ಮಹಿಳೆಯರಿಗೆ ಉಚಿತ ಬಸ್ ಯೋಜನೆ ಜಾರಿ ಹಿನ್ನೆಲೆಯಲ್ಲಿ ವೀಕೆಂಡ್ ಹಾಗೂ ಆಷಾಢ ಶನಿವಾರ ನಿಮಿತ್ತ ರಾಜ್ಯದ ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಬೆಂಗಳೂರು (ಜೂ.25): ಮಹಿಳೆಯರಿಗೆ ಉಚಿತ ಬಸ್ ಯೋಜನೆ ಜಾರಿ ಹಿನ್ನೆಲೆಯಲ್ಲಿ ವೀಕೆಂಡ್ ಹಾಗೂ ಆಷಾಢ ಶನಿವಾರ ನಿಮಿತ್ತ ರಾಜ್ಯದ ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಸವದತ್ತಿ ಯಲ್ಲಮ್ಮ, ಆಂಜನಾದ್ರಿ ಸೇರಿ ರಾಜ್ಯದ ಶಕ್ತಿ ಕ್ಷೇತ್ರಗಳಿಗೆ ತೆರಳುವ ಬಸ್ಸುಗಳು ಮಹಿಳೆಯರಿಂದ ತುಂಬಿ ತುಳುಕುತ್ತಿವೆ.
‘ಶಕ್ತಿ’ ಯೋಜನೆ ಹಿನ್ನೆಲೆಯಲ್ಲಿ ಮಹಿಳೆಯರು ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ರಾಜ್ಯದ ತೀರ್ಥಕ್ಷೇತ್ರಗಳಲ್ಲಿ ಎಲ್ಲಿ ನೋಡಿದರಲ್ಲಿ ಮಹಿಳೆಯರು ಕಂಡುಬರುತ್ತಿದ್ದಾರೆ. ಇದೇ ವೇಳೆ, ಬೆಳಗಾವಿ ಜಿಲ್ಲೆ ಸವದತ್ತಿ ಸೇರಿ ಕೆಲವೆಡೆ ಸಂಚರಿಸುವ ಬಸ್ಸುಗಳಲ್ಲಿ ಸೀಟಿಗಾಗಿ ಮಹಿಳೆಯರ ನಡುವೆ ಮಾತಿನ ಚಕಮಕಿ ಕೂಡ ನಡೆದ ಬಗ್ಗೆ ವರದಿಯಾಗಿದೆ. ಆದರೆ, ಕಳೆದ ವೀಕೆಂಡ್‌ಗೆ ಹೋಲಿಸಿದರೆ ಧಾರ್ಮಿಕ ಕ್ಷೇತ್ರಗಳಲ್ಲಿ ಈ ಬಾರಿ ರಶ್ ಸ್ವಲ್ಪ ಕಡಿಮೆ ಇದೆ.
ನಳಿನ್ ಕುಮಾರ್ ಕಟೀಲ್ ಮನೆಗೆ ಮಾರಿ, ಪರರಿಗೆ ಉಪಕಾರಿ: ಸಚಿವ ದಿನೇಶ್ ಗುಂಡೂರಾವ್
ಬೆಟ್ಟಕ್ಕೆ ನೂಕು-ನುಗ್ಗಲು: ಸಾಧಾರಣವಾಗಿ ಪ್ರತಿವರ್ಷ ಆಷಾಢ ಮಾಸದಲ್ಲಿ ಶನಿವಾರದಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇರುತ್ತಿತ್ತು. ಆದರೆ, ಈ ಬಾರಿ ಜಾಸ್ತಿ ಇದ್ದು, ಚಾಮುಂಡಿ ಬೆಟ್ಟಕ್ಕೆ ತೆರಳುವ ಬಸ್ಸಿನಲ್ಲಿ ನೂಕು ನುಗ್ಗಲು ಉಂಟಾಗಿ, ಭಕ್ತರು ಪರದಾಡುವಂತಾಯಿತು. ಗೋಕರ್ಣ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ, ಕೊಲ್ಲೂರು ಸೇರಿದಂತೆ ಕರಾವಳಿ ಭಾಗದ ದೇವಾಲಯಗಳಲ್ಲಿ ಹೊರ ಜಿಲ್ಲೆಗಳಿಂದ ಬಂದ ಮಹಿಳಾ ಭಕ್ತಾದಿಗಳು ಹೆಚ್ಚಿದ್ದರು.
ಉಡುಪಿ ಮತ್ತು ಕುಂದಾಪುರ ಡಿಪೋಗಳಿಂದ ಸುಮಾರು 80 ಬಸ್‌ಗಳನ್ನು ಜಿಲ್ಲೆ ಮತ್ತು ಹೊರಜಿಲ್ಲೆಗಳಿಗೆ ಬಿಡಲಾಗಿದ್ದು, 5 ಸಾವಿರಕ್ಕೂ ಹೆಚ್ಚು ಮಂದಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾಗಿ ತಿಳಿದು ಬಂದಿದೆ. ದಾವಣಗೆರೆಯಿಂದ ಧರ್ಮಸ್ಥಳಕ್ಕೆ ಚಿಕ್ಕ ತಂಡದಲ್ಲಿ ಆಗಮಿಸಿದ ಮಂಗಳಮುಖಿಯರು, ಮಂಜುನಾಥನ ದರ್ಶನ ಪಡೆದು ಪುನೀತ ಭಾವ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು. ಹನುಮ ಜನಿಸಿದ ಸ್ಥಳ ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಶನಿವಾರ 35 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರು. ಈ ಪೈಕಿ ಮಹಿಳಾ ಭಕ್ತರ ಸಂಖ್ಯೆ ಅಧಿಕವಾಗಿತ್ತು.
ಅಂಜನಾದ್ರಿ ಬೆಟ್ಟಏರುವುದಕ್ಕಾಗಿ ಗಂಗಾವತಿಯಿಂದ ಮುನಿರಾಬಾದ್ ಮಾರ್ಗದ ದ್ವಾರದಿಂದ ಹೋಗಲು ಅನುಮತಿ ನೀಡಲಾಗಿತ್ತು. ದೇವಸ್ಥಾನದಲ್ಲಿ ದರ್ಶನಕ್ಕೂ ಸರತಿ ಸಾಲಿನಲ್ಲಿ ಅನುಕೂಲ ಮಾಡಿಕೊಡಲಾಗಿತ್ತು. ಸುಗಮವಾಗಿ ಬೆಟ್ಟದಿಂದ ಕೆಳಗೆ ಇಳಿಯಲು ಅಂಜನಿಹಳ್ಳಿಯ ಮಾರ್ಗದಿಂದ ನಿರ್ಗಮಿಸಲು ಸೂಚನೆ ನೀಡಲಾಗಿತ್ತು. ಸುಗಮ ದರ್ಶನಕ್ಕೆ ಅನುವಾಗಲು ಪೊಲೀಸರ ಸೇವೆಯನ್ನು ಬಳಸಿಕೊಳ್ಳಲಾಗಿತ್ತು. ಇದೇ ವೇಳೆ, ಸಮೀಪದ ದುರ್ಗಾಬೆಟ್ಟ, ನವ ವೃಂದಾವನ, ವಾಲಿ ಕಿಲ್ಲಾಗಳಲ್ಲಿಯೂ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಿತ್ತು.
ಅಕ್ಕಿಯನ್ನು ಮೋದಿಯವರಿಗೆ ಕೇಳಿ ಕೊಡುತ್ತೇನೆ ಎಂದು ಸಿದ್ದು ಹೇಳಿದ್ದರಾ?: ನಳಿನ್ ಕುಮಾರ್ ಕಟೀಲ್
ವಿಶ್ವವಿಖ್ಯಾತ ಪ್ರವಾಸಿ ತಾಣ ಹಂಪಿಗೆ ಶನಿವಾರ 10 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿ, ಹಂಪಿಯ ವಿರೂಪಾಕ್ಷೇಶ್ವರ ದೇವಾಲಯ, ಕಡಲೆ ಕಾಳು, ಸಾಸಿವೆ ಕಾಳು ಗಣಪ ಮಂಟಪಗಳು, ವಿಜಯ ವಿಠ್ಠಲ ದೇವಾಲಯಗಳಿಗೆ ಭೇಟಿ ನೀಡಿದರು. ಕಲಬುರಗಿ ಬಸ್ ನಿಲ್ದಾಣದಿಂದ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಶನಿವಾರ ಹೆಚ್ಚುವರಿಯಾಗಿ 17 ಬಸ್‌ಗಳನ್ನು ಬಿಡಲಾಗಿತ್ತು. ವಿಜಯಪುರದಿಂದ ಯಲಗೂರು ಆಂಜನೇಯಸ್ವಾಮಿ, ಕೂಡಲಸಂಗಮ, ಗುಡ್ಡಾಪುರ ದಾನಮ್ಮ, ಘತ್ತರಗಿ ಬಾಗಮ್ಮ ದೇವಾಲಯಗಳಿಗೆ ತೆರಳುವ ಬಸ್ಸುಗಳಲ್ಲಿ ಶನಿವಾರ ಫುಲ್ ರಶ್ ಇತ್ತು. ಕೆಲವೆಡೆ ಸೀಟಿಗಾಗಿ ಮಹಿಳೆಯರ ಮಧ್ಯೆ ಮಾತಿನ ಚಕಮಕಿ ಕೂಡ ನಡೆದಿದೆ.