ಹೊಸ ವರ್ಷದ ಪಾರ್ಟಿಗೆ ಬಂದವರನ್ನು ಅಲ್ಲಿಯೇ ಉಳಿಸಿಕೊಳ್ಳಿ; ಹೋಟೆಲ್, ಲಾಡ್ಜ್ ಮಾಲೀಕರಿಗೆ ಪೊಲೀಸ್ ಸೂಚನೆ!

By Sathish Kumar KH  |  First Published Dec 29, 2024, 6:17 PM IST

ಶಿವಮೊಗ್ಗದಲ್ಲಿ ಹೊಸ ವರ್ಷಾಚರಣೆಗೆ ಸಾರ್ವಜನಿಕರಿಗೆ ಯಾವುದೇ ನಿರ್ಬಂಧಗಳಿಲ್ಲ. ಆದರೆ, ಮಧ್ಯರಾತ್ರಿ 1 ಗಂಟೆಯ ನಂತರ ಹೋಟೆಲ್, ಲಾಡ್ಜ್ ಮತ್ತು ಹೋಮ್‌ಸ್ಟೇಗಳಲ್ಲಿ ಉಳಿದುಕೊಳ್ಳುವ ಅಥವಾ ಸುರಕ್ಷಿತವಾಗಿ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಸೂಚಿಸಿದ್ದಾರೆ.


ಶಿವಮೊಗ್ಗ (ಡಿ.29): ರಾಜ್ಯದ ಮಲೆನಾಡಿನ ಹೆಬ್ಬಾಗಿಲು ಖ್ಯಾತಿಯ ಶಿವಮೊಗ್ಗ ನಗರದಲ್ಲಿ ಹೊಸ ವರ್ಷಾಚರಣೆಗೆ ಸಾರ್ವಜನಿಕರಿಗೆ ಯಾವುದೇ ನಿರ್ಬಂಧಗಳನ್ನು ಸರ್ಕಾರದಿಂದ ವಿಧಿಸಲಾಗಿಲ್ಲ. ಆದರೆ, ಮಧ್ಯರಾತ್ರಿ 1 ಗಂಟೆವರೆಗೂ ಹೊಸ ವರ್ಷಾಚರಣೆಗೆ ಆಚರಿಸಲು ಅವಕಾಶ ನೀಡಲಾಗಿದ್ದು, ಮಧ್ಯರಾತ್ರಿ 1 ಗಂಟೆಯ ನಂತರ ನಿಮ್ಮ ಹೋಟೆಲ್, ಲಾಡ್ಜ್ ಹಾಗೂ ಹೋಮ್‌ ಸ್ಟೇಗಳಿಗೆ ಬರುವ ಗ್ರಾಹಕರನ್ನು ಅಲ್ಲಿಯೇ ಉಳಿಸಿಕೊಳ್ಳುವುದಕ್ಕೆ ವ್ಯವಸ್ಥೆ ಮಾಡಬೇಕು. ಇಲ್ಲವೇ ಅವರನ್ನು ಸುರಕ್ಷಿತವಾಗಿ ಮನೆಗೆ ಬಿಟ್ಟು ಬರುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಖಡಕ್ ಸೂಚನೆ ನೀಡಿದ್ದಾರೆ.

ಹೊಸ ವರ್ಷದ ಪಾರ್ಟಿ ಆಯೋಜನೆ ಮಾಡುವ ಹೋಟೆಲ್ಸ್, ಲಾಡ್ಜ್ ಹಾಗೂ ಹೋಮ್‌ ಸ್ಟೇ ಮಾಲೀಕರೊಂದಿಗೆ ಭಾನುವಾರ ಶಿವಮೊಗ್ಗ ನಗರದ ಡಿಎಆ‌ರ್ ಸಭಾಂಗಣದಲ್ಲಿ ನಡೆಸಲಾದ ಸಭೆಯಲ್ಲಿ ಮಾತನಾಡಿದ ಅವರು, ಹೊಸ ವರ್ಷದ ಪಾರ್ಟಿ ಆಯೋಜನೆ ಮಾಡುವ ಎಲ್ಲರೂ ಪಾರ್ಟಿ ವೇಳೆ ಮಹಿಳೆಯರು ಮತ್ತು ಮಕ್ಕಳ ಬಗ್ಗೆ ವಿಶೇಷ ನಿಗಾವಹಿಸಬೇಕು. ಪಾರ್ಟಿಗಳ ಆಯೋಜನೆ ಕುರಿತು ಕಡ್ಡಾಯವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅನುಮತಿ ಪಡೆದುಕೊಳ್ಳಬೇಕು ಎಂದು ಹೋಮ್‌ ಸ್ಟೇ, ಹೋಟೆಲ್ ಮತ್ತು ಲಾಡ್ಜ್‌ಗಳ ಮಾಲೀಕರು ಮತ್ತು ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.

