
ಬೆಂಗಳೂರು (ಜ.12): ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಪೋಡು ಗ್ರಾಮದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಜಾಲ ಪತ್ತೆಯಾಗಿದ್ದು, ವ್ಯವಸ್ಥಿತವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಭಯಾನಕ ಸತ್ಯ ಬಯಲಾಗಿದೆ. ಆ ಕುರಿತು ವಿಶೇಷ ವರದಿ ಇಲ್ಲಿದೆ ನೋಡಿ.
ಐಟಿ-ಬಿಟಿ ಹಬ್ ಎಲೆಕ್ಟ್ರಾನಿಕ್ ಸಿಟಿ ಪಕ್ಕದ ಪೋಡು ಗ್ರಾಮ ಈಗ ಅಕ್ರಮ ಬಾಂಗ್ಲಾ ವಲಸಿಗರ ಅಡ್ಡೆಯಾಗಿರುವುದು ಪತ್ತೆಯಾಗಿದೆ. ಹಿಂದೂ ಹೋರಾಟಗಾರ ಪುನೀತ್ ಕೆರೆಹಳ್ಳಿ ಹಾಗೂ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸತತ ಮೂರು ದಿನಗಳಿಂದ ನಡೆಸಿದ ಕಾರ್ಯಾಚರಣೆಯಲ್ಲಿ, ಒಂದೇ ಕಡೆ 10ಕ್ಕೂ ಹೆಚ್ಚು ಕುಟುಂಬಗಳು ಅಕ್ರಮವಾಗಿ ನೆಲೆಸಿರುವುದು ಬಯಲಾಗಿದೆ.
ಅಕ್ರಮವಾಗಿ ನುಸುಳಿರುವ ಈ ವಲಸಿಗರ ಬಳಿ ಇರುವ ದಾಖಲೆಗಳನ್ನು ನೋಡಿದರೆ ಸಾಮಾನ್ಯ ಜನರೂ ಬೆಚ್ಚಿಬೀಳುತ್ತಾರೆ. ಇವರ ಬಳಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ಎಲ್ಲವೂ ಪಕ್ಕಾ ಇವೆ. ಕೇವಲ 1500 ರೂಪಾಯಿ ನೀಡಿದರೆ ಸಾಕು, ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಇವರನ್ನು 'ಭಾರತೀಯರು' ಎಂದು ಬಿಂಬಿಸುವ ಬೃಹತ್ ದಂಧೆ ತೆರೆಮರೆಯಲ್ಲಿ ನಡೆಯುತ್ತಿದೆ ಎಂಬ ಗಂಭೀರ ಸತ್ಯ ವಿಚಾರಣೆ ವೇಳೆ ಬಹಿರಂಗವಾಗಿದೆ.
ಬ್ಯಾಂಕ್ ಅಕೌಂಟ್, 4.5 ಲಕ್ಷ ಲೋನ್ ಪಡೆದಿದ್ದ ಬಾಂಗ್ಲಾದೇಶಿ
ಈ ಅಕ್ರಮ ವಲಸಿಗರು ದೇಶದ ಆರ್ಥಿಕ ವ್ಯವಸ್ಥೆಯನ್ನೂ ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇದು ಜ್ವಲಂತ ಉದಾಹರಣೆ. ಬಂಧಿತನೊಬ್ಬ ಬ್ಯಾಂಕ್ ಆಫ್ ಬರೋಡಾದಲ್ಲಿ ಖಾತೆ ಹೊಂದಿದ್ದು, ಬಜಾಜ್ ಫೈನಾನ್ಸ್ ಮೂಲಕ ಬರೋಬ್ಬರಿ 4.5 ಲಕ್ಷ ರೂಪಾಯಿ ಸಾಲ ಪಡೆದು ಆಟೋ ಖರೀದಿಸಿದ್ದಾನೆ! ಈ ಅಕ್ರಮ ವಲಸಿಗರು ಇಲ್ಲಿನ ಸ್ಥಳೀಯರ ಸವಲತ್ತುಗಳನ್ನು ಕಸಿದುಕೊಳ್ಳುತ್ತಿರುವುದು ಈಗ ಸ್ಪಷ್ಟವಾಗಿದೆ.
ಬಾಂಗ್ಲಾದಿಂದ ರಾತ್ರೋರಾತ್ರಿ ಇಂಪೋರ್ಟ್!
ಪಶ್ಚಿಮ ಬಂಗಾಳದ ಗಡಿ ದಾಟಿಸಿ ಇವರನ್ನು ರಾತ್ರೋರಾತ್ರಿ ಬೆಂಗಳೂರಿಗೆ ಕರೆತರಲಾಗುತ್ತಿದೆ. ಸತತ 5 ವರ್ಷಗಳಿಂದ ಇವರು ಇಲ್ಲಿ ವಾಸವಿದ್ದು, ಇವರನ್ನು ಕರೆತರಲು ಏಜೆಂಟರುಗಳು ಕೆಲಸ ಮಾಡುತ್ತಿದ್ದಾರೆ ಎಂದು ವಲಸಿಗರು ಒಪ್ಪಿಕೊಂಡಿದ್ದಾರೆ. ದಾಳಿ ವೇಳೆ ಹಿಂದೂ ಸಂಘಟನಾಕಾರರನ್ನು ಕಂಡು ಕೆಲವರು ಪರಾರಿಯಾಗಿದ್ದು, ಬೆಂಗಳೂರಿನ ಸುತ್ತಮುತ್ತ ಇಂತಹ ಸಾವಿರಾರು ನುಸುಳುಕೋರರು ನೆಲೆಸಿರುವ ಮಾಹಿತಿ ಲಭ್ಯವಾಗಿದೆ.
ಪುನೀತ್ ಕೆರೆಹಳ್ಳಿ ತಂಡದಿಂದ ಪೊಲೀಸರಿಗೆ ಹಸ್ತಾಂತರ
ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ ಪುನೀತ್ ಕೆರೆಹಳ್ಳಿ ನುಸುಳುಕೋರರನ್ನು ತೀವ್ರ ವಿಚಾರಣೆ ನಡೆಸಿದರು. 'ನಮ್ಮ ದೇಶದ ಸವಲತ್ತು ತಿಂದು ನಮ್ಮದೇ ಭದ್ರತೆಗೆ ಕುತ್ತು ತರುತ್ತಿದ್ದೀರಾ? ತಕ್ಷಣ ದೇಶ ಬಿಟ್ಟು ತೊಲಗಿ' ಎಂದು ಎಚ್ಚರಿಕೆ ನೀಡಿದರು. ಪತ್ತೆಯಾದ ವಲಸಿಗರನ್ನು ಬನ್ನೇರುಘಟ್ಟ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