ಕೆಎಂಎಫ್‌ನಲ್ಲೂ ಸಿದ್ದರಾಮಯ್ಯ-ಡಿಕೆಶಿ ಬಣದ ಮೇಲಾಟ?

By Kannadaprabha News  |  First Published Nov 7, 2024, 8:48 AM IST

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಸಹೋದರ ಮಾಜಿ ಸಂಸದ ಡಿ.ಕೆ. ಸುರೇಶ್‌ ಕೂಡ ಕೆಎಂಎಫ್ ಚುಕ್ಕಾಣಿ ಹಿಡಿಯಲು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ತಮ್ಮನ ಪರ ಬ್ಯಾಟ್ ಬೀಸಿ ಅಧ್ಯಕ್ಷ ಗಾದಿ ಮೇಲೆ ಕೂರಿಸಲು ಡಿ.ಕೆ. ಶಿವಕುಮಾರ್ ಕೂಡ ಸಜ್ಜಾಗಿದ್ದಾರೆ. 
 


ಬೆಂಗಳೂರು(ನ.07): ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ನೂತನ ಅಧ್ಯಕ್ಷರ ಆಯ್ಕೆಗೆ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬಣಗಳ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. 

ಬಣ ರಾಜಕೀಯ ಈಗ ಕೆಎಂಎಫ್ ಚುನಾವಣೆಗೂ ಕಾಲಿಡುವ ನಿರೀಕ್ಷೆ ಇದೆ. ಏಕೆಂದರೆ, ಹಾಲಿ ಅಧ್ಯಕ್ಷರಾಗಿರುವ ಮಾಜಿ ಶಾಸಕ ಹಾಗೂ ಸಿದ್ದರಾಮಯ್ಯ ಆಪ್ತ ಭೀಮಾ ನಾಯ್ಕ ಅಧ್ಯಕ್ಷ ಸ್ಥಾನದಲ್ಲೇ ಮುಂದುವರೆಯಲು ಒಲವು ತೋರಿದ್ದಾರೆ. ಮತ್ತೊಂದೆಡೆ ಸಿದ್ದರಾಮಯ್ಯ ಅವರ ಮತ್ತೊಬ್ಬ ಆಪ್ತ ಮಾಲೂರು ಶಾಸಕ ಹಾಗೂ ಕೋಮುಲ್ ಅಧ್ಯಕ್ಷ ಕೆ.ವೈ. ನಂಜೇಗೌಡ ಕೂಡ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Tap to resize

Latest Videos

undefined

ಕೆಎಂಎಫ್ ನಂದಿನಿ ಬ್ರ್ಯಾಂಡ್ ದೋಸೆ ಹಿಟ್ಟು ಶೀಘ್ರ ಬಿಡುಗಡೆ!

ಇದೀಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಸಹೋದರ ಮಾಜಿ ಸಂಸದ ಡಿ.ಕೆ. ಸುರೇಶ್‌ ಕೂಡ ಕೆಎಂಎಫ್ ಚುಕ್ಕಾಣಿ ಹಿಡಿಯಲು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ತಮ್ಮನ ಪರ ಬ್ಯಾಟ್ ಬೀಸಿ ಅಧ್ಯಕ್ಷ ಗಾದಿ ಮೇಲೆ ಕೂರಿಸಲು ಡಿ.ಕೆ. ಶಿವಕುಮಾರ್ ಕೂಡ ಸಜ್ಜಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಹೀಗಾದರೆ ಎರಡೂ ಬಣಗಳ ನಡುವೆ ಯಾರು ಅಧ್ಯಕ್ಷರಾಗಬೇಕು ಎಂಬ ಬಗ್ಗೆ ಪೈಪೋಟಿ ಶುರುವಾಗಲಿದ್ದು, ಕೆಎಂಎಫ್ ಅಧ್ಯಕ್ಷ ಚುನಾವಣೆಗೂ ಬಣ ರಾಜಕೀಯ ಕಾಲಿಟ್ಟಂತಾಗಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ  11 ತಿಂಗಳ ಮಟ್ಟಿಗೆ ಮಾತ್ರ ಖಾಲಿಯಿದ್ದ ಸ್ಥಾನಕ್ಕೆ ಭೀಮಾನಾಯ್ಡ್ ಅವಿರೋಧವಾಗಿ ಆಯ್ಕೆ ಯಾಗಿದ್ದರು. ಆಗಲೇ ನಂಜೇಗೌಡ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸಿದರೂ ಪೂರ್ಣಾವಧಿ (5 ವರ್ಷ) ಮೇಲೆ ಕಣ್ಣಿಟ್ಟು ಸುಮ್ಮನಾಗಿದ್ದರು. ಭೀಮಾನಾಯ್ಕ ಅವರ 11 ತಿಂಗಳ ಅವಧಿ 2024ರ ಜೂನ್‌ಗೆ ಮುಗಿದಿದ್ದರೂ ಜಿಲ್ಲಾ ನಿರ್ದೇಶಕರ ಆಯ್ಕೆ ಆಗದ ಹಿನ್ನೆಲೆಯಲ್ಲಿ ಕೋರ್ಟ್ ಅನುಮತಿ ಮೇರೆಗೆ ಭೀಮಾನಾಯ್ 2025 ಜನವರಿವರೆಗೆ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.