Tap to resize

Latest Videos

ಹೊಸ ವರ್ಷಕ್ಕೆ ಸಾರ್ವಜನಿಕರ ಹಿತದೃಷ್ಟಿಯಿಂದ ಸಂಭ್ರಮಾಚರಣೆಗೆ ಪೊಲೀಸ್ ಇಲಾಖೆಯ ಕೆಲವೊಂದು ಷರತ್ತುಗಳನ್ನು ಪಾಲನೆ ಮಾಡಬೇಕು. ಮುಖ್ಯವಾಗಿ ಸ್ಥಳೀಯ ಪೊಲೀಸ್‌ ಠಾಣೆಗಳ ಅನುಮತಿ ಇಲ್ಲದೆಯೇ ಪಾರ್ಟಿಗಳನ್ನು ಆಯೋಜಿಸುವಂತಿಲ್ಲ. ನಿಮ್ಮ ಸಾಮರ್ಥ್ಯ ಮೀರಿ ಬುಕಿಂಗ್ ಮಾಡಿಕೊಳ್ಳಬಾರದು. ಮದ್ಯದ ಅಮಲಿನಲ್ಲಿ ಸಾಕಷ್ಟು ಅಪಘಾತ, ಅನಾಹುತಗಳು ಸಂಭವಿಸುವ ಕಾರಣದಿಂದ ಅಬಕಾರಿ ಇಲಾಖೆ ನಿಯಮನುಸಾರ ಮದ್ಯ ಪೂರೈಕೆ ಮಾಡಬೇಕು. ಯಾವುದೇ ಗಲಾಟೆಗಳಿಗೆ ಅವಕಾಶವಿಲ್ಲದಂತೆ ಹೊಸ ವರ್ಷವನ್ನು ಬರಮಾಡಿ ಕೊಳ್ಳಬೇಕು ಎಂದು ತಿಳಿಸಿದರು.

ಇದನ್ನೂ ಓದಿ: ನ್ಯೂಇಯರ್‌ ಸೆಲೆಬ್ರೆಷನ್‌: ಬೆಂಗ್ಳೂರಲ್ಲಿ 1000 ಕೋಟಿ ಹೊಸ ವರ್ಷ ವಹಿವಾಟು?

ಹೊಸ ವರ್ಷದ ದಿನದಂದು ಡಿ.31ರ ಮಧ್ಯರಾತ್ರಿ 1ರವರೆಗೆ ಸಾರ್ವಜನಿಕವಾಗಿ ಸಂಭ್ರಮಾಚರಣೆಗೆ ಅವಕಾಶ ನೀಡಲಾಗುವುದು. ಅತಿ ವೇಗದಿಂದ ವಾಹನಗಳ ಚಾಲನೆ ಮಾಡಬಾರದು. ಜೊತೆಗೆ, ಕುಡಿದು ವಾಹನ ಓಡಿಸಬಾರದು. ಪಾರ್ಟಿಗಳನ್ನು ತಮ್ಮ ಜಾಗದಲ್ಲಿ ಆಯೋಜನೆ ಮಾಡಿಕೊಳ್ಳಬೇಕು. ಮಧ್ಯರಾತ್ರಿ 1 ಗಂಟೆಯ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪಾರ್ಟಿಗೆ ಬರುವವರನ್ನು ರಾತ್ರಿ ಆದಷ್ಟು ಅಲ್ಲಿಯೇ ಉಳಿದುಕೊಳ್ಳುವ ವ್ಯವಸ್ಥೆ ಮಾಡಬೇಕು. ಅಥವಾ ಕುಡಿದು ಮನೆಗೆ ಹೋಗುವವರಿಗೆ ಮನೆವರೆಗೆ ಬಿಟ್ಟು ಬರುವುದಕ್ಕೆ ಚಾಲಕರನ್ನು ನಿಯೋಜಿಸಿಕೊಳ್ಳಬೇಕು. ಒಂದು ವೇಳೆ ಏನಾದರೂ ಅನಾಹುತ ಆದರೆ ನಮಗೂ ಅದಕ್ಕೂ ಸಂಬಂಧವಿಲ್ಲ ಎನ್ನುವಂತಿಲ್ಲ ಎಂದು ಖಡಕ್ ಸೂಚನೆ ನೀಡಿದರು.

ಇನ್ನು ಸಭೆಯಲ್ಲಿ ಎಎಸ್‌ಪಿಗಳಾದ ಅನಿಲ್‌ಕುಮಾ‌ರ್ ಭೂಮರಡ್ಡಿ ಹಾಗೂ ಎ.ಜಿ.ಕಾರಿಯಪ್ಪ ಉಪಸ್ಥಿತರಿದ್ದರು.

ಇದನ್ನೂ ಓದಿ: ನಡು ರಸ್ತೆಯಲ್ಲಿ ಅಪಾಯಕಾರಿ ರೀಲ್ಸ್ ಮಾಡಿದ ಯುವಕ; ಮುಂದಾಗಿದ್ದೇನು?

click me!