
ವರದಿ - ರವಿ ಶಿವರಾಮ್, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು, (ಮಾ.29): ಕರ್ನಾಟಕದಲ್ಲಿ ಹಿಜಾಬ್ ನಿಂದ (Hijab Row) ಆರಂಭವಾದ ಧರ್ಮ ರಾಜಕೀಯ ಚರ್ಚೆ ಈಗ ಟಿಪ್ಪು ಸುಲ್ತಾನ್ ಇತಿಹಾಸವನ್ನು ಪಠ್ಯದಿಂದ ಕೈಬಿಡಬೇಕು ಎನ್ನುವ ಕೂಗಿನ ತನಕ ಬಂದು ನಿಂತಿದೆ.
ಉಡುಪಿ ಶಾಲೆಯಲ್ಲಿ ಹುಟ್ಟಿದ ಹಿಜಾಬ್ ಗದ್ದಲದಿಂದ ಹಿಡಿದು ಶಿವಮೊಗ್ಗದಲ್ಲಿ ಹರ್ಷ ಕೊಲೆ, ಮುಸ್ಲಿಂ ವ್ಯಾಪಾರಸ್ತರಿಗೆ ವ್ಯಾಪಾರ ನಿರ್ಬಂಧ, ಶಾಲೆ ಪಠ್ಯದಲ್ಲಿ ನೈತಿಕ ಶಿಕ್ಷಣವಾಗಿ ಭಗವದ್ಗೀತೆ, ಈಗ ಟಿಪ್ಪು ಸುಲ್ತಾನ್ ಇತಿಹಾಸವನ್ನು ಶಾಲೆಯ ಪಠ್ಯದಿಂದ ಕೈಬಿಡಬೇಕು ಎನ್ನುವಲ್ಲಿಗೆ ಬಂದು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಅದೆ ಬೆನ್ನಲ್ಲೆ ಬುದ್ದಿಜೀವಿಗಳು ಸಿಎಂಗೆ ಪತ್ರ ಬರೆದು ಸುದ್ದಿಯಾಗಿದ್ದಾರೆ.
"
ನಮಗೆ ಕೊಟ್ಟ ಕಿರುಕುಳ ಜನತೆ ಅನುಭವಿಸಬೇಕಿದೆ, ಹಿಂದೂ ಯುವಕರಿಗೆ ಕೈ ಮುಗಿದು ಮನವಿ ಮಾಡಿದ HDK
ಸಿಎಂಗೆ ಪತ್ರ ಬರೆದ 61 ಸಾಹಿತಿಗಳು
ಇತ್ತೀಚಿನ ಎಲ್ಲಾ ಬೆಳವಣಿಗೆಗೆ ಬಗ್ಗೆ 61 ಸಾಹಿತಿಗಳು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಪತ್ರ ಬರೆದು ಸಂವಿಧಾನದ ಆಶಯದಡಿ ಶಾಲೆಯಲ್ಲಿ ಶಿಕ್ಷಣ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರಿಸಬಾರದು ಎಂದಿರುವ ಬುದ್ದಿಜೀವಿಗಳು, ಹಿಜಾಬ್ ಗೆ ಅವಕಾಶ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ. ಶಿಕ್ಷಣ ಇಲಾಖೆಯ ಮೇಲೂ ಅಸಮಾಧಾನ ಹೊರಹಾಕಿರುವ ಸಾಹಿತಿಗಳು, sslc ಪರೀಕ್ಷೆ ಮುನ್ನ ದಿನ ಶಿಕ್ಷಣ ಇಲಾಖೆ ಏಕಾಏಕಿ ಅವೈಜ್ಞಾನಿಕ ವಸ್ತ್ರ ಸಂಹಿತೆ ಹೊರಡಿಸಿದ್ದಾರೆ. ಅದನ್ನು ಹಿಂಪಡಯಬೇಕು ಎಂದು ಆಗ್ರಹಿಸಿದ್ದಾರೆ.
ಬುದ್ದಿಜೀವಿಗಳ ವಿರುದ್ಧ ವ್ಯಂಗ್ಯ ಮಾಡಿದ ಶಿಕ್ಷಣ ಸಚಿವ ನಾಗೇಶ್
ಸಾಹಿತಿಗಳು ಬರೆದ ಪತ್ರಕ್ಕೆ ಸುವರ್ಣ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವ ಬಿಸಿ ನಾಗೇಶ್, ಸಾಹಿತಿಗಳು ಪಾಪ ಈಗ ಬಂದಿದ್ದಾರೆ. ಅವರ ಪತ್ರದ ಬಗ್ಗೆ ಕಾಳಜಿ ಇದೆ ಎನ್ನುತ್ತಲೇ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಸಾಹಿತಿಗಳು ಪತ್ರ ಬರೆದಿದ್ದಾರೆ ನಿಜ, ಆದ್ರೆ ರಾಂಗ್ ಟೈಮ್ ಮತ್ತು ರಾಂಗ್ ಅಡ್ರೆಸ್ ಗೆ ಪತ್ರ ಬರೆದವರೆ ಎಂದು ವ್ಯಂಗ್ಯ ಮಾಡಿದ್ದಾರೆ. ಸಮಾನತೆಯ ಹಾದಿಯಲ್ಲಿ ಸಾಗಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಪತ್ರ ಬರೆದಿರೋದು ರಾಂಗ್ ಅಡ್ರೆಸ್ ಎಂದ ಸಚಿವ ನಾಗೇಶ್, ಹಿಜಾಬ್ ತೀರ್ಪು ವಿರೋಧಿಸಿ ಬಂದ್ ಗೆ ಕರೆ ಕೊಟ್ಟವರ ಬಗ್ಗೆ ಸಾಹಿತಿಗಳು ಮಾತಾಡಿಲ್ಲ. ಶಾಲೆಯಲ್ಲಿ ಧರ್ಮ ತರೋಕೆ ಹೋದವರ ಬಗ್ಗೆಯೂ ಅವರು ಮಾತಾಡಿಲ್ಲ.ಅಂದು ಆರು ಮಕ್ಕಳಿಗೆ ಸಾಹಿತಿಗಳು ಬುದ್ದಿ ಹೇಳಿದ್ರೆ ಒಳ್ಳೆಯ ವಾತಾವರಣ ಇರ್ತಾ ಇತ್ತು.ಆದ್ರೆ ಪಾಪ ಸಾಹಿತಿಗಳು ಈಗಾದ್ರೂ ಬಂದಿದ್ದಾರಲ್ಲ ಎಂದು ತೀಕ್ಷ್ಣವಾಗಿ ಸಾಹಿತಿಗಳಿಗೆ ತಿವಿಯುವ ಪ್ರಯತ್ನ ಮಾಡಿದ್ರು.
ಬುದ್ದಿಜೀವಿಗಳ ದ್ವಂದ್ವ ನಿಲುವು!
ಒಂದು ಕಡೆ ಸಂವಿಧಾನದ ಆಶಯದಂತೆ ಶಾಲಾ ಪಠ್ಯ ಇರಬೇಕು ಎನ್ನುವ ಸಾಹಿತಿಗಳು ಸಂವಿಧಾನದ ಅಡಿ ಬರುವ ಹೈ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಬಂದ್ ಮಾಡಿದವರ ಬಗ್ಗೆ ಸಾಹಿತಿಗಳು ಎಲ್ಲಿಯೂ ಮಾತನಾಡದೇ ಇರೋದು ಸಾಹಿತಿಗಳ ದ್ವಂದ್ವ ನಿಲುವನ್ನು ತೋರಿಸುತ್ತದೆ ಎಂದಿರುವ ಸವಿವರು ಅಂದು ಹಿಜಾಬ್ ಬೇಕು ಶಿಕ್ಷಣ ಬೇಡ ಎಂದ ವಿದ್ಯಾರ್ಥಿಗಳಿಗೆ ಬುದ್ದಿ ಹೇಳಿದ್ರೆ ಇಷ್ಟು ಗೊಂದಲ ಆಗ್ತಾ ಇರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನದಷ್ಟೇ ಭಗವದ್ಗೀತೆ ಪ್ರಾಮುಖ್ಯ ಅಂತ ಸಾಹಿತಿಗಳು ಹೇಳ್ತಾರೆ ಅಂದ್ಕೊಂಡಿದ್ದೆ ಆದ್ರೆ ಅವರು ಹಾಗೆ ಹೇಳಲಿಲ್ಲ ಎಂದ ಸಚಿವರು ಶಾಲೆಯಲ್ಲಿ ನೈತಿಕ ಶಿಕ್ಷಣ ರೂಪದಲ್ಲಿ ಭಗವದ್ಗೀತೆ ಭೋದಿಸುವ ಸರ್ಕಾರದ ಯೋಚನೆಯನ್ನು ಸಮರ್ಥನೆ ಮಾಡಿಕೊಂಡ್ರು.
ಸಂವಿಧಾನ ದಿನ ಆಚರಣೆ ಮಾಡಿದ್ದು ಬಿಜೆಪಿ ಸರ್ಕಾರ
ಸಂವಿಧಾನದ ಆಶಯದ ಬಗ್ಗೆ ಸಾಹಿತಿಗಳು ಮಾತಾಡಿದ್ದಾರೆ. ಶಿಕ್ಷಣದಲ್ಲಿ ಧರ್ಮ ಇರಬಾರದು ಎಂದು ಹೇಳಿದ್ದಾರೆ. ಅದರ ಬಗ್ಗೆ ಕನ್ಸರ್ನ್ ಇದೆ ಎಂದ ಸಚಿವರು ಒಂದು ಕಡೆ ಸಂವಿಧಾನದ ಆಶಯ ಪಾಲನೆ ಆಗಬೇಕು ಅಂತಾರೆ ಅದೇ ಸಂವಿಧಾನದಡಿ ಹೈಕೋರ್ಟ್ ನೀಡಿದ ತೀರ್ಪನ್ನು ಪಾಲನೆ ಮಾಡಬೇಕು ಎಂದು ಸಾಹಿತಿಗಳು ಹೇಳದೆ,ಹಿಜಾಬ್ ಗೆ ಅವಕಾಶ ನೀಡಬೇಕು ಅಂತಾರೆ. ಸಾಹಿತಿಗಳು ದ್ವಂದ್ವ ದಲ್ಲಿ ಇದ್ದಾರೆ ಎಂದು ಶಿಕ್ಷಣ ಸಚಿವರು ಕಿಡಿ ಕಾರಿದ್ರು. ಮುಂದುವರಿದು ಮಾತಾಡಿದ ಸಚಿವರು,ಎಲ್ಲಾ ಶಾಲೆಯಲ್ಲಿ ಸಂವಿಧಾನ ಆಚರಣೆ ಮಾಡಿದ್ದು ನಮ್ಮ ಸರ್ಕಾರ. ಐದು ದಿನ ಸಂವಿಧಾನದ ಮೇಲೆ ಚರ್ಚೆ ಮಾಡಲು ಸ್ಪೀಕರ್ ಅನುವು ಮಾಡಿಕೊಟ್ಟಿದ್ರು ಎಂದು ಸಂವಿಧಾನದ ಬಗ್ಗೆ ಬಿಜೆಪಿಗೆ ಇರುವ ಬದ್ಧತೆಯ ಬಗ್ಗೆ ಮಾತಾಡಿದ್ರು.
ಸದನದಲ್ಲಿ ಸಾಹಿತಿಗಳ ವಿಚಾರ ಪ್ರಸ್ತಾಪ
ಇನ್ನು ಸಿಎಂಗೆ ಚಿಂತಕರಿಂದ ಮನವಿ ಪತ್ರ ಬರೆದಿರುವ ವಿಚಾರ ಸದನದಲ್ಲಿ ಪ್ರಸ್ತಾಪ ಮಾಡಿದ ಬಿಜೆಪಿ ಶಾಸಕ ಕೆಜಿ ಬೋಪಯ್ಯ, ಸಮಾಜದಲ್ಲಿ ಅಶಾಂತಿ ವಾತಾವರಣ ಅವರೇ ಉಂಟು ಮಾಡುತ್ತಿದ್ದಾರೆ. ಹೈಕೋರ್ಟ್ ಆದೇಶ ಲೆಕ್ಕಕ್ಕೆ ಇಲ್ಲ ಅಂದರೆ ಹೇಗೆ.ಹೈಕೋರ್ಟ್ ಆದೇಶದ ವಿರುದ್ಧ ಸಾಹಿತಿಗಳು ಪತ್ರ ಕೊಡುತ್ತಾರೆ ಹೀಗಾಗಿ ಸಾಹಿತಿಗಳ ಮೇಲೆ ಕ್ರಮ ಆಗಬೇಕು ಎಂದು ಕೆ.ಜಿ ಬೋಪಯ್ಯ ಆಗ್ರಹ ಪಡಿಸಿದ್ರು. ಈ ವೇಳೆ ಮಾತಾಡಿದ ಸ್ಪೀಕರ್ ಕಾಗೇರಿ, ಸಿಎಂಗೆ ಯಾರೋ ಮನವಿಗಳನ್ನು ಕೊಡ್ತಾ ಇರ್ತಾರೆ. ಮನವಿ ಕೊಡೋಕ್ಕೆ ಅವಕಾಶ ಇದೆ. ಇದು ಬೇರೆ ವಿಷಯ ನಂತರ ನೋಡೋಣ ಎಂದು ಸ್ಪೀಕರ್ ಕಾಗೇರಿ ಸಾಹಿತಿಗಳ ಪತ್ರದ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡಲಿಲ್ಲ....
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