
ಬೆಂಗಳೂರು (ಜು.03): ರಾಜ್ಯ ಸರ್ಕಾರದ ಉಚಿತ ಬಸ್ ಯೋಜನೆಯಡಿ ರಾಜ್ಯದ ತೀರ್ಥಕ್ಷೇತ್ರಗಳಲ್ಲಿ ರಜಾದಿನವಾದ ಭಾನುವಾರ ಜನಸಾಗರ ಕಂಡು ಬಂತು. ಅದರಲ್ಲೂ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಮಹಿಳೆಯರ ಸಂಖ್ಯೆಯೇ ಜಾಸ್ತಿಯಿತ್ತು. ಆದರೆ, ಕಳೆದೆರಡು ವೀಕೆಂಡ್‌ಗೆ ಹೋಲಿಸಿದರೆ, ರಾಜ್ಯದ ಬಹುತೇಕ ತೀರ್ಥಕ್ಷೇತ್ರಗಳಲ್ಲಿ ಈ ವಾರ ಭಕ್ತರ ಸಂಖ್ಯೆ ಕಡಿಮೆಯಿತ್ತು.
ಕೊಪ್ಪಳದ ಅಂಜನಾದ್ರಿ, ದಾವಣಗೆರೆ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳು, ಚಿಕ್ಕಮಗಳೂರು ಜಿಲ್ಲೆಗಳ ಪ್ರವಾಸಿ ತಾಣಗಳು, ಬಳ್ಳಾರಿ ಜಿಲ್ಲೆಯ ವಿಶ್ವ ಪರಂಪರೆ ತಾಣ ಹಂಪಿ, ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮ, ಈಶಾ ಫೌಂಡೇಷನ್‌ನ ಆದಿಯೋಗಿ ಶಿವ ದೇವಾಲಯ, ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟ, ತುಮಕೂರು ಜಿಲ್ಲೆಯ ಗೊರವನಹಳ್ಳಿ ಮಹಾಲಕ್ಷ್ಮೇ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಕಳೆದ ವಾರಕ್ಕಿಂತ ಜಾಸ್ತಿಯಿತ್ತು. ಆದರೆ, ಕರಾವಳಿ, ಮಲೆನಾಡು ಭಾಗದ ತೀರ್ಥಕ್ಷೇತ್ರಗಳು, ಮಂಡ್ಯ ಜಿಲ್ಲೆಯ ದೇವಾಲಯಗಳು, ಮೈಸೂರಿನ ಚಾಮುಂಡಿ ಬೆಟ್ಟಗಳಲ್ಲಿ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಭಕ್ತರ ಸಂಖ್ಯೆ ಕಡಿಮೆಯಿತ್ತು.
ವಿಜಯನಗರ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಬದ್ಧ: ಸಚಿವ ಜಮೀರ್ ಅಹ್ಮದ್ ಖಾನ್
ಹೆಚ್ಚುವರಿ ಬಸ್: ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನಬೆಟ್ಟಮತ್ತು ಹಿಮವದ್ ಗೋಪಾಲಸ್ವಾಮಿ ಬೆಟ್ಟಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿತ್ತು. ಚಾಮರಾಜನಗರ ಬಸ್ ನಿಲ್ದಾಣದಿಂದ ಈ ಯಾತ್ರಾ ಸ್ಥಳಗಳಿಗೆ ಹೆಚ್ಚುವರಿಯಾಗಿ 20 ಬಸ್‌ಗಳನ್ನು ಬಿಡಲಾಗಿತ್ತು. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಭಕ್ತರ ಸಂಖ್ಯೆ ಕಳೆದ ವಾರಕ್ಕಿಂತಲೂ ಹೆಚ್ಚಿತ್ತು. ಕಳೆದೆರಡು ವಾರ ಕ್ಷೇತ್ರಕ್ಕೆ ಸರಾಸರಿ 25-30 ಸಾವಿರ ಭಕ್ತರು ಆಗಮಿಸಿದ್ದರು. ಆದರೆ, ಈ ಭಾನುವಾರ 30-35 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿದ್ದರು. ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ಗಂಗಾವತಿ ಮತ್ತು ಕೊಪ್ಪಳ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸವಾರರು ಪರದಾಡಬೇಕಾಯಿತು.
ಆದರೆ, ಕಳೆದೆರಡು ವಾರಗಳಿಗೆ ಹೋಲಿಸಿದರೆ ಹುಲಿಗೆಮ್ಮ ದೇವಸ್ಥಾನಕ್ಕೆ ಈ ವಾರ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಕಳೆದೆರಡು ವಾರ ಸರಾಸರಿ 25-30 ಸಾವಿರ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು. ಈ ವಾರ 10-15 ಸಾವಿರ ಭಕ್ತರು ಆಗಮಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಿಶ್ವ ಪರಂಪರೆ ತಾಣ ಹಂಪಿಯ ವಿರೂಪಾಕ್ಷೇಶ್ವರ ದೇವಾಲಯ, ಸಾಸಿವೆ ಕಾಳು, ಕಡಲೆಕಾಳು ಗಣಪತಿ ಮಂಟಪ ವೀಕ್ಷಣೆಗೆ 10 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದು, ಈ ಪೈಕಿ ಮಹಿಳಾ ಪ್ರವಾಸಿಗರು ಹೆಚ್ಚಿದ್ದರು. ಹೊಸಪೇಟೆಯಿಂದ ಹಂಪಿಗೆ ತೆರಳುವ ಬಸ್‌ಗಳು ಫುಲ್ ರಶ್ ಆಗಿದ್ದವು. ದಾವಣಗೆರೆ ಬಸ್ ನಿಲ್ದಾಣದಿಂದ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಬಸ್‌ಗಳಲ್ಲಿ ರಶ್ ಇತ್ತು. ಗೊರವನಹಳ್ಳಿ ಮಹಾಲಕ್ಷ್ಮೇ ದೇವಸ್ಥಾನ, ಸಿದ್ದರಬೆಟ್ಟಸೇರಿದಂತೆ ತುಮಕೂರು ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಲ್ಲಿ ಮಹಿಳಾ ಭಕ್ತಾದಿಗಳ ದಂಡೇ ಆಗಮಿಸಿತ್ತು. ಈ ಕ್ಷೇತ್ರಗಳಿಗೆ ತುಮಕೂರು ಬಸ್ ನಿಲ್ದಾಣದಿಂದ 4 ಬಸ್‌ಗಳನ್ನು ಹೆಚ್ಚುವರಿಯಾಗಿ ಬಿಡಲಾಗಿತ್ತು.
ಭಕ್ತರ ಸಂಖ್ಯೆ ಕ್ಷೀಣ: ಉಡುಪಿಯ ಕೃಷ್ಣಮಠ, ಕೊಲ್ಲೂರು, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಗಳಲ್ಲಿ ಕಳೆದ ವಾರದಷ್ಟುದಟ್ಟಣೆ ಕಂಡು ಬರಲಿಲ್ಲ. ಉಡುಪಿಗೆ ಈ ವಾರಾಂತ್ಯ ಹೊರಜಿಲ್ಲೆಗಳಿಂದ ಆಗಮಿಸಿದ ಬಸ್‌ಗಳಲ್ಲಿ ಸುಮಾರು 600-700 ಮಂದಿ ಮಹಿಳೆಯರು ಆಗಮಿಸಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವಾರ ಸುಮಾರು 1 ಸಾವಿರದಷ್ಟುಮಹಿಳೆಯರು ಆಗಮಿಸಿದ್ದರು. ಶಿವಮೊಗ್ಗ ಜಿಲ್ಲೆಯ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲೂ ಭಕ್ತರ ಸಂಖ್ಯೆ ಕಡಿಮೆ ಇತ್ತು. ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಹೊನ್ನಮ್ಮನಹಳ್ಳ, ದತ್ತಪೀಠ, ಮಾಣಿಕ್ಯಧಾರ ಸೇರಿ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದರೂ, ಕಳಸ, ಹೊರನಾಡು, ಶೃಂಗೇರಿ ಸೇರಿ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರ ಸಂಖ್ಯೆ ಕಡಿಮೆಯಿತ್ತು.
ಸಸಿ ನಿರ್ವಹಣೆಗೆ ಆಡಿಟ್, ಜಿಯೋ ಟ್ಯಾಗ್: ಸಚಿವ ಈಶ್ವರ ಖಂಡ್ರೆ
ಕಾವೇರಿ ನದಿಯಲ್ಲಿ ನೀರು ಕಡಿಮೆಯಾಗಿರುವ ಕಾರಣ ಮಂಡ್ಯ ಜಿಲ್ಲೆಯ ಚಿಕ್ಕಎಡಮುರಿ, ಬಲಮುರಿ, ಮಳವಳ್ಳಿಯ ಗಗನಚುಕ್ಕಿ ಜಲಪಾತ, ಹಲಗೂರಿನ ಬೆಂಕಿಪಾಲ್ಸ್, ಕೆಆರ್‌ಎಸ್, ನಿಮಿಷಾಂಬ ದೇಗುಲಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು. ಗಾಣಗಾಪುರ, ಮಣ್ಣೂರು ಯಲ್ಲಮ್ಮ ದೇವಿ, ಘತ್ತರಗಾ ಭಾಗ್ಯವಂತಿ ದೇವಿ, ನಾಗಾವಿ ಎಲ್ಲಮ್ಮದೇವಿ, ಹೊನಗುಂಟಿ ಹಾಗೂ ಸನ್ನತಿ ಚಂದ್ರಲಾ ಪರಮೇಶ್ವರಿ ದೇವಿ ದೇವಸ್ಥಾನ ಸೇರಿದಂತೆ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ದೇವಾಲಯಗಳಲ್ಲಿಯೂ ಕಳೆದ ಬಾರಿಗೆ ಹೋಲಿಸಿದರೆ ಭಕ್ತರ ಸಂಖ್ಯೆ ಕಡಿಮೆ ಇತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