ಎರಡನೇ ಸ್ವಾಮಿ ವಿವೇಕಾನಂದ ಎಂದೇ ಗುರುತಿಸಿಕೊಂಡಿರುವ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳು ಇಹಲೋಕ ತ್ಯಜಿಸಿದ್ದಾರೆ. ಈ ಸುದ್ದಿ ಲಕ್ಷಾಂತರ ಭಕ್ತರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ವಿಜಯಪುರ(ಜ.02) ಉತ್ತರ ಕರ್ನಾಟಕದ ನಡೆದಾಡುವ ದೇವರೆಂದೇ ಗುರುತಿಸಿಕೊಂಡಿರುವ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳು(81) ವಿಧಿವಶರಾಗಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಭಕ್ತರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಮಠದತ್ತ ಭಕ್ತರು ಧಾವಿಸುತ್ತಿದ್ದಾರೆ. ಹೀಗಾಗಿ ಪೊಲೀಸರು ಮಠದ ಸುತ್ತ ಮುತ್ತ ಹೆಚ್ಚಿನ ಭದ್ರತೆ ಒದಗಿಸಿದ್ದಾರೆ. ರಾಜ್ಯದ ಉದ್ದಗಲಕ್ಕೂ ಕಾನೂನು ಸುವ್ಯವಸ್ಥೆಯಲ್ಲಿ ಲೋಪವಾಗದಂತೆ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಶ್ರೀಗಳಿಗೆ ಕಳೆದ 5 ದಿನಗಳಿಂದ ಮಠದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಶ್ರೀಗಳ ಚೇತರಿಕೆಗೆ ಲಕ್ಷಾಂತರ ಭಕ್ತರು ಪ್ರಾರ್ಥನೆ, ಪೂಜೆ ನಡೆಸಿದ್ದರು. ಆದರೆ ಇಂದು ಸಂಜೆ 6 ಗಂಟೆಗೆ ಸಿದ್ದೇಶ್ವರ ಸ್ವಾಮೀಜಿಗಳು ಇಹಲೋಕ ತ್ಯಜಿಸಿದ್ದಾರೆ. ಕಳೆದೆರಡು ದಿನ ಚೇತರಿಕೆ ಕಂಡಿದ್ದ ಶ್ರೀಗಳ ಆರೋಗ್ಯ ಇಂದು ತೀವ್ರ ಏರುಪೇರಾಗಿತ್ತು.
ಇಂದು ಸಂಜೆ 6 ಗಂಟೆಗೆ 81 ವರ್ಷದ ಸಿದ್ದೇಶ್ವರ ಶ್ರೀಗಳ ವಿಧಿವಶರಾಗಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ್ ಹೇಳಿದರು. ವಯೋಸಹಜ ಖಾಯಿಲೆಯಿಂದ ಶ್ರೀಗಳು ನಿಧನರಾಗಿದ್ದಾರೆ. ನಾಳೆ ಸಂಜೆ 5 ಗಂಟೆಗೆ ಅಂತ್ಯಕ್ರೀಯೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇನ್ನು ಸಂಜೆ 4 ಗಂಟೆಗೆ ಸರ್ಕಾರದಿಂದ ಗಾಡ್ ಆಫ್ ಹಾನರ್ ನೀಡಲಾಗುತ್ತದೆ. ಸಂಜೆ 5 ಗಂಟೆಗೆ ಸೈನಿಕ್ ಸ್ಕೂಲ್‌ನಿಂದ ಆಶ್ರಮಕ್ಕೆ ಪಾರ್ಥೀವ ಶರೀರ ವಾಪಸ್ ತರಲಾಗುತ್ತದೆ.
ಸಿದ್ದೇಶ್ವರ ಶ್ರೀಗಳ ಇಚ್ಚೆಯಂತೆ ಅಗ್ನಿಸ್ಪರ್ಶ ಮಾಡಿ ಅಂತ್ಯಕ್ರೀಯ ಮಾಡಲಾಗುತ್ತದೆ. ಇಷ್ಟೇ ಅಲ್ಲ ತಮ್ಮ ಯಾವುದೇ ಸಮಾಧಿಯನ್ನು ನಿರ್ಮಸಬಾರದು ಎಂದು ಶ್ರೀಗಳು ಆದೇಶ ನೀಡಿದ್ದರು. ತಮ್ಮ ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸಲು ಸೂಚಿಸಿದ್ದಾರೆ. ಇಷ್ಟೇ ಅಲ್ಲ ತಮ್ಮ ಯಾವುದೇ ಗುಡಿ, ಸ್ಮಾರಕ ನಿರ್ಮಿಸಬಾರದು ಎಂದು 2014ರಲ್ಲಿ ಸೂಚಿಸಿದ್ದರು. ಇದೀಗ ಶ್ರೀಗಳ ಆದೇಶದಂತೆ ಅಂತಿಮ ವಿಧಿವಿಧಾನ ನೆಯಲಿದೆ.
ನಾಳೆ 5 ರಿಂದ 10 ಲಕ್ಷ ಭಕ್ತರು ಅಂತಿಮ ದರ್ಶನಕ್ಕೆ ಬರವು ನಿರೀಕ್ಷೆ ಇದೆ. ಸೈನಿಕ್ ಸ್ಕೂಲ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ನಾಳೆ ಬೆಳ್ಗಗೆ 6 ಗಂಟೆಯಿಂದ 3 ಗಂಟೆ ವರೆಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕಳೆದ ಒಂದು ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಭಾನುವಾರ ಕೊಂಚ ಚೇತರಿಕೆ ಕಂಡಿದ್ದ ಶ್ರೀಗಳ ಆರೋಗ್ಯದಲ್ಲಿ ಸೋಮವಾರ ತೀವ್ರ ಹದಗೆಟ್ಟಿತ್ತು. ಆಹಾರ ಸೇವಿಸದ ಕಾರಣ ಸ್ಯಾಚುರೆಷನ್ ಪ್ರಮಾಣ ಕ್ಷೀಣಿಸುತ್ತಾ ಸಾಗಿತ್ತು. ಇತ್ತ ಉಸಿರಾಟದ ಸಮಸ್ಯೆಯೂ ತೀವ್ರಗೊಂಡಿತ್ತು. ಬೆಳಗ್ಗೆ ಗಂಜಿ ಕುಡಿದಿದ್ದ ಶ್ರೀಗಳು ಬಳಿಕ ಯಾವುದೇ ಆಹಾರ ಸೇವಿಸಿಲ್ಲ. ಇಷ್ಟೇ ಅಲ್ಲ ಆಸ್ಪತ್ರೆಗೆ ದಾಖಲಾಗಲು ಶ್ರೀಗಳು ನಿರಾಕರಿಸಿದ್ದರು. ಹೀಗಾಗಿ ಶ್ರೀಗಳ ಮಾತಿನಂತೆ ಮಠದಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು.