ರಾಜ್ಯದಲ್ಲಿ ಹಿಂದೂ ಮುಖಂಡರು, ಕಾರ್ಯಕರ್ತರ ಸಾಲು ಸಾಲು ಹತ್ಯೆಗಳ ಹಿಂದೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆ ಹೆಸರು ಕೇಳಿಬಂದಿತ್ತಾದರೂ ಆ ಸಂಘಟನೆಯಲ್ಲೇ ಇರುವ ಪ್ರತ್ಯೇಕ ತಂಡವೊಂದು ಇಂಥ ಕೃತ್ಯಗಳಿಗಾಗಿಯೇ ಬಳಕೆಯಾಗುತ್ತಿದ್ದ ಆಘಾತಕಾರಿ ಮಾಹಿತಿಯೊಂದು ಇದೀಗ ಬಯಲಾಗಿದೆ.
ವಿಶೇಷ ವರದಿ
ಮಂಗಳೂರು (ಅ.07): ರಾಜ್ಯದಲ್ಲಿ ಹಿಂದೂ ಮುಖಂಡರು, ಕಾರ್ಯಕರ್ತರ ಸಾಲು ಸಾಲು ಹತ್ಯೆಗಳ ಹಿಂದೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆ ಹೆಸರು ಕೇಳಿಬಂದಿತ್ತಾದರೂ ಆ ಸಂಘಟನೆಯಲ್ಲೇ ಇರುವ ಪ್ರತ್ಯೇಕ ತಂಡವೊಂದು ಇಂಥ ಕೃತ್ಯಗಳಿಗಾಗಿಯೇ ಬಳಕೆಯಾಗುತ್ತಿದ್ದ ಆಘಾತಕಾರಿ ಮಾಹಿತಿಯೊಂದು ಇದೀಗ ಬಯಲಾಗಿದೆ. ಸುಳ್ಯದ ಪ್ರವೀಣ್ ನೆಟ್ಟಾರ್ ಹತ್ಯೆ ಹಿಂದೆಯೂ ಇದೇ ಟೀಂನ ಸದಸ್ಯರಿದ್ದರು ಎಂಬ ಸತ್ಯ ಇದೀಗ ಹೊರಬಿದ್ದಿದೆ.
ಪಿಎಫ್‌ಐನ ‘ಸರ್ವೀಸ್ ಟೀಂ’ ಸದಸ್ಯರೇ ಇಂಥ ಕೃತ್ಯಕ್ಕೆ ಬಳಕೆಯಾಗುತ್ತಿದ್ದರು ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈಗಾಗಲೇ ವಿಧ್ವಂಸಕ ಸಂಚು ಹಾಗೂ ಉಗ್ರ ನಂಟು ಆರೋಪದಲ್ಲಿ ಪಿಎಫ್‌ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. 15 ಮಂದಿ ಶಂಕಿತ ಉಗ್ರರ ವಿರುದ್ಧವೂ ಉಗ್ರ ನಿಗ್ರಹ ಕಾಯ್ದೆಯಡಿ ಕೇಸು ದಾಖಲಿಸಲಾಗಿದೆ. ಇದಕ್ಕೂ ಮುನ್ನ ಹಲವು ಮಂದಿ ಪಿಎಫ್‌ಐ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಪ್ರಾಥಮಿಕ ತನಿಖೆ ನಡೆಸಿದ್ದರು. ಬಂಧಿತ ಆರೋಪಿಗಳು ನೀಡಿದ ಮಾಹಿತಿ ಪಿಎಫ್‌ಐನ ಈ ಸರ್ವೀಸ್ ಟೀಂನ ಕರಾಳ ಮುಖ ತೆರೆದಿಟ್ಟಿದೆ.
ಹಿಂದು ಹತ್ಯೆ ಸಂಚಿನ ಗುಟ್ಟು ಬಿಚ್ಚಿಡುತ್ತಿಲ್ಲ ಪಿಎಫ್‌ಐ
ಏನಿದು ಸರ್ವೀಸ್ ಟೀಂ?: ವಿವಿಐಪಿ ಭದ್ರತೆ ನಿರ್ವಹಿಸಲೆಂದೇ, ಸೇನಾ ಮಾದರಿಯಲ್ಲಿ ಪಿಎಫ್‌ಐ ಸಂಘಟನೆಯಲ್ಲಿ ಸರ್ವಿಸ್ ಟೀಂ ಎಂಬುದಿದೆ. ಈ ಸರ್ವೀಸ್ ಟೀಂ ಕೆಲಸ ವಿವಿಐಪಿಗಳಿಗೆ ಭದ್ರತೆ ನೀಡುವುದು. ವಿವಿಐಪಿ ಮತ್ಯಾರೂ ಅಲ್ಲ, ಅವರದೇ ಪಿಎಫ್‌ಐ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು, ಮುಖಂಡರು. ಈ ಮುಖಂಡರು ಎಲ್ಲಿಗೆ ಹೋಗುವುದಿದ್ದರೂ ಅವರ ಹಿಂದೆ, ಮುಂದೆ ಎಂಬಂತೆ ಆಯಾ ಜಿಲ್ಲಾ ವ್ಯಾಪ್ತಿಯ ಸರ್ವೀಸ್ ಟೀಂ ಪಹರೆ ನಡೆಸುತ್ತಿರುತ್ತದೆ. ಸಾಕ್ಷಾತ್ ಸರ್ಕಾರದ ಎನ್‌ಎಸ್‌ಜಿ(ರಾಷ್ಟ್ರೀಯ ಭದ್ರತಾ ದಳ) ಭದ್ರತಾ ತಂಡದ ಮಾದರಿಯಲ್ಲೇ ಈ ಟೀಂ ಕಾರ್ಯನಿರ್ವಹಿಸುತ್ತದೆ. ಈ ಸರ್ವೀಸ್ ಟೀಂ ಸೇರುವ ಯುವಕರು ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿರಬೇಕು. ಹಾಗಿದ್ದಾಗ ಮಾತ್ರ ಈ ಟೀಂಗೆ ಎಂಟ್ರಿ.
ದುಷ್ಕೃತ್ಯಕ್ಕೆ ಈ ಟೀಂ ಬಳಕೆ: ಬಂಧಿತ ಪಿಎಫ್‌ಐ ಮುಖಂಡರನ್ನು ತನಿಖೆಗೊಳಪಡಿಸಿದ ವೇಳೆ ಇದೇ ಟೀಂ ಸದಸ್ಯರನ್ನು ಹಿಂದೂ ಮುಖಂಡರ ಹತ್ಯೆಗೆ ಬಳಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಟೀಂ ಸದಸ್ಯರಲ್ಲಿ ನುರಿತ ವ್ಯಕ್ತಿಯನ್ನು ಇಂಥ ಹತ್ಯೆಗಾಗಿಯೇ ಬಳಸಲಾಗುತ್ತಿತ್ತು. ಒಮ್ಮೆ ಹತ್ಯೆ ನಡೆಸಿದ ಬಳಿಕ ಆತನನ್ನು ಇನ್ನೊಂದು ಹತ್ಯೆಗೆ ನಿಯೋಜಿಸುತ್ತಿರಲಿಲ್ಲ. ಮುಂದಿನ ಹತ್ಯೆಗೆ ಬೇರೊಬ್ಬ ಸದಸ್ಯನ ಬಳಕೆಯಾಗುತ್ತಿತ್ತು.
ಬಿ.ಸಿ.ರೋಡ್‌ನ ಶರತ್ ಮಡಿವಾಳ, ಪ್ರವೀಣ್ ನೆಟ್ಟಾರು ಸೇರಿ ಪಿಎಫ್‌ಐ ನಡೆಸಿದ ಹಿಂದೂ ಮುಖಂಡರ ಹತ್ಯೆಯ ಪ್ರಮುಖ ಆರೋಪಿಗಳು ಇದೇ ಟೀಂ ಸದಸ್ಯರಾಗಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹತ್ಯೆ ನಡೆಸಿದಾಗ ಸಿಕ್ಕಿಬಿದ್ದರೆ ಅಥವಾ ಹತ್ಯೆ ನಡೆಸಿದವರೇ ಮೃತಪಟ್ಟರೆ, ಇಲ್ಲವೇ ಬಂಧಿಯಾದರೆ, ಅದಕ್ಕೆ ಬೇಕಾದ ಎಲ್ಲ ಪರಿಹಾರ ಕ್ರಮಗಳನ್ನು ಮೊದಲೇ ಸಂಘಟನೆ ಸಿದ್ಧಮಾಡಿರುತ್ತಿತ್ತು. ಹತ್ಯೆ ನಡೆಸಿದಾತನ ಇಡೀ ಕುಟುಂಬವನ್ನು ಪೋಷಿಸುವ ಹೊಣೆಯನ್ನು ಸಂಘಟನೆ ಹೊರುತ್ತಿತ್ತು. ಆರ್‌ಎಸ್‌ಎಸ್, ಸಂಘಪರಿವಾರ ಹಾಗೂ ಬಿಜೆಪಿ ಮುಖಂಡರನ್ನು ಟಾರ್ಗೆಟ್ ಮಾಡುವುದೇ ಈ ಸಂಘಟನೆಯ ಏಕಮಾತ್ರ ಅಜೆಂಡಾ ಆಗಿತ್ತು ಎಂಬುದನ್ನು ಉನ್ನತ ತನಿಖಾ ಮೂಲಗಳು ತಿಳಿಸಿವೆ.
ಪುತ್ತೂರು ಕಾರಸ್ಥಾನ: ಪಿಎಫ್‌ಐ ಸಂಘಟನೆಯ ಎಲ್ಲ ಚಟುವಟಿಕೆಗಳು, ಆಗುಹೋಗುಗಳು ನಡೆಯುತ್ತಿದ್ದುದು ದ.ಕ. ಜಿಲ್ಲೆಯ ಪುತ್ತೂರಿನಲ್ಲಿ. ಪುತ್ತೂರಿನಲ್ಲಿ ದುಷ್ಕೃತ್ಯದ ಸಂಚು ರೂಪಿಸಿದರೆ, ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಹಾಲ್‌ನಲ್ಲಿ ಸೆಮಿನಾರ್ ಮಾಡಲಾಗುತ್ತಿತ್ತು. ಪುತ್ತೂರಿನ ಪಿಎಫ್‌ಐ ಜಿಲ್ಲಾ ಕಚೇರಿಯೇ ಪಿಎಫ್‌ಐ ಸ್ಕೆಚ್‌ನ ಎಲ್ಲ ಪ್ರಮುಖ ನಿರ್ಧಾರಗಳಿಗೆ ಕೇಂದ್ರ ಆಗಿತ್ತು. ಹೀಗಾಗಿ ಸದ್ಯ ಈ ಕಚೇರಿಯನ್ನು ಈಗ ಪೊಲೀಸರು ಮುಟ್ಟುಗೋಲು ಹಾಕಿ ಬಂದ್ ಮಾಡಿದ್ದಾರೆ.
ಪುತ್ತೂರು ನಗರ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಇರುವ ಖಾಸಗಿ ಕಾಂಪ್ಲೆಕ್ಸ್‌ನಲ್ಲಿ ಪಿಎಫ್‌ಐ ಜಿಲ್ಲಾ ಕಚೇರಿ ಇತ್ತು. ಈ ಕಚೇರಿಗೆ ಫಲಕವೇ ಇರಲಿಲ್ಲ. ಅಲ್ಲಿಯೇ ಪಿಎಫ್‌ಐ ಮುಖಂಡರ ಮಹತ್ವದ ಸಮಾಲೋಚನೆ, ಸಭೆ ನಡೆಯುತ್ತಿತ್ತು. ಅಲ್ಲಿಗೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಆಗಮಿಸುತ್ತಿದ್ದರು. ಸಭೆ ನಡೆಸುವ ವೇಳೆ ಸುತ್ತಮುತ್ತ ಕಾರ್ಯಕರ್ತರ ಟೀಂ ಭದ್ರತೆ ಒದಗಿಸುತ್ತಿತ್ತು. ಅಲ್ಲಿಗೆ ಬೇರೆ ಯಾರಿಗೂ ಪ್ರವೇಶ ಇರಲಿಲ್ಲ. ಇಷ್ಟುವರ್ಷಗಳ ಕಾಲ ಅಲ್ಲಿ ಅಂಥದ್ದೊಂದು ಕಚೇರಿ ಇದೆ ಎಂಬುದು ಸ್ಥಳೀಯ ಪೊಲೀಸರಿಗೆ ಅಥವಾ ಗುಪ್ತಚರ ಇಲಾಖೆ ಇಲ್ಲವೇ ಎನ್‌ಐಎಗೂ ಗೊತ್ತಿರಲಿಲ್ಲ ಎಂಬುದೇ ಅಚ್ಚರಿಯ ಸಂಗತಿ.
ನಿಷೇಧಿತ ಪಿಎಫ್‌ಐ ಜೊತೆಗೆ ನಂಟು: ಮಾಧ್ಯಮ ವರದಿ ತಳ್ಳಿಹಾಕಿದ ಕೇರಳ ಪೊಲೀಸರು
ಮಿತ್ತೂರಿನ ಫ್ರೀಡಂ ಹಾಲ್‌ನಲ್ಲಿ ದುಷ್ಕೃತ್ಯಕ್ಕೆ ಸಂಬಂಧಿಸಿದ ಕಾರ್ಯಾಗಾರ, ಸೆಮಿನಾರ್ ನಡೆಸುತ್ತಿದ್ದರು. ಫೋಟೋ ಮತ್ತು ವಿಡಿಯೋಗಳನ್ನು ತೋರಿಸಿ ಯುವಕರ ಬ್ರೈನ್‌ವಾಷ್ ಮಾಡಲಾಗುತ್ತಿತ್ತು. ಕೇರಳದ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಇಲ್ಲಿಗೆ ಆಗಮಿಸಿ ದುಷ್ಕೃತ್ಯ ನಡೆಸುವ ಕುರಿತು ವಿಶೇಷ ಕಾರ್ಯಾಗಾರ ನಡೆಸುತ್ತಿದ್ದರು. ಇಲ್ಲಿ ಯಾವುದೇ ಬಂದೂಕು ತರಬೇತಿಗಳು ನಡೆಯುತ್ತಿರಲಿಲ್ಲ. ಸೆಮಿನಾರ್‌ಗಳಿಗೆಲ್ಲ ಆಯ್ದ ಪಿಎಫ್‌ಐ ಕಾರ್ಯಕರ್ತರು, ಮುಖಂಡರಷ್ಟೇ ಹಾಜರಾಗುತ್ತಿದ್ದರು. ಇಲ್ಲಿ ಪೊಲೀಸ್ ಮಾದರಿಯಲ್ಲೇ ಪರೇಡ್ ಕೂಡ ನಡೆಸಲಾಗುತ್ತಿತ್ತು. ದ.ಕ. ಜಿಲ್ಲೆಯಲ್ಲಿ ಬಹುಸಂಖ್ಯಾತರ ಬಾಹುಳ್ಯ ಇರುವುದರಿಂದ ಪ್ರಾಕ್ಟಿಕಲ್ ತರಬೇತಿಗೆ ಅಲ್ಪಸಂಖ್ಯಾತ ಪ್ರಾಬಲ್ಯದ ಕೇರಳ ಮಲಪ್ಪುರಂ ಮುಂತಾದ ಪ್ರದೇಶಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಇಲ್ಲಿನ ಕಾರ್ಯಾಗಾರದಲ್ಲಿ ಭಾಗವಹಿಸಿ ಆಯ್ಕೆಯಾದವರಿಗೆ ಕೇರಳದ ಅಜ್ಞಾತ ಸ್ಥಳದಲ್ಲಿ ಬಂದೂಕು ಹಾಗೂ ತಲವಾರು ಮೂಲಕ ದುಷ್ಕೃತ್ಯ ನಡೆಸುವ ತರಬೇತಿ ನೀಡಲಾಗುತ್ತಿತ್ತು. ಕಾಡು, ಬೆಟ್ಟದಂತಹ ಪ್ರದೇಶದಲ್ಲಿ ದುಷ್ಕೃತ್ಯಕ್ಕೆ ರಿಹರ್ಸಲ್ ನಡೆಸಿದರೆ ಬೇಗನೆ ಯಾರಿಗೂ ಗೊತ್ತಾಗುವುದಿಲ್ಲ. ಅದಕ್ಕಾಗಿ ಸುರಕ್ಷಿತ ಪ್ರದೇಶಗಳನ್ನೇ ಇಂಥ ತರಬೇತಿಗಳಿಗೆ ಆಯ್ದುಕೊಳ್ಳುತ್ತಿದ್ದರು ಎನ್ನುವುದು ಉನ್ನತ ಮೂಲಗಳ ಮಾಹಿತಿ.