*ಕರ್ನಾಟಕದಲ್ಲಿ ಮುಸ್ಲಿಮರ ಮೇಲೆ ಆರ್ಥಿಕ ಬಹಿಷ್ಕಾರ
* ರಾಜ್ಯಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬುತ್ತಿರುವ ಮುಸ್ಲಿಂ ವ್ಯಾಪಾರ ಬಹಿಷ್ಕಾರ
* ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಎಸ್‌ಡಿಪಿಐ
ವರದಿ- ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್ ಉಡುಪಿ
ಉಡುಪಿ, (ಮಾ.29): ಕರಾವಳಿಯಲ್ಲಿ ಆರಂಭವಾದ ಮುಸ್ಲಿಮರ ಮೇಲಿನ ಆರ್ಥಿಕ ಬಹಿಷ್ಕಾರ ಈಗ ರಾಜ್ಯಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಇದರ ಪರೋಕ್ಷ ಪರಿಣಾಮಗಳು ಈಗಾಗಲೇ ಎಚ್ಚರಿಕೆಯ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜೀವ ಪಡೆದುಕೊಳ್ಳುತ್ತಿದೆ. ಮುಸ್ಲಿಂ ರಾಷ್ಟ್ರಗಳಲ್ಲಿ ಉದ್ಯೋಗ ನಡೆಸುತ್ತಿರುವ ಹಿಂದೂಗಳಿಗೆ ಅಭದ್ರತೆ ಹುಟ್ಟಿಸುವ ಮೆಸೇಜುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕರಾವಳಿಯಲ್ಲಿ ಆರಂಭವಾದ ಮುಸ್ಲಿಂ ವ್ಯಾಪಾರಿಗಳ ಮೇಲಿನ ಆರ್ಥಿಕ ಬಹಿಷ್ಕಾರ , ಮಗ್ಗುಲು ಬದಲಿಸುವ ಸೂಚನೆ ಸಿಕ್ಕಿದೆ. ಗಲ್ಫ್ ರಾಷ್ಟ್ರಗಳು ಮತ್ತು ನಾನಾ ಮುಸ್ಲಿಂ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಹಿಂದುಗಳ ಉದ್ಯೋಗ ಅಭದ್ರತೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಸಲಾಗುತ್ತಿದೆ. ಇದಕ್ಕೆ ಕಾರಣ ಹಿಜಾಬ್ ಹೋರಾಟದ ನಂತರ ಆರಂಭವಾದ ಮುಸ್ಲಿಂ ವ್ಯಾಪಾರಿಗಳ ಮೇಲಿನ ಆರ್ಥಿಕ ಬಹಿಷ್ಕಾರ.
ನಮಗೆ ಕೊಟ್ಟ ಕಿರುಕುಳ ಜನತೆ ಅನುಭವಿಸಬೇಕಿದೆ, ಹಿಂದೂ ಯುವಕರಿಗೆ ಕೈ ಮುಗಿದು ಮನವಿ ಮಾಡಿದ HDK
ಹೌದು.. ಹೈಕೋರ್ಟ್ ತೀರ್ಪು ಖಂಡಿಸಿ ಮುಸಲ್ಮಾನ ವ್ಯಾಪಾರಿಗಳು ಒಂದು ದಿನದ ಬಂದ್ ನಡೆಸಿದ್ದರು. ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ಕರಾವಳಿ ಭಾಗದ ದೇವಾಲಯಗಳ ಆವರಣದಲ್ಲಿ, ಮುಸ್ಲಿಂ ವ್ಯಾಪಾರಿಗಳಿಗೆ ಅರ್ಥಿಕ ಬಹಿಷ್ಕಾರ ಹಾಕಲಾಯಿತು. ದೇವಾಲಯಗಳ ಆವರಣದಲ್ಲಿ ಅನ್ಯಧರ್ಮೀಯರು ವ್ಯಾಪಾರ ನಡೆಸದಂತೆ ಹಿಂದೂ ಸಂಘಟನೆಗಳು ಹೋರಾಟ ಆರಂಭಿಸಿದವು. ಆದರೆ ಈ ಹೋರಾಟ ಪರಿಣಾಮಗಳು ಇಲ್ಲಿಗೇ ನಿಲ್ಲುವುದಿಲ್ಲ. ಮುಸ್ಲಿಂ ರಾಷ್ಟ್ರಗಳಲ್ಲಿ ದುಡಿಯುವ ಹಿಂದುಗಳ ಮೇಲೆ ಖಂಡಿತವಾಗಿಯೂ ಇದರ ಪರಿಣಾಮ ಆಗುತ್ತದೆ ಎಂದು, ಎಸ್ಡಿಪಿಐ ಮುಖಂಡರು ಎಚ್ಚರಿಸಿದ್ದಾರೆ.
ಆರ್ಥಿಕ ಬಹಿಷ್ಕಾರ ವಿವಾದ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತೆ
ಮುಸ್ಲಿಂ ರಾಷ್ಟ್ರಗಳಲ್ಲಿ ಉದ್ಯೋಗ ಮಾಡುವ ಹಿಂದುಗಳು ಮಾತ್ರವಲ್ಲ, ಉದ್ಯಮ ನಡೆಸುವ ಹಿಂದುಗಳ ಮೇಲೆಯೂ ಆರ್ಥಿಕ ಬಹಿಷ್ಕಾರದ ಪರಿಣಾಮ ಉಂಟಾಗಲಿದೆ. ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡು ರಾಜ್ಯ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಎಸ್ಡಿಪಿಐ ನಾಯಕರು ಎಚ್ಚರಿಸಿದ್ದಾರೆ.
