ನಿಗಮದ ಹಣ ವರ್ಗಾವಣೆಯಾಗಿದ್ದ ಸುಮಾರು 193 ಬ್ಯಾಂಕ್ ಖಾತೆಗಳನ್ನು ಪತ್ತೆ ಹಚ್ಚಿ ಪರಿಶೀಲಿಸಲಾಗುತ್ತದೆ. ಅಲ್ಲಿಂದ ಮತ್ತೆ ಇತರೆ ಹತ್ತಾರು ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ಕಂಡು ಬಂದಿದೆ. ಹೀಗಾಗಿ ಈಗ ಮೂರನೇ ಹಂತದಲ್ಲಿ ವರ್ಗಾವಣೆಯಾಗಿದ್ದ ಖಾತೆಗಳಿಂದ ಸುಮಾರು 5 ಕೋಟಿ ರು ಹಣವನ್ನು ಜಪ್ತಿ ಮಾಡಿದ್ದೇವೆ. ಇನ್ನು ಬ್ಯಾಂಕ್ ಖಾತೆಗಳ ಆರ್ಥಿಕ ವಹಿವಾಟಿನ ಬಗ್ಗೆ ಶೋಧನಾ ಕಾರ್ಯ ಮುಂದುವರೆದಿದೆ ಎಂದು ‘ಕನ್ನಡಪ್ರಭ’ಕ್ಕೆ ತಿಳಿಸಿದ ಉನ್ನತ ಮೂಲಗಳು
ಬೆಂಗಳೂರು(ಜು.03): ರಾಜ್ಯ ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ದೋಚಿದ್ದ ಹಣದಲ್ಲಿ ಸೆಕೆಂಡ್ ಹ್ಯಾಂಡ್‌ನಲ್ಲಿ ‘ಹೈದರಾಬಾದ್ ಗ್ಯಾಂಗ್’ನ ಮಾಸ್ಟರ್ ಮೈಂಡ್ ಖರೀದಿಸಿದ್ದ ಐಷಾರಾಮಿ ಕಾರನ್ನು ವಿಶೇಷ ತನಿಖಾ ದಳವು (ಎಸ್‌ಐಟಿ) ಮಾಲಿಕನಿಗೆ ಹಿಂತಿರುಗಿಸಿ 3.32 ಕೋಟಿ ರು.ಗಳನ್ನು ವಶಪಡಿಸಿಕೊಂಡಿರುವ ಕುತೂಹಲಕಾರಿ ಸಂಗತಿ ನಡೆದಿದೆ. ಇದಲ್ಲದೆ ಅಕ್ರಮವಾಗಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿದ್ದ ಮತ್ತೆ 5 ಕೋಟಿ ರು. ಹಣವನ್ನು ಎಸ್‌ಐಟಿ ಮುಟ್ಟುಗೋಲು ಹಾಕಿಕೊಂಡಿದೆ.
