ಕನ್ನಡಪರ ನಿಲುವು: ಮಲಯಾಳಿ ಶಿಕ್ಷಕಿ ಬದಲು ಮುಖ್ಯ ಶಿಕ್ಷಕನೇ ವರ್ಗ!

Published : Jul 03, 2023, 01:20 AM IST
ಕನ್ನಡಪರ ನಿಲುವು: ಮಲಯಾಳಿ ಶಿಕ್ಷಕಿ ಬದಲು ಮುಖ್ಯ ಶಿಕ್ಷಕನೇ ವರ್ಗ!

ಸಾರಾಂಶ

ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಮಾಧ್ಯಮ ಹೈಸ್ಕೂಲ್‌ಗೆ ನೇಮಕಗೊಂಡ ಮಲಯಾಳಿ ಭಾಷಿಕ ಶಿಕ್ಷಕಿಯ ಬದಲು ಅಲ್ಲಿ ಕನ್ನಡ ಭಾಷೆ ಗೊತ್ತಿರುವ ಮುಖ್ಯಶಿಕ್ಷಕನನ್ನೇ ಕೇರಳ ಸರ್ಕಾರ ಎತ್ತಂಗಡಿ ಮಾಡಿದೆ.

ಆತ್ಮಭೂಷಣ್‌

ಮಂಗಳೂರು (ಜು.03): ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಮಾಧ್ಯಮ ಹೈಸ್ಕೂಲ್‌ಗೆ ನೇಮಕಗೊಂಡ ಮಲಯಾಳಿ ಭಾಷಿಕ ಶಿಕ್ಷಕಿಯ ಬದಲು ಅಲ್ಲಿ ಕನ್ನಡ ಭಾಷೆ ಗೊತ್ತಿರುವ ಮುಖ್ಯಶಿಕ್ಷಕನನ್ನೇ ಕೇರಳ ಸರ್ಕಾರ ಎತ್ತಂಗಡಿ ಮಾಡಿದೆ. ಆ ಮೂಲಕ ಅಲ್ಲಿನ ಕನ್ನಡಿಗರಿಗೆ ಕನ್ನಡ ಮಾಧ್ಯಮ ಶಾಲೆಗಳಲ್ಲೇ ಕನ್ನಡ ಕಲಿಕೆಗೆ ಮತ್ತೆ ತೊಂದರೆ ಉಂಟಾಗಿದೆ. ಕಾಸರಗೋಡು ಜಿಲ್ಲೆ ಅಡೂರು ಸರ್ಕಾರಿ ಕನ್ನಡ ಮಾಧ್ಯಮ ಹೈಸ್ಕೂಲ್‌ನ ಸಮಾಜ ವಿಜ್ಞಾನ ವಿಭಾಗಕ್ಕೆ ಮಲಯಾಳಿ ಭಾಷಿಕ ಶಿಕ್ಷಕಿಯೊಬ್ಬರನ್ನು ಕೇರಳ ಸರ್ಕಾರ ನೇಮಕ ಮಾಡಿತ್ತು. ತಿರುವನಂತಪುರ ಮೂಲದ ಈ ಶಿಕ್ಷಕಿ ಈ ಹಿಂದೆ ಉದುಮ ಹಾಗೂ ಹೊಸದುರ್ಗ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ನೇಮಕಗೊಂಡಿದ್ದರು. 

ಅಲ್ಲಿ ತೀವ್ರ ವಿರೋಧ ವ್ಯಕ್ತವಾದ ಕಾರಣ ಅವರನ್ನು ಮೈಸೂರಿನ ಕೇಂದ್ರೀಯ ಭಾಷಾ ಸಂಶೋಧನಾ ಸಂಸ್ಥೆಯಲ್ಲಿ 10 ತಿಂಗಳ ಕನ್ನಡ ಕಲಿಕೆಗೆ ಕಳುಹಿಸಲಾಗಿತ್ತು. ಅಲ್ಲಿಂದ ಕನ್ನಡ ಕೋರ್ಸ್‌ ಮುಗಿಸಿ ಬಂದ ಈ ಶಿಕ್ಷಕಿಯನ್ನು ಅಡೂರು ಹೈಸ್ಕೂಲ್‌ಗೆ ನೇಮಕ ಮಾಡಲಾಗಿತ್ತು. ಜೂ.2ರಂದು ಶಿಕ್ಷಕಿ ನೇಮಕ ಪತ್ರದೊಂದಿಗೆ ಅಡೂರು ಹೈಸ್ಕೂಲ್‌ಗೆ ಬಂದಿದ್ದರು. ಆದರೆ, ಮಲಯಾಳಿ ಭಾಷಿಕ ಈ ಶಿಕ್ಷಕಿಗೆ ಅಂದು ಕರ್ತವ್ಯಕ್ಕೆ ನಿಯೋಜನೆಗೊಳ್ಳಲು ಮುಖ್ಯಶಿಕ್ಷಕರು ಅವಕಾಶ ನೀಡಿರಲಿಲ್ಲ. ಕನ್ನಡಿಗ ವಿದ್ಯಾರ್ಥಿಗಳ, ಪೋಷಕರ ವಿರೋಧದ ಹಿನ್ನೆಲೆಯಲ್ಲಿ ಮುಖ್ಯಶಿಕ್ಷಕರು ಈ ನಿರ್ಧಾರ ಕೈಗೊಂಡಿದ್ದರು. 

ವಿಜಯನಗರ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಬದ್ಧ: ಸಚಿವ ಜಮೀರ್‌ ಅಹ್ಮದ್‌ ಖಾನ್‌

ಆದರೆ, ಹಠಕ್ಕೆ ಬಿದ್ದ ಮಲಯಾಳಿ ಶಿಕ್ಷಕಿ, ಜೂ.3ರಂದು ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತದ ಸೂಚನೆ ಮೇರೆಗೆ ಪೊಲೀಸ್‌ ರಕ್ಷಣೆಯಲ್ಲಿ ಶಾಲೆಗೆ ಆಗಮಿಸಿದ್ದರು. ಆಗಲೂ ಪೋಷಕರ ವ್ಯಾಪಕ ವಿರೋಧ ವ್ಯಕ್ತವಾದ ಕಾರಣ ಶಾಲೆಗೆ ಸೇರ್ಪಡೆಗೊಳ್ಳಲು ಸಾಧ್ಯವಾಗಿರಲಿಲ್ಲ. ಈ ಬೆಳವಣಿಗೆ ಬಗ್ಗೆ ಶಾಲಾ ಮುಖ್ಯಶಿಕ್ಷಕರು, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಕಲೆಕ್ಟರ್‌ಗೆ ಮಾಹಿತಿ ನೀಡಿದ್ದರು. ಕನ್ನಡ ಗೊತ್ತಿರುವ ಬದಲಿ ಶಿಕ್ಷಕರನ್ನು ನೇಮಕಗೊಳಿಸುವಂತೆ ಆಗ್ರಹಿಸಿದ್ದರು. ಆದರೂ, ಹಠ ಬಿಡದ ಮಲಯಾಳಿ ಶಿಕ್ಷಕಿ ಒಂದು ವಾರದ ಬಳಿಕ, ಜೂ.16ರಂದು ಹೈಸ್ಕೂಲ್‌ಗೆ ಆಗಮಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು. ಇದನ್ನು ವಿರೋಧಿಸಿ ಜೂ.19ರಂದು ಕನ್ನಡಿಗ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದ್ದರು. ಬಳಿಕ, ಮಲಯಾಳಿ ಭಾಷಿಕ ಶಿಕ್ಷಕಿಯ ನೇಮಕ ವಿರೋಧಿಸಿ ಹೈಕೋರ್ಚ್‌ ಮೆಟ್ಟಿಲೇರಿದ್ದರು.

ಮುಖ್ಯಶಿಕ್ಷಕನೇ ಎತ್ತಂಗಡಿ: ಮಲಯಾಳಿ ಭಾಷಿಕ ಶಿಕ್ಷಕಿಯ ಸೇರ್ಪಡೆ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸಿದ ಹಾಗೂ ಪೋಷಕರು ಮತ್ತು ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೊಲೀಸ್‌ ಭದ್ರತೆ ಒದಗಿಸದ ಹಿನ್ನೆಲೆಯನ್ನು ಮುಂದಿಟ್ಟು ಮುಖ್ಯಶಿಕ್ಷಕರನ್ನು ಜೂ.30ರಂದು ವಯನಾಡ್‌ಗೆ ಎತ್ತಂಗಡಿ ಮಾಡಲಾಗಿದೆ. ಈ ಮುಖ್ಯಶಿಕ್ಷಕರು ವಯನಾಡ್‌ ಸರ್ಕಾರಿ ಹೈಸ್ಕೂಲ್‌ನಲ್ಲಿ ಮರುದಿನ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈಗ ಅಡೂರು ಶಾಲೆಯಲ್ಲಿ ಅಧ್ಯಾಪಕರೊಬ್ಬರಿಗೆ ಮುಖ್ಯಶಿಕ್ಷಕರ ಪ್ರಭಾರ ಹೊಣೆ ನೀಡಲಾಗಿದೆ. ಪೋಷಕರ ವಿರೋಧದ ಹೊರತಾಗಿಯೂ ಮಲಯಾಳಿ ಭಾಷಿಕ ಶಿಕ್ಷಕಿಯ ಬದಲು ಮುಖ್ಯಶಿಕ್ಷಕನನ್ನೇ ವರ್ಗಾವಣೆಗೊಳಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಶಿಕ್ಷಕಿಯ ಪಾಠ, ವಿದ್ಯಾರ್ಥಿಗಳು ಗೈರು!: ಜೂ.16ರಿಂದ ಮಲಯಾಳಿ ಭಾಷಿಕ ಶಿಕ್ಷಕಿ ತರಗತಿಗೆ ತೆರಳಿ ಸಮಾಜ ವಿಜ್ಞಾನ ಪಾಠ ಮಾಡುತ್ತಿದ್ದಾರೆ. ಕನ್ನಡ ಮಾತನಾಡಲು ಅಲ್ಪ ಸ್ವಲ್ಪ ಕಲಿತಿರುವ ಶಿಕ್ಷಕಿಗೆ ಪೂರ್ತಿಯಾಗಿ ಪಾಠ ಮಾಡಲು ಸಾಧ್ಯವಾಗುತ್ತಿಲ್ಲ. ಶಿಕ್ಷಕಿಯ ಪಾಠ ಅರ್ಥವಾಗದೆ ವಿದ್ಯಾರ್ಥಿಗಳು ತರಗತಿಯಿಂದ ದೂರ ಉಳಿಯುತ್ತಿದ್ದಾರೆ. ಇದರಿಂದಾಗಿ ಕಳೆದ 15 ದಿನಗಳಿಂದ ಈ ಹೈಸ್ಕೂಲ್‌ನ 8ರಿಂದ 10ನೇ ತರಗತಿವರೆಗಿನ ಸುಮಾರು 250 ಮಂದಿ ಕನ್ನಡಿಗ ವಿದ್ಯಾರ್ಥಿಗಳ ಕಲಿಕೆಗೆ ಬಹಳ ತೊಂದರೆಯಾಗಿದೆ ಎನ್ನುತ್ತಾರೆ ಪೋಷಕರು.

ಸಸಿ ನಿರ್ವಹಣೆಗೆ ಆಡಿಟ್‌, ಜಿಯೋ ಟ್ಯಾಗ್‌: ಸಚಿವ ಈಶ್ವರ ಖಂಡ್ರೆ

ಕನ್ನಡ ಮಾಧ್ಯಮ ಸರ್ಕಾರಿ ಹೈಸ್ಕೂಲ್‌ಗೆ ಮಲಯಾಳಿ ಭಾಷಿಕ ಶಿಕ್ಷಕಿಯ ನೇಮಕದಿಂದ ವಿದ್ಯಾರ್ಥಿಗಳಿಗೆ ಪಾಠವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ತುಂಬಾ ತೊಂದರೆಯಾಗಿದೆ. ಈ ಬಗ್ಗೆ ಕರ್ನಾಟಕ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಗಡಿನಾಡಿನಲ್ಲಿ ಕನ್ನಡಿಗರಿಗೆ ಆಗುತ್ತಿರುವ ಸಮಸ್ಯೆಯನ್ನು ಕೇರಳ ಸರ್ಕಾರದ ಜತೆ ಚರ್ಚಿಸಿ ಬಗೆಹರಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಮಲಯಾಳಿ ಭಾಷಿಕ ಶಿಕ್ಷಕಿಯ ನೇಮಕಾತಿ ವೇಳೆ ಕನ್ನಡ ಗೊತ್ತಿಲ್ಲದಿದ್ದರೂ ಕನ್ನಡ ಗೊತ್ತಿದೆ ಎಂದು ಬೇಜವಾಬ್ದಾರಿಯಿಂದ ಶಿಫಾರಸ್ಸು ಮಾಡಿದ ಕೇರಳ ಲೋಕಸೇವಾ ಆಯೋಗದ ಆಯ್ಕೆ ಸಮಿತಿ ವಿರುದ್ಧ ಕ್ರಮ ಕೈಗೊಳ್ಳಬೇಕು.
- ನಯನಾ ಗಿರೀಶ್‌, ಹೆತ್ತವರ ಹೋರಾಟ ಸಮಿತಿ, ಜಿಎಚ್‌ಎಸ್‌ಎಸ್‌ ಅಡೂರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!