ಇದೀಗ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಕಾಲ ಕೂಡಿ ಬಂದಿದ್ದು, ಸಿದ್ದರಾಮಯ್ಯ ಬಣದಲ್ಲಿ ನಂಜೇಗೌಡ ಹಾಗೂ ಭೀಮಾನಾಯ್ಕ ನಡುವೆ ಪೈಪೋಟಿ ಶುರುವಾಗಿದೆ. ಈ ವೇಳೆಯಲ್ಲಿ ಡಿ.ಕೆ. ಸುರೇಶ್ ಕೂಡ ಆಸಕ್ತಿ ತೋರಿದ್ದಾರೆ ಎಂಬ ಸುದ್ದಿ ರಾಜ್ಯ ರಾಜಕೀಯ ವಲಯದಲ್ಲಿ ಅದರಲ್ಲೂ ಪ್ರಮುಖವಾಗಿ ಆಡಳಿತ ಪಕ್ಷ ಕಾಂಗ್ರೆಸ್‌ನಲ್ಲಿ ತೀವ್ರ ಕುತೂಹಲ ಹುಟ್ಟು ಹಾಕಿದೆ.

ರಾಜ್ಯದ ದೇಗುಲಗಳ ಪ್ರಸಾದಕ್ಕೆ ನಂದಿನಿ ತುಪ್ಪ ಕಡ್ಡಾಯ: ಸರ್ಕಾರದ ಮಹತ್ವದ ಆದೇಶ

20 ಮಂದಿ ಮತದಾರರು:

ಒಂದೊಮ್ಮೆ  ಕೆಎಂಎಫ್ ಅಧ್ಯಕ್ಷಗಾದಿಗೆ ಚುನಾವಣೆ ನಡೆದರೆ 20 ಮಂದಿ ಮತದಾರರು ಮತ ಚಲಾಯಿ ಸಬೇಕಾಗುತ್ತದೆ. ಒಟ್ಟು ಹದಿನಾರು ಹಾಲು ಒಕ್ಕೂಟಗಳಿಂದಲೂ ಕೆಎಂಎಫ್ ಪ್ರತಿನಿಧಿಸಲು ಇರುವ ನಿರ್ದೇಶಕರು, ಎನ್‌ಡಿಡಿಎಫ್, ಸಹಕಾರ ಇಲಾಖೆ ರಿಜಿಸ್ಟ್ರಾರ್, ಕೆಎಂಫ್ ವ್ಯವಸ್ಥಾಪಕ ನಿರ್ದೇಶಕ, ಪಶುಸಂಗೋಪನೆ ಅಧಿಕಾರಿಗಳು ಸೇರಿ ಒಟ್ಟು 20 ಮಂದಿ ಕೆಎಂಎಫ್ ಅಧ್ಯಕ್ಷ ಸ್ಥಾನದ ಆಯ್ಕೆಗೆ ಮತ ಚಲಾಯಿಸಲಿದ್ದಾರೆ.  

ಡಿ.ಕೆ.ಸುರೇಶ್‌ಗೇಕೆ ಈ ಹುದ್ದೆ ಮೇಲೆ ಕಣ್ಣು? 

ಡಿ.ಕೆ.ಸುರೇಶ್ ಅವರಿಗೆ ಲೋಕಸಭೆ ಚುನಾವಣೆ ಸೋತ ಬಳಿಕ ವಿಧಾನಪರಿಷತ್ ಸದಸ್ಯ ಸ್ಥಾನ ಸಿದ್ದವಾಗಿತ್ತು. ಜತೆಗೆ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಸ್ಪರ್ಧೆ ಆಯ್ಕೆಯೂ ಮುಂದಿತ್ತು. ಆದರೆ ಕೆಎಂಎಫ್ ಅಧ್ಯಕ್ಷರಾಗಿ ಆಯ್ಕೆಯಾದರೆ ರೈತರೊಂದಿಗೆ ನಿಕಟ ಸಂಪರ್ಕ ಹೊಂದಬಹುದು. ಮುಖ್ಯವಾಗಿ ಹಳೆ ಮೈಸೂರು ಭಾಗದಲ್ಲಿ ರಾಜಕೀಯವಾಗಿ ಸಂಘಟನಾ ಶಕ್ತಿ ಸಿಗಲಿದೆ. ಜತೆಗೆ ಕೃಷಿಕರು, ರೈತರೊಂದಿಗೆ ಒಡನಾಡಬಹುದು ಎಂಬ ಕಾರಣಕ್ಕೆ ಸುರೇಶ್ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಈ ಚಿಂತನೆಯಿಂದ ಕೆಎಂಎಫ್‌ನಲ್ಲೂ ಬಣ ರಾಜಕೀಯಕ್ಕೆ ಬೀಜ ಬಿದ್ದಂತಾಗಿದೆ.

click me!