ಈ ಅಕ್ರಮ ಹಣ ಹಗರಣದ ಹಿಂದಿರುವ ‘ಹೈದಾರಾಬಾದ್ ಗ್ಯಾಂಗ್’ನ ಮಾಸ್ಟರ್ ಮೈಂಡ್ ಸತ್ಯನಾರಾಯಣ್ ವರ್ಮಾ ಬಳಿ ಲ್ಯಾಂಬೋರ್ಗಿನಿ ಕಾರು ಪತ್ತೆಯಾಗಿತ್ತು. ನಿಗಮದಿಂದ ದೋಚಿದ್ದ ಹಣದಲ್ಲಿ ಹೈದರಾಬಾದ್ ನಗರದ ಸೆಕೆಂಡ್ ಹ್ಯಾಂಡ್ ಕಾರು ಶೋರೂಂನಲ್ಲಿ ಆ ಕಾರನ್ನು ವರ್ಮಾ ಖರೀದಿಸಿದ್ದ. ಆ ಶೋ ರೂಂ ಮಾಲಿಕರನ್ನು ಸಂಪರ್ಕಿಸಿ ಕಾರಿನ ಹಣದ ಕುರಿತು ವಿಚಾರಿಸಲಾಯಿತು. ಆಗ ಆ ಮಾಲಿಕರು ತಮಗೆ ಕಾರು ಮರಳಿಸಿದರೆ ಹಣ ಹಿಂತಿರುಗಿಸುವುದಾಗಿ ಒಪ್ಪಿದರು. ಅಂತೆಯೇ ತಮ್ಮ ಕಾರನ್ನು ಮರಳಿ ಪಡೆದು ವರ್ಮಾ ಪಾವತಿಸಿದ್ದ 3.32 ಕೋಟಿ ಹಣವನ್ನು ಶೋ ರೂಂ ಮಾಲಿಕರು ಹಿಂತಿರುಗಿಸಿದರು. ಈ ಹಣದ ಜಪ್ತಿ ಬಗ್ಗೆ ಕಾನೂನು ಪ್ರಕ್ರಿಯೆ ಮೂಲಕ ದಾಖಲೆಗಳನ್ನು ವರ್ಗಾಯಿಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಾಲ್ಮೀಕಿ ಹಗರಣವನ್ನು ಮುಚ್ಚಿಹಾಕಲು ಸಿದ್ದು, ಡಿಕೆಶಿಯಿಂದ ರಾಜಕೀಯ ನಾಟಕ: ಸಿ.ಟಿ.ರವಿ ಆರೋಪ
ಮತ್ತೆ 5 ಕೋಟಿ ರು ಹಣ ಜಪ್ತಿ:
ನಿಗಮದ ಹಣ ವರ್ಗಾವಣೆಯಾಗಿದ್ದ ಸುಮಾರು 193 ಬ್ಯಾಂಕ್ ಖಾತೆಗಳನ್ನು ಪತ್ತೆ ಹಚ್ಚಿ ಪರಿಶೀಲಿಸಲಾಗುತ್ತದೆ. ಅಲ್ಲಿಂದ ಮತ್ತೆ ಇತರೆ ಹತ್ತಾರು ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ಕಂಡು ಬಂದಿದೆ. ಹೀಗಾಗಿ ಈಗ ಮೂರನೇ ಹಂತದಲ್ಲಿ ವರ್ಗಾವಣೆಯಾಗಿದ್ದ ಖಾತೆಗಳಿಂದ ಸುಮಾರು 5 ಕೋಟಿ ರು ಹಣವನ್ನು ಜಪ್ತಿ ಮಾಡಿದ್ದೇವೆ. ಇನ್ನು ಬ್ಯಾಂಕ್ ಖಾತೆಗಳ ಆರ್ಥಿಕ ವಹಿವಾಟಿನ ಬಗ್ಗೆ ಶೋಧನಾ ಕಾರ್ಯ ಮುಂದುವರೆದಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಮೊದಲು ವಾಲ್ಮೀಕಿ ನಿಗಮದ ಯೂನಿಯನ್ ಬ್ಯಾಂಕ್ ಖಾತೆಯಿಂದ ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕೋ ಆಪರೇಟಿವ್ ಬ್ಯಾಂಕ್‌ನ 18 ನಕಲಿ ಖಾತೆಗಳಿಗೆ 94.36 ಕೋಟಿ ರು ಹಣ ವರ್ಗಾವಣೆಯಾಗಿತ್ತು. ಈ ಹಗರಣ ಬೆಳಕಿಗೆ ಬಂದು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗುವ ಮುನ್ನವೇ 5 ಕೋಟಿ ರು ಹಣ ಮರಳಿ ನಿಗಮದ ಖಾತೆಗೆ ಜಮೆಯಾಗಿತ್ತು. ಇನ್ನುಳಿದ 89.36 ಕೋಟಿ ರು ಹಣವು ಎರಡನೇ ಹಂತದಲ್ಲಿ ಫಸ್ಟ್ ಫೈನಾನ್ಸ್ ಸಹಕಾರಿ ಬ್ಯಾಂಕ್‌ನಿಂದ ಇತರೆ ಖಾತೆಗಳಿಗೆ ವರ್ಗಾವಣೆಯಾಗಿತ್ತು. ಈ ಎರಡನೇ ಹಂತದ ವರ್ಗಾವಣೆ ಜಾಲ ಶೋಧಿಸಿದಾಗ ಬಾರ್‌ಗಳು, ಚಿನ್ನಾಭರಣ ಅಂಗಡಿ, ಹೋಟೆಲ್ ಹಾಗೂ ಕೆಲ ಕಂಪನಿಗಳಿಗೆ ಸೇರಿದ 193 ಬ್ಯಾಂಕ್ ಖಾತೆಗಳು ಪತ್ತೆಯಾಗಿದ್ದವು. ಇದರಲ್ಲಿ ಸ್ಪಲ್ಪ ಹಣವನ್ನು ಹವಾಲಾ ಮೂಲಕ ಆರೋಪಿಗಳು ನಗದು ಮಾಡಿಕೊಂಡಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
Valmiki Development Corporation scam: ಸರ್ಕಾರದ ದುಡ್ಡು ಕದ್ದೋರು ಯಾರು..? ವಾಪಸ್ ಬಂದಿದ್ದು ಎಷ್ಟು..?
