Sri Siddeshwar swamiji: ಪ್ರವಚನದಿಂದ ಸನ್ಮಾರ್ಗ ತೋರಿದ ಮಹಾ ಸಂತ

Published : Jan 03, 2023, 06:34 AM IST
 Sri Siddeshwar swamiji: ಪ್ರವಚನದಿಂದ ಸನ್ಮಾರ್ಗ ತೋರಿದ ಮಹಾ ಸಂತ

ಸಾರಾಂಶ

ಈ ಭಾಗದ ‘ನಡೆದಾಡುವ ದೇವರು’ ಎಂದೇ ಖ್ಯಾತಿ ಪಡೆದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಜನರಿಗೆ ಪ್ರವಚನದ ಮೂಲಕ ಬದುಕಿಗೆ ಸನ್ಮಾರ್ಗದ ಬೆಳಕು ತೋರಿ ಜನ ಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.

ವಿಜಯಪುರ (ಜ.3) : ಈ ಭಾಗದ ‘ನಡೆದಾಡುವ ದೇವರು’ ಎಂದೇ ಖ್ಯಾತಿ ಪಡೆದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಜನರಿಗೆ ಪ್ರವಚನದ ಮೂಲಕ ಬದುಕಿಗೆ ಸನ್ಮಾರ್ಗದ ಬೆಳಕು ತೋರಿ ಜನ ಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.

ಸಿದ್ದೇಶ್ವರ ಶ್ರೀಗಳು(Siddeshwar shri) ತಮ್ಮ ಪ್ರವಚನದಲ್ಲಿ ಸುಂದರ, ಸರಳ ನುಡಿಗಳನ್ನು ಹೇಳುವ ಮೂಲಕ ಜನಸಾಮಾನ್ಯರ ಹೃದಯ ತಟ್ಟುವಲ್ಲಿ ಯಶಸ್ವಿಯಾದ ಸಂತ. ಕನ್ನಡ, ಆಂಗ್ಲ, ಮರಾಠಿಯಲ್ಲಿ ಅರಳು ಹುರಿದಂತೆ ಪ್ರವಚನಗಳನ್ನು ನೀಡಿ ಮನೆ ಮಾತಾಗಿದ್ದರು. ಅವರ ಪ್ರವಚನ ಜನ ಸಾಮಾನ್ಯರನ್ನು ಮಂತ್ರ ಮುಗ್ಧರನ್ನಾಗಿಸುವ ಅಮೋಘ ಶಕ್ತಿ ಪಡೆದಿತ್ತು. ಅದಕ್ಕಾಗಿಯೇ ಶ್ರೀಗಳ ಪ್ರವಚನಕ್ಕೆ ದೇಶ, ವಿದೇಶಗಳಲ್ಲೂ ಬೇಡಿಕೆ ಇತ್ತು.

ದಿನವೂ ಆಮಂತ್ರಣ: ಸಿದ್ದೇಶ್ವರ ಶ್ರೀಗಳಿಗೆ ಪ್ರವಚನ ನೀಡುವಂತೆ ದಿನವೂ ನೂರಾರು ಆಮಂತ್ರಣ ಬರುತ್ತಿದ್ದವು. ಅವರ ಪ್ರವಚನ ಕಾರ್ಯಕ್ರಮಕ್ಕೆ ಒಂದು ತಿಂಗಳು, ಎರಡು ತಿಂಗಳು ಕಾಯ ಬೇಕಾಗುತ್ತಿತ್ತು. ಶ್ರೀಗಳ ಪ್ರವಚನ ಅವಕಾಶ ಸಿಗುವುದು ಎಂದರೆ ಜನರು ತಮ್ಮ ಸೌಭಾಗ್ಯ ಎಂದು ಭಾವಿಸುತ್ತಿದ್ದರು. ಇದರಿಂದಲೇ ಅವರ ಪ್ರವಚನಕ್ಕೆ ಎಂಥ ಮಹತ್ವ ಇತ್ತು ಎಂಬುವುದು ವಿಧಿತವಾಗುತ್ತದೆ. ಅಮೆರಿಕದಲ್ಲಿಯೂ ಸಿದ್ದೇಶ್ವರರು ಪ್ರವಚನ ಕೊಟ್ಟು ಭಕ್ತರ ಮನಗೆದ್ದಿದ್ದರು.

