Latest Videos

ಚಾಮರಾಜನಗರ ಆಕ್ಸಿಜನ್ ದುರಂತ; 3 ವರ್ಷವಾದರೂ ನಿಲ್ಲದ ಸಂತ್ರಸ್ತರ ಗೋಳು!

By Suvarna NewsFirst Published Jul 2, 2024, 8:47 PM IST
Highlights

ಚಾಮರಾಜನಗರ ಆಕ್ಸಿಜನ್ ದುರಂತವಾಗಿ 3 ವರ್ಷವಾದರೂ ನಿಲ್ಲದ ಸಂತ್ರಸ್ತರ ಗೋಳು. ಸಂತ್ರಸ್ತರಿಗೆ ವೇತನವೂ ಇಲ್ಲ, ಉದ್ಯೋಗ ಭದ್ರತೆಯೂ ಇಲ್ಲದೆ ಕಣ್ಣೀರು ಹಾಕುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ವೇತನ ಇಲ್ಲದೆ ಪರದಾಡುತ್ತಿರುವ ಸಂತ್ರಸ್ತರು.

- ವರದಿ - ಪುಟ್ಟರಾಜು. ಆರ್. ಸಿ.

ಚಾಮರಾಜನಗರ (ಜು.2) -   ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತ ನಡೆದು ಮೂರು ವರ್ಷಗಳಾಯ್ತು. ಇನ್ನೂ ಕೂಡ  ಸಂತ್ರಸ್ತರ  ಗೋಳು  ಕಡಿಮೆಯಾಗಿಲ್ಲ. ಸಂತ್ರಸ್ತರಿಗೆ ನ್ಯಾಯ ಕೂಡ ಸಿಕ್ಕಿಲ್ಲ. ಇನ್ನೂ ಸರ್ಕಾರ ಹಾಗೂ ಜಿಲ್ಲಾಡಳಿತ ಗುತ್ತಿಗೆ ಆಧಾರದ ಮೇಲೆ ಕೆಲಸವೇನೊ ಕೊಟ್ಟಿದೆ. ಆದ್ರೆ ಹೊರಗುತ್ತಿಗೆ ಆದೇಶ, ಹಾಜರಾತಿ, ವೇತನ ಮಂಜೂರು ಮಾಡಿಲ್ಲ. ಘಟನೆಗೆ ಕಾರಣರಾದವರ ವಿರುದ್ಧ ಕ್ರಮವೂ ಆಗಿಲ್ಲವೆಂದು ಸರ್ಕಾರ ಹಾಗೂ ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

ಚಾಮರಾಜನರದ ಕೋವಿಡ್ ಆಸ್ಪತ್ರೆ(Chamarajanagar covid oxygen)ಯಲ್ಲಿ ನಡೆದ ಆಕ್ಸಿಜನ್ ದುರಂತ ಇಡೀ ದೇಶದ ಗಮನ ಸೆಳೆದಿತ್ತು. ಒಂದೇ ದಿನ ರಾತ್ರಿ ಆಕ್ಸಿಜನ್ ಕೊರತೆ(Oxygen shorage)ಯಿಂದ 36 ಮಂದಿ ಸಾವನ್ನಪ್ಪಿದ್ದರು. ಆ ವೇಳೆ ಕಾಂಗ್ರೆಸ್ ಪಕ್ಷದ ನಾಯಕರು ಬಿಜೆಪಿ ಸರ್ಕಾರ(BJP government)ದ ವಿರುದ್ಧ ಹರಿಹಾಯ್ದಿದ್ದರು. ಅಲ್ಲದೇ ಭಾರತ್ ಜೋಡೋ(Bharat jodo yathra) ವೇಳೆ ಸರ್ಕಾರಿ ನೌಕರಿಯ ಭರವಸೆ ಕೊಟ್ಟಿದ್ದರು.

