ಕಾರ್ಯಕರ್ತರು ಎದ್ದರೆ ಕಾಂಗ್ರೆಸ್ ಧೂಳಿಪಟವಾಗುತ್ತೆ; ಆರ್.ಅಶೋಕ್

By Ravi Janekal  |  First Published Jun 24, 2023, 7:51 PM IST

ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಎದ್ದರೆ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಎಚ್ಚರಿಸಿದ್ದಾರೆ. 


ವರದಿ : ಆಲ್ದೂರು ಕಿರಣ್ ಏಷ್ಯಾ ನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಜೂ.24) : ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಎದ್ದರೆ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಎಚ್ಚರಿಸಿದ್ದಾರೆ. 

Latest Videos

undefined

ಕೇಂದ್ರಸರ್ಕಾರಕ್ಕೆ 9 ವರ್ಷ ತುಂಬಿದ ಹಿನ್ನಲೆಯಲ್ಲಿ ಚಿಕ್ಕಮಗಳೂರು ನಗರದ ಗಾಯತ್ರಿಕಲ್ಯಾಣ ಮಂಟಪದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು,  ಮೋಸ, ವಂಚನೆಯಿಂದ ಆಮಿಷ ಒಡ್ಡುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಗೆಲುವು ಸಾಧಿಸಿದೆ. ಇದನ್ನು ಜನರಿಗೆ ತಿಳಿಸಲು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹಳ್ಳಿಗಳಿಗೆ ಮತ್ತು ನಗರಕ್ಕೆ ಹೋಗೋಣವೆಂದರು.

ಶಕ್ತಿ ಯೋಜನೆ: ಚಿಕ್ಕಮಗಳೂರಿನ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಮುಖ!

ರಾಜ್ಯ ಸರ್ಕಾರದ ಉಚಿತ ಕೊಡುಗೆಗಳ ಬ್ರಹ್ಮಾಸ್ತ್ರ ನಮ್ಮ ಕೈಯಲ್ಲಿದೆ. ಜನರಿಗೆ ದ್ರೋಹ ಬಗೆದಿರುವ ಸರ್ಕಾರದ ವಿರುದ್ಧ ಹೋರಾಟ ನಡೆಸೋಣವೆಂದು ಕರೆ ನೀಡಿದರು. ರಾಜ್ಯದಲ್ಲಿರುವುದು ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದ ಸಮ್ಮಿಶ್ರ ಸರ್ಕಾರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ರಾಜ್ಯ ಸರ್ಕಾರ ಕ್ಷಣಮಾತ್ರದಲ್ಲಿ ಉಳಿಯುವುದಿಲ್ಲವೆಂದರು.

ಸಿದ್ದರಾಮಯ್ಯ ನೆಪಮಾತ್ರಕ್ಕೆ ಮುಖ್ಯಮಂತ್ರಿ : 

ಸಿದ್ದರಾಮಯ್ಯ ನೆಪಮಾತ್ರಕ್ಕೆ ಮುಖ್ಯಮಂತ್ರಿ ಎಂಬುದನ್ನು ಬಿಂಬಿಸಲು ನಾನೇ ರಾಜ್ಯಕ್ಕೆ ನಿಜವಾದ ಮುಖ್ಯಮಂತ್ರಿ ಎಂದು ಹೇಳಿಕೊಳ್ಳಲು ಅಕ್ಕಿಗಾಗಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿಮಾಡಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(DK Shivakumar) ಮುಂದಾಗುತ್ತಿದ್ದಾರೆಂದು ಟೀಕಿಸಿದರು.

 ಘೋಷಣೆ ಮಾಡುವುದು ಸುಲಭ ಅದನ್ನು ಜಾರಿಗೊಳಿಸುವುದು ಕಷ್ಟ ಎಂಬುದು ರಾಜ್ಯ ಸರ್ಕಾರಕ್ಕೆ ಈಗ ಮನವರಿಕೆಯಾಗಿದೆ. ಗ್ಯಾರಂಟಿಕಾರ್ಡ್ ಹಿಡಿದು ಮನೆಬಾಗಿಲಿಗೆ ತೆರಳಿ ಜನರನ್ನು ಕಾಂಗ್ರೆಸ್ ಪಕ್ಷ ಮರುಳು ಮಾಡಿತು. ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಕಾರ್ಯಕರ್ತರು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದ್ದರಿಂದ ಚುನಾವಣೆಯಲ್ಲಿ ಸೋಲಬೇಕಾಯಿತು. ಅದಕ್ಕೆ ಮುಖಂಡರು ದೃತಿಗೆಡಬೇಕಾಗಿಲ್ಲ, ಮುಂದೇನು ಮಾಡಬೇಕೆಂಬುದರ ಬಗ್ಗೆ ಚಿಂತನೆಮಾಡುವುದು ಒಳ್ಳೆಯದು ಎಂದು ಹೇಳಿದರು.

ಉಚಿತ ಪ್ರಯಾಣಕ್ಕೆ ಅವಕಾಶಮಾಡಿಕೊಟ್ಟಿದ್ದರಿಂದ ಬಸ್ಸಿನ ಬಾಗಿಲು ಮುರಿದುಹೋಗಿದೆ. ಮುಂದಿನ ದಿನಗಳಲ್ಲಿ ಬಸ್ಸಿನ ಟೈರ್ ಮಾತ್ರ ಉಳಿದುಕೊಳ್ಳುವ ಸಾಧ್ಯತೆಗಳಿವೆ. ಆಹಾರ ಸಚಿವ ಮುನಿಯಪ್ಪ ಕೇಂದ್ರಸರ್ಕಾರ 5 ಕೆ.ಜಿ.ಅಕ್ಕಿಕೊಡುತ್ತಿದೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಈಗ ರಾಜ್ಯದ ಜನರಿಗೆ 5 ಕೆ.ಜಿ.ಅಕ್ಕಿಕೊಡುತ್ತಿರುವುದು ಕೇಂದ್ರಸರ್ಕಾರ ಎಂಬುದು ಮನವರಿಕೆಯಾಗಿದೆ. ಸಚಿವರಿಗೆ ಧನ್ಯವಾದ ತಿಳಿಸಲು ಬಯಸುತ್ತೇನೆಂದರು.

ಉಚಿತ ವಿದ್ಯುತ್ಗೆ ಅರ್ಜಿಹಾಕುವುದಕ್ಕೆ ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್ ಮಾಡಿದೆ ಎಂದು ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ. ಸರ್ವರ್ ಎಂದರೇನು ? ಹ್ಯಾಕ್ ಎಂದರೇನು ಎಂಬುದು ಅವರಿಗೆ ಗೊತ್ತಿಲ್ಲ, ಗೊತ್ತಿರುವುದೊಂದೆ ಅಮವಾಸ್ಯೆಯಲ್ಲಿ ಮಸಣದಲ್ಲಿ ಕುಳಿತು ಊಟಮಾಡೋದು ಎಂದು ಟೀಕಿಸಿದರು.

ಸಿದ್ಧರಾಮಯ್ಯ ಟಿಪ್ಪುವಿನ ರಾಯಭಾರಿ : 

ಸಿದ್ಧರಾಮಯ್ಯ ಟಿಪ್ಪುವಿನ ರಾಯಭಾರಿಯಾಗಿದ್ದಾರೆ. ಮತಾಂತರ ನಿಷೇಧಕಾಯ್ದೆ,ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆದುಕೊಳ್ಳುತ್ತಾರಂತೆ ಹಾಗೆನಾದರೂ ಆದರೆ ಲವ್ ಜಿಹಾದ್‌ ಹೆಚ್ಚಳವಾಗುತ್ತದೆ. ನಿಮ್ಮ ಮನೆಯಲ್ಲಿರುವ ಗೋವುಗಳು ಕಾಣೆಯಾಗುತ್ತವೆ ಎಂದು  ಎಚ್ಚರಿಸಿದರು. ಉಚಿತಕೊಡುಗೆಗಳನ್ನು ಷರತ್ತು ಇಲ್ಲದೆ ಕೊಡುವತನಕ ನಾವ್ಯಾರು ಮನೆಗಳಿಗೆ ಹೋಗದೆ ಪ್ರತಿಭಟನೆಯಲ್ಲಿ ತೊಡಗಿಸಿ ಕೊಳ್ಳೋಣ ವೆಂದು ತಿಳಿಸಿದರು. 

ಡಿ.ಕೆ. ಶಿವಕುಮಾರ್ ಸಿಎಂ ಅಲ್ಲ, ಆದರೆ, ಅವರು ಸಿಎಂ ರೀತಿ ಆಕ್ಟಿಂಗ್ ಮಾಡುತ್ತಿದ್ದಾರೆ, ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ಕೊಡಲ್ಲ ಎನ್ನುವ ಗ್ಯಾರಂಟಿ ಡಿಕೆಶಿಗೆ ಇದೆ. ಇದೇನೂ ಸಮ್ಮಿಶ್ರ ಸರ್ಕಾರನಾ ಎಂದು ಸಿದ್ದರಾಮಯ್ಯ ದೆಹಲಿಯಲ್ಲಿ ಹೇಳಿದ್ದಾರೆ. ಅದ್ದರಿಂದ ಈಗಿನಿಂದಲೇ ಡಿಕೆಶಿ  ಓವರ್ಟೇಕ್ ಮಾಡಿ ಏನಾದರೂ ಕಿರಿಕಿರಿ ಮಾಡಲು ಹೊರಟಿದ್ದಾರೆ, ಇದು, ಬೀದಿಗೆ ಬಂದರೆ ಈ ಸರ್ಕಾರ ಬಿದ್ದು ಹೋಗುತ್ತೆ ಎಂದು ಹೇಳಿದರು.

ಕಾರ್ಯಕ್ರಮ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಅಶೋಕ್ ಮಾಜಿ ಸಚಿವ ಸೋಮಣ್ಣ ಹೇಳಿಕೆ ನನಗೆ ಗೊತ್ತಿಲ್ಲ, ರಾಜ್ಯಾಧ್ಯಕ್ಷರ ಸೀಟ್ ಖಾಲಿ ಇಲ್ಲ ಎಂದು ಹೇಳಿದರು. ಸದ್ಯಕ್ಕೆ ಅವರನ್ನು ತೆಗೆಯುವ ಸಂದರ್ಭ ಕಾಣುತ್ತಿಲ್ಲ, ಪಾರ್ಲಿಮೆಂಟ್ ಚುನಾವಣೆ ಇದೆ, ರಾಷ್ಟ್ರಾಧ್ಯಕ್ಷರ ತೀರ್ಮಾನ ಗೊತ್ತಿಲ್ಲ, ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ನನ್ನ ಬಳಿ ಯಾವ ಮಾಹಿತಿ ಇಲ್ಲ ಎಂದರು.

ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆಂದು ನಳೀನ್ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್, ನಮ್ಮದು ರಾಷ್ಟ್ರೀಯ ಪಕ್ಷ, ಡೆಲ್ಲಿಯವರು ಅಂಗೀಕಾರ ಮಾಡಬೇಕಲ್ವಾ. ಪಾರ್ಲಿಮೆಂಟ್ ಚುನಾವಣೆ ಇದೆ, ಬದಲಾವಣೆ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು ಚರ್ಚಿಸುತ್ತಾರೆ, ಅಲ್ಲಿವರೆಗೆ ರಾಜ್ಯಾಧ್ಯಕ್ಷರ ಪದವಿ ಖಾಲಿ ಇಲ್ಲ ಎಂದು ಹೇಳಿದರು. ರಾಜ್ಯ ವಿಧಾನಸಭೆಯ ಪ್ರತಿಪಕ್ಷದ ನಾಯಕರ ಆಯ್ಕೆ ಕುರಿತು ಪ್ರತಿಕ್ರಿಯಿಸಿದ ಅವರು, ಜುಲೈ 3 ರಂದು ಘೋಷಣೆಯಾಗಲಿದೆ ಎಂದರು. 

ಪಕ್ಷಕ್ಕೂ ಗ್ರಹಣ ಹಿಡಿದಿದೆ. ಬಿಟ್ಟೆಬಿಡುತ್ತೆ : 

ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ,ವಿಧಾನಸಭಾ ಚುನಾವಣೆಯಲ್ಲಿ ವಾತಾವರಣ ಬೇರೆ ರೀತಿ ಇತ್ತು. ಮೈಮರೆತು ಕೂರಬಾರದು. ಲೋಕಸಭಾ ಚುನಾವಣೆಯಲ್ಲಿ  ನಾವೆಲ್ಲ ಪಕ್ಷ ಗೆಲ್ಲಿಸುವ ಹೊಣೆಹೊರಬೇಕಾಗಿದೆ. ಗ್ರಹಣ ಸೂರ್ಯಚಂದ್ರರಿಗೂ ಬರುತ್ತೆ ಅದು ಶಾಶ್ವತವಾಗಿ ಇರುವುದಿಲ್ಲ. ಬಿಡಲೇಬೇಕು ಹಾಗೆಯೆ ಪಕ್ಷಕ್ಕೂ ಗ್ರಹಣಹಿಡಿದಿದೆ. ಬಿಟ್ಟೆಬಿಡುತ್ತೆ ಎಂದು ತಿಳಿಸುವ ಮೂಲಕ ಕಾರ್ಯಕರ್ತರಿಗೆ ಆತ್ಮವಿಶ್ವಾಸ ತುಂಬಿದರು.

ರಾಜ್ಯಾದ್ಯಂತ ಇಂದು ಕಾಂಗ್ರೆಸ್‌, ಬಿಜೆಪಿ ‘ಉಚಿತ ಅಕ್ಕಿ ಹೋರಾಟ’

ಮೆಕಾಲೆ, ಕಾರ್ಲ್‌ಮಾರ್ಕ್ಸ್, ಮಾವೋಸಿದ್ಧಾಂತದ ಅನುಯಾಯಿಗಳು ದೇಶದ ಅಂತಃಸತ್ವವನ್ನು ಕದಡಲು ಮುಂದಾಗುತ್ತಿದ್ದಾರೆ. ಈ ಕುರಿತು ನಾವೆಲ್ಲ ಎಚ್ಚರವಹಿಸಬೇಕಾಗಿದೆ ಎಂದು ಬಿಜೆಪಿ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.ಮಾಜಿ ಸಚಿವ ಸೋಮಶೇಖರ್,ಮಾಜಿ ಸಭಾಪತಿ ಬೋಪಯ್ಯ, ಗಿರೀಶ್ಪಟೇಲ್, ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಸಿ.ಕಲ್ಮರುಡಪ್ಪ, ಇದ್ದರು.

click me!