
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಬಂಡೀಪುರ ಅರಣ್ಯಕ್ಕೆ ಭೇಟಿ ನೀಡಿ ಅಲ್ಲಿ ಇಂದು ಸಫಾರಿ ಮಾಡಿದ್ದಾರೆ. ಈ ವೇಳೆ ಅವರಿಗೆ ಹುಲಿಗಳು ಕಾಣಿಸಿಲ್ಲ. ಇದರ ಕುರಿತಾಗಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಹಿಡಿದು ಮಾರಿ ಬಿಡುತ್ತಾರೆ ಎಂಬ ಕಾರಣಕ್ಕೆ ಯಾವ ಗುಹೆಯೊಳಗೆ ಅಡಗಿ ಕುಳಿತಿವೆಯೋ ಅಯ್ಯೋ ಪಾಪ ಎಂದು ಅಪಹಾಸ್ಯ ಮಾಡಿದ ಸಿದ್ದರಾಮಯ್ಯ, ಇನ್ನು ಕೆಲವೇ ದಿನಗಳಲ್ಲಿ ಕನ್ನಡಿಗರು ಸೇವ್ ಬಂಡೀಪುರ (ಬಂಡಿಪುರ ಉಳಿಸಿ ಎಂಬ ಅಭಿಯಾನವನ್ನು ಕನ್ನಡಿಗರು ಶುರು ಮಾಡುವಂತೆ ಆಗದಿರಲಿ ಅದೇ ನೀವು ಕರುನಾಡಿಗೆ ಮಾಡುವ ದೊಡ್ಡ ಉಪಕಾರ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಅಮುಲ್ ರಾಜ್ಯ ಪ್ರವೇಶಕ್ಕೂ ಕಿಡಿಕಾರಿದ ಸಿದ್ದರಾಮಯ್ಯ
ಇದೇ ವೇಳೆ ರಾಜ್ಯಕ್ಕೆ ಅಮೂಲ್ ಹಾಲು ಪ್ರವೇಶ ವಿಚಾರಕ್ಕೂ ಸಂಬಂಧಿಸಿದಂತೆ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. ಪ್ರಧಾನಿ ಮೋದಿ ಅವರೇ, ನೀವು ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡುವುದಕ್ಕೋ, ಕಿತ್ತುಕೊಳ್ಳುವುದಕ್ಕೋ? ಕನ್ನಡಿಗರು ಕಟ್ಟಿದ್ದ ಬ್ಯಾಂಕು, ಬಂದರು, ವಿಮಾನ ನಿಲ್ದಾಣಗಳನ್ನು ಮುಕ್ಕಿ ತಿಂದಾಯಿತು ಈಗ ನಮ್ಮ ನಂದಿನಿಯನ್ನು ಮುಕ್ಕಲು ಹೊರಟಿದ್ದೀರಾ? ನಮ್ಮ ವಿಜಯಾ ಬ್ಯಾಂಕನ್ನು ನುಂಗಿದ ಬರೋಡಾ ಬ್ಯಾಂಕ್ ಗುಜರಾತ್ ನದ್ದು, ಬಂದರು, ಏರ್ ಪೋರ್ಟ್ ನುಂಗಿದ ಅದಾನಿ ಗುಜರಾತ್ ನವರು ಈಗ ಕೆಎಂಎಫ್ ನುಂಗಲು ಹೊರಟಿರುವ ಅಮುಲ್ ಗುಜರಾತ್ ನದ್ದು, ಗುಜರಾತಿಗಳಿಗೆ ಕನ್ನಡಿಗರು ಶತ್ರುಗಳಾ ಮೋದಿಜೀ? ಈ ಗುಜರಾತಿ ಆಕ್ರಮಣ ಇನ್ನು ಸಹಿಸಲು ಸಾಧ್ಯ ಇಲ್ಲ. ಕರ್ನಾಟಕದಲ್ಲಿ ಅಮುಲ್ ಉತ್ಪನ್ನಗಳ ಮಾರಾಟವನ್ನು ಗೌರವಪೂರ್ವಕವಾಗಿ ನಿಲ್ಲಿಸಿ, ಕನ್ನಡಿಗರ ನಾಡಪ್ರೇಮ, ಸ್ವಾಭಿಮಾನವನ್ನು ಕೆಣಕಲು ಹೋಗಬೇಡಿ ಮೋದಿ ಜೀ, ಪರಿಣಾಮ ನೆಟ್ಟಗಿರದು ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
Amul Vs Nandini: ಅಮುಲ್ ಕಂಪನಿಯ ಏಕೈಕ ಸ್ಪರ್ಧಿ ನಂದಿನಿ ಬ್ರಾಂಡ್ ಮುಗಿಸಲು ಕೇಂದ್ರ ಸಂಚು: ಎಚ್‌ಡಿಕೆ ಸರಣಿ ಟ್ವೀಟ್
ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅಮುಲ್ ಜೊತೆ ಕೆಎಂಎಫ್ ವಿಲೀನದ ಪ್ರಸ್ತಾಪ ಮಾಡಿದ್ರು , ಅಂದಿನಿಂದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲೆ ಪ್ರಹಾರ ಶುರುವಾಗಿದೆ. ಏನಿದು ನಿಮ್ಮ ಕರಾಮತ್ತು ನರೇಂದ್ರ ಮೋದಿಜೀ? ಇದ್ದಕ್ಕಿದ್ದ ಹಾಗೆ ಮಾರುಕಟ್ಟೆಯಿಂದ ನಂದಿನಿ ಹಾಲು ಮತ್ತಿತರ ಉತ್ಪನ್ನಗಳು ಮಾಯವಾಗುತ್ತಿವೆ. ಗುಜರಾತ್‌ನಿಂದ ನೀವು ಕಳುಹಿಸುತ್ತಿರುವ ಅಮುಲ್ ಹಾಲು ಮತ್ತು ಉತ್ಪನ್ನಗಳ ಮಾರಾಟದ ಬಿರುಸು ಹೆಚ್ಚಾಗಿದೆ. ಇವೆಲ್ಲವೂ ಸಹಜ ಬೆಳವಣಿಗೆಯೇ ನರೇಂದ್ರ ಮೋದಿಜೀ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕೆಎಂಎಫ್‌ಗೆ ಸಡ್ಡು: ರಾಜ್ಯದಲ್ಲಿ ಅಮುಲ್ ಹೋಮ್ ಡೆಲಿವರಿ!
ಶೇ.70 ನಂದಿನಿ ಪಾಲು: ಮುಕ್ತ ಮಾರುಕಟ್ಟೆಯಲ್ಲಿ ಹಾಲಿನ ಉತ್ಪನ್ನಗಳನ್ನು ಯಾರು, ಎಲ್ಲಿ ಬೇಕಾದರೂ ಮಾರಬಹುದು. ಆದರೆ ಬೆಂಗಳೂರಿನ ಹಾಲು, ಮೊಸರು ಮಾರುಕಟ್ಟೆಯಲ್ಲಿ ನಂದಿನಿ ಶೇ.70ರಷ್ಟು ಪಾಲು ಹೊಂದಿದೆ. ಯಾವುದೇ ಆತಂಕವಿಲ್ಲ. ಅಲ್ಲದೆ ಅಮುಲ್‌ನವರು ಎಷ್ಟುಲೀಟರ್ ಮಾರುತ್ತಾರೆ? ಒಂದು ಲೀಟರ್ ಹಾಲು ಅಥವಾ ಮೊಸರಿಗೆ ಎಷ್ಟುದರ ನಿಗದಿ ಮಾಡಿದ್ದಾರೆ ಎಂಬುದು ತಿಳಿದಿಲ್ಲ ಎನ್ನುತ್ತಾರೆ ಕೆಎಂಎಫ್ ಅಧಿಕಾರಿಗಳು.
ತೀವ್ರ ಆಕ್ರೋಶ: ಬೆಂಗಳೂರಿನಲ್ಲಿ ಹಾಲು, ಮೊಸರು ಮಾರಾಟಕ್ಕೆ ಸಜ್ಜಾಗುತ್ತಿರುವ ಅಮುಲ್ ಬಗ್ಗೆ ಟ್ವಿಟ್ಟರ್‌ನಲ್ಲಿ ಆಕ್ರೋಶ ತೀವ್ರಗೊಂಡಿದೆ. ನಂದಿನಿ ಹಾಲು, ಮೊಸರನ್ನಲ್ಲದೆ ಬೇರೆ ಯಾವುದೇ ಬ್ರ್ಯಾಂಡ್ ಬಳಸುವುದಿಲ್ಲ. ಅದರಲ್ಲೂ ‘ಗುಜ್ಜುಗಳ ಅಮುಲ್’ ಬಳಸೋದಿಲ್ಲ ಎಂದು ಪ್ರತಿಜ್ಞೆ ಮಾಡೋಣ ಎಂದು ಕೆಲವರು ಬರೆದುಕೊಂಡಿದ್ದಾರೆ. ಮತ್ತೊಬ್ಬರು ‘ಇಷ್ಟುದಿನ ನಂದಿನಿ ಪದಾರ್ಥಗಳು ಎಲ್ಲೆಡೆ ಸಿಗದಂತೆ ಮಾಡಿ ಕೃತಕ ಅಭಾವ ಸೃಷ್ಟಿಸಿದ್ದಕ್ಕೆ ಕಾರಣವಿದು. ಈಗ ನಂದಿನಿಯ ಜಾಗವನ್ನು ಅಮುಲ್ ಆಕ್ರಮಿಸಲು ಬರುತ್ತಿದೆ. ನಮ್ಮ ನಂದಿನಿಯನ್ನು ಈಗ ಕನ್ನಡಿಗರಾದ ನಾವೇ ಕಾಪಾಡಿಕೊಳ್ಳಬೇಕು. ನಂದಿನಿಯನ್ನಷ್ಟೇ ಬಳಸುವ ಮೂಲಕ ಅಮುಲ್ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗುವ ಹಾಗೆ ಮಾಡಬೇಕು’ ಎಂದು ತಮ್ಮ ಅಭಿಪ್ರಾಯಗಳನ್ನು ಬರೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