ಮರುಘಾ ಶ್ರೀಗಳ ವಿರುದ್ಧ ಅತ್ಯಾಚಾರ ಆರೋಪ, ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಮುಖಂಡನ ಮಹತ್ವದ ಹೇಳಿಕೆ!

By Suvarna News  |  First Published Aug 30, 2022, 6:05 PM IST

ಮರುಘಾ ಮಠದ ಶಿವಮೂರ್ತಿ ಶರಣರ ವಿರುದ್ದ  ಅತ್ಯಾಚಾರ ಆರೋಪ ಕೇಳಿಬಂದಿದೆ. ಈ ಕುರಿತು ಪೋಕ್ಸೋ ಕಾಯ್ದಿಯಡಿ ಪ್ರಕರಣ ದಾಖಲಾಗಿದೆ. ಇದೀಗ ಶ್ರೀಗಳ ವಿರುದ್ಧ ಅಟ್ರಾಸಿಟಿ ಕೇಸ್ ಕೂಡ ದಾಖಲಾಗಿದೆ. ಇದರ ನಡುವೆ ವಿಜಯಪುರದಲ್ಲಿ ಅಲ್ಪಸಂಖ್ಯಾತ ಮುಖಂಡ ಯಾಸಿನ್ ಮಹತ್ವದ ಹೇಳಿಕೆ ನೀಡಿದ್ದಾರೆ.


ವಿಜಯಪುರ (ಆ.30) : ಮರುಘಾ ಮಠದ ಶಿವಮೂರ್ತಿ ಶರಣರ ವಿರುದ್ದ ಕೇಳಿಬಂದಿರುವ ಅತ್ಯಾಚಾರ ಆರೋಪಕ್ಕೆ ವಿಜಯಪುರ ಅಲ್ಪಸಂಖ್ಯಾತ ಮುಖಂಡ ಯಾಸಿನ್ ಜವಳಿ ಸುದ್ದಿಗೋಷ್ಟಿ ನಡೆಸಿ ಮಹತ್ವದ ಹೇಳಿಕೆ ನೀಡಿದ್ದಾರೆ. ಮರುಘಾ ಶರಣರ ಪರ ಬ್ಯಾಟ್ ಬೀಸಿದ ಯಾಸಿನ್ ವಿರೋಧಿಗಳು ಕುತಂತ್ರ ಮಾಡಿದ್ದಾರೆ ಎಂದಿದ್ದಾರೆ. ಶರಣರ ಹೆಸರು ಕೆಡಿಸಲು ವಿರೋಧಿಗಳು ಕುತಂತ್ರ ಮಾಡುತ್ತಿದ್ದಾರೆ. ಅಂತವರನ್ನು ಪೊಲೀಸರು ಒದ್ದು ಒಳಗೆ ಹಾಕಬೇಕು. ಮುರುಘಾ ಶ್ರೀಗಳು ಎಲ್ಲಾ ಧರ್ಮ,ದೇಶದ ಸಂಸ್ಕೃತಿ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಎಲ್ಲಾ ಸಮಾಜದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪೂಜ್ಯರು. ಇಂತಹ ಶ್ರೀಗಳ ವಿರುದ್ಧ ಕುತಂತ್ರ ಮಾಡುವುದು ಸರಿಯಲ್ಲ. ಈಗ ಮುರುಘಾ ಶ್ರೀಗಳನ್ನು ಟಾರ್ಗೆಟ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೊಬ್ಬರನ್ನು ಗುರಿಯಾಗಿಸುತ್ತಾರೆ ಎಂದು ಯಾಸಿನ್ ಕಿಡಿ ಕಾರಿದ್ದಾರೆ. ಶ್ರೀಗಳ ವಿರುದ್ಧ ಕೇಳಿ ಬಂದಿರುವ ಆರೋಪ ಸುಳ್ಳು, ಪೊಲೀಸರು ಸೂಕ್ತ ತನಿಖೆ ನಡೆಸಿ ಇದರ ಹಿಂದಿನ ಕೈವಾಡವನ್ನು ಬಯಲಿಗೆಳೆಯಬೇಕು ಎಂದು ಯಾಸಿನ್ ಆಗ್ರಹಿಸಿದ್ದಾರೆ.

ಇತ್ತ ಸ್ವಾಮೀಜಿಗಳ ಒಕ್ಕೂಟ ಮುರುಘಾ ಶ್ರೀಗಳ ಪರ ಬೆಂಬಲ ಸೂಚಿಸಿದ್ದಾರೆ. ಮುರುಘಾ ಶರಣರ ವಿರುದ್ಧ ಆಡಳಿತಾತ್ಮಕ ವಿಚಾರವಾಗಿ ಅವರ ತೇಜೋವಧೆಗೆ ಷಡ್ಯಂತ್ರ ನಡೆದಿದೆ. ಅವರ ಮೇಲಿನ ಆರೋಪಗಳು ಸುಳ್ಳಾಗಲಿವೆ ಎಂದು ಜಿಲ್ಲೆಯ ಸ್ವಾಮೀಜಿಗಳ ಒಕ್ಕೂಟ ಒಕ್ಕೂರಲಿನಿಂದ ಬೆಂಬಲ ವ್ಯಕ್ತಪಡಿಸಿದೆ. 

Tap to resize

Latest Videos

 

ಮುರುಘಾ ಶ್ರೀಗಳ ಮೇಲೆ ಷಡ್ಯಂತ್ರ: ಸಂಗನಬಸವ ಸ್ವಾಮೀಜಿ

ಸುದ್ದಿಗೋಷ್ಟಿ ನಡೆಸಿದ 15ಕ್ಕೂ ಅಧಿಕ ಸ್ವಾಮೀಜಿಗಳು..!
ಪತ್ರಿಕಾಗೋಷ್ಠಿ ನಡೆಸಿದ15ಕ್ಕೂ ಹೆಚ್ಚು ಸ್ವಾಮೀಜಿಗಳು, ಇದೊಂದು ಷಡ್ಯಂತ್ರ,   ಸಮರ್ಥ ಅಧಿಕಾರಿಯಿಂದ ತನಿಖೆ ನಡೆಸಬೇಕು. ಅವರು ಸಮಾಜಕ್ಕೆ ನೀಡಿರುವ ಕೊಡುಗೆ, ಸಾಮಾಜಿಕ ಕಾರ್ಯಗಳನ್ನು ಸಹಿಸದೆ ಕೆಲವರು ಹೀಗೆ ಮಾಡಿದ್ದಾರೆ ಎಂದು ಸ್ವಾಮೀಜಿಗಳು ಹೇಳಿದ್ದಾರೆ. 

ಸ್ವಾಮೀಜಿಗಳ ಹೆಸರು ಕೆಡಿಸಲು ಮಕ್ಕಳ ಬಳಕೆ ಆರೋಪ..!
ಈ ವೇಳೆ ಮಾತನಾಡಿದ ಆಲಮೇಲಿನ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸ್ವಾಮೀಜಿಗಳ ಹೆಸರು ಕೆಡಿಸಲು ಕೆಲವರು ಮಕ್ಕಳನ್ನು ಬಳಸಿಕೊಂಡು ಈ ರೀತಿ ಆರೋಪ ಮಾಡಿರುವುದು ತಪ್ಪು. ನಾವೆಲ್ಲರೂ ಚಿತ್ರದುರ್ಗ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಯವರಿಗೆ ನೈತಿಕ ಬೆಂಬಲ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಪಲಾಯನ ಮಾಡುವಂತ ಶ್ರೀಗಳಲ್ಲ..!
ಮುರುಘಾ ಶರಣರು ಹಿರಿಯರಿದ್ದಾರೆ. ಅವರು ಯಾವುದೇ ರೀತಿಯ ಪಲಾಯನ ಮಾಡುವ ಸ್ವಾಮಿಜಿಗಳಲ್ಲ. ತಮ್ಮ ವಕೀಲರನ್ನು ಭೇಟಿ ಮಾಡಲು ಹೋಗಿದ್ದರು. ಅವರಿಗೆ ಅಪಮಾನ ಮಾಡುವ ರೀತಿಯಲ್ಲಿ ಕೆಲವರು ನದುದುಕೊಳ್ಳುತ್ತಿರುವುದನ್ನು ಖಂಡಿಸಿದರು. 

