ಮನೆ ಮನೆಗೆ ಕಲ್ಲು ಒಗೆಯುವುದು, ಕತ್ತಿ ತಗೊಂಡು ಹೊಡೆಯೋದು ಸಣ್ಣ ವಿಚಾರವಾ? ಎಂದು ಶಿವಮೊಗ್ಗದ ರಾಗಿಗುಡ್ಡದಲ್ಲಿ ಇತ್ತೀಚೆಗೆ ನಡೆದ ಗಲಭೆಗೆ ಸಂಬಂಧಿಸಿದಂತೆ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಪ್ರಶ್ನಿಸಿದರು.
ಧಾರವಾಡ (ಅ.7): ಮನೆ ಮನೆಗೆ ಕಲ್ಲು ಒಗೆಯುವುದು, ಕತ್ತಿ ತಗೊಂಡು ಹೊಡೆಯೋದು ಸಣ್ಣ ವಿಚಾರವಾ? ಎಂದು ಶಿವಮೊಗ್ಗದ ರಾಗಿಗುಡ್ಡದಲ್ಲಿ ಇತ್ತೀಚೆಗೆ ನಡೆದ ಗಲಭೆಗೆ ಸಂಬಂಧಿಸಿದಂತೆ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಪ್ರಶ್ನಿಸಿದರು.
ಇಲ್ಲಿಯ ಜೆಎಸ್ಸೆಸ್ ನೂತನ ಆಡಳಿತ ಮಂಡಳಿ 50ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಗಲಾಟೆ, ಗಲಭೆಗಳನ್ನು ಸರ್ಕಾರದಿಂದ ನಿಯಂತ್ರಿಸುವ ಕೆಲಸವಾಗಬೇಕು. ಗಲಭೆಗಳನ್ನು ಮೂಲದಲ್ಲಿಯೇ ಹತ್ತಿಕ್ಕಬೇಕು. ಯಾರೂ ಇಂತಹವುಗಳನ್ನು ಸಣ್ಣ ವಿಚಾರವೆಂದು ತಿಳಿಯಬಾರದು. ಸರ್ಕಾರ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಸನಾತನ ಧರ್ಮ: ದೇಶ ವಿರೋಧಿಗಳಿಗೆ ಪಾಠ ಅಗತ್ಯ, ಪೇಜಾವರ ಶ್ರೀ
ನಮ್ಮ ಸಂತೋಷದ ಪ್ರಯತ್ನ ಮತ್ತೊಬ್ಬರ ದುಃಖವಾಗಬಾರದು. ಎಲ್ಲರೂ ಸಂತೋಷದಿಂದ ಇರಬೇಕು. ಧರ್ಮ ಎಂದರೆ ಸಮಾಜವನ್ನು ನಿರಂತರ ಮುನ್ನಡೆಸುವ ಬದುಕಿನ ಸೂತ್ರವಾಗಿದೆ. ಎಲ್ಲರೂ ಸುಖ ಸಂತೋಷದಿಂದ ಇರಬೇಕು. ಅದಕ್ಕಾಗಿ ಅಳವಡಿಸಿಕೊಳ್ಳವೇಕಾದ ನೀತಿ ನಿಯಮವೇ ಸನಾತನ ಧರ್ಮ ಎಂದರು.
ಎಲ್ಲರಿಗೂ ಸುಖ ಸಿಗುವಂತೆ ನಾವು ಪ್ರಯತ್ನಿಸಬೇಕು. ಮಳೆ ಬಂದಾಗ ಇಡೀ ಊರಿಗೆ ಬರುತ್ತದೆ. ಹಾಗೆಯೇ ಸುಖ ಎಲ್ಲರೂ ನೆಮ್ಮದಿಯಿಂದ ಬದುಕುವಂತೆ ಮಾಡುತ್ತದೆ. ನಾವು ಇನ್ನೊಬ್ಬರ ಸುಖ ಬಯಸಿದರೆ ಮಾತ್ರ ಸುಖವಾಗಿರಲು ಸಾಧ್ಯ ಎಂದ ಸ್ವಾಮೀಜಿ, ಸನಾತನ ಧರ್ಮ ವಿರೋಧಿಸುವ ಮಟ್ಟಕ್ಕೆ ಕೈ ಹಾಕುವುದು ಸರಿಯಲ್ಲ. ಒಮ್ಮೆ ಕಿಡಿ ಹೊತ್ತಿದರೆ ಶಾಂತಿ ಬೇಗ ಸಿಗುವುದಿಲ್ಲ ಇದಕ್ಕೆ ಮಣಿಪುರ ರಾಜ್ಯ ಉದಾಹರಣೆ ಎಂದು ಎಚ್ಚರಿಸಿದರು.
ಸನಾತನಧರ್ಮ ಎಂಬುದು ಸದಾಕಾಲ ಇರುವಂತದ್ದು; ಪೇಜಾವರಶ್ರೀ
ರಾಜಕಾರಣಿಗಳು ಒಂದು ಪಕ್ಷಕ್ಕೆ ಸೀಮಿತವಲ್ಲ. ಸಮಾಜದ ಎಲ್ಲರ ಸುಖ-ಶಾಂತಿಗೆ ಬೇಕಾದ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ಎಲ್ಲರೂ ಸಮಾನರು, ಎಲ್ಲವೂ ನಮ್ಮದು ಎಂಬ ಭಾವನೆ ಬರಬೇಕು. ಎಲ್ಲರ ಸುಖವನ್ನು ಬಯಸುವ ಕಾರ್ಯವಾಗಬೇಕು ಎಂದು ಪೇಜಾವರ ಸ್ವಾಮೀಜಿ ಹೇಳಿದರು.