ನಾಡಿನ ಪ್ರಮುಖ ಲಿಂಗಾಯತ ಮಠಗಳಲ್ಲಿ ಒಂದಾದ ತುಮಕೂರಿನ ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕ ಕಾರ್ಯಕ್ರಮ ಭಾನುವಾರ ನಡೆಯಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಸಂಪ್ರದಾಯಬದ್ಧವಾಗಿ, ಸರಳವಾಗಿ ಕಾರ್ಯಕ್ರಮ ನಡೆಯಲಿದೆ.
ತುಮಕೂರು (ಏ.23): ನಾಡಿನ ಪ್ರಮುಖ ಲಿಂಗಾಯತ ಮಠಗಳಲ್ಲಿ ಒಂದಾದ ತುಮಕೂರಿನ ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕ ಕಾರ್ಯಕ್ರಮ ಭಾನುವಾರ ನಡೆಯಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಸಂಪ್ರದಾಯಬದ್ಧವಾಗಿ, ಸರಳವಾಗಿ ಕಾರ್ಯಕ್ರಮ ನಡೆಯಲಿದೆ. ಈ ಕುರಿತು ಶನಿವಾರ ಮಾಹಿತಿ ನೀಡಿದ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಮನುಕುಲದ ಇತಿಹಾಸದಲ್ಲೇ ಅತ್ಯಂತ ಸ್ಮರಣೀಯವಾದ ಬಹುದೊಡ್ಡ ವ್ಯಕ್ತಿತ್ವ ಬಸವೇಶ್ವರರದು. ಅವರ ಜಯಂತಿ ಸಂದರ್ಭದಲ್ಲಿ ಶ್ರೀಮಠಕ್ಕೆ ನೇಮಿಸಲಾಗಿರುವ ಉತ್ತರಾಧಿಕಾರಿ ಮನೋಜ ಕುಮಾರ್ ಅವರ ಪಟ್ಟಾಭಿಷೇಕ ಸಮಾರಂಭ ಸರಳವಾಗಿ ನಡೆಯಲಿದೆ. /
ಇದೇ ವೇಳೆ, ನಮ್ಮ ಶಾಖಾ ಮಠವಾದ ಬಂಡೇಮಠಕ್ಕೆ ಹರ್ಷ ಕೆ.ಎಂ., ಬೆಂಗಳೂರು ಗ್ರಾಮಾಂತರದ ವಿಜಯಪುರದ ಬಸವಕಲ್ಯಾಣ ಮಠಕ್ಕೆ ಗೌರೀಶ್ ಕುಮಾರ್ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದ್ದು, ಮೂವರಿಗೂ ಭಾನುವಾರ ಪಟ್ಟಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಬೆಳಗ್ಗಿನ ಜಾವ ಮಠದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಿ 6.30ಕ್ಕೆ ದೀಕ್ಷಾ ಸಂಸ್ಕಾರ ಮುಗಿಯುತ್ತದೆ. ಇದಾದ ಬಳಿಕ ಬೆಳಗ್ಗೆ 7.30ಕ್ಕೆ ಪಟ್ಟಾಭಿಷೇಕ ಸಮಾರಂಭ ಸರಳವಾಗಿ ಆರಂಭವಾಗುತ್ತದೆ. ರಾಜಕಾರಣಿಗಳು ಭಕ್ತರಾಗಿ ಮಠಕ್ಕೆ ಬಂದು ಹೋಗಬಹುದೇ ಹೊರತು ವೇದಿಕೆಗೆ ಯಾರಿಗೂ ಆಹ್ವಾನ ಇಲ್ಲ ಎಂದು ಇದೇ ವೇಳೆ ಸ್ವಾಮೀಜಿಗಳು ಸ್ಪಷ್ಟಪಡಿಸಿದರು.