ನಿಸ್ಪಕ್ಷಪಾತ ತನಿಖೆ ನಡೆದು, ಸತ್ಯ ಹೊರಗೆ ಬರಲಿ..!
ಯಾರೇ ತಪ್ಪು ಮಾಡಿದರೂ ಅವರಿಗೆ ಶಿಕ್ಷೆಯಾಗಬೇಕು. ಸತ್ಯ ಹೊರಬೇಕಾದರೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸ್ವಾಮಿಜಿಗಳೇ ಹೇಳುವಂತೆ ಕಳೆದ 15 ವರ್ಷಗಳಿಂದ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದರ ಹಿಂದೆ ಒಂದು ದೊಡ್ಡ ಷಡ್ಯಂತ್ರವೇ ಇದೆ. ಸರಕಾರ ಒಬ್ಬ ಹಿರಿಯ ಪೂಜ್ಯರನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ತಪ್ಪು. ಸೂಕ್ತ ತನಿಖೆ ನಡೆದರೆ ಅವರು ಆರೋಪ ಮುಕ್ತರಾಗುತ್ತಾರೆ ಎಂದು ಆಶಯ ವ್ಯಕ್ತಪಡಿಸಿದರು. 

Murugha Matha Row: ಮುರುಘಾ ಶ್ರೀ ವಿರುದ್ಧ ಅಟ್ರಾಸಿಟಿ ಕೇಸ್‌ ದಾಖಲು

ಶ್ರೀಗಳ ಮೇಲಿನ ಆರೋಪಕ್ಕೆ ನೊಂದಿದ್ದೇವೆ..!
ಮಠಕ್ಕೆ ಭಕ್ತರೇ ಆಧಾರ. ಭಕ್ತರೇ ಸುಪ್ರೀಂ. ಅವರು ಹೇಳಿದಂತೆ ಎಲ್ಲಾ ಸ್ವಾಮೀಜಿಗಳು ಕೇಳಲೇಬೇಕು. ಸ್ವಾಮೀಜಿಗಳ ಮೇಲಿನ ಸುಳ್ಳು ಆರೋಪಗಳಿಂದ ನಾವೆಲ್ಲರೂ ಮನನೊಂದಿದ್ದೇವೆ. ಅದಕ್ಕಾಗಿ ಪತ್ರಿಕಾಗೋಷ್ಠಿ ನಡೆಸಿದ್ದೇವೆ ಎಂದು ಸ್ಪಷ್ಟಪಡಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಬಂಥನಾಳ ವೃಷಭಲಿಂಗ ಸ್ವಾಮೀಜಿ, ಸಿಂದಗಿಯ ಡಾ.ಪ್ರಭುಲಿಂಗ ಶಿವಾಚಾರ್ಯರು, ನಾಗಠಾಣ ಚೆನ್ನಮಲ್ಲಿಕಾರ್ಜುನ ಸ್ವಾಮಿಗಳು, ಮಸಿಬಿನಾಳದ ಡಾ. ಸಿದ್ಧರಾಮ ಸ್ವಾಮೀಜಿ, ಆಲಮೇಲ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಯಾಂಕಂಚಿಯ ಅಭಿನವ ರುದ್ರಮುನಿ ಸ್ವಾಮೀಜಿಗಳು ಸೇರಿದಂತೆ 15ಕ್ಕೂ ಹೆಚ್ಚು ಸ್ವಾಮೀಜಿಗಳು ಉಪಸ್ಥಿತರಿದ್ದರು.

ವರದಿ: -ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್

click me!