ಇದೀಗಾ ಕಾಂಗ್ರೆಸ್ ಸರ್ಕಾರ(Congress government) ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ. ಆದ್ರು ಕೂಡ ಸಂತ್ರಸ್ತರ ಕುಟುಂಬಸ್ಥರಿಗೆ ಸರ್ಕಾರಿ ನೌಕರಿ ಕೊಡುವ ಭರವಸೆ ಮಾತ್ರ ಮರೀಚಿಕೆಯಾಗಿದೆ. ಜಿಲ್ಲಾಡಳಿತ ಹಾಗೂ ಸರ್ಕಾರ ಸಂತ್ರಸ್ತರ ಒತ್ತಡಕ್ಕೆ ಮಣಿದು ಗುತ್ತಿಗೆ ಆಧಾರದ ಮೇಲೆ ಕೆಲಸ ಕೊಡುವ ಕೆಲಸಕ್ಕೆ ಮುಂದಾಗಿತ್ತು. ಈ ವೇಳೆ 10 ಕುಟುಂಬದ ಸದಸ್ಯರು ಕೆಲಸದ ಅನಿವಾರ್ಯತೆ ಹಿನ್ನಲೆಯಲ್ಲಿ ಗುತ್ತಿಗೆ ಆಧಾರದ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನುಳಿದ ಸಂತ್ರಸ್ತ ಕುಟುಂಬಸ್ಥರು ಸರ್ಕಾರಿ ಕೆಲಸಕ್ಕೆ ಬಿಗಿ ಪಟ್ಟು ಹಿಡಿದಿದ್ದಾರೆ. ತರಾತುರಿಯಲ್ಲಿ ಗುತ್ತಿಗೆ ಕೆಲಸಕ್ಕೆ ಬಂದವರಿಗೆ ಒಂದು ತಿಂಗಳ ವೇತನವಷ್ಟೇ ಬಂದಿದೆ. ಈಗಾಗ್ಲೇ ನಾಲ್ಕು ತಿಂಗಳ ವೇತನ ಬಾಕಿ ಉಳಿಸಿಕೊಂಡಿದೆ.ವೇತನ ಕೇಳಿದ್ರೆ ನಾಳೆ, ನಾಳಿದ್ದು ಅಂತಾ ಅಧಿಕಾರಿಗಳು ಸಬೂಬು ನೀಡ್ತಿದ್ದಾರೆ. ಗುತ್ತಿಗೆ ನೌಕರಿಗೆ ಸಂಬಂಧಿಸಿದಂತೆ ಆದೇಶ ಪತ್ರ, ಹಾಜರಾತಿ, ವೇತನ ಕೂಡ ಕೊಡ್ತಿಲ್ಲವೆಂದು ಸಂತ್ರಸ್ತರು ಅಳಲು ತೋಡಿಕೊಳ್ಳುತ್ತಿದ್ದಾರೆ..

ಇನ್ನೂ ಮೂರು ವರ್ಷಗಳಿಂದ ನ್ಯಾಯಕ್ಕಾಗಿ ಸಂತ್ರಸ್ತ ಕುಟುಂಬಸ್ಥರು ಹೋರಾಟ ಮಾಡ್ತಿದ್ದಾರೆ. ಆಕ್ಸಿಜನ್ ದುರಂತದ ತನಿಖೆಗಾಗಿ ಸರ್ಕಾರ ಆಯೋಗ ರಚಿಸಿತ್ತು. ಆದ್ರೆ ತನಿಖೆಯ ವರದಿ ಇಲ್ಲಿಯವರೆಗೂ ಕೂಡ ಬಹಿರಂಗವಾಗಿಲ್ಲ. ಅಲ್ಲದೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಆಕ್ಸಿಜನ್ ದುರಂತದ ಮರು ತನಿಖೆ ನಡೆಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರಂಭ ಶೂರತ್ವ ತೋರಿದ್ದರು. ಆದ್ರೆ ಇಲ್ಲಿಯವರೆಗೂ ಕೂಡ ಮರು ತನಿಖೆ ಮಾತ್ರ ಆರಂಭವಾಗಿಲ್ಲ. ಆಕ್ಸಿಜನ್ ದುರಂತಕ್ಕೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕ್ರಮ ಆಗಿಲ್ಲ. ಸರ್ಕಾರ ತಪ್ಪಿತಸ್ಥರನ್ನು ಬಚಾವ್ ಮಾಡಲೂ ಮುಂದಾಗಿದ್ಯಾ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಒಟ್ನಲ್ಲಿ  ಅಂತೂ ಹೊರಗುತ್ತಿಗೆ ನೌಕರಿಯಾದರೂ ಸಿಕ್ಕಿದೆ ಅಂದುಕೊಂಡಿದ್ದ ಕುಟುಂಬಸ್ಥರಿಗೆ ವೇತನ ಬಾಕಿ, ಹಾಜರಾತಿ ಹಾಗೂ ಆದೇಶ ಪತ್ರ ಕೊಡದ ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ರೆ. ಸರ್ಕಾರದಮ ಮರು ತನಿಖೆ ನಡೆಸಿ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡೋದು ಯಾವಾಗ ಅನ್ನೋದ್ನ ಕಾದುನೋಡಬೇಕಾಗಿದೆ..

click me!