ಒಳಮೀಸಲಾತಿ ವರದಿ ಭವಿಷ್ಯ ಇಂದು ನಿರ್ಧಾರ

Kannadaprabha News   | Kannada Prabha
Published : Aug 07, 2025, 05:16 AM IST
Vidhan soudha

ಸಾರಾಂಶ

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡುವ ಕುರಿತು ನ್ಯಾ. ಎಚ್.ಎನ್‌. ನಾಗಮೋಹನ್‌ದಾಸ್ ಆಯೋಗ ಸಲ್ಲಿಸಿರುವ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಿದ್ದು, ಒಳ ಮೀಸಲಾತಿ ಅನುಷ್ಠಾನ ಕುರಿತು ವ್ಯಾಪಕ ಚರ್ಚೆ ನಡೆಯುವ ನಿರೀಕ್ಷೆಯಿದೆ.

ಬೆಂಗಳೂರು : ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡುವ ಕುರಿತು ನ್ಯಾ. ಎಚ್.ಎನ್‌. ನಾಗಮೋಹನ್‌ದಾಸ್ ಆಯೋಗ ಸಲ್ಲಿಸಿರುವ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಿದ್ದು, ಒಳ ಮೀಸಲಾತಿ ಅನುಷ್ಠಾನ ಕುರಿತು ವ್ಯಾಪಕ ಚರ್ಚೆ ನಡೆಯುವ ನಿರೀಕ್ಷೆಯಿದೆ.

ಜತೆಗೆ ಗುರುವಾರದ ಸಂಪುಟ ಸಭೆಯಲ್ಲೇ ಒಳ ಮೀಸಲಾತಿ ಜಾರಿ ಕುರಿತು ತೀರ್ಮಾನ ಮಾಡಲಾಗುತ್ತದೆಯೇ ಅಥವಾ ವರದಿ ಅಧ್ಯಯನಕ್ಕೆ ಮತ್ತೆ ಕಾಲಾವಕಾಶ ಪಡೆಯಲಾಗುತ್ತದೆಯೇ ಎಂಬ ಬಗ್ಗೆಯೂ ಕುತೂಹಲ ಮೂಡಿದೆ.

ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳ ಮೂರು ದಶಕಗಳ ಆಗ್ರಹವಾಗಿರುವ ಒಳ ಮೀಸಲಾತಿ ಜಾರಿ ವಿಚಾರ ಅಂತಿಮ ಘಟ್ಟ ತಲುಪಿದ್ದು, ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಿದ ಬಳಿಕ ವಿಸ್ತೃತ ಚರ್ಚೆ ನಡೆಯಲಿದೆ.

ವರದಿಯಲ್ಲಿ ಪರಿಶಿಷ್ಟ ಜಾತಿಯ ಒಟ್ಟು ಶೇ.17 ರಷ್ಟು ಮೀಸಲಾತಿಯನ್ನು ಎಡಗೈ, ಬಲಗೈ, ಸ್ಪೃಶ್ಯ ಹಾಗೂ ಇತರೆ ಉಪಜಾತಿಗಳಿಗೆ ಎಷ್ಟೆಷ್ಟು ಪ್ರಮಾಣದಲ್ಲಿ ನೀಡಬೇಕೆಂದು ಶಿಫಾರಸು ಮಾಡಲಾಗಿದ್ದು, ಸಂಪುಟ ಸಭೆಯಲ್ಲಿ ಬಹಿರಂಗವಾಗಲಿದೆ. ವರದಿ ಅನುಷ್ಠಾನ ಕುರಿತು ಸಂಪುಟ ಯಾವ ತೀರ್ಮಾನ ಮಾಡಲಿದೆ ಎಂಬ ಬಗ್ಗೆ ಕುತೂಹಲವಿದೆ.

ಮೂಲಗಳ ಪ್ರಕಾರ, ಎಡಗೈ ಸಮುದಾಯಗಳಿಗೆ ಶೇ.6.5, ಬಲಗೈ ಸಮುದಾಯಗಳಿಗೆ ಶೇ.5.5, ಸ್ಪೃಶ್ಯ ಸಮುದಾಯಗಳಿಗೆ ಶೇ.4 ಹಾಗೂ ಇತರೆ ಉಪಜಾತಿಗಳಿಗೆ ಶೇ.1 ರಷ್ಟು ಮೀಸಲಾತಿ ನಿಗದಿ ಮಾಡಲು ಶಿಫಾರಸು ಮಾಡಿರುವ ಸಾಧ್ಯತೆಯಿದೆ.ಎಡಗೈ ಸಮುದಾಯವು ಶೇ. 6ಕ್ಕಿಂತ ಹೆಚ್ಚು ಒಳ ಮೀಸಲಿನ ನಿರೀಕ್ಷೆಯಲ್ಲಿರುವುದರಿಂದ ಆ ಸಮುದಾಯಕ್ಕೆ ತುಸು ನಿರಾಳತೆ ಮೂಡಬಹುದು. ಆದರೆ, ಇದಕ್ಕೆ ಬಲಗೈ ಸಮುದಾಯಗಳ ಸ್ಪಂದನೆ ಹೇಗಿರಲಿದೆ ಎಂಬ ಕುತೂಹಲಕಾರಿಯಾಗಿದೆ. ಏಕೆಂದರೆ, ಬಲಗೈ ಸಮುದಾಯಗಳು ಎಡಗೈ ಹಾಗೂ ಬಲಗೈ ನಡುವೆ ಮೀಸಲಾತಿ ಬಹುತೇಕ ಸಮನಾಗಿ ಹಂಚಿಕೆಯಾಗಬೇಕು ಎಂಬ ನಿಲುವು ಹೊಂದಿವೆ.

ಇನ್ನು ಬಂಜಾರ, ಭೋವಿಯಂತ ಸ್ಪೃಶ್ಯ ಜಾತಿಗಳು ಶೇ.4 ಮೀಸಲಾತಿಗೆ ಸಮಾಧಾನಗೊಳ್ಳುವುದಿಲ್ಲ. ಹಿಂದಿನ ಬಿಜೆಪಿ ಅವಧಿಯಲ್ಲಿ ಶೇ.4.5ರಷ್ಟು ಮೀಸಲಿಗೆ ಶಿಫಾರಸು ಮಾಡಲಾಗಿತ್ತು. ಹೀಗಾಗಿ ಅಷ್ಟೇ ನೀಡಬೇಕೆಂದು ಪಟ್ಟು ಹಿಡಿಯುವ ಸಾಧ್ಯತೆಯಿದೆ. ಹೀಗಾಗಿ ಆ.7 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಹೊರ ಬೀಳಲಿರುವ ಅಂಕಿ-ಅಂಶಗಳ ಬಗ್ಗೆ ತೀವ್ರ ಕುತೂಹಲ ಮೂಡಿದೆ.

ಜತೆಗೆ ಅಧಿಕೃತವಾಗಿ ಆಯೋಗದ ಶಿಫಾರಸಿನ ಅಂಕಿ-ಅಂಶಗಳು ಹೊರ ಬಿದ್ದರೆ ರಾಜ್ಯಾದ್ಯಂತ ವಿವಿಧ ದಲಿತ ಸಮುದಾಯಗಳು ಹೇಗೆ ಪ್ರತಿಕ್ರಿಯೆ ನೀಡಲಿವೆ ಎಂಬ ಬಗ್ಗೆಯೂ ಸರ್ಕಾರ ಎಚ್ಚರಿಕೆ ವಹಿಸುತ್ತಿದೆ ಎಂದು ತಿಳಿದುಬಂದಿದೆ.

ಸಂಪುಟದ ಬಳಿಕ ದಲಿತ ಸಚಿವರ ಸಭೆ ಸಾಧ್ಯತೆ:

ಇತ್ತೀಚೆಗೆ ಒಳ ಮೀಸಲಾತಿ ಜಾರಿ ಕುರಿತು ಸಚಿವ ಡಾ.ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಿಫಾರಸಿನ ಸ್ವರೂಪ ತಿಳಿದುಕೊಂಡ ನಂತರ ಈ ವರದಿ ಬಗ್ಗೆ ಮತ್ತೊಮ್ಮೆ ಚರ್ಚಿಸೋಣ ಎಂಬ ನಿಲುವು ತೆಗೆದುಕೊಳ್ಳಲಾಗಿತ್ತು. ಹೀಗಾಗಿ ಸಂಪುಟದಲ್ಲಿ ಮಂಡನೆಯಾಗಲಿರುವ ಆಯೋಗದ ಮೀಸಲಾತಿ ಶಿಫಾರಸುಗಳ ಆಧಾರದ ಮೇಲೆ ಕಾಂಗ್ರೆಸ್‌ನ ಎಡಗೈ ಹಾಗೂ ಬಲಗೈ ನಾಯಕರು ಮತ್ತೊಮ್ಮೆ ಸಭೆ ನಡೆಸುವ ಸಾಧ್ಯತೆಯಿದೆ. ಬಳಿಕ ಮುಖ್ಯಮಂತ್ರಿಗಳೊಂದಿಗೆ ಭೇಟಿ ಮಾಡಿ ವಿವಾದ ಉಂಟಾಗದಂತೆ ಸಾಮರಸ್ಯದಿಂದ ಪರಿಹಾರ ಕಂಡುಕೊಳ್ಳಲು ಯತ್ನಿಸುವ ಸಾಧ್ಯತೆಯಿದೆ.

ಒಳ ಮೀಸಲಾತಿ ವರದಿ ಅಂಕಿ ಅಂಶ:

- ಸಮೀಕ್ಷೆ ನಡೆಸಿದ್ದ ಅವಧಿ: 60 ದಿನ (ಮೇ.5 ರಿಂದ ಜು.6)

- 1,766 ಪುಟಗಳ ವರದಿ

- ಸಮೀಕ್ಷೆಗೆ ಒಳಪಟ್ಟ ಎಸ್ಸಿ ಕುಟುಂಬ: 27,24,768

- ಸಮೀಕ್ಷೆಯಲ್ಲಿ ಭಾಗಿಯಾದ ಜನ: 1,07,01,982 (1.07 ಕೋಟಿ)

ನಿರೀಕ್ಷಿತ ಒಳಮೀಸಲಾತಿ ಹಂಚಿಕೆ :

ಎಡಗೈ ಸಮುದಾಯಗಳು: ಶೇ.6.5

ಬಲಗೈ ಸಮುದಾಯಗಳು : ಶೇ.5.5

ಬಂಜಾರ, ಭೋವಿ ಸೇರಿದಂತೆ ಸ್ಪೃಶ್ಯ ಜಾತಿಗಳು- ಶೇ.4ಅಲೆಮಾರಿ ಸೇರಿ ಇತರರು: ಶೇ.1ಒಟ್ಟು ಪರಿಶಿಷ್ಟ ಜಾತಿ ಮೀಸಲಾತಿ: ಶೇ.17

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್