ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ: ನಾಳೆ ವಿಜಯಪುರ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

By Govindaraj S  |  First Published Jan 2, 2023, 10:49 PM IST

ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ ಹಿನ್ನೆಲೆಯಲ್ಲಿ ನಾಳೆ ವಿಜಯಪುರ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸರ್ಕಾರಿ ಗೌರವಗಳೊಂದಿಗೆ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.


ವಿಜಯಪುರ (ಜ.02): ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ ಹಿನ್ನೆಲೆಯಲ್ಲಿ ನಾಳೆ ವಿಜಯಪುರ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸರ್ಕಾರಿ ಗೌರವಗಳೊಂದಿಗೆ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

ಸಿದ್ದೇಶ್ವರ ಸ್ವಾಮೀಜಿ ಅವರ ನಿಧನಕ್ಕೆ ಸಚಿವ ನಿರಾಣಿ ಸಂತಾಪ: ತಮ್ಮ ಸರಳ ಜೀವನ ಹಾಗೂ ಪ್ರವಚನದ ಮೂಲಕ ನಾಡದಾಡುವ ನಿಜ ದೇವರು ಎಂದೇ ಭಕ್ತರಿಂದ ಕರೆಯುತ್ತಿದ್ದ ವಿಜಯಪುರ ಜ್ಞಾನ ಯೋಗಾನಂದಾ ಸಿದ್ದೇಶ್ವರ ಸ್ವಾಮೀಜಿ ಅವರ ನಿಧನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ಆರ್ ನಿರಾಣಿ ಅವರು ತೀವ್ರ ಕಂಬನಿ ಮಿಡಿದಿದ್ದಾರೆ. ವಿಜಯಪುರದ ಸಿದ್ದೇಶ್ವರ ಸ್ವಾಮಿಗಳು ನಡೆದಾಡುವ ವಿಶ್ವಕೋಶ. ಅವರ ಜ್ಞಾನ ಬೋಧನೆಯ ಲಾಭ ಪಡೆದು ಸನ್ಮಾರ್ಗದಲ್ಲಿ ನಡೆಯಬೇಕು. ಇವರ ಜ್ಞಾನ ಖ್ಯಾತಿ ದೇಶ-ವಿದೇಶಗಳಲ್ಲಿ ಪಸರಿಸಿದೆ. 

Latest Videos

undefined

ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ವಿಧಿವಶ, ಶೋಕಸಾಗರದಲ್ಲಿ ಭಕ್ತವೃಂದ!

ಇಂತಹ ಮಹಾನ್‌ ಜ್ಞಾನಿಯ ಜ್ಞಾನ ಸುಧೆಯ ಬೆಳಕಿನಲ್ಲಿ ಎಲ್ಲರೂ ಮುನ್ನಡೆಯುವ ಅಗತ್ಯವಿದ್ದು, ಇದುವೇ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದ್ದಾರೆ. ಸಿದ್ದೇಶ್ವರ ಸ್ವಾಮೀಜಿ ಅವರಂತಹ ಸರಳ ವ್ಯಕ್ತಿಯನ್ನು ಎಲ್ಲಿಯೂ ನೋಡಿಲ್ಲ, ಜ್ಞಾನದಲ್ಲಿ ಬೃಹತ್‌ ಪರ್ವತದಂತಿದ್ದರು. ಪ್ರತಿಯೊಬ್ಬರೂ ಸರಿದಾರಿಯಲ್ಲಿ ಜೀವನ ಸಾಗಿಸಲು ಸಿದ್ದೇಶ್ವರ ಸ್ವಾಮಿಗಳ ಪ್ರವಚನ ಕೇಳಲೇಬೇಕು ಎಂದು ಮನವಿ ಮಾಡಿದ್ದಾರೆ. ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಅನುಭಾವಿಗಳೂ ಮಧುರ ಸ್ವಭಾವದವರೂ ಆಗಿದ್ದ ಅವರು, ಕನ್ನಡ, ಸಂಸ್ಕೃತ, ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ನಿಷ್ಣಾತರು. 

ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾಪುರುಷರು  ಎಂದು ಬಣ್ಣಿಸಿದ್ದಾರೆ. ತಮ್ಮ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾಡಿದ ಪ್ರವಚನಗಳನ್ನು ಒಂದುಗೂಡಿಸಿ ಸಿದ್ದಾಂತ ಶಿಖಾಮಣಿ ಎಂಬ ಪುಸ್ತಕ ಬರೆದು ಗುರುಗಳ ಹೆಸರಿನಲ್ಲೇ ಪ್ರಕಟಿಸಿದ್ದರು. ಆಗ ಅವರಿಗೆ ಕೇವಲ 19 ವರ್ಷ ಮಾತ್ರ ಆಗಿತ್ತೆಂಬುದು ಗಮನಾರ್ಹ ಇದು ಅವರ ಪ್ರತಿಭೆಗೆ ಹಿಡಿದ ಕೈ ಗನ್ನಡಿ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅವರ ನಿಸ್ವಾರ್ಥ ಸೇವೆಯನ್ನು ಕಂಡು ಕೇಂದ್ರ ಸರ್ಕಾರ ಎರಡನೇ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾದ ಪದ್ಮಶ್ರೀ, ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಹೀಗೆ ತಮಗೆ ಸಂದ ಎಷ್ಟೋ ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಅವರು ವಿನಮೃವಾಗಿಯೇ ನಿರಾಕರಿಸಿದ್ದ ಅಪರೂಪದ ಕಾಯಕಯೋಗಿ ಎಂದು ಪ್ರಶಂಸಿದ್ದಾರೆ. 

ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಗಂಭೀರ!

ಆಧ್ಯಾತ್ಮ, ಆದರ್ಶ ಮತ್ತು ನೈತಿಕತೆ ಬಗ್ಗೆ ಕೇವಲ ಬೋಧನೆ ಮಾಡುವುದಷ್ಟೇ ಅಲ್ಲ. ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ನುಡಿದಂತೆ ನಡೆಯುವ ಮತ್ತು ನಡೆದಂತೆಯೇ ನುಡಿಯುವ ವ್ಯಕ್ತಿತ್ವ ಅವರದ್ದಾಗಿತ್ತು. ಇಂತಹ ಶ್ರೇಷ್ಠ ಸಂತನನ್ನು ಮತ್ತೆ ಕಾಣಲು ಸಾದ್ಯವಿಲ್ಲ ಎಂದು ನಿರಾಣಿ ಅವರು ಹೇಳಿದ್ದಾರೆ. ಮಹಾ ಸಂತನೊಬ್ಬನನ್ನು ಕಳೆದುಕೊಂಡು ದುಃಖದಲ್ಲಿರುವ  ಅವರ ಅಸಂಖ್ಯಾತ ಭಕ್ತರಿಗೆ ಶ್ರೀಗಳ ಅಗಲಿಕೆಯ ದುಃಖವನ್ನು ಭರಿಸುವಂತಹ ಶಕ್ತಿಯನ್ನು ಆ ದೇವರು ಕರುಣಿಸಲಿ ಎಂದು ಬೇಡಿಕೊಳ್ಳುವುದಾಗಿ  ಸಚಿವ ನಿರಾಣಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

click me!