Siddeshwara Swamiji: ಜನ ಮಾನಸದಲ್ಲಿ ಜ್ಞಾನ ಬಿತ್ತಿದ ಸಿದ್ದಪುರುಷ ಸಿದ್ದೇಶ್ವರ ಸ್ವಾಮೀಜಿ

ಶ್ರಾವಣ ಮಾಸದಲ್ಲಿ ಸಿದ್ದೇಶ್ವರ ಶ್ರೀಗಳು ತಿಂಗಳು ಪೂರ್ತಿ ಜ್ಞಾನಯೋಗಾಶ್ರಮ(Jnana Yogashram)ದಲ್ಲಿ ಪ್ರವಚನ ನೀಡುವುದು ಬಹಳ ದಿನಗಳಿಂದ ಬೆಳೆದು ಬಂದ ಒಂದು ಸತ್‌ ಸಂಪ್ರದಾಯವಾಗಿತ್ತು. ಶ್ರಾವಣ ಮಾಸ ಬಂತೆಂದರೆ ಸಾಕು, ರಾಜ್ಯ, ಹೊರರಾಜ್ಯಗಳ ಮೂಲೆಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ಪ್ರವಚಲ ಆಲಿಸುತ್ತಿದ್ದರು. ವಿಜಯಪುರದ ಜನರಿಗೆ ಶ್ರಾವಣ ಮಾಸದ ಪ್ರವಚನ ಆಲಿಸಲು ಬೆಳಗ್ಗಿನ ಜಾವ 4 ಗಂಟೆಯಿಂದಲೇ ರಾಜ್ಯ ಸಾರಿಗೆ ಸಂಸ್ಥೆ ವಿಶೇಷ ಬಸ್‌ ವ್ಯವಸ್ಥೆ ಕಲ್ಪಿಸುತ್ತಿತ್ತು.

ಮನಸಿಗೆ ನಾಟುವಂತೆ ಪ್ರವಚನ:

ವೇದಗಳ ಸಾರವನ್ನು, ಬಸವಾದಿ ಶರಣರ ವಚನಗಳ ಆಶಯವನ್ನು ಕಥೆಗಳ ಮೂಲಕ ವಿವರಿಸಿ ಮಹಾನ್‌ ಉದಾತ್ತ ಚಿಂತನೆಗಳು, ಆದರ್ಶಗಳು ಮನಸಿಗೆ ನಾಟುವಂತೆ ಮಾಡುವ ಅದ್ಭುತ ಶಕ್ತಿ ಶ್ರೀಗಳಲ್ಲಿತ್ತು. ಆಡುಭಾಷೆಯಲ್ಲಿ, ಅತ್ಯಂತ ಸ್ಪಷ್ಟಉಚ್ಚಾರಣೆಯಲ್ಲಿ ಪ್ರವಚನ ನೀಡುತ್ತಿದ್ದ ಸಿದ್ದೇಶ್ವರರು ಭಕ್ತರು ತಲ್ಲೀನರಾಗುವಂತೆ ಮಾಡುತ್ತಿದ್ದರು. ದೃಷ್ಟಿಹರಿಸಿದಾಗ ಸಾಕ್ಷಾತ್‌ ದೈವಸ್ವರೂಪ, ಶಾಂತಸ್ವರೂಪ. ಅವರಿಂದ ದಿವ್ಯ ಮಾತುಗಳು ಮೊಳಗಿದಾಗಲಂತೂ ಸೂಜಿ ಬಿದ್ದರೂ ಸಪ್ಪಳಾಗದÜಂತೆ ಭಕ್ತಾದಿಗಳು ಶಾಂತ ಚಿತ್ತರಾಗಿರುತ್ತಿದ್ದರು. ವೇದ, ಉಪನಿಷತ್‌ಗಳ ಸಾರವನ್ನು ಸಹ ಕಥೆಯ ಮೂಲಕವೇ ಸರಳವಾಗಿ ಅರ್ಥೈಸುವ ಅದ್ಭುತ ಶಕ್ತಿಯನ್ನು ಶ್ರೀಗಳು ಹೊಂದಿದ್ದರು.

