ಬೀದರ್‌ನ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಆಪ್ತ ಸಹಾಯಕನ ಒತ್ತಡ, ಹಣದ ಬೇಡಿಕೆ ಮತ್ತು ಕೊಲೆ ಬೆದರಿಕೆ ಇತ್ತು ಎಂದು ಸಂಸದ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸದೆ, ಕುಟುಂಬಸ್ಥರ ದೂರಿಗೆ ಸ್ಪಂದಿಸದಿರುವುದು ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಿರುವುದನ್ನು ಸೂಚಿಸುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆ (ಡಿ.29): ಇತ್ತೀಚೆಗೆ ಬೆಳಗಾವಿಯಲ್ಲಿ ಹೆಬ್ಬಾಳ್ಕರ್ ಪಿಎ ಕಿರುಕುಳದಿಂದ ಎಸ್‌ಡಿಎ ಒಬ್ಬ ಆತ್ಮಹತ್ಯೆ ಮಾಡಿಕೊಂಡ ಆದರೂ ಪಿಎ ಬಂಧನ ಆಗದೇ ಬೇಲ್ ಪಡೆದು ಆಚೆ ಓಡಾಡುತ್ತಿದ್ದಾನೆ. ಇದೀಗ ಪ್ರಿಯಾಂಕ್ ಖರ್ಗೆ ಆಪ್ತ ಸಹಾಯಕನ ಒತ್ತಡದಿಂದ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಜ್ಯದಲ್ಲಿ ಅರಾಜಕತೆ ಉಂಟಾಗಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.
ಬೀದರ್ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣ ಸಂಬಂಧ ಇಂದು ದಾವಣಗೆರೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಸದರು, ಸಚಿನ್ ಪಾಂಚಾಳ ಆತ್ಮಹತ್ಯೆಯಲ್ಲಿ ಪ್ರಿಯಾಂಕ್ ಖರ್ಗೆ ಅಪ್ತ ಸಹಾಯಕನ ಒತ್ತಡ, ಹಣಕ್ಕೆ ಬೇಡಿಕೆ, ಕೊಲೆ ಬೆದರಿಕೆ ಹಾಕಿದ ಬಗ್ಗೆ ಗುತ್ತಿಗೆದಾರ ಸ್ಪಷ್ಟವಾಗಿ ಬರೆದಿದ್ದಾನೆ. ಆದರೂ ಅರೋಪಿಯ ಮೇಲೆ ಪೊಲೀಸರು ಎಫ್‌ಐಆರ್ ಮಾಡಿಲ್ಲ. ಮೃತನ ಕುಟುಂಬಸ್ಥರು ಪೊಲೀಸರ ಬಳಿ ದೂರು ನೀಡಲು ಹೋದರೂ ಸರಿಯಾಗಿ ಸ್ಪಂದಿಸಿಲ್ಲ ಎಂದು ಕುಟುಂಬಸ್ಥರು ಆರೋಪಿಸಿರುವುದು ನೋಡಿದರೆ ರಾಜ್ಯ ಪೊಲೀಸರ ನಡೆಯೂ ತುಂಬಾ ಅಪಾಯಕಾರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವಿಚಾರವಾಗಿ ಬಿಜೆಪಿ ಹೋರಾಟ ಮಾಡಿ ಕೋರ್ಟ್ ನಿಂದ ಡೈರೆಕ್ಷನ್ ತಂದ ಪರಿಣಾಮ ಪೊಲೀಸರು ಎಫ್‌ಐಆರ್ ಮಾಡಿದ್ದಾರೆ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅರಾಜಕತೆ ಉಂಟಾಗಿದೆ. ರಾಜ್ಯ ಸರ್ಕಾರದಿಂದ ಜನರು ಹಿಂಸೆ, ಬೆದರಿಕೆ, ಆತ್ಮಹತ್ಯೆ ಪ್ರಕರಣಗಳಿಂದ ರೋಸಿಹೋಗಿದ್ದಾರೆ. ರಾಜ್ಯದಲ್ಲಿ ಗುತ್ತಿಗೆದಾರರ ದಿನನಿತ್ಯ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬಹುತೇಕ ಗುತ್ತಿಗೆದಾರರ ಆತ್ಮಹತ್ಯೆಗೆ ಕಾರಣ ರಾಜ್ಯ ಸರ್ಕಾರದ ಮಂತ್ರಿಗಳ ಆಪ್ತ ಸಹಾಯಕರೇ ಕಾರಣರಾಗಿದ್ದಾರೆ ಎನ್ನುವುದು ಡೆತ್‌ನೋಟ್ ನೋಡಿದಾಗ ಸ್ಪಷ್ಟವಾಗುತ್ತೆ.