ಇಂದು ಉತ್ತರಾಧಿಕಾರ ದೀಕ್ಷೆ: ಸಿದ್ಧಗಂಗೆ ವಿರಕ್ತಮಠಕ್ಕೆ ಹೊಸ ನಿರಂಜನ ಜಂಗಮ
ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಹಾಗೂ ಬೇಲಿ ಮಠದ ಶಿವಾನುಭವ ಚರಮೂರ್ತಿ ಶಿವಮೂರ್ತಿ ಮಹಾಸ್ವಾಮಿಗಳು ಸೇರಿ ಅನೇಕ ಮಠಾಧೀಶರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯುತ್ತದೆ. ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಬೃಹತ್ ಪ್ರಮಾಣದಲ್ಲಿ ಕಾರ್ಯಕ್ರಮ ಮಾಡುತ್ತಿಲ್ಲ. ಒಂದು ಸೀಮಿತ ವ್ಯವಸ್ಥೆಯೊಳಗೆ ಸರಳ ರೀತಿಯಲ್ಲಿ ಕಾರ್ಯಕ್ರಮವನ್ನು ಮಠದಲ್ಲಿ ಆಯೋಜಿಸಲಾಗಿದೆ. ಬಹಳಷ್ಟುಮಂದಿ ಬರುವ ಅಪೇಕ್ಷೆ ಇದ್ದರೂ ಅನಿವಾರ್ಯವಾಗಿ ಕಡಿಮೆ ಜನರಿರಬೇಕೆಂಬ ಉದ್ದೇಶದಿಂದ ಕಾರ್ಯಕ್ರಮ ಮಾಡಲಾಗುತ್ತಿದೆ. ವಿಶೇಷವಾಗಿ ಹೆಚ್ಚು ಜನರನ್ನು ಸೇರಿಸಲು ನಿರ್ಬಂಧ ಇರುವುದರಿಂದ ನಿಯಮಗಳ ಪಾಲನೆ ಮಾಡಬೇಕಿದೆ ಎಂದರು.
ಕಂಚುಗಲ್ ಬಂಡೇಮಠಕ್ಕೂ ಉತ್ತರಾಧಿಕಾರಿ ನೇಮಕ: ರಾಮನಗರ ಜಿಲ್ಲೆ ಮಾಗಡಿ ತಾಲೂಕು ಕಂಚುಗಲ್ ಬಂಡೇಮಠಕ್ಕೂ ಉತ್ತರಾಧಿಕಾರಿಯನ್ನು ನೇಮಿಸಲಾಗಿದೆ. ಹರ್ಷ ಕೆ.ಎಂ, ಮಠದ ಉತ್ತರಾಧಿಕಾರಿಯಾಗಿ ನೇಮಕವಾಗಿದ್ದಾರೆ. ತುಮಕೂರು ತಾಲೂಕಿನ ಕಾಳೇನಹಳ್ಳಿಯ ಹರ್ಷ ಅವರು, ಗ್ರಾಮದ ಮಹಾಂತೇಶ್ ಮತ್ತು ಮಲ್ಲಾಜಮ್ಮ ದಂಪತಿಯ ಪುತ್ರರು. ಬಿ.ಎ.,ಬಿ.ಎಡ್., ಎಂಎ, ವಿದ್ವತ್ (ಸಂಸ್ಕೃತ) ಪದವೀಧರರು. ಜೊತೆಗೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬಸವ ಕಲ್ಯಾಣ ಮಠಕ್ಕೆ ಗೌರೀಶ್ ಕುಮಾರ್ ಅವರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಗೌರೀಶ್ ಕುಮಾರ್ ಅವರು ಮಂಡ್ಯ ಜಿಲ್ಲೆ ಬಿಳಗುಲಿ ಗ್ರಾಮದ ನಿವಾಸಿಯಾಗಿದ್ದು, ಗಣೇಶ್ ಹಾಗೂ ಅಂಬಿಕಾ ದಂಪತಿಯ ಪುತ್ರರಾಗಿದ್ದಾರೆ. ವೇದಾಧ್ಯಯನ ಮಾಡಿದ್ದು, ಸಂಸ್ಕೃತ ವಿದ್ವತ್‌ನಲ್ಲಿ ಪ್ರಥಮ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ಇಂದು ಬಸವ ಜಯಂತಿ: ಆರ್ಥಿಕ ಕ್ರಾಂತಿಗೂ ನಾಂದಿ ಹಾಡಿದ್ದ ಬಸವಣ್ಣ
ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಜರುಗುವ ಕಾರ್ಯಕ್ರಮ: ಏ.23 ಭಾನುವಾರ, ಅಕ್ಷಯ ತೃತೀಯ ದಿನದಂದು ಸಿದ್ಧಗಂಗಾ ಮಠದಲ್ಲಿ ಅವರ ಪಟ್ಟಾಧಿಕಾರ ಕಾರ್ಯಕ್ರಮ ನೆರವೇರಲಿದೆ. ಒಂದೇ ದಿನ ಮೂವರ ಪಟ್ಟಾಧಿಕಾರ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಮಠದಲ್ಲಿ ಅಗತ್ಯ ಸಿದ್ಧತೆಗಳು ನಡೆದಿವೆ ಎಂದು ಸಿದ್ಧಗಂಗಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಟಿ.ಕೆ. ನಂಜುಂಡಪ್ಪ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.