ಪರಿಸರ ಪ್ರೇಮ, ಆಧ್ಯಾತ್ಮಿಕ ಪಥ ಶ್ರೀಗಳ ನಿಜ ಜೀವನ

ಪರಿಸರ, ಆಧ್ಯಾತ್ಮಿಕ ಪಥ ನಿಜ ಜೀವನ ಎಂದು ಸಿದ್ದೇಶ್ವರ ಶ್ರೀಗಳು ತೋರಿಸಿಕೊಟ್ಟಸಂತ. ಚಿಕ್ಕಂದಿನಲ್ಲಿಯೇ ದೇವರ ಮೇಲೆ ಭಕ್ತಿ ಸಿದ್ದೇಶ್ವರ ಶ್ರೀಗಳಲ್ಲಿ ತುಂಬಿ ತುಳುಕುತ್ತಿತ್ತು. ಆಶ್ರಮದಲ್ಲಿಯೇ ಆಗಲಿ, ಬೇರೆ ಊರುಗಳಿಗೆ ಹೋದಾಗಲೆಲ್ಲ ಮೊದಲು ದೇವರಿಗೆ ಪೂಜೆ ಸಲ್ಲಿಸಿದ ನಂತರವೇ ಅವರ ದೈನಂದಿನ ಬದುಕು ಆರಂಭವಾಗುತಿತ್ತು.

ಸಿದ್ದೇಶ್ವರ ಶ್ರೀಗಳು ಅವರ ಗುರುಗಳಾದ ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳನ್ನು ಸಾಕ್ಷಾತ್‌ ದೇವರೆಂದು ತಿಳಿದುಕೊಂಡಿದ್ದರು. ತಮ್ಮ ಗುರುಗಳಲ್ಲಿಯೇ ಸಿದ್ದೇಶ್ವರ ಶ್ರೀಗಳು ದೇವರನ್ನು ಕಂಡಿದ್ದರು. ದೇವರಷ್ಟೇ ಪರಿಸರವನ್ನು ಸಿದ್ದೇಶ್ವರ ಶ್ರೀಗಳು ತುಂಬಾ ಪ್ರೀತಿಸುತ್ತಿದ್ದರು. ಜ್ಞಾನಯೋಗಾಶ್ರಮದಲ್ಲಿ 17 ಎಕರೆ ಜಮೀನಿನಲ್ಲಿ ನೂರಾರು ಪ್ರಬೇಧದ ಗಿಡ, ಮರಗಳನ್ನು ಬೆಳೆಸಿ ನಂದನವನವನ್ನಾಗಿ ಮಾಡಿದ್ದಾರೆ.

100ಕ್ಕೂ ಅಧಿಕ ಗ್ರಂಥ:

ಸಿದ್ದೇಶ್ವರ ಶ್ರೀಗಳು ನೀಡಿದ ಪ್ರವಚನ ಸಾರವೇ ಕನ್ನಡ ಸಾಹಿತ್ಯ ಲೋಕದ ಮೇರು ಸಾರಸ್ವತವಾಗಿದೆ. ಶ್ರೀಗಳ ಅನುಭವ ನುಡಿಯಿಂದ ಬಂದ ಪ್ರವಚನ ಸಾರ ದೊಡ್ಡ ಸಾಹಿತ್ಯದ ರೂಪ ಪಡೆದು ಸುಮಾರು 100 ಕ್ಕೂ ಅಧಿಕ ಗ್ರಂಥಗಳ ರೂಪದಲ್ಲಿ ಹೊರ ಬಂದಿದೆ.