ಮುಡಾ, ವಾಲ್ಮೀಕಿ ಹಗರಣ ಹೊರಬರುತ್ತಿದ್ದಂತೆ ಸಿದ್ದರಾಮಯ್ಯ ಅವರ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ಸುಖಾಸುಮ್ಮನೆ ಅಧಿಕಾರ, ಪೊಲೀಸ್ ಇಲಾಖೆಯನ್ನ ದುರುಪಯೋಗಪಡಿಸಿಕೊಂಡು ಬಿಜೆಪಿ ನಾಯಕರ ಮೇಲೆ ಕೇಸ್ ದಾಖಲಿಸುತ್ತಿದೆ. ರಾಜ್ಯ ಸರ್ಕಾರದ ನೂರಾರು ಕೋಟಿ ರೂಪಾಯಿಗಳ ಹಗರಣ ಬಯಲಿಗೆಳೆದಿದ್ದಕ್ಕೆ ಬಿಜೆಪಿ ನಾಯಕರನ್ನ ಟಾರ್ಗೆತ್ ಮಾಡುತ್ತಿದೆ. ನ್ಯಾಯಾಂಗ ತನಿಖೆಯ ಮಧ್ಯಂತರ ವರದಿ ತರಿಸುವುದು, ಕೇಸ್ ಹಾಕುವುದು, ಎಸ್‌ಐಟಿ ತನಿಖೆ ಮಾಡಿಸಿ ತಮ್ಮ ನಿರ್ದೇಶನದಂತೆ ತನಿಖೆ ವರದಿ ತರಿಸುವುದು ಮಾಡುತ್ತಿದೆ. ಇದು ಸಿದ್ದರಾಮಯ್ಯ ಅವರ ಸೇಡಿನ ರಾಜಕಾರಣ ಎಂಬುದು ಪ್ರತ್ಯೇಕ ಹೇಳಬೇಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ಹರಿಹಾಯ್ದರು.
ಕಾಂಗ್ರೆಸ್ ಯಾವತ್ತೂ ಅಂಬೇಡ್ಕರ್‌ಗೆ ಒಳ್ಳೆಯದು ಬಯಸಿಲ್ಲ: ಸಂಸದ ಗದ್ದಿಗೌಡರ್ ಕಿಡಿ
ಇದೇ ವೇಳೆ ರಾಜ್ಯ ಬಿಜೆಪಿಯಲ್ಲಿ ಶುರುವಾಗಿರುವ ಬಂಡಾಯ ವಿಚಾರವಾಗಿ ಪ್ರತಿಕ್ರಿಯಿಸಿದ ಸಂಸದರು. ಬಣ ರಾಜಕೀಯ ಬೇಗ ಬಗೆಹರಿಯುತ್ತದೆ. ಈ ವಿಚಾರವಾಗಿ ಹೈಕಮಾಂಡ್ ನಿರ್ಧಾರ ತೆಗೆದುಕೊಂಡು ಇತ್ಯರ್ಥ ಮಾಡುತ್ತಾರೆ ಎಂದರು.