ಮುಂಗಾರು ಪ್ರವೇಶದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಸೇರಿ ರಾಜ್ಯದ 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಚಿಕ್ಕಮಗಳೂರು ಜಿಲ್ಲೆ ಯಗಟಿಪುರ ಗ್ರಾಮದಲ್ಲಿ ಸಿಡಿಲಿಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ.
ಬೆಂಗಳೂರು (ಜೂ.12): ಮುಂಗಾರು ಪ್ರವೇಶದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಸೇರಿ ರಾಜ್ಯದ 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಚಿಕ್ಕಮಗಳೂರು ಜಿಲ್ಲೆ ಯಗಟಿಪುರ ಗ್ರಾಮದಲ್ಲಿ ಸಿಡಿಲಿಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ. ಇದೇ ವೇಳೆ, ಕರಾವಳಿಯಲ್ಲಿ ಕಡಲು ಪ್ರಕ್ಷುಬ್ಧಗೊಂಡಿದ್ದು, ಕಡಲಂಚಿನಲ್ಲಿರುವ ಮನೆಗಳು, ತೆಂಗಿನ ಮರಗಳು ಸಮುದ್ರ ಪಾಲಾಗಿವೆ.
ಮಂಗಳೂರಿನ ಪಣಂಬೂರು, ಉಳ್ಳಾಲ, ಸೋಮೇಶ್ವರ, ಬಟಪಾಡಿಗಳಲ್ಲಿ ಭಾನುವಾರ ಕಡಲಂಚಿನಲ್ಲಿರುವ ಮನೆಗಳು, ತೆಂಗಿನ ಮರಗಳು ಸಮುದ್ರ ಪಾಲಾಗಿವೆ. ಉಡುಪಿ ಜಿಲ್ಲೆ ಮಲ್ಪೆ ಬೀಚಿನಲ್ಲಿ ಪ್ರವಾಸಿಗರು ಕಡಲಿಗೆ ಇಳಿಯದಂತೆ ಬೀಚಿನ ಸುಮಾರು 1 ಕಿ.ಮೀ.ನಷ್ಟುಉದ್ದಕ್ಕೂ ಸುರಕ್ಷತಾ ಬಲೆ ಹಾಗೂ ಕೆಂಪು ಬಾವುಟಗಳನ್ನು ಅಳವಡಿಸಲಾಗಿದೆ. ಈ ಮಧ್ಯೆ, ಮಂಗಳೂರು ಶಾಸಕ, ಸ್ಪೀಕರ್ ಯು.ಟಿ.ಖಾದರ್ ಹಾಗೂ ಅಧಿಕಾರಿಗಳ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಭಾನುವಾರ ಉಚ್ಚಿಲ ಹಾಗೂ ಬಟಪಾಡಿಯಲ್ಲಿ ಕಡಲ್ಕೊರೆತಕ್ಕೆ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
undefined
ಮಾತು ತಪ್ಪದೇ ಎಲ್ಲ 5 ಗ್ಯಾರಂಟಿ ಈಡೇರಿಕೆ: ಡಿ.ಕೆ.ಶಿವಕುಮಾರ್
ಉತ್ತರ ಕನ್ನಡ ಜಿಲ್ಲೆ ಮುರ್ಡೇಶ್ವರದಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದು, ಬೀಚಿನಲ್ಲಿರುವ ಅಂಗಡಿ, ಮಳಿಗೆಗಳತ್ತಲೂ ನೀರು ನುಗ್ಗುತ್ತಿದೆ. ಕಡಲತೀರಕ್ಕೆ ಬಂದ ಪ್ರವಾಸಿಗರು ಕಂಗಾಲಾಗಿ ಮರಳುತ್ತಿದ್ದಾರೆ. ಲೈಫ್ ಗಾರ್ಡ್ ಸಿಬ್ಬಂದಿ ಕಡಲಿಗಿಳಿಯದಂತೆ ಎಚ್ಚರಿಕೆ ನೀಡಿದರೂ ಕೆಲವರು ಸಮುದ್ರಕ್ಕಿಳಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯದಂತೆ ಹಾಗೂ ಪ್ರವಾಸಿಗರು ಸಮುದ್ರದಲ್ಲಿ ಇಳಿಯದಂತೆ ಸೂಚನೆ ನೀಡಲಾಗಿದೆ.
10 ವರ್ಷ ಮಹಿಳೆಯರಿಗೆ ಉಚಿತ ಪ್ರಯಾಣ: ಸಚಿವ ರಾಮಲಿಂಗಾರೆಡ್ಡಿ
ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮಳೆಯಾಗಿದ್ದು, ಕಡೂರು ತಾಲೂಕಿನ ಯಗಟಿಪುರ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಮೂವರು ಗಾಯಗೊಂಡಿದ್ದಾರೆ. ಗ್ರಾಮದ ಮುಕೇಶ್ (40) ಮೃತಪಟ್ಟ ದುರ್ದೈವಿ. ಸುದೀಪ್, ಶೃತಿ ಹಾಗೂ ಕಾರ್ತಿಕ್ ಎಂಬುವವರು ಗಾಯಗೊಂಡಿದ್ದಾರೆ. ಯಗಟಿಪುರದಲ್ಲಿರುವ ಮಲ್ಲಿಕಾರ್ಜುನಸ್ವಾಮಿ ದೇವಾಲಯಕ್ಕೆ ಆಗಮಿಸಿದ್ದ ಇವರು, ದೇವರ ದರ್ಶನ ಮುಗಿಸಿ, ದೇವಾಲಯದ ಹೊರಭಾಗದಲ್ಲಿ ನಿಂತಿದ್ದಾಗ ಸಿಡಿಲು ಬಡಿಯಿತು. ಇದೇ ವೇಳೆ, ಯಾದಗಿರಿ, ಬೆಂಗಳೂರು, ಬಳ್ಳಾರಿ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಮಳೆಯಾಗುತ್ತಿದೆ.