡೆದಿದ್ದ ಅಪರೂಪವಾದ ದೂರದರ್ಶಿತ್ವ ಮತ್ತು ಅಭಿವೃದ್ದಿಯ ಮುನ್ನೋಟದ ಫಲವನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಅವರು ಮಾಡಿರುವ ಸಾಧನೆಯಲ್ಲಿ ಕಾಣಬಹುದು. ಇಡೀ ಜಗತ್ತು ತಂತ್ರಜ್ಞಾನದ ಯುಗಕ್ಕೆ ಹೊರಳುತ್ತಿರುವ ದಿನಗಳನ್ನು ನೋಡಿ ಕೃಷ್ಣ ಅವರು ಕಾಲಕ್ಕೆ ತಕ್ಕ ಹಾಗೆ ಕರ್ನಾಟಕ ಕೂಡಾ ಬದಲಾವಣೆಯ ದಾರಿಯಲ್ಲಿ ಹೆಜ್ಜೆ ಇಡಬೇಕೆಂದು ನಿರ್ಧರಿಸಿ ರಾಜ್ಯದಲ್ಲಿ ಐಟಿ-ಬಿಟಿ ಕ್ಷೇತ್ರಕ್ಕೆ ಉತ್ತೇಜನ ನೀಡಿ ಬೆಳೆಸಿದರು. ಇದರಿಂದ ರಾಜ್ಯ ಐಟಿ-ಬಿಟಿ ರಾಜಧಾನಿ ಎಂಬ ಖ್ಯಾತಿಗೆ ಭಾಜನವಾಯಿತು. ಸಾವಿರಾರು ಯುವಜನರಿಗೆ ಉದ್ಯೋಗಾವಕಾಶದ ಬಾಗಿಲು ತೆರೆಯಿತು.
ನಗರಗಳಂತೆ ಹಳ್ಳಿಗಳಿಗೂ ಯೋಜನೆ
ಬೆಂಗಳೂರು ನಗರವನ್ನು ಸಿಂಗಾಪುರವಾಗಿ ಬದಲಾಯಿಸುವ ಕನಸು ಕಂಡಿದ್ದ ಕೃಷ್ಣ ಅವರು ನಗರದ ಮೂಲಸೌಕರ್ಯ ಅಭಿವೃದ್ದಿಗೆ ಆದ್ಯತೆ ನೀಡಿದ್ದರು. ಅವರ ನಗರ ಕೇಂದ್ರಿತ ಯೋಜನೆಗಳಿಗೆ ಹೆಚ್ಚು ಪ್ರಚಾರ ಸಿಕ್ಕಿದ್ದ ಕಾರಣ ಗ್ರಾಮೀಣ ಪ್ರದೇಶವನ್ನು ಅವರು ನಿರ್ಲಕ್ಷಿಸಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಆದರೆ ಅವರ ಕಾಲದಲ್ಲಿ ಜಾರಿಗೆ ಬಂದಿರುವ ಸ್ವೀಶಕ್ತಿ ಸ್ವಸಹಾಯ ಸಂಘಗಳು, ಯಶಸ್ವಿನಿ ಆರೋಗ್ಯ ಯೋಜನೆ, ಮಧ್ಯಾಹ್ನದ ಬಿಸಿಯೂಟದಂಥ ಯೋಜನೆಗಳು ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆ ಚಾಲನೆ ನೀಡಿದ್ದನ್ನು ಮರೆಯಬಾರದು.
ದ್ವೇಷದ ರಾಜಕಾರಣದಿಂದ ದೂರ
ಉದಾರವಾದಿ ನಿಲುವಿನ ಕೃಷ್ಣ ಅವರೆಂದೂ ದ್ವೇಷದ ರಾಜಕಾರಣ ಮಾಡಿದವರಲ್ಲ. ನಾನು ಕಾಂಗ್ರೆಸ್ ಪಕ್ಷ ಸೇರಲು ನಿರ್ಧರಿಸಿದಾಗ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಕೃಷ್ಣ ಅವರನ್ನು ಮುಂಬೈಗೆ ತೆರಳಿ ಭೇಟಿ ಮಾಡಿದ್ದೆ. ನನ್ನ ನಿಲುವನ್ನು ಮುಕ್ತವಾಗಿ ಪ್ರಶಂಸಿಸಿ ನನಗೆ ಸರ್ವ ರೀತಿಯಲ್ಲೂ ಮಾರ್ಗದರ್ಶನ ನೀಡಿದ್ದರು. ಇಂದು ಉಪಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಸೇರಿ ಹಲವು ಯುವಕರನ್ನು ರಾಜಕೀಯ ಕ್ಷೇತ್ರದಲ್ಲಿ ಕೃಷ್ಣ ಬೆಳೆಸಿದ್ದರು.
ಬಿಜೆಪಿ ಸೇರಿದ್ದರಿಂದ ಬೇಸರವಾಗಿತ್ತು
ಕೃಷ್ಣ ಅವರು ತಮ್ಮ ಕೊನೇ ದಿನಗಳಲ್ಲಿ ಬಿಜೆಪಿ ಸೇರಿದ್ದಾಗ ನನ್ನಂಥವರಿಗೆ ಸ್ವಲ್ಪ ಬೇಸರವಾಗಿದ್ದು ನಿಜ. ಈ ನಿರ್ಧಾರಕ್ಕೆ ಬರಲು ಏನು ಒತ್ತಡಗಳಿತ್ತೋ ಗೊತ್ತಿಲ್ಲ, ಅವರು ಬಹಿರಂಗವಾಗಿ ಒಂದಷ್ಟು ಕಾರಣಗಳನ್ನು ನೀಡಿದ್ದರು, ಉಳಿದವು ಬಹುಷ: ಅವರ ಜೊತೆಯಲ್ಲಿಯೇ ಮಣ್ಣಾಗಿ ಹೋಗಬಹುದು. ಕೃಷ್ಣ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡ ಬಿಜೆಪಿ ಅವರ ಹಿರಿತನ ಮತ್ತು ಅನುಭವವನ್ನು ಸರಿಯಾಗಿ ಬಳಸದೆ ನಿರ್ಲಕ್ಷಿಸಿತು ಎನ್ನುವುದು ವಿಷಾದದ ಸಂಗತಿ.
ಕಾಡುಗಳ್ಳ ವೀರಪ್ಪನ್ ಜೊತೆಗೆ ಮಾತನಾಡಿದ್ದ ಏಕೈಕ ಕನ್ನಡದ ಸಿಎಂ ಎಸ್.ಎಂ. ಕೃಷ್ಣ!
ಜಂಟಲ್‌ಮ್ಯಾನ್ ರಾಜಕಾರಣಿ
ಕೃಷ್ಣ ಅವರ ವ್ಯಕ್ತಿತ್ವದ ವಿಶಿಷ್ಟತೆಯೆಂದರೆ ಅವರ ಸಜ್ಜನಿಕೆಯ ಜಂಟಲ್ ಮ್ಯಾನ್ ನಡವಳಿಕೆ. ಈ ಗುಣ-ನಡತೆಯಿಂದಾಗಿಯೇ ಅವರು ಅಜಾತಶತ್ರುಗಳಾಗಿದ್ದರು. ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ರಾಜ್ಯ ಸರ್ಕಾರ ಹಲವು ರಾಜಕೀಯ ಬಿಕ್ಕಟ್ಟುಗಳನ್ನು ಎದುರಿಸಿತ್ತು. ಕಾವೇರಿ ನೀರು ಹಂಚಿಕೆ ವಿವಾದ, ಕಾಡುಗಳ್ಳ ವೀರಪ್ಪನ್‌ನಿಂದ ವರನಟ ರಾಜ್ ಕುಮಾರ್ ಅವರ ಅಪಹರಣ, ಭೀಕರ ಬರಗಾಲ ಮೊದಲಾದ ಬಿಕ್ಕಟ್ಟುಗಳನ್ನು ಎದುರಿಸಿ ಯಶಸ್ಸು ಕಂಡದ್ದು ಅವರ ರಾಜಕೀಯ ಚಾತುರ್ಯಕ್ಕೆ ಸಾಕ್ಷಿ. ತಮ್ಮ ದೀರ್ಘ ಅನುಭವದ ಕಾರಣದಿಂದಾಗಿ ಅವರೊಬ್ಬ ಉತ್ತಮ ಆಡಳಿತಗಾರರಾಗಿದ್ದರು.
ಕೃಷ್ಣ ಅವರ ದೂರದರ್ಶಿತ್ವ, ಅಭಿವೃದ್ದಿಯ ಮುನ್ನೋಟ, ಶಿಸ್ತುಬದ್ದ ಜೀವನ, ಸಜ್ಜನಿಕೆಯ ನಡವಳಿಕೆ ಮತ್ತು ಅಧ್ಯಯನ ಶೀಲ ಪ್ರವೃತ್ತಿ ಹೊಸ ತಲೆಮಾರಿನ ರಾಜಕಾರಣಿಗಳಿಗೆ ಮಾದರಿ. ಕರ್ನಾಟಕದ ಅಭಿವೃದ್ದಿಯ ನಕಾಶೆಯಲ್ಲಿ ಶಾಶ್ವತವಾದ ಗುರುತನ್ನು ಮಾಡಿಹೋಗಿರುವ ಎಸ್.ಎಂ.ಕೃಷ್ಣ ಅವರಿಗೆ ನನ್ನ ಗೌರವಪೂರ್ವಕ ನಮನಗಳು.