ಆ 193 ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ ಅಲ್ಲಿಂದ ಬೇರೆ ಖಾತೆಗಳಿಗೆ ಸಹ ಹಣ ವರ್ಗಾವಣೆಯಾಗಿರುವುದು ಗೊತ್ತಾಯಿತು. ಆ ಬ್ಯಾಂಕ್ ಖಾತೆಗಳಲ್ಲಿ ಕೆಲವು ಪತ್ತೆಯಾಗಿದ್ದು, ಇದರಲ್ಲಿ 5 ಕೋಟಿ ರು ಹಣ ಮುಟ್ಟುಗೋಲು ಹಾಕಿಕೊಂಡಿದ್ದೇವೆ. ಇನ್ನು ಕೆಲ ಬ್ಯಾಂಕ್ ಖಾತೆಗಳ ಹಣಕಾಸಿನ ವಹಿವಾಟಿನ ಕುರಿತು ಬ್ಯಾಂಕ್‌ಗಳಿಂದ ಮಾಹಿತಿ ಕೋರಿದ್ದೇವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ತನಿಖಾಧಿಕಾರಿ ಹೆಸರಿನ ಖಾತೆಗೆ ಹಣ ಜಮೆ
ವಾಲ್ಮೀಕಿ ನಿಗಮದ ಹಗರಣ ಸಂಬಂಧ ಆರೋಪಿಗಳ ಬ್ಯಾಂಕ್ ಖಾತೆಗಳಿಂದ ಜಪ್ತಿ ಮಾಡಿರುವ ಹಣವನ್ನು ವರ್ಗಾವಣೆ ಮಾಡಿಸುವ ಸಲುವಾಗಿ ಈ ಪ್ರಕರಣದ ತನಿಖಾಧಿಕಾರಿ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲು ಎಸ್ಐಟಿ ನಿರ್ಧರಿಸಿದೆ. ಈ ಸಂಬಂಧ ರಾಜ್ಯ ಸರ್ಕಾರದ ಅನುಮತಿ ಕೋರಿ ಎಸ್‌ಐಟಿ ಪತ್ರ ಬರೆದಿದೆ. ಸರ್ಕಾರದ ಸಮ್ಮಿತಿ ಸಿಕ್ಕಿದ ಕೂಡಲೇ ತನಿಖಾಧಿಕಾರಿ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಖಾತೆ ತೆರೆಯಲಾಗುತ್ತದೆ. ಆನಂತರ ಆ ಖಾತೆಗೆ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಇದುವರೆಗೆ ಆರೋಪಿಗಳಿಂದ ಮುಟ್ಟುಗೋಲು ಹಾಕಿಕೊಂಡಿರುವ ಹಣವನ್ನು ಜಮೆ ಮಾಡಲಾಗುತ್ತೆ. ಕೊನೆಗೆ ತನಿಖೆ ಮುಗಿದ ಬಳಿಕ ನಿಗಮದ ಖಜಾನೆಗೆ ಆ ಹಣವು ವಾಪಸ್ ಸೇರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.