ನನ್ನ ವಿರುದ್ಧ ರಾಜ್ಯಪಾಲರಿಗೆ ಸಲ್ಲಿಕೆಯಾಗಿರುವ ಪತ್ರಕ್ಕೆ ಸಹಿ ಹಾಕಿಲ್ಲ ಎಂದು ಜಿಲ್ಲೆಯ ಕೃಷಿ ಇಲಾಖೆಯ ಯಾವುದೇ ಅಧಿಕಾರಿಗಳು ಹೇಳಿದ ಮೇಲೂ ಇದು ನಕಲಿ ಪತ್ರ ಅಲ್ಲ ಎನ್ನುವುದಾದರೆ, ನನ್ನ ವಿರುದ್ಧ ಪತ್ರ ಬರೆದು ತಾವೇ ಎಲ್ಲಾ ಸಹಿಗಳನ್ನು ಮಾಡಿದ್ದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಪ್ಪಿಕೊಳ್ಳಲಿ ಎಂದು ತಿರುಗೇಟು ನೀಡಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ
ನಾಗಮಂಗಲ(ಮಂಡ್ಯ)(ಆ.09): ನನ್ನ ವಿರುದ್ಧ ಮಂಡ್ಯದ ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ್ದಾರೆಂಬ ಪತ್ರದಲ್ಲಿ ಒಂದೇ ಪೆನ್ನಿನಲ್ಲಿ ಒಂದೇ ಮಾದರಿಯ ಏಳು ಸಹಿಗಳಿವೆ. ರಾಜ್ಯಪಾಲರಿಗೆ ಬರೆದಿರೋ ಪತ್ರ ನಕಲಿ ಆಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಅಧಿಕಾರಿಗಳು ಬರೆದಿದ್ದಾರೆನ್ನಲಾದ ಪತ್ರದ ಕುರಿತು ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನ ವಿರುದ್ಧ ರಾಜ್ಯಪಾಲರಿಗೆ ಸಲ್ಲಿಕೆಯಾಗಿರುವ ಪತ್ರಕ್ಕೆ ಸಹಿ ಹಾಕಿಲ್ಲ ಎಂದು ಜಿಲ್ಲೆಯ ಕೃಷಿ ಇಲಾಖೆಯ ಯಾವುದೇ ಅಧಿಕಾರಿಗಳು ಹೇಳಿದ ಮೇಲೂ ಇದು ನಕಲಿ ಪತ್ರ ಅಲ್ಲ ಎನ್ನುವುದಾದರೆ, ನನ್ನ ವಿರುದ್ಧ ಪತ್ರ ಬರೆದು ತಾವೇ ಎಲ್ಲಾ ಸಹಿಗಳನ್ನು ಮಾಡಿದ್ದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಪ್ಪಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ನನ್ನ ವಿರುದ್ದದ ಷಡ್ಯಂತ್ರಕ್ಕೆ ಫಲ ದೊರಕುವುದಿಲ್ಲ, ಹೆಚ್‌ಡಿಕೆ ಆರೋಪಕ್ಕೆ ಚಲುವರಾಯಸ್ವಾಮಿ ಟ್ವೀಟ್ ಗುದ್ದು
ನನ್ನ ಹೆಸರು ಉಲ್ಲೇಖಿಸಿ ರಾಜ್ಯಪಾಲರಿಗೆ ಸಲ್ಲಿಕೆಯಾಗಿರುವ ದೂರು ಅರ್ಜಿಗೆ ಸಹಿ ಮಾಡಿರುವ ಏಳು ಮಂದಿ ನಮ್ಮ ಇಲಾಖೆಯಲ್ಲಿಲ್ಲ. ಅವರ ಹೆಸರು, ವಿಳಾಸ ಅಥವಾ ಮೊಬೈಲ… ನಂಬರ್ ಕೂಡ ಪತ್ತೆಯಾಗಿಲ್ಲ. ಆ ಅರ್ಜಿ ರಾಜ್ಯಪಾಲರ ಕಚೇರಿಗೆ ಎಲ್ಲಿಂದ ಹೇಗೆ ಹೋಯಿತೆಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.
ದತ್ತು ತೆಗೆದುಕೊಂಡಿದ್ದಾರಾ?:
ಕುಮಾರಸ್ವಾಮಿ ಅವರಿಗೆ ಕನಿಷ್ಠ ಪ್ರಮಾಣದ ಜ್ಞಾನ, ತಿಳಿವಳಿಕೆ ಮತ್ತು ಸೌಜನ್ಯವಿರಬೇಕು. ಅವರು ಒಕ್ಕಲಿಗರನ್ನು ಸಹಿಸುವುದಿಲ್ಲವೋ ಅಥವಾ ಮತ್ತೊಂದು ಸಮುದಾಯವನ್ನು ಸಹಿಸುವುದಿಲ್ಲವೋ ಎಂಬುದು ಅವರಿಗೆ ಬಿಟ್ಟವಿಚಾರ. ಮಂಡ್ಯ ಜಿಲ್ಲೆಯನ್ನು ಇವರೇನು ದತ್ತು ತೆಗೆದುಕೊಂಡಿದ್ದಾರಾ? ಜಿಲ್ಲೆಯಲ್ಲಿ ಬೇರೆ ಯಾರೂ ರಾಜಕಾರಣ ಮಾಡಬಾರದು. ಜಿಲ್ಲೆ ಅಭಿವೃದ್ಧಿಯಾಗದೆ ಹೀಗೇ ಇರಬೇಕೆಂಬುದು ಅವರ ಅಭಿಲಾಷೆ. ಅವರ ಬೆದರಿಕೆಗಳಿಗೆ ಇಲ್ಲಿ ಯಾರೂ ಹೆದರುವವರಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರವನ್ನು ಏನೋ ಮಾಡಿಬಿಡುತ್ತೇನೆಂದು ಕೊಂಡಿರುವ ಕುಮಾರಸ್ವಾಮಿ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಏನೆಲ್ಲಾ ಮಾಡಿದ್ದಾರೆಂಬುದನ್ನು ರಾಜ್ಯದ ಜನ ನೋಡಿದ್ದಾರೆ. ಇವರಿಗಿಂತ ನೂರು ಪಟ್ಟು ಬಹಳ ಗೌರವಯುತವಾಗಿ ನಾವು ರಾಜ್ಯದಲ್ಲಿ ಸರ್ಕಾರ ನಡೆಸಿ ಜನಪರ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಕೃಷಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ನೀಡಿರುವ ದೂರು ನಮ್ಮದಲ್ಲ; ಜಂಟಿ ಕೃಷಿ ನಿರ್ದೇಶಕ ಸ್ಪಷ್ಟನೆ
ಕಳೆದ ಐದು ವರ್ಷದಲ್ಲಿ ಜಿಲ್ಲೆಯ ಏಳು ಶಾಸಕರು ಏನು ಮಾಡಿದ್ದಾರೆಂಬುದು ಜನತೆಗೆ ಗೊತ್ತಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ ಎರಡೂವರೆ ತಿಂಗಳಲ್ಲಿ ಜಿಲ್ಲೆಯಲ್ಲಿ ಏನೆಲ್ಲ ಬದಲಾವಣೆ ಆಗುತ್ತಿದೆ ಎಂಬುದೂ ಜನತೆಗೆ ಅರಿವಿದೆ. ಸುಮ್ಮನಿದ್ದರೆ ಹಳೇ ಮೈಸೂರು ಭಾಗದಲ್ಲಿ ನಮ್ಮ ಶಕ್ತಿ ಕುಂದುಬಹುದೆಂಬ ಭಯ ಕುಮಾರಸ್ವಾಮಿ ಅವರನ್ನು ಇದೀಗ ಕಾಡುತ್ತಿದೆ. ಅದಕ್ಕೋಸ್ಕರ ಒಂದಲ್ಲ ಒಂದು ರೀತಿಯಲ್ಲಿ ತಂತ್ರಗಾರಿಕೆ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರಕ್ಕೆ ಕೆಟ್ಟಹೆಸರು ತರುವ ಇವರ ಪ್ರಯತ್ನ ಎಂದಿಗೂ ಫಲನೀಡುವುದಿಲ್ಲ ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗಿರುವ ಗುಪ್ತಚರ ಮತ್ತು ಇತರೆ ಮಾಹಿತಿಗಳ ಪ್ರಕಾರ ರಾಜ್ಯಪಾಲರಿಗೆ ಬರೆದಿರುವ ಪತ್ರ ನಕಲಿ ಎಂದು ಹೇಳಿ ಟ್ವೀಟ್ ಮಾಡಿದ್ದಾರೆ. ಆದರೆ ಕುಮಾರಸ್ವಾಮಿ ಅವರು ಏನುಬೇಕಾದರೂ ಮಾತನಾಡಬಹುದೆಂದು ಇಲ್ಲಸಲ್ಲದ ಹೇಳಿಕೆಗಳನ್ನು ಕೊಡುವುದು ಅವರ ಘನತೆಗೆ ಗೌರವ ತರುವುದಿಲ್ಲ ಎಂದು ಪತ್ರ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಮಾಡಿರುವ ಟ್ವೀಟ್ ಕುರಿತು ತೀವ್ರ ಕಿಡಿಕಾರಿದರು.