Vijayapura: ಜ್ಞಾನ ಯೋಗಾಶ್ರಮ ಸಿದ್ದೇಶ್ವರ ಸ್ವಾಮೀಜಿ ನಿಧನ: ಯಾರು ಈ ಸಂತ ಸಿದ್ಧೇಶ್ವರ ಸ್ವಾಮೀಜಿ?

ವೇದ, ಉಪನಿಷತ್‌, ವಚನಗಳು, ಬುದ್ಧನ ವಿಚಾರಗಳು ಹೀಗೆ ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲುವ, ಪಾಶ್ಚಿಮಾತ್ಯ ತತ್ವಶಾಸ್ತ್ರದ ಬೋಧನೆಗಳುಳ್ಳ ಅವರ ಪ್ರವಚನಗಳು ಕನ್ನಡ ಸಾಹಿತ್ಯಕ್ಕೆ ದೊಡ್ಡ ಸಂಖ್ಯೆಯಲ್ಲಿ ಲಭ್ಯವಿವೆ. ಆಂಗ್ಲ, ಮರಾಠಿ ಭಾಷೆಯಲ್ಲಿಯೂ ಅವರ ಪ್ರವಚನ ಸಾರ ಸಂಗ್ರಹ ತರ್ಜುಮೆಯಾಗಿ ಅನೇಕ ಮುದ್ರಣಗಳನ್ನು ಕಂಡಿವೆ. ಶ್ರೀಗಳೇ ರಚಿಸಿದ ಅಲ್ಲಮಪ್ರಭು ದೇವರ ವಚನ ನಿರ್ವಚನ ಕೃತಿ ಹಾಗೂ ಅವರ ಪ್ರವಚನ ಸಾರವುಳ್ಳ ಅನುಭವಾಮೃತ, ಆನಂದದ ಅನ್ವೇಷಣೆ, ಆನಂದ ಯೋಗ, ಈಶಾವಾಸ್ಯೋಪನಿಷತ್‌’, ಈಶ ಪ್ರಸಾದ, ಈಶಯೋಗ, ಪೂರ್ಣಯೋಗ, ಪಾರಮಾರ್ಥ ಗೀತಾ, ಕಠೋಪನಿಷತ್‌, ಕೈವಲ್ಯ ಪದ್ಧತಿ, ಕೈವಲ್ಯ ಕುಸುಮ, ಕರ್ಮಯೋಗ, ಕಲ್ಯಾಣ ರಾಜ್ಯ, ಕಥಾಮೃತ, ಬದುಕು, ಬದುಕಿನ ದೀವಿಗೆ, ಭಕ್ತಿಪಥ, ಭಕ್ತಿಯ ಬೆಳೆ, ಭಕ್ತಿಯೋಗ, ಸತ್ಸಂಗ ಸೌರಭ, ಧರ್ಮಾಮೃತ ಹೀಗೆ 100 ಕ್ಕೂ ಅಧಿಕ ಪ್ರವಚನಗಳ ಸಾರವುಳ್ಳ ಪುಸ್ತಕಗಳು ಹೊರಬಂದಿವೆ, ಅದೇ ತೆರನಾಗಿ ಆಂಗ್ಲ ಭಾಷೆಯಲ್ಲಿ ನೀಡಿದ ಪ್ರವಚನ ಸಾರದ ಗಾಡ್‌ ವಲ್ಡ್‌ರ್‍ ಆ್ಯಂಡ್‌ ಸೋಲ್‌, ಸಾಂಗ್‌್ಸ ಆಫ್‌ ಸೈನ್ಸ್‌ ಸಹ ಮುದ್ರಣ ಕಂಡಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ
ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