ಎಸ್ಡಿಪಿಐ ರಾಜ್ಯಾಧ್ಯಕ್ಷ ಮಜೀದ್ ಹೇಳಿಕೆ
ಆರ್ಥಿಕ ಬಹಿಷ್ಕಾರ ವಿಚಾರ ಅಂತರಾಷ್ಟ್ರೀಯ ವಿವಾದ ಆಗುವ ಅಪಾಯ ಇದೆ. ಸೌಹಾರ್ದ ಪರಂಪರೆಗೆ ಧಕ್ಕೆ ಮಾಡಿದರೆ ವಿದೇಶಗಳಲ್ಲೂ ಆರ್ಥಿಕ ಬಹಿಷ್ಕಾರ ಉಂಟಾಗುತ್ತೆ. ಲಕ್ಷಾಂತರ ಹಿಂದೂಧರ್ಮೀಯರು ಗಲ್ಫ್ ರಾಷ್ಟ್ರಗಳಲ್ಲಿ, ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಕೆಲಸಮಾಡುತ್ತಿದ್ದಾರೆ. ಕೇವಲ ಸಾಮಾನ್ಯ ಉದ್ಯೋಗ ಮಾತ್ರವಲ್ಲ, ಕಾಲೇಜು ,ಆಸ್ಪತ್ರೆ ವಿಶ್ವವಿದ್ಯಾಲಯಗಳನ್ನು ನಡೆಸುತ್ತಿದ್ದಾರೆ ಆ ರಾಷ್ಟ್ರಗಳ ಜೊತೆ ನಮ್ಮ ಸೌಹಾರ್ದ ಸಂಬಂಧ ಇದೆ. ಇಂಧನಕ್ಕೆ ನಾವು ಆ ರಾಷ್ಟ್ರಗಳನ್ನೇ ಅವಲಂಭಿಸಿದ್ದೇವೆ. ಇಂತಹ ಕ್ಷುಲ್ಲಕ ವಿಚಾರಕ್ಕೆ ಕಚ್ಚಾಡಿಕೊಳ್ಳುವುದು ಸರಿಯಲ್ಲ. ತಕ್ಷಣವೇ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಬೇಕು, ಸೂಕ್ಷ್ಮವಾಗಿ ಸ್ಪಂದಿಸಬೇಕು ಎಂದಿದ್ದಾರೆ.
ಕರಾವಳಿಯ ಆರ್ಥಿಕತೆ ಬಹುಪಾಲು ವಿದೇಶಗಳನ್ನು ಅವಲಂಬಿಸಿದೆ. ಅದರಲ್ಲೂ ಗಲ್ಫ್ ರಾಷ್ಟ್ರಗಳಲ್ಲಿ ಕರಾವಳಿ ಭಾಗದ ಲಕ್ಷಾಂತರ ಜನರು ಕೆಲಸ ಮಾಡುತ್ತಾರೆ. ಈ ಹಿಂದೆಯೂ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಬರಹಗಳು ಕಂಡುಬಂದಾಗ, ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುವ ಹಿಂದೂಗಳನ್ನು ಟಾರ್ಗೆಟ್ ಮಾಡಿ ಉದ್ಯೋಗದಿಂದ ಬಿಡಿಸಿರುವ ಮತ್ತು ಜೈಲುಪಾಲು ಮಾಡಿರುವ ಪ್ರಕರಣಗಳಿವೆ. ಕರಾವಳಿಯಲ್ಲಿ ನಡೆಯುತ್ತಿರುವ ಸದ್ಯದ ಬೆಳವಣಿಗೆಗಳನ್ನು ಅಲ್ಲಿನ ಸಮುದಾಯ ಸೂಕ್ಷ್ಮವಾಗಿ ಗಮನಿಸುತ್ತಿದೆ, ಹಾಗಾಗಿ ಸೌಹಾರ್ದತೆಯಿಂದ ಬಾತು ಬುರಜ್ ಎಲ್ಲರೂ ಪ್ರಯತ್ನಿಸೋಣ ಎಂದು ಮುಸ್ಲಿಂ ಮುಖಂಡರು ಹೇಳುತ್ತಿದ್ದಾರೆ.
ತರಗತಿಯ ನಾಲ್ಕು ಗೋಡೆಯೊಳಗೆ ಆರಂಭವಾದ ವಿವಾದ, ದೇಶವಿದೇಶಗಳ ಗಡಿ ಮೀರಿ ಹಬ್ಬುತ್ತಿದೆ. ದಿನಕ್ಕೊಂದು ಆಯಾಮ ಪಡೆಯುತ್ತಿರುವ ಹಿಜಬ್ ವಿವಾದದಲ್ಲಿ, ಹೇಳಿಕೆ-ಪ್ರತಿಹೇಳಿಕೆ ಗಳೇ ಮೇಲುಗೈ ಸಾಧಿಸುತ್ತಿವೆ. ಆರ್ಥಿಕ ಬಹಿಷ್ಕಾರ ಎಂಬ ಹೊಸ ಹೋರಾಟ ದುಡಿದು ತಿನ್ನುವ ಜನರ ಮೇಲೆ ಗಂಭೀರ ಪರಿಣಾಮಗಳನ್ನೇ ಉಂಟು ಮಾಡುತ್ತಿದೆ.