ಮುತ್ಸದ್ದಿ ರಾಜಕಾರಣಿ ಎಸ್‌ಎಂ ಕೃಷ್ಣ ಮಂಗಳವಾರ ನಿಧನರಾದರು. 93 ವರ್ಷಗಳ ತುಂಬು ಜೀವನ ನಡೆಸಿದ್ದ ನವ ಬೆಂಗಳೂರಿನ ನಿರ್ಮಾತೃ ರಾಜಕಾರಣಿ ಇನ್ನು ನೆನಪು ಮಾತ್ರ.
ಬೆಂಗಳೂರು (ಡಿ.10): ಅದು 2017 ಜನವರಿ 29. ಬೆಂಗಳೂರಿನ ಸದಾಶಿವ ನಗರದ ಮನೆಯಲ್ಲಿ ಕರ್ನಾಟಕದ ಮಾಜಿ ಸಿಎಂ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಎಸ್‌ಎಂ ಕೃಷ್ಣ ದಿಢೀರನೇ ಪತ್ರಿಕಾಗೋಷ್ಠಿ ಕರೆದಿದ್ದರು. ಮಾಜಿ ವಿದೇಶಾಂಗ ಸಚಿವರು ಇಷ್ಟು ದಿಢೀರನೇ ಸುದ್ದಿಗೋಷ್ಠಿ ಕರೆದಿದ್ದರ ಹಿಂದಿನ ಕಾರಣವೇನು ಅನ್ನೋದೇ ಮಾಧ್ಯಮಗಳಿಗೆ ಕುತೂಹಲ ಮೂಡಿಸಿತ್ತು. ಯಾಕೆಂದರೆ ಅದಾಗಲೇ ರಾಜಕಾರಣ ಬೇರೆ ಬೇರೆ ದಿಕ್ಕುಗಳಲ್ಲಿ ಸಾಗಿದ್ದ ಕಾರಣ ಎಸ್‌ಎಂ ಕೃಷ್ಣ ಅನ್ನೋ ಹೆಸರು ರಾಜಕಾರಣದಲ್ಲಿ ಸಣ್ಣ ಮಟ್ಟಿಗೆ ಮಾತ್ರವೇ ಕೇಳುತ್ತಿತ್ತು. ಸುದ್ದಿಗೋಷ್ಠಿಯಲ್ಲಿ ಕುಳಿತವರೇ, ತಾವು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದುಬಿಟ್ಟರು. ಕಾರಣವೇನು ಎಂದು ಮಾಧ್ಯಮವರು ಕೇಳಿದ ಪ್ರಶ್ನೆಗೆ, ಹಿರಿಯರಿಗೆ ಕಾಂಗ್ರೆಸ್ ಪಕ್ಷದಲ್ಲಿ ಗೌರವ ಸಿಗ್ತಿಲ್ಲ. ತನ್ನ ಸಿದ್ಧಾಂತದಿಂದ ಕಾಂಗ್ರೆಸ್ ವಿಮುಖವಾಗುತ್ತಿದೆ ಅಂತಾ ಹೇಳಿಬಿಟ್ಟರು. ಇಂಥ ಗಂಭೀರ ಸುದ್ದಿಯ ನಡುವೆಯೂ ಅಂದು ಸುದ್ದಿಗೋಷ್ಠಿಯಲ್ಲಿ ನಡೆದಿದ್ದು ಬಹಳ ತಮಾಷೆಯ ಕ್ಷಣೆಗಳು...
ದೀರ್ಘಕಾಲ ತಮ್ಮ ರಾಜಕಾರಣದಲ್ಲಿ ಜೊತೆಯಾಗಿ ನಡೆದಿದ್ದ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತ ವಿಚ್ಛೇದನ ನೀಡಿದ ಸುದ್ದಿ ತಿಳಿಸಿದ ಬಳಿಕ ಮಾಜಿ ಸಚಿವರು ತಮ್ಮ ಬಾಳಿಗೆ ಜೊತೆಯಾಗಿದ್ದ ಪತ್ನಿ ಪ್ರೇಮಾ ಕೃಷ್ಣ ಅವರ ಮುಖ ನೋಡಿದ್ದರು. ಸದಾಶಿವನಗರದ ಮನೆಯಲ್ಲಿಯೇ ಅಧಿಕೃತ ಸುದ್ದಿಗೋಷ್ಠಿ ನಡೆಯುತ್ತದೆ ಅಂತಾ ಗೊತ್ತಾದಾಗ ಪ್ರೇಮಾ ಕೃಷ್ಣ ಇಂಚಿಂಚೂ ವ್ಯವಸ್ಥೆ ಮಾಡಿಸಿದ್ದರು. ಮಾಧ್ಯಮದವರು ಹಾಗೂ ಅವರ ಬೆಂಬಲಿಗರಿಗೆ ಯಾವುದೇ ಸಮಸ್ಯೆಗಳಾಗದಂತೆ ಅಚ್ಚುಕಟ್ಟಾಗಿ ಎಲ್ಲವನ್ನೂ ನೋಡಿಕೊಂಡಿದ್ದರು. ಸುದ್ದಿಗೋಷ್ಠಿಯಲ್ಲೂ ಎಸ್‌ಎಂ ಕೃಷ್ಣ ಅವರ ಭುಜಕ್ಕೆ ತಾಗುವಂತೆಯೇ ಕುಳಿತಿದ್ದ ಪ್ರೇಮಾ ಕೃಷ್ಣ, ಒಮ್ಮೊಮ್ಮೆ ಕೃಷ್ಣ ಅವರು ಮಾಧ್ಯಮಗಳ ಪ್ರಶ್ನೆಗೆ ಯೋಚನಾಮಗ್ನರಾದಾಗ ಅವರ ಮಾತನ್ನು ತಾವೇ ಆಡುತ್ತಿದ್ದರು.
ಸಾಮಾನ್ಯವಾಗಿ ಹಿರಿಯ ರಾಜಕಾರಣಿಯೊಬ್ಬರು ಪಕ್ಷ ತೊರೆಯುತ್ತಾರೆ ಅನ್ನೋದು ಅವರ ಬೆಂಬಲಿಗರು ಹಾಗೂ ಮಾಧ್ಯಮಗಳು ಮುಂಚಿತವಾಗಿ ಗೊತ್ತಾಗಿಬಿಡುತ್ತದೆ. ಆದರೆ, ಎಸ್‌ಎಂ ಕೃಷ್ಣ ವಿಚಾರದಲ್ಲಿ ಇಂಥ ಊಹೆಗಳಿದ್ದರೂ ಎಲ್ಲೂ ಖಚಿತವಾಗಿರಲಿಲ್ಲ. ಆದರೆ, ಇದೇ ಸುದ್ದಿಗೋಷ್ಠಿಯಲ್ಲಿ ಅವರು, ಕಾಂಗ್ರೆಸ್ ಪಕ್ಷಕ್ಕೆ ವಿಚ್ಛೇದನ ನೀಡೋ ನಿರ್ಧಾರವನ್ನ ಕೇವಲ 24 ಗಂಟೆಯಲ್ಲಿ ತೆಗೆದುಕೊಂಡಿದ್ದಾಗಿ ತಿಳಿಸಿದರು. ಈ ಬಗ್ಗೆ ಬೇರೆ ಯಾರಲ್ಲೂ ಮಾತನಾಡಿರಲಿಲ್ಲ. ನನ್ನ ರಾಜೀನಾಮೆಯ ಬಗ್ಗೆ ಮಾತನಾಡಿದ್ದು ಪತ್ನಿ ಪ್ರೇಮಾ ಬಗ್ಗೆ ಮಾತ್ರ ಎಂದಿದ್ದರು.
'ನಾನು ನನ್ನ ಅಭಿಮಾನಿಗಳು, ಬೆಂಬಲಿಗರು,ಪಕ್ಷದ ಆತ್ಮೀಯರು ಯಾರೊಂದಿಗೂ ಮಾತನಾಡಿರಲಿಲ್ಲ. 24 ಗಂಟೆಗಳ ಹಿಂದೆ ನನ್ನ ಪತ್ನಿಯೊಂದಿಗೆ ಈ ವಿಚಾರ ಚರ್ಚಿಸಿದ್ದೆ. ರಾಜೀನಾಮೆ ನೀಡೋ ನಿರ್ಧಾರ ಮಾಡಿದ್ದೆ' ಎಂದು ಹೇಳಿದ್ದರು.
ಎಸ್ಎಂ ಕೃಷ್ಣ ವಿಧಿವಶ, ನಾಳೆ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಿಸಿದ ಸರ್ಕಾರ!
ಹಾಗೇನಾದರೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಈ ನಿರ್ಧಾರವನ್ನು ಮರುಪರಿಶೀಲಿಸಿ ಎಂದರೆ, ನೀವು ಮಾಡುತ್ತೀರಾ ಎಂದು ಪ್ರಶ್ನೆ ಮಾಡಿದಾಗ ಉತ್ತರ ನೀಡಿದ್ದು, ಪ್ರೇಮಾ ಕೃಷ್ಣ. 'ಅದ್ಯಾಕೆ ಮಾಡ್ತಾರೆ? ನಿಮ್ಮ ಎದುರಲ್ಲೇ ಅವರು ಸಾರ್ವಜನಿಕವಾಗಿ ವಿಚ್ಛೇದನ ಕೊಟ್ಟಾಗಿದೆ' ಎಂದು ಹೇಳಿದಾಗ ಸುದ್ದಿಗೋಷ್ಠಿಯಲ್ಲಿ ನಗೆಗಡಲು.
ಉದ್ಘಾಟನೆ ಆದ ಬೆನ್ನಲ್ಲೇ ಎದುರಾಯ್ತು ಲೀಲಾವತಿ ದೇಗುಲಕ್ಕೆ ಕುತ್ತು!
ಎಐಸಿಸಿ ಉಪಾಧ್ಯಕ್ಷರಾಗಿರುವ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದಲ್ಲಿ ನಿಮ್ಮ ಕಾಮೆಂಟ್ ಏನು ಅನ್ನೋ ಪ್ರಶ್ನೆಗೂ ಕೂಡ ಪ್ರೇಮಾ ಉತ್ತರ ನೀಡಿದ್ದರು. 'ಅವರು ಪಕ್ಷದಲ್ಲಿದ್ದರೆ ಕಾಮೆಂಟ್ ಮಾಡ್ತಾ ಇದ್ದರು. ಈಗ ಅವರು ರಾಹುಲ್ ಗಾಂಧಿ ಬಗ್ಗೆ ಯಾಕೆ ಕಾಮೆಂಟ್ ಮಾಡ್ತಾರೆ' ಎಂದು ತಿಳಿಸಿದ್ದರು.