ಹಿಂದಿನ ಸರ್ಕಾರದ ಆದೇಶ ಈಗ ಜಾರಿ, ಜನರಿಗೆ ದಿಢೀರ್ ‘ಶಾಕ್’, ಬಹುತೇಕರಿಗೆ ಕಳೆದ ತಿಂಗಳಿನ ದುಪ್ಪಟ್ಟು ಬಿಲ್: ಏನಿದು ಲೆಕ್ಕಾಚಾರ?
ಬೆಂಗಳೂರು(ಜೂ.12): ಉಚಿತ ವಿದ್ಯುತ್ ಸಿಗಲಿದೆ ಎಂಬ ಖುಷಿಯಲ್ಲಿದ್ದ ರಾಜ್ಯದ ಮನೆ ಬಳಕೆಯ ವಿದ್ಯುತ್ ಗ್ರಾಹಕರು ಜೂನ್ ತಿಂಗಳಲ್ಲಿ ಬಂದ ವಿದ್ಯುತ್ ಬಿಲ್ ಮೊತ್ತದಿಂದ ಅಕ್ಷರಶಃ ಶಾಕ್‌ಗೆ ಒಳಗಾದಂತಾಗಿದ್ದು, ರಾಜ್ಯಾದ್ಯಂತ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ದರ ಹೆಚ್ಚಳದ ಕಾರಣ, ಈವರೆಗೂ ತಿಂಗಳಿಗೆ 500ರಿಂದ 600 ರು. ಬಿಲ್ ಬರುವ ಮನೆಗಳಿಗೆ ಈ ಬಾರಿ ಏಕಾಏಕಿ 1300 ರು. ಬಂದಿದೆ. ಇನ್ನು ಕೆಲವರಿಗೆ ತಿಂಗಳಿಗೆ ಸರಾಸರಿ 1000 ರು. ಬರುತ್ತಿದ್ದ ವಿದ್ಯುತ್ ಬಿಲ್ 2500 ರು.ವರೆಗೆ ಬಂದಿದೆ. ಜತೆಗೆ ಮಾಮೂಲಿಗಿಂತ ಹೆಚ್ಚಿನ ಪ್ರಮಾಣದ ಯೂನಿಟ್ ವಿದ್ಯುತ್ ಬಳಕೆ ಮಾಡಿರುವುದು ಬಿಲ್‌ನಲ್ಲಿ ತೋರಿಸಲಾಗಿದೆ. ಹೀಗಾಗಿ ಏಕಾಏಕಿ ಇಷ್ಟೊಂದು ದೊಡ್ಡ ಮೊತ್ತದ ಬಿಲ್ ಬಂದಿರುವುದನ್ನು ನೋಡಿ ಹೌಹಾರಿರುವ ಗ್ರಾಹಕರು ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ) ಮತ್ತು ಸರ್ಕಾರಕ್ಕೆ ಹಿಡಿಶಾಪ ಹಾಕತೊಡಗಿದ್ದಾರೆ.
ವಿದ್ಯುತ್ ಬಿಲ್ ಡಬಲ್: ಹಣ ಕಟ್ಟದಿರಲು ಜನರ ನಿರ್ಧಾರ
ಕಳೆದ ಬಿಜೆಪಿ ಸರ್ಕಾರದ ಕೊನೆಯಲ್ಲಿ, ಅಂದರೆ ಮೇ 12ರಂದು ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆಯ ಮುನ್ನಾದಿನ ಎಸ್ಕಾಂಗಳು ವಿದ್ಯುತ್ ದರ ಏರಿಕೆ ಮಾಡಿದ್ದವು. ಅದು ಏಪ್ರಿಲ್‌ನಿಂದ ಪೂರ್ವಾನ್ವಯವಾಗಿದೆ. ಆ ಎರಡೂ ತಿಂಗಳ ಏರಿಕೆಯ ಮೊತ್ತವನ್ನು ಜೂನ್‌ನಲ್ಲಿ ನೀಡಿರುವ ಬಿಲ್‌ನಲ್ಲಿ ಸೇರಿಸಲಾಗಿದೆ. ಅದರ ಪರಿಣಾಮ ಬಿಲ್ ಮೊತ್ತ ಯದ್ವಾತದ್ವಾ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.
ಇಡೀ ರಾಜ್ಯಕ್ಕೆ ಆಘಾತ:
ವಿದ್ಯುತ್ ಬಿಲ್ ಏರಿಕೆ ವಿರುದ್ಧ ಸಿಟ್ಟು, ಆಕ್ರೋಶ, ಟೀಕೆಗಳು ಹಳ್ಳಿಯಿಂದ ಹಿಡಿದು ದೊಡ್ಡ ನಗರಗಳ ಗ್ರಾಹಕರಲ್ಲಿ ಕೇಳಿ ಬರುತ್ತಿವೆ. ‘ದರ ಹೆಚ್ಚಳ ಮಾಡಿದ್ದು ನಮ್ಮ ಸರ್ಕಾರವಲ್ಲ, ಕೆಇಆರ್‌ಸಿ ಹಾಗೂ ಹಿಂದಿನ ಸರ್ಕಾರ ಎಂದು ರಾಜ್ಯ ಸರ್ಕಾರ ಸಬೂಬು ಹೇಳುವ ಬದಲು ವಿದ್ಯುತ್ ಬಿಲ್ ಕಡಿಮೆ ಮಾಡುವ ಬಗ್ಗೆ ಏನಾದರೂ ಪರಿಹಾರದ ಭರವಸೆ ಕೊಡಬೇಕು. ಈಗಾಗಲೇ ದಿನಸಿಯಿಂದ ಹಿಡಿದು ಎಲ್ಲ ವಸ್ತುಗಳು ಬೆಲೆ ಹೆಚ್ಚಳ ಉಂಟಾಗಿ ಜೀವನ ನಡೆಸುವುದು ಕಷ್ಟಕರವಾಗಿರುವ ಸಂದರ್ಭದಲ್ಲಿ ಸರ್ಕಾರ ಜನರ ಮೇಲೆ ಬೀಳುತ್ತಿರುವ ಹೊರೆ ಕಡಿಮೆ ಮಾಡಲು ಯತ್ನಿಸಬೇಕು’ ಎಂಬ ಕೂಗು ಕೇಳಿಬಂದಿದೆ.
ವಿದ್ಯುತ್ ಬಿಲ್ ಕಟ್ಟಬೇಡಿ, ಸಂಪರ್ಕ ಕಡಿತಗೊಳಿಸಿದ್ರೆ ನಾವಿದ್ದೇವೆ: ನಳಿನ್ ಕುಮಾರ್ ಕಟೀಲ್
ಯೂನಿಟ್ ಲೆಕ್ಕಾಚಾರದಲ್ಲೂ ಹೇರಾಫೇರಿ ಶಂಕೆ:
‘ಪ್ರತಿ ಯೂನಿಟ್‌ಗೆ 70 ಪೈಸೆ ಹೆಚ್ಚಿಸಿದರೆ ಅಥವಾ ನಿಗದಿತ ಶುಲ್ಕ ಹೆಚ್ಚಿಸಿದರೂ ಇಷ್ಟೊಂದು ಬಿಲ್ ಬರಲು ಸಾಧ್ಯವೇ ಇಲ್ಲ. ಸಾಮಾನ್ಯವಾಗಿ ದರ ಹೆಚ್ಚಳ ಮಾಡಿದ ಸಂದರ್ಭದಲ್ಲಿ ಪ್ರತಿ ತಿಂಗಳು 100-200 ರು. ಮಾತ್ರ ಹೆಚ್ಚಾಗುತ್ತಿತ್ತು. ಆದರೆ ಎಂದೂ ಕೂಡಾ ಈ ಪ್ರಮಾಣದಲ್ಲಿ ಬಿಲ್ ಬಂದಿರಲಿಲ್ಲ. ಕಳೆದ ಏಪ್ರಿಲ್‌ನಲ್ಲಿ ಮನೆಯಲ್ಲಿ ವಿಶೇಷ ಕಾರ್ಯಕ್ರಮ ಇದ್ದಾಗ 190 ಯೂನಿಟ್ ಬಳಸಿರುವ ಬಿಲ್ ಬಂದಿತ್ತು. ಆದರೆ ಮೇ ತಿಂಗಳಲ್ಲಿ ಮನೆಯಲ್ಲಿ ಕೇವಲ ಮೂರು ಜನರಿದ್ದರೂ 200 ಯೂನಿಟ್‌ಗಿಂತ ಹೆಚ್ಚು ಬಳಕೆ ಮಾಡಿರುವ ಬಿಲ್ ಬಂದಿದೆ’ ಎಂದು ಬೆಂಗಳೂರಿನ ಹಲವು ಗ್ರಾಹಕರು ‘ಕನ್ನಡಪ್ರಭ’ದೊಂದಿಗೆ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.
‘ಮನೆಯಲ್ಲಿ ಎ.ಸಿ., ರೆಫ್ರಿಜರೇಟರ್, ವಾಷಿಂಗ್ ಮಷಿನ್ ಇಲ್ಲದ ಕಾರಣ ಪ್ರತಿ ತಿಂಗಳು ಗರಿಷ್ಠ 500 ರು. ಒಳಗೆ ಬಿಲ್ ಬರುತ್ತಿತ್ತು. ಆದರೆ ಈ ತಿಂಗಳು ಬಿಲ್ 1100 ರು. ಬಂದಿದೆ. ಈ ರೀತಿಯ ಬಿಲ್ ಒಂದು ತಿಂಗಳಾದರೆ ಪರವಾಗಿಲ್ಲ. ಪ್ರತಿ ತಿಂಗಳು ಬಂದರೆ ಗತಿ ಏನು’ ಎಂದು ಬೆಂಗಳೂರಿನ ಚಾಮರಾಜಪೇಟೆಯ ರಮೇಶ್ ಸಿಟ್ಟಿನಿಂದ ಹೇಳಿದರು.