ಕಳೆದೊಂದು ವಾರದಿಂದ ಸಿದ್ದೇಶ್ವರ ಶ್ರೀಗಳು ತೀವ್ರ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ತೆರಳಲು ನಿರಾಕರಿಸಿದ್ದರು. ಹೀಗಾಗಿ ಜ್ಞಾನಯೋಗಾಶ್ರಮದಲ್ಲೇ ಬಿಎಲ್‌ಡಿಇ ವೈದ್ಯರು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಆರಂಭದಲ್ಲಿ ಶ್ರೀಗಳು ವೈದ್ಯರ ಚಿಕಿತ್ಸೆಗೆ ಸ್ಪಂದಿಸಿದ್ದರು. ಆದರೆ, ಸೋಮವಾರ ಶ್ರೀಗಳು ಯಾವುದೇ ಆಹಾರ ಸೇವನೆ ಮಾಡಿರಲಿಲ್ಲ. ಮಧ್ಯಾಹ್ನವಾಗುತ್ತಿದ್ದಂತೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಯಿತು. ನಾಡಿ ಮಿಡಿತ, ರಕ್ತದೊತ್ತಡ ಕ್ಷೀಣಿಸುತ್ತಲೇ ಹೋಯಿತು. ಕೊನೆಗೆ ತೀವ್ರ ಅಸ್ವಸ್ಥಗೊಂಡ ಅವರು ಸಂಜೆ 6.05ಕ್ಕೆ ಕೊನೆಯುಸಿರೆಳೆದರು.
ವಿಜಯಪುರ (ಜ.3) : ಕಳೆದೊಂದು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡನಾಡು ಕಂಡು ಅಪರೂಪದ ಸಂತ, ಭಕ್ತರ ಪಾಲಿನ ‘ನಡೆದಾಡುವ ದೇವರು’ ಆಧ್ಯಾತ್ಮಿಕ ಚಿಂತಕ, ಖ್ಯಾತ ಪ್ರವಚನಕಾರ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ (82) ಸೋಮವಾರ ಸಂಜೆ 6.05ಕ್ಕೆ ಅಸ್ತಂಗತರಾದರು. ಸಿದ್ದೇಶ್ವರ ಶ್ರೀಗಳ ಆಶಯದಂತೆ ಜ್ಞಾನಯೋಗಾಶ್ರಮದ ಆವರಣದಲ್ಲೇ ಶ್ರೀಗಳ ಅಂತ್ಯಕ್ರಿಯೆ ನೆರವೇರಿಸಲು ನಿರ್ಧರಿಸಲಾಗಿದೆ.
ಸಿದ್ದೇಶ್ವರ ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿರುವ ಸುದ್ದಿ ಕೇಳಿ ಎರಡು ದಿನಗಳಿಂದಲೂ ಆಶ್ರಮದ ಮುಂದೆ ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಶ್ರೀಗಳ ಆರೋಗ್ಯಕ್ಕಾಗಿ ತಮ್ಮದೇ ಆದ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಇದೀಗ ಶ್ರೀಗಳ ನಿಧನದ ಸುದ್ದಿ ಕೇಳಿ ಲಕ್ಷಾಂತರ ಭಕ್ತ ಸಾಗರ ಶೋಕ ಸಾಗರದಲ್ಲಿ ಮುಳುಗಿದೆ.
undefined
Sri siddeshwar swamiji: ಆಧ್ಯಾತ್ಮದ ಕೊಂಡಿ ಕಳಚಿಕೊಂಡ ನಾಡು; ಕಂಬನಿ ಮೀಡಿದ ಭಕ್ತರು
ಆಸ್ಪತ್ರೆಗೆ ತೆರಳಲು ನಿರಾಕರಿಸಿದ್ದರು:
ಕಳೆದೊಂದು ವಾರದಿಂದ ಸಿದ್ದೇಶ್ವರ ಶ್ರೀಗಳು ತೀವ್ರ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ತೆರಳಲು ನಿರಾಕರಿಸಿದ್ದರು. ಹೀಗಾಗಿ ಜ್ಞಾನಯೋಗಾಶ್ರಮದಲ್ಲೇ ಬಿಎಲ್‌ಡಿಇ ವೈದ್ಯರು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಆರಂಭದಲ್ಲಿ ಶ್ರೀಗಳು ವೈದ್ಯರ ಚಿಕಿತ್ಸೆಗೆ ಸ್ಪಂದಿಸಿದ್ದರು. ಆದರೆ, ಸೋಮವಾರ ಶ್ರೀಗಳು ಯಾವುದೇ ಆಹಾರ ಸೇವನೆ ಮಾಡಿರಲಿಲ್ಲ. ಮಧ್ಯಾಹ್ನವಾಗುತ್ತಿದ್ದಂತೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಯಿತು. ನಾಡಿ ಮಿಡಿತ, ರಕ್ತದೊತ್ತಡ ಕ್ಷೀಣಿಸುತ್ತಲೇ ಹೋಯಿತು. ಕೊನೆಗೆ ತೀವ್ರ ಅಸ್ವಸ್ಥಗೊಂಡ ಅವರು ಸಂಜೆ 6.05ಕ್ಕೆ ಕೊನೆಯುಸಿರೆಳೆದರು.
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಸಂಸದ ರಮೇಶ್ ಜಿಗಜಿಣಗಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು, ಆಶ್ರಮದ ಅಧ್ಯಕ್ಷ ಗುರು ಬಸವಲಿಂಗ ಶ್ರೀಗಳು ಕಿರಿಯ ಶ್ರೀಗಳ ಸಮ್ಮುಖದಲ್ಲಿ ಶ್ರೀಗಳ ನಿಧನವನ್ನು ರಾತ್ರಿ 10.10ರ ಸುಮಾರಿಗೆ ಅಧಿಕೃತವಾಗಿ ಪ್ರಕಟಿಸಿದರು.
ಅಂತಿಮ ದರ್ಶನ:
ಸದ್ಯಕ್ಕೆ ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವ 4.30ರವರೆಗೆ ಜ್ಞಾನಯೋಗಾಶ್ರದ ಮುಂಭಾಗದಲ್ಲಿ ಶ್ರೀಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಶ್ರೀಗಳ ಪಾರ್ಥಿವ ಶರೀರವನ್ನು ಸಿದ್ದೇಶ್ವರ ದೇವಸ್ಥಾನ, ಗಾಂಧಿ ಚೌಕ, ಅಥಣಿ ರಸ್ತೆ ಮಾರ್ಗವಾಗಿ ಸೈನಿಕ ಶಾಲೆಗೆ ತಗೆದುಕೊಂಡು ಹೋಗಿ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು. ಸಂಜೆ 4 ಗಂಟೆಗೆ ಸರ್ಕಾರದಿಂದ ಗೌರವ ವಂದನೆ ಸಲ್ಲಿಸಲಾಗುವುದು. ಸಂಜೆ 4 ಗಂಟೆಗೆ ಮತ್ತೆ ಪಾರ್ಥಿವ ಶರೀರವನ್ನು ಜ್ಞಾನಯೋಗಾಶ್ರಮಕ್ಕೆ ಕರೆತರಲಾಗುವುದು. ಸಂಜೆ 5 ಗಂಟೆಗೆ ಆಶ್ರಮದ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ದಾನಮ್ಮನವರ ಮಾಹಿತಿ ನೀಡಿದ್ದಾರೆ.
Sri Siddeshwar swamiji: ಪ್ರವಚನದಿಂದ ಸನ್ಮಾರ್ಗ ತೋರಿದ ಮಹಾ ಸಂತ
2014ರಲ್ಲಿಯೇ ಕೊನೆಯಾಸೆ ಪತ್ರ:
ತಮ್ಮ ಪ್ರವಚನಗಳ ಮೂಲಕ ದೇಶ-ವಿದೇಶಗಳಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿದ್ದ ಸಿದ್ದೇಶ್ವರ ಶ್ರೀಗಳು ತಮ್ಮ ಶರೀರವನ್ನು ಭೂಮಿಯಲ್ಲಿ ಹೂಳದೆ ಅಗ್ನಿಸ್ಪರ್ಶ ಮಾಡಬೇಕು, ಶ್ರಾದ್ಧಿಕ ವಿಧಿ ವಿಧಾನ ಅನಗತ್ಯ, ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸಬೇಕು, ನನ್ನ ಹೆಸರಿನಲ್ಲಿ ಯಾವುದೇ ಸ್ಮಾರಕ ನಿರ್ಮಿಸಬಾರದು ಎಂದು 2014ರಲ್ಲಿಯೇ ಕೊನೆಯಾಸೆಯ ಪತ್ರ ಬರೆದಿಟ್ಟಿದ್ದಾರೆ.