
ಬೆಂಗಳೂರು (ಜ.23): ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ವೃದ್ಧ ದಂಪತಿಗಳು ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಮೂರ್ನಾಲ್ಕು ಬಾರಿ ಪಲ್ಟಿಯಾದರೂ ಸೀಟ್ ಬೆಲ್ಟ್ ಧರಿಸಿದ್ದ ಕಾರಣ ದಂಪತಿಗಳು ಇಂದು ಬದುಕಿ ಬಂದಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಲ್ಲಿ 84 ವರ್ಷದ ವೃದ್ಧ ಅಬ್ದುಲ್ ಫಜಲ್ ಅವರು ತಮ್ಮ ಪತ್ನಿಯೊಂದಿಗೆ ಮೈಸೂರಿನಲ್ಲಿ ನಡೆಯಲಿದ್ದ ಮದುವೆ ಸಮಾರಂಭಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೆಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಾಮನಗರದ ಸಂಗಬಸವನದೊಡ್ಡಿ ಬಳಿಯ ಎಕ್ಸಿಟ್ ಪಾಯಿಂಟ್‌ನಲ್ಲಿ ಭೀಕರ ಅಪಘಾತ ಸಂಭವಿಸಿತ್ತು.
ಎಕ್ಸಿಟ್ ಬಳಿ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಅಬ್ದುಲ್ ಫಜಲ್ ಅವರ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಿಯಂತ್ರಣ ತಪ್ಪಿದ ಕಾರು ಹೆದ್ದಾರಿಯಲ್ಲಿ ಮೂರ್ನಾಲ್ಕು ಬಾರಿ ಪಲ್ಟಿಯಾಗಿ ಡಿವೈಡರ್ ಮೇಲೆ ಬಿದ್ದಿದೆ. ಕಾರು ಸಂಪೂರ್ಣ ಜಖಂ ಆಗಿದ್ದರೂ, ದಂಪತಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಾಣ ಉಳಿಸಿದ ಸೀಟ್ ಬೆಲ್ಟ್
ಕಾರು ಅಷ್ಟೊಂದು ಬಾರಿ ಪಲ್ಟಿಯಾದರೂ ದಂಪತಿಗಳು ಬದುಕುಳಿಯಲು ಮುಖ್ಯ ಕಾರಣ ಅವರು ಧರಿಸಿದ್ದ ಸೀಟ್ ಬೆಲ್ಟ್. ಸೀಟ್ ಬೆಲ್ಟ್ ಧರಿಸಿದ್ದರಿಂದ ಅವರು ಸೀಟಿನಿಂದ ಹೊರಕ್ಕೆ ಎಸೆಯದೇ ಸುರಕ್ಷಿತವಾಗಿದ್ದರು. ಕೇವಲ ಸಣ್ಣಪುಟ್ಟ ಗಾಯಗಳಾಗಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಮುಗಿಸಿ ಗುಣಮುಖರಾಗಿರುವ ಅಬ್ದುಲ್ ಫಜಲ್, ಸೀಟ್ ಬೆಲ್ಟ್ ಧರಿಸುವುದು ಎಷ್ಟು ಮುಖ್ಯ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ತಡವಾಗಿ ಬೆಳಕಿಗೆ ಬಂದ ಪ್ರಕರಣ
ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಈ ಘಟನೆಯ ವಿವರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಚರ್ಚೆಗೆ ಗ್ರಾಸವಾಗಿವೆ. ಅಪಘಾತದ ಭೀಕರತೆ ಕಂಡವರು ದಂಪತಿಗಳು ಬದುಕುಳಿದಿರುವುದು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