'ಏಳು ಬೀಳಿನಲ್ಲೂ ಕುಟುಂಬವನ್ನು ಪೊರೆಯುತ್ತಾ ಬಂದ ಆದರ್ಶ ಗೃಹಿಣಿ..' ಚೆನ್ನಮ್ಮ ದೇವೇಗೌಡ ಸಾವಿಗೆ ಸಿದ್ದರಾಮಯ್ಯ ಸಂತಾಪ

Published : Jul 18, 2026, 06:46 PM IST
HD Chennamma and Siddaramaiah

ಸಾರಾಂಶ

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಪತ್ನಿ ಚೆನ್ನಮ್ಮ ದೇವೇಗೌಡ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ದೇವೇಗೌಡರ ರಾಜಕೀಯ ಏಳುಬೀಳಿನಲ್ಲಿ ಕುಟುಂಬವನ್ನು ಪೊರೆದ ಆದರ್ಶ ಗೃಹಿಣಿ ಎಂದು ಅವರನ್ನು ಸ್ಮರಿಸಿದ್ದಾರೆ.

ಬೆಂಗಳೂರು (ಜು.18): ತೀವ್ರ ಉಸಿರಾಟದ ಸಮಸ್ಯೆಯಿಂದ ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌ಡಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ ದೇವೇಗೌಡ (Chennamma Deve Gowda) ಶನಿವಾರ ನಿಧನರಾದರು. ಮಣಿಪಾಲ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಂಜೆ 4 ಗಂಟೆಯ ವೇಳೆಗೆ ನಿಧನರಾದರು. ಅವರ ಅಂತ್ಯಸಂಸ್ಕಾರ ಹಾಸನದ ಹರದನಹಳ್ಳಿಯಲ್ಲಿ ನಡೆಯಲಿದೆ ಎಂದು ವರದಿಯಾಗಿದ್ದು, ಅದರ ಸಿದ್ಧತೆಗಳು ಆರಂಭವಾಗಿದೆ.

ಇದರ ನಡುವೆ ರಾಜಕೀಯ, ಸಿನಿಮಾ ಹಾಗೂ ವಿವಿಧ ರಂಗದ ಗಣ್ಯರು ಚೆನ್ನಮ್ಮ ದೇವೇಗೌಡ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಹಾಗೂ ಈ ಹಿಂದೆ ಜೆಡಿಎಸ್‌ನಲ್ಲಿದ್ದ ಸಿದ್ದರಾಮಯ್ಯ ಅವರು ಕೂಡ ಚೆನ್ನಮ್ಮ ಅವರನ್ನು ನೆನೆದು ಭಾವುಕರಾಗಿದ್ದಾರೆ. ಏಳು ಬೀಳಿನಲ್ಲೂ ಕುಟುಂಬವನ್ನು ಪೊರೆಯುತ್ತಾ ಬಂದ ಆದರ್ಶ ಗೃಹಿಣಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ಚೆನ್ನಮ್ಮ ಅವರ ನಿಧನದ ಬೆನ್ನಲ್ಲಿಯೇ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, 'ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮನವರ ನಿಧನದಿಂದ ದುಃಖಿತನಾಗಿದ್ದೇನೆ. ಜನತಾ ಪರಿವಾರದಲ್ಲಿದ್ದ ನಾನು ದೇವೇಗೌಡರ ಕುಟುಂಬದೊಂದಿಗೆ ನಿಕಟವಾದ ಒಡನಾಟ ಇಟ್ಟುಕೊಂಡವನಾಗಿ ಚೆನ್ನಮ್ಮನವರನ್ನು‌ ಸಮೀಪದಿಂದ ಬಲ್ಲವನು.ಚೆನ್ನಮ್ಮನವರು ತಮ್ಮ ಜೀವನದಲ್ಲಿ ಎದುರಾದ ಕಷ್ಟ - ನೋವುಗಳಿಂದ ಕುಗ್ಗದೆ, ಎಲ್ಲವನ್ನೂ ಧೈರ್ಯದಿಂದ ಎದುರಿಸಿದ್ದ ಗಟ್ಟಿಗಿತ್ತಿ. ದೇವೇಗೌಡರ ರಾಜಕೀಯ ಜೀವನದ ಏಳುಬೀಳಿನ ನಡುವೆ ದೊಡ್ಡ ಕುಟುಂಬವನ್ನು ಪೊರೆಯುತ್ತಾ ಬಂದ ಅವರು ಒಬ್ಬ ಆದರ್ಶ ಗೃಹಿಣಿಯಾಗಿದ್ದರು..' ಎಂದು ಬರೆದುಕೊಂಡಿದ್ದಾರೆ.

ಎಲ್ಲರನ್ನೂ ಅಕ್ಕರೆಯಿಂದ ಕಾಣುತ್ತಿದ್ದರು

ಇದೇ ವೇಳೆ ಚೆನ್ನಮ್ಮ ಅವರು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದದ್ದನ್ನು ಸ್ಮರಿಸಿದ ಸಿದ್ದರಾಮಯ್ಯ ಅವರು, ಮಾಜಿ ಪ್ರಧಾನಿಯ ಪತ್ನಿಯಾಗಿದ್ದರೂ ಅವರಲ್ಲಿ ಯಾವುದೇ ಹಮ್ಮು ಬಿಮ್ಮು ಇದ್ದಿರಲಿಲ್ಲ ಎಂದಿದ್ದಾರೆ. 'ಮಾಜಿ ಪ್ರಧಾನಿಗಳ ಮಡದಿಯಾಗಿದ್ದರೂ ಯಾವ ಹಮ್ಮು ಬಿಮ್ಮು ಇಲ್ಲದೆ ಎಲ್ಲರನ್ನೂ ಅಕ್ಕರೆಯಿಂದ ಕಾಣುತ್ತಿದ್ದ ಚೆನ್ನಮ್ಮನವರು, ಮಾದರಿ ಸತಿಯಾಗಿ ತುಂಬು ಜೀವನ ಸಾಗಿಸಿದವರು' ಎಂದು ಬರೆದಿದ್ದಾರೆ.

ದೇವೇಗೌಡರ ಬಗ್ಗೆ ಕನಿಕರ

ತಮ್ಮ ಟ್ವೀಟ್‌ನ ಕೊನೆಯಲ್ಲಿ ದೇವೇಗೌಡರ ಬಗ್ಗೆಯೂ ಸಿದ್ದರಾಮಯ್ಯ ಕನಿಕರ ತೋರಿದ್ದಾರೆ. ತಮ್ಮ ದೀರ್ಘಕಾಲದ ಸಂಗಾತಿಯನ್ನು ಇಳಿವಯಸ್ಸಿನಲ್ಲಿ ಕಳೆದುಕೊಂಡ ಅವರ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ಭಗವಂತ ನೀಡಲಿ ಎಂದಿದ್ದಾರೆ. 'ದೀರ್ಘಕಾಲದ ಸಂಗಾತಿಯನ್ನು ಈ ಇಳಿವಯಸ್ಸಿನಲ್ಲಿ ಕಳೆದುಕೊಂಡ ದೇವೇಗೌಡರಿಗೆ ದು:ಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ. ಗೌಡರ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು. ಅವರ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ' ಎಂದು ಟ್ವೀಟ್‌ ಮುಕ್ತಾಯ ಮಾಡಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುತ್ತೈದೆ ಸಾವು ಕಂಡ ಮಹಾತಾಯಿ, ಹುಟ್ಟೂರಿನ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಚೆನ್ನಮ್ಮ ನೆನೆದು ಇಡೀ ಊರೇ ಕಣ್ಣೀರು
Chennamma: HD ದೇವೇಗೌಡ್ರು ಜೈಲಿಗೆ ಹೋದಾಗಲೂ ಗಟ್ಟಿಯಾಗಿ ನಿಂತು ಮನೆ ನಡೆಸಿದ್ದ ಚೆನ್ನಮ್ಮ; 72 ವರ್ಷದ ದಾಂಪತ್ಯ!