
ಭೈರಪ್ಪನವರ ಬಾಲ್ಯವು ಬಡತನ, ಬಂಧುಗಳಿಂದ ಸಿಕ್ಕ ನಿರ್ಲಕ್ಷ್ಯ ಮತ್ತು ಸವಾಲುಗಳಿಂದ ಕೂಡಿತ್ತು. ಏಳು ಮಕ್ಕಳ ಕುಟುಂಬದಲ್ಲಿ ಅವರ ತಾಯಿಯ ದುಡಿಮೆಯೇ ಆಧಾರವಾಗಿತ್ತು. ಗಂಡಸಿಗೆ ಸಮನಾಗಿ ದುಡಿದ ತಾಯಿಯ ಬಗ್ಗೆ ಎಸ್‌ಎಲ್ ಭೈರಪ್ಪ ಅವರಿಗೆ ಗೌರವ ಮತ್ತು ಅಭಿಮಾನವಿತ್ತು. ತಾಯಿಯ ಸಾವಿನ ನಂತರವೂ ಅವರ ಈ ಭಾವನೆಗಳು ಭೈರಪ್ಪನವರನ್ನು ಜೀವನದಲ್ಲಿ ಮುನ್ನಡೆಯುವಂತೆ ಪ್ರೇರೇಪಿಸಿದವು. ಅವರ ಬಾಲ್ಯದಲ್ಲಿ ಕಂಡ ಸಾಲು ಸಾಲು ಸಾವುಗಳು ಅವರ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರಿದ್ದವು.
ಸಾಮಾನ್ಯವಾಗಿ, ಒಂದು ಕಲಾಕೃತಿಯನ್ನು ಅರ್ಥಮಾಡಿಕೊಳ್ಳಲು ಕಲಾವಿದನ ಜೀವನಚರಿತ್ರೆಯ ಅಗತ್ಯವಿಲ್ಲ ಎಂದು ಭೈರಪ್ಪನವರು ನಂಬಿದ್ದರು. ಆದರೆ, ಅವರ ಕೃತಿಗಳನ್ನು ಓದಿದ ಇತರರು ಅವರ ಜೀವನದ ಘಟನೆಗಳನ್ನು ತಮಗೆ ಇಷ್ಟ ಬಂದಂತೆ ಊಹಿಸಿಕೊಳ್ಳುವುದನ್ನು ತಡೆಯಲು ಕೆಲವು ಸ್ನೇಹಿತರು ಆತ್ಮಚರಿತ್ರೆ ಬರೆಯಲು ಒತ್ತಾಯಿಸಿದರು. ಆತ್ಮಚರಿತ್ರೆ ಬರೆದ ನಂತರವೂ ಅವರು ಹೊಸ ಕಾದಂಬರಿಗಳನ್ನು ಬರೆಯುತ್ತಲೇ ಹೋದರು. ಇದರಿಂದ, ಲೇಖಕನ ಅನುಭವಗಳು ಆತ್ಮಚರಿತ್ರೆಯಲ್ಲಿ ಹೊರಬಂದರೂ ಸೃಜನಾತ್ಮಕ ಶಕ್ತಿ ಕಡಿಮೆಯಾಗುವುದಿಲ್ಲ ಎನ್ನುವುದು ಸಾಬೀತಾಗಿತ್ತು.
“ಕೋಟಿ ರೂಪಾಯಿ ಕೊಟ್ಟರೆ ಮೇಲೆ ಇನ್ನೊಂದು ಸಾವಿರ ಯಾಕೆ ಕೊಡಬಾರದು ಎಂದು ಇಸಕೊಳ್ಳುವವನ ಮನಸ್ಸು ಬಯಸುತ್ತದೆ. ಆದರೆ ಅನ್ನವನ್ನು ಮಾತ್ರ ಸಾಕು ಎನ್ನಿಸುವುದು ಸುಲಭ. ಎಂಥವನನ್ನು ಕೂಡ ಇನ್ನು ಸಾಧ್ಯವೇ ಇಲ್ಲ ಎಂದು ಕೈ ಅಡ್ಡ ಹಿಡಿದು ತಾನೇ ಎಲೆಗೆ ಅಡ್ಡವಾಗುವಂತೆ ಬಗ್ಗಿಸಬಹುದು. ಸಾಕು ಎನ್ನಿಸುವಂತೆ ಮಾಡಬಹುದಾದ ದಾನ ಅದೊಂದೇ.”
“ಹಣೆಬರಹ ಚೆನ್ನಾಗಿದ್ದರೆ ಬಂಡೆ ಮೇಲಾದರೂ ಬಾಳೆಗಿಡ ಬೆಳೆಯುತ್ತೆ.”
“ತಮ್ಮನ ಹೆಣವನ್ನು ಹೆಗಲ ಮೇಲೆ ಹೊತ್ತು ಶಿವರದಮ್ಮನ ಗುಡಿಯ ಹತ್ತಿರದಿಂದ ಕೆರೆಯ ಏರಿಯ ಮೇಲೆ ಸಾಗಿ, ದೆವ್ವಭೂತಗಳ ಆವಾಸಸ್ಥಾನವಾದ, ಊರಿನ ಸತ್ತವರೆಲ್ಲ ಪ್ರೇತವಾಗಿ ವಾಸಿಸುವ ಲೆಕ್ಕವಿಲ್ಲದಷ್ಟು ಪೊಟರೆಗಳುಳ್ಳ ಹುಳಿಮಾವಿನ ಮರದ ಕೆಳಗಿನಿಂದ ನಡೆದು ಬಲಕ್ಕೆ ತಿರುಗಿ ಸ್ಮಶಾಣಕ್ಕೆ ಹೋಗುವಷ್ಟರಲ್ಲಿ ನನ್ನ ಭುಜ ಮತ್ತು ಎದೆಗೂಡುಗಳು ಸತ್ತುಹೋಗಿದ್ದವು.”
“ತಂದೆಯಂತೆ ಮಗ ಇರುವುದು ವಿರಳವಾಗಿರುವಂತೆ ಮಗನಂತೆ ತಂದೆ ಇರುವುದೂ ವಿರಳ.”
“ಸನ್ಯಾಸಿ ಜೀವನದಲ್ಲಿರುವ ಸ್ವಾತಂತ್ರ್ಯ ಗೃಹಸ್ಥನಿಗಿಲ್ಲ.”
“ಹಿತವಚನದಿಂದ ವ್ಯಸನಗಳನ್ನು ಬಿಡಿಸಬಹುದು, ಸ್ವಭಾವವನ್ನು ಬದಲಿಸಬಹುದೆಂಬುದು ಭ್ರಮೆ.”
“ವ್ಯವಹಾರದಲ್ಲಿ, ಸ್ನೇಹದಲ್ಲಿ, ಸಂಬಂಧದಲ್ಲಿ, ವ್ಯಕ್ತಿಯಲ್ಲಿ ಪ್ರಾಮಾಣಿಕತೆಯಿದ್ದರೆ ಜೀವನ ಎಷ್ಟು ಸುಲಭವಾಗಿರುತ್ತೆ! ಎಷ್ಟು ಸುಂದರವಾಗಿರುತ್ತೆ!”
“ಚಿಕ್ಕ ಹುಡುಗನಲ್ಲಿ, ಅಮ್ಮ ಇದ್ದಾಗ, ಅಮ್ಮ ಸತ್ತಮೇಲೆ ಸಹ, ಮೈಸೂರಿನಲ್ಲಿ ಹೈಸ್ಕೂಲು ಓದುವಾಗಲೂ, ಇಂಟರ್ ಮೀಡಿಯೆಟ್ ಗೆ ಸೇರಿ ನನಗೆ ಫೀಜು ರಿಯಾಯತಿಯನ್ನು ನಿರಾಕರಿಸುವವರೆಗೂ ಜಾತಿ ಭೇದದ ಅಲಗು ನನಗೆ ಗೊತ್ತೇ ಇರಲಿಲ್ಲ. ಎಲ್ಲ ಜಾತಿಯ ಮನೆಗಳಲ್ಲೂ ತಿಂದು ನಾನು ಬೆಳೆದಿದ್ದೇನೆಂಬ ಅರಿವು ನನಗಿತ್ತು.” “ಕೆಲವು ಶಾಸ್ತ್ರ, ಸಂಪ್ರದಾಯಗಳಲ್ಲಿ, ವ್ಯತ್ಯಾಸವಿದ್ದರೂ ಜಾತಿ ಜಾತಿಗಳಲ್ಲಿ ನನಗೆ ವ್ಯತ್ಯಾಸ ಕಾಣುತ್ತಿರಲಿಲ್ಲ. ಅದರಲ್ಲಿಯೂ ಒಕ್ಕಲಿಗರು, ಕುರುಬರು, ಬೆಸ್ತರು, ಮಗ್ಗದವರು ಹೀಗೆ ತಮ್ಮದೆ ಮಠ ಮಾನ್ಯ ಸ್ವಾಮಿಗಳಿರದಿದ್ದ ಜನಗಳಲ್ಲಿ ಎಂಥ ಸರಳ ಅಂತಃಕರಣವಿರುತಿತ್ತು! ಈಗ ಒಂದೊಂದು ಜಾತಿಯೂ ತನ್ನದೇ ಬೇರೆ ಎಂದು ಬೇಲಿ ಹಾಕಿಕೊಂಡಿದೆ.” “ಬ್ರಾಹ್ಮಣೇತರ ಚಳವಳಿಯ ಆರಂಭದಲ್ಲಿ ಇತರರೆಲ್ಲ ಒಂದು ಎಂದು ಹೇಳುತ್ತಿದ್ದರೂ ಅವರೆಲ್ಲ ಒಂದುಗೂಡಲಾಗದ ನೂರಾರು ಒಳಪಂಗಡಗಳೆಂಬ ಅರಿವು ಆಗಲೇ ಹುಟ್ಟಿತ್ತು. ಪ್ರತಿಯೊಂದು ಜಾತಿಯವರೂ ಮೈಸೂರಿನಲ್ಲಿ ತಮ್ಮ ಜಾತಿಗೋಸ್ಕರ ಒಂದು ಹಾಸ್ಟೆಲ್ ತೆರೆಯಲು ಪ್ರಯತ್ನಿಸುತ್ತಿದ್ದರು.”
“ನಾವು ತಿರಸ್ಕರಿಸುವವರನ್ನು ಉದಾರವಾಗಿ ಕಾಣುವವರ ಬಗೆಗೆ ನಮ್ಮಲ್ಲಿ ಪ್ರೀತಿ ಉಳಿಯುವುದು ಅಸಹಜ.”
“ಸುತ್ತ ಏಳು ಹಳ್ಳಿಗಳಲ್ಲಿ ಗಂಡು ಎಂದರೆ ದೇವರಯ್ಯ ಎನ್ನಿಸಿಕೊಳ್ಳುತ್ತಿದ್ದ ಗತ್ತಿನ ವ್ಯಕ್ತಿ ಮನೆಯಲ್ಲಿ ಯಾಕೆ ಸೋಲುತ್ತಾರೆ? ತನ್ನ ಮಗುವಿಗೆ ಎದೆಹಾಲು ಕೊಟ್ಟು ಬದುಕಿಸಿದವಳ ಮಗು ಸತ್ತ ದಿನ ಇದು, ಎಂದು ಗಂಡನೇ ಪದೇ ಪದೇ ಜ್ಞಾಪಿಸಿದರೂ ಮಣಿಯದ ಆ ಮಹಾತಾಯಿಯ ವ್ಯಕ್ತಿತ್ವದ ಒಳ ಗುಣ ಎಂಥದು?”
“ಕಮ್ಯುನಿಸಂನಿಂದ ದೇಶದ ಬಡತನ ಹೋಗುವುದಿಲ್ಲ, ಜನರ ಚಾರಿತ್ರ್ಯ ಬೆಳೆಯುವುದಿಲ್ಲ, ಉದ್ಯಮಶೀಲತೆ ಇಲ್ಲದೆ, ದುಡಿಯುವ ಗುಣ ಬೆಳೆಸಿಕೊಳ್ಳದೆ, ವ್ಯವಹಾರದಲ್ಲಿ ಪ್ರಾಮಾಣಿಕತೆ ಇಲ್ಲದೆ ಯಾರೂ ಅಭಿವೃದ್ಧಿ ಹೊಂದುವುದು ಸಾಧ್ಯವಿಲ್ಲ.”
“ತಕ್ಕ ಪುರಾವೆಗಳಿಲ್ಲದ, ಭಾವನೆಗಳ ಅಂಶಗಳನ್ನು ವಾಸ್ತವವೆಂದು ಪರಿಗಣಿಸಲಾಗದು ಎಂಬುದು ತತ್ವಶಾಸ್ತ್ರದ ಪ್ರಥಮ ಪಾಠ.”
'ಸೂಳೇರು ಸಹ ವ್ಯಾಪಾರ ಕುದುರಿಸೂ ತಂಕ ದೊಡ್ಡ ಗರತಿ ಹಂಗೆ ಅಬ್ಬರ ಮಾಡ್ತಾರಲ್ಲ ಹಂಗೆ'
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