'ಭಾರತದ ಆತ್ಮವನ್ನ ಆಳವಾಗಿ ಶೋಧಿಸಿದ ದಿಗ್ಗಜ ಎಸ್.ಎಲ್. ಭೈರಪ್ಪ-ಪ್ರಧಾನಿ ಮೋದಿ; ಹಲವು ಗಣ್ಯರ ಸಂತಾಪ!

Published : Sep 24, 2025, 04:04 PM IST
Narendra Modi SL Bhyrappa

ಸಾರಾಂಶ

ಕನ್ನಡದ ಖ್ಯಾತ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ನಿಧನರಾಗಿದ್ದು, ಅವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದೇವೇಗೌಡ, ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 'ಭಾರತದ ಆತ್ಮವನ್ನು ಶೋಧಿಸಿದ ದಿಗ್ಗಜ' ಎಂದು ಮೋದಿ ಬಣ್ಣಿಸಿದ್ದಾರೆ.

ನವದೆಹಲಿ/ಬೆಂಗಳೂರು (ಸೆ.24): ಕನ್ನಡ ಸಾಹಿತ್ಯ ಲೋಕದ ಪ್ರಮುಖ ಕಾದಂಬರಿಕಾರ, ಚಿಂತಕ, ಮತ್ತು ವಿಮರ್ಶಕ ಡಾ.ಎಸ್.ಎಲ್. ಭೈರಪ್ಪ ಅವರು ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಭೈರಪ್ಪ ಅವರನ್ನು 'ಭಾರತದ ಆತ್ಮವನ್ನು ಆಳವಾಗಿ ಶೋಧಿಸಿದ ದಿಗ್ಗಜ ಎಂದು ಬಣ್ಣಿಸಿದ್ದಾರೆ.

ತಮ್ಮ ಅಧಿಕೃತ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಶ್ರೀ ಎಸ್.ಎಲ್. ಭೈರಪ್ಪ ಜಿ ಅವರ ನಿಧನದಿಂದ, ನಮ್ಮ ಆತ್ಮಸಾಕ್ಷಿಯನ್ನು ಕಲಕಿ ಭಾರತದ ಆತ್ಮವನ್ನು ಆಳವಾಗಿ ಅಧ್ಯಯನ ಮಾಡಿದ ಒಬ್ಬ ಮಹಾನ್ ಧೀಮಂತ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ. ನಿರ್ಭೀತ ಮತ್ತು ಕಾಲಾತೀತ ಚಿಂತಕರಾಗಿದ್ದ ಅವರು ತಮ್ಮ ಚಿಂತನಶೀಲ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಆಳವಾಗಿ ಶ್ರೀಮಂತಗೊಳಿಸಿದರು. ಅವರ ಬರಹಗಳು ಪೀಳಿಗೆಗಳನ್ನು ಸಮಾಜವನ್ನು ಪ್ರತಿಬಿಂಬಿಸಲು, ಪ್ರಶ್ನಿಸಲು ಮತ್ತು ಅದರೊಂದಿಗೆ ಹೆಚ್ಚು ಆಳವಾಗಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದವು.

ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಅವರ ಅಚಲವಾದ ಉತ್ಸಾಹವು ಮುಂಬರುವ ವರ್ಷಗಳಲ್ಲಿ ಮನಸ್ಸುಗಳನ್ನು ಪ್ರೇರೇಪಿಸುತ್ತಲೇ ಇರುತ್ತದೆ. ಈ ದುಃಖದ ಸಮಯದಲ್ಲಿ ನನ್ನ ಆಲೋಚನೆಗಳು ಅವರ ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ಇವೆ. ಓಂ ಶಾಂತಿ ಎಂದು ಮೋದಿ ತಮ್ಮ ಸಂದೇಶದಲ್ಲಿ ಬರೆದಿದ್ದಾರೆ.

ಭೈರಪ್ಪ ಅಗಲಿಕೆ ದು:ಖದಲ್ಲಿ ನಾನೂ ಭಾಗಿ:

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು, ಕನ್ನಡ ಸಾಹಿತ್ಯ ಲೋಕದ ಮೇರು ಲೇಖಕ, ಸರಸ್ವತಿ ಸಮ್ಮಾನ್ ಪುರಸ್ಕೃತರಾದ, ಪದ್ಮಭೂಷಣ ಡಾ. ಎಸ್.ಎಲ್. ಭೈರಪ್ಪರವರು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಯಿತು. ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಉತ್ಕೃಷ್ಟ ಕಾದಂಬರಿಗಳ‌ ನೀಡಿ, ಲಕ್ಷಾಂತರ ಓದುಗರ ಮನಗೆದ್ದಿದ್ದ, ಭೈರಪ್ಪನವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ಭರಿಸಲಾಗದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ಸಾಹಿತ್ಯಲೋಕ ಬಡವಾಗಿದೆ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕನ್ನಡ ಸಾರಸ್ವತ ಲೋಕದ ಹಿರಿಯ ಬರಹಗಾರರಾದ ಎಸ್.ಎಲ್.ಭೈರಪ್ಪನವರ ನಿಧನವಾರ್ತೆ ನೋವು ತಂದಿದೆ. ಭೈರಪ್ಪನವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ತಮ್ಮ‌ ಆಪ್ತವೆನಿಸುವ ಬರಹ ಶೈಲಿಯಿಂದಾಗಿ ಅಪಾರ ಓದುಗರನ್ನು ಹೊಂದಿದ್ದ ಭೈರಪ್ಪನವರ ನಿಧನದಿಂದ ಸಾಹಿತ್ಯಲೋಕ ಬಡವಾಗಿದೆ. ಅವರ ಕುಟುಂಬವರ್ಗ ಮತ್ತು ಓದುಗ ಬಳಗಕ್ಕೆ ನನ್ನ ಸಂತಾಪಗಳು ಎಂದು ತಿಳಿಸಿದ್ದಾರೆ.

ಸಾಮಾನ್ಯ ಓದುಗರನ್ನು ಆಕರ್ಷಿಸುವ ಚೇತನ:

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, 'ಕನ್ನಡ ಸಾಹಿತ್ಯಕ್ಕೆ ವಿಶ್ವಮಾನ್ಯತೆ ತಂದು ಕೊಡುವ ಮೂಲಕ ರಾಷ್ಟ್ರ ಹಿತಾಸಕ್ತಿಯ ವಿಚಾರಗಳಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದ ನಾಡಿನ ಮಹಾನ್ ಚೇತನ, ಸರಸ್ವತಿ ಸಮ್ಮಾನ್ ಹಾಗೂ ಪದ್ಮ ಪ್ರಶಸ್ತಿ ಪುರಸ್ಕೃತ ಡಾ.ಎಸ್. ಎಲ್. ಭೈರಪ್ಪ ಅವರ ನಿಧನದ ಸುದ್ದಿ ತಿಳಿದು ಆಘಾತವಾಯಿತು. ತಮ್ಮ ಸಾಹಿತ್ಯದ ಮೂಲಕ ಸಾಮಾನ್ಯ ಓದುಗರನ್ನೂ ಆಕರ್ಷಿಸುವ ಕಾದಂಬರಿಗಳನ್ನು ರಚಿಸಿ ಅಸಂಖ್ಯಾತ ಓದುಗರನ್ನು ಹೊಂದಿದ್ದ, ಹಲವು ಭಾಷೆಗಳಿಗೆ ಅನುವಾದಗೊಂಡು ಜಗತ್ತಿನಾದ್ಯಂತ ಸಾಹಿತ್ಯಾಭಿಮಾನಿಗಳನ್ನು ಹೊಂದಿದ್ದ ಕರುನಾಡಿನ ಹೆಮ್ಮೆ ಎಸ್.ಎಲ್.ಭೈರಪ್ಪನವರು ಈ ನೆಲದ ಸೊಬಗು ಹಾಗೂ ಸಂಸ್ಕೃತಿಯನ್ನು ವಿಶ್ವಕ್ಕೆ ಪಸರಿಸಿ ಕನ್ನಡಿಗರ ಹೆಗ್ಗಳಿಕೆಯಾಗಿದ್ದರು.

ಸಾಮಾಜಿಕ ಬದಲಾವಣೆ ಹಾಗೂ ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುವ ಹಾಗೂ ಅಸ್ತಿತ್ವ ಉಳಿಸುವ ಬದ್ಧತೆಯನ್ನು ತಮ್ಮ ಸಂಶೋಧನಾತ್ಮಕ ಕಾದಂಬರಿಗಳ ಮೂಲಕ ಸಾಕ್ಷೀಕರಿಸಿದ್ದರು. ಸಾಹಿತ್ಯಲೋಕದಲ್ಲಿ ಭೈರಪ್ಪನವರಿಗೆ ಭೈರಪ್ಪನವರೇ ಸಾಟಿಯಾಗಿ ನಿಲ್ಲಬಲ್ಲ ವ್ಯಕ್ತಿತ್ವ ಹಾಗೂ ಪ್ರತಿಭೆ ಅವರದ್ದಾಗಿತ್ತು. ರಾಷ್ಟ್ರೀಯ ಚಿಂತನೆ ಅವರ ಆದ್ಯತೆಯಾಗಿದ್ದರೆ, ಕನ್ನಡ ನಾಡು, ನುಡಿ, ಜನರ ಪರವಾದ ಚಿಂತನೆ ಅವರ ಬದ್ಧತೆಯಾಗಿತ್ತು. ಕನ್ನಡ ಸಾಹಿತ್ಯ ಲೋಕದ ಅತ್ಯಂತ ಸೃಜನಶೀಲ ಕಾದಂಬರಿಕಾರರಾಗಿ ಪದ್ಮಭೂಷಣ ಗೌರವಕ್ಕೂ ಪಾತ್ರರಾಗಿದ್ದ ಮಾನ್ಯ ಎಸ್.ಎಲ್.ಭೈರಪ್ಪ ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ. ಅವರ ಅಗಲಿಕೆಯ ನೋವಿನಲ್ಲಿರುವ ಅವರ ಕುಟುಂಬ ವರ್ಗ ಹಾಗೂ ಕೋಟ್ಯಂತರ ಕನ್ನಡ ಸಾಹಿತ್ಯಾಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಓಂ ಶಾಂತಿಃ ಎಂದು ವಿಜಯೇಂದ್ರ ಅವರು ಬರೆದುಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